Tuesday, March 17, 2009

ಯಾದ ವಶೇಮ್ : ನೂರು ಸಾವಿರ ಸಾವಿನ ನೆನಪು

ಇದು ನೇಮಿಚಂದ್ರರ ಐತಿಹಾಸಿಕ ಸತ್ಯ ಆಧಾರಿತ ಕಾದಂಬರಿ. ಹಿಟ್ಲರ್‌ನ ಕಾಟತಾಳಲಾರದೇ ಜರ್ಮನಿಯಿಂದ ಭಾರತಕ್ಕೆ ಬಂದ ಯಹೂದಿ ಕುಟುಂಬದ ಹ್ಯಾನಾ ಎಂಬ ಹುಡುಗಿ ಬೆಂಗಳೂರಿನಲ್ಲಿ ಅನಿತಾ ಆಗಿ ಬೆಳೆದು, ಕೊನೆಗಾಲದಲ್ಲಿ ತನ್ನ ಕುಟುಂಬದ ಇತರ ಸದಸ್ಯರನ್ನರಸಿ ಯುರೋಪು, ಅಮೇರಿಕ, ಇಸ್ರೇಲಿಗೆ ಹೋಗುವುದೇ ಇದರ ಕತೆ. ನಾನು ಮೊದಲ ಸಲ ಈ ಪುಸ್ತಕದ ಬಗ್ಗೆ ಕೇಳಿದಾಗ ಇದೆಲ್ಲೋ ಪರದೇಶದಲ್ಲಿ ನಡೆಯುವ ಗೋಳಿನ ಕತೆ ಅಂದುಕೊಂಡಿದ್ದೆ. ಆದರೆ ಇದರಲ್ಲಿ ಮೊದಲರ್ಧ ಕತೆ ಭಾರತದಲ್ಲಿಯೇ, ಬೆಂಗಳೂರಿನಲ್ಲಿಯೇ, ನಡೆಯುತ್ತೆ. ಇನ್ ಫ್ಯಾಕ್ಟ್ ಆ ಭಾಗವನ್ನೇ ನಾನು ಹೆಚ್ಚು ಆನಂದಿಸಿದ್ದೇನೆ.


ಅಂದಿನ ಕಾಲದ ಬೆಂಗಳೂರು-ಮೈಸೂರುಗಳನ್ನು ಲೇಖಕಿ ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಎಚ್‌ಏಎಲ್ ಕಂಪನಿಯ ಇತಿಹಾಸ ಕತೆಯ ಒಂದು ಭಾಗವಾಗಿ ಬರುತ್ತದೆ, ಬೆಂಗಳೂರಿನ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು, ಮೈಸೂರಿನ ಐತಿಹಾಸಿಕ ಘಟನೆಗಳು ಕತೆಯ ಭಾಗವಾಗಿ ಬರುತ್ತವೆ. ಟೆಕ್ಕಿಗಳಿಗೆ ಕತೆಯೊಂದಿಗೆ ರಿಲೇಟ್ ಆಗಲು ಸ್ವಲ್ಪ ಕಷ್ಟವೆಂದರೆ, ಅದರಲ್ಲಿ ಭಾರತೀಯ ವಿಜ್ಞಾನಮಂದಿರ, ಮುಂದೆ ದೈತ್ಯ ಸಂಸ್ಥೆಗಳಾಗಿ ಬೆಳೆದ ಐಟಿಐ, ಟಿನ್ ಫ್ಯಾಕ್ಟರಿ, ಕಿರ್ಲೋಸ್ಕರ್ ಕಂಪ್ನಿಗಳ ಬಗೆಗೂ ರೆಫೆರೆನ್ಸ್ ಬರುತ್ತವೆ. ಅದಷ್ಟು ಸಾಕಾಗಲ್ಲ ಅಂದರೆ ಒಂದು ಪಿಂಕ್ ಸ್ಲಿಪ್ ಪ್ರಕರಣ ಕೂಡ ಇದೆ!!

ಕತೆಯ ಮೊದಲರ್ಧದಲ್ಲಿ ಕುಂಚಿಟಿಗರ ಮನೆಯ ಸಾಕಷ್ಟು ವಿವರಗಳು ಬರುತ್ತವೆ, ಅವರ ದೇವರು, ಅವರ ನಂಬಿಕೆಗಳು ಇತ್ಯಾದಿ. ಅದಲ್ಲದೇ ಆ ಜನಾಂಗಕ್ಕೆ ಓದುವ ಅನುಕೂಲ ಮಾಡಿಕೊಟ್ಟ ಮೈಸೂರಿನ ಅಲಮೇಲಮ್ಮನವರ ಸ್ಮರಣೆಯೂ ಬರುತ್ತದೆ. ಲೇಖಕಿಯು ಬಹುಷಃ ಹುಟ್ಟಿನಿಂದ ಕುಂಚಿಟಿಗ ಜನಾಂಗದವರು, ಅದಕ್ಕಾಗಿಯೇ ಆ ವಿವರಗಳು ಬಂದಿವೆ. ಹೀಗೆ ಸಾಹಿತ್ಯ ಕೃತಿಗಳಲ್ಲಿ ’ಜಾತಿ’ಯನ್ನು ಎಳೆದು ತರುವುದು ಸರಿಯೇ ? ನನಗೇನು ಅದರಲ್ಲಿ ತಪ್ಪನ್ನಿಸುವುದಿಲ್ಲ. ವಿವಿಧ ಜನಾಂಗ(?)ಗಳ ಜನ ತಮ್ಮ ತಮ್ಮ ಪರಂಪರೆಗಳ ಬಗ್ಗೆ ಬರೆದುಕೊಂಡರೆ, ಉಳಿದವರಿಗೆ ಅದರಿಂದ ಲಾಭವೇ ತಾನೆ ? ಕನ್ನಡ ನಾಡಿನ ವಿವಿಧ ಸಂಪ್ರದಾಯಗಳ ಅರಿವು ಹೊಂದುವುದು ಒಳ್ಳೆಯದೆ.. ಅಂದ ಹಾಗೆ ಜಾತಿ ( ಜನಾಂಗ ಎನ್ನುವುದು ನನಗೆ ಹೆಚ್ಚು ಸರಿ ಅನ್ನಿಸುತ್ತೆ) ಯ ಬಗ್ಗೆ ಈ ಕಾದಂಬರಿಯ ಒಂದು ಪಾತ್ರ ತುಂಬ ಸರಿಯಾದ ಮಾತು ಆಡುತ್ತದೆ - "ಜಾತಿ,ಜನಾಂಗ ಅಂದರೇನು ? ಅದೊಂದು ಗುಂಪು, ಒಂದು ಸಂಕುಲ... ಜಾತಿ ಜನರನ್ನ ಒಡೀದಿದ್ರೆ ಆಯ್ತು, ವಿಷ ಹಂಚದಿದ್ರೆ ಆಯ್ತು."

ಕಾದಂಬರಿಯ ಎರಡನೆ ಭಾಗ ನನಗೆ ಅಷ್ಟೇನು ಹಿಡಿಸಲಿಲ್ಲ. ಅದು ಒಂದು ರೀತಿಯ ಪ್ರವಾಸ ಕಥನ, ಯಹೂದಿಗಳ ಯಾತನೆಯ ಕುರುಹುಗಳಿರುವ ಹಲವು ಸ್ಥಳಗಳ ಪ್ರವಾಸ ಕಥನ. ಕಾಸು ಕೊಟ್ಟು ಪುಸ್ತಕ ಕೊಂಡು, ಅದರಲ್ಲಿ ಇನ್ನೊಬ್ಬರ ಸಂಕಟ ಓದಿ, ನಮ್ಮ ಮನಸನ್ನು ಕಹಿ ಮಾಡಿಕೊಳ್ಳುವುದು ಯಾಕೆ ಎನ್ನುವುದು ನನ್ನ ನಿಲುವು. ಅದರಲ್ಲೂ ಐತಿಹಾಸಿಕ ವಿಷಯಗಳ ಬಗ್ಗೆಯಂತೂ ನನ್ನದು "ಹಿಂದಿನದು ತಗದು, ಹಿತ್ತಲದಾಗ ಅತ್ತರಂತ" ಎಂಬ ತಕರಾರು. ಆದ್ದರಿಂದ ನನಗೆ ಎರಡನೆ ಭಾಗ ಹಿಡಿಸದ್ದು ಸಹಜ.

ತುಸು ಹಿಂಜರಿಕೆಯಿಂದಲೆ, ಈ ಕಾದಂಬರಿಯನ್ನು, ಇತ್ತೀಚೆಗೆ ಬಹು ಚರ್ಚಿತಗೊಂಡ ಇನ್ನೊಂದು ಐತಿಹಾಸಿಕ ಸತ್ಯ ಆಧಾರಿತ ಕಾದಂಬರಿಯೊಂದಿಗೆ ಹೋಲಿಸ ಬೇಕೆನಿಸುತ್ತದೆ. ಕಥನ ಶೈಲಿ, ಪಾತ್ರ ಪೋಷಣೆ(!) ಇತ್ಯಾದಿಗಳ ದೃಷ್ಟಿಯಿಂದ ತುಲನಾತ್ಮಕ(!) ಅಧ್ಯಯನ ಮಾಡಿ (!), ಇದರ ಕಿಮ್ಮತ್ತು ಇಷ್ಟೇ ಎಂದು ಹೇಳುವಷ್ಟು ದೊಡ್ಡವನು ನಾನಲ್ಲ. ಆದರೆ ಈ ಎರೆಡು ಕಾದಂಬರಿಗಳು ಕೊಡುವ ಸಂದೇಶಗಳನ್ನು ನೋಡಿದಾಗ, ಈ ಕಾದಂಬರಿ ನನಗಿಷ್ಟವಾಯಿತು. ಇದರ ಸಂದೇಶ "ಅಲ್ಲೆಲ್ಲೋ ಹಿಂದು ಮುಸ್ಲೀಮರು ಗುದ್ದಾಡಿ ಕೊಳ್ಳಲಿ, ಇನ್ನೆಲ್ಲೋ ಯಹೂದಿ-ಮುಸ್ಲೀಮರು ತಿಕ್ಕಾಡಿ ಕೊಳ್ಳಲಿ, ಇಲ್ಲಿ ಮಾತ್ರ ನಾವು ನೆಮ್ಮzಯಿಂದ ಇರೋಣ" ಅಂತಾದರೆ, ಆ ಕಾದಂಬರಿಯದು "ಅವರ ಮುತ್ತಾತಂದಿರು ನಮ್ಮ ಮುತ್ತಾತಂದಿರ ಮೇಲೆ ಎಸಗಿದ ದೌರ್ಜನ್ಯಕ್ಕೆ ಅವರು ನಮ್ಮ ಕ್ಷಮೆ ಕೇಳಲಿ" ಎಂದೇನೋ ಆಗಿತ್ತು..

No comments: