Monday, March 26, 2012

ಶೌಚ ಕಾಲೇ..

"ಛೀ", "ಥೂ", "ಅಸಹ್ಯ", "ಒಂಚೂರಾದರೂ ನಾಚ್ಕೆ ಬೇಡ್ವಾ?" ಇತ್ಯಾದಿಯಾಗಿ ತಲೆಬರಹ ನೋಡಿ ನನ್ನನ್ನು ಶಪಿಸುತ್ತಿದ್ದೀರಾ ? "ಚರಿಗಿ ತಗೊಂಡು ಹೋಗೋದು", "ಬಯಲ್ಕಡೆ ಹೋಗೋದು", "ನಿಸರ್ಗದ ಕರೆಗೆ ಹೋಗೊದು", "ಸಂಡಾಸಿಗೆ/ಲ್ಯಾಟ್ರಿನ್ನಿಗೆ/ಪಾಕಿಸ್ಥಾನಕ್ಕೆ ಹೋಗುವುದು" ಇತ್ಯಾದಿ ಶಬ್ದಗುಚ್ಚಗಳಿಂದ ಗುರುತಿಸಲ್ಪಡುವ ಶೌಚಕಾರ್ಯವೆಂಬ ಪ್ರಕ್ರಿಯೆಯ ಬಗ್ಗೆ ಮಾತನಾಡಲು ನಮಗೆಲ್ಲ ಅಗಾಧ ಮುಜುಗರ. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ಪ್ರತಿಯೊಬ್ಬ ಮನುಷ್ಯ ಶೌಚ ಮತ್ತು ಇತರ ಸ್ವ-ಸ್ವಚ್ಚತಾ ಕಾರ್ಯದಲ್ಲಿ ಶೇಕಡಾ ಐದುವರೆ ಸಮಯವನ್ನು ಕಳೆಯುತ್ತಾನಂತೆ. ಶೇಕಡಾ ಐದೂವರೆ ಸಮಯವೆಂದರೆ ಅದೇನು ಕಮ್ಮಿಯಾಯಿತಾ ? ಒಂದು ವರ್ಷಕ್ಕೆ ಪೂರ್ತಿ ಇಪ್ಪತ್ತು ದಿನಗಳು ! ಒಬ್ಬ ಮನುಷ್ಯ ಎಂಭತ್ತು ವರುಷ ಬದುಕಿದರೆ ಬರೋಬ್ಬರಿ ನಾಲ್ಕು ಕಾಲು ವರುಷಗಳನ್ನು ಶೌಚ ಸಂಬಂಧಿ ಕೆಲಸಗಳಲ್ಲಿಯೇ ಕಳೆಯುತ್ತಾನೆ. ಮಾನವ ಬದುಕಿನ ಇಷ್ಟು ಗಮನಾರ್ಹವಾದ ಸಮಯ ಸಾಹಿತ್ಯದಲ್ಲಿ ದಾಖಲಾಗದೇ ಹೋದರೆ ಅದೊಂದು ಸಾಹಿತ್ಯಕ್ಕಾಗುವ ಹಾನಿಯೇ ಸರಿ. ಅಂತಹ ಹಾನಿಯನ್ನು ಶೌಚಕಾಲದ ಹವ್ಯಾಸಗಳ ಬಗ್ಗೆ ಬರೆದ ಈ ಲೇಖನ ಒಂಚೂರಾದರೂ ಕಡಿಮೆ ಮಾಡಲಿ ಎಂಬುದು ಈ ಬರಹಗಾರನ ಸದಿಚ್ಛೆ.




ಮಹಾಭಾರತದಲ್ಲಿ ಬಲರಾಮ ದುರ್ಯೋಧನನ ಪರ ಯುದ್ಧಕ್ಕಿಳಿಯುವುದನ್ನು ತಡೆಯುವುದಕ್ಕೆಂದು ಆತ ಶೌಚಕ್ಕೆ ಕುಳಿತಾಗ ಕೃಷ್ಣ ಒಂದು ಆಕಳಾಗಿ ಹತ್ತಿರ ಬಂದಿದ್ದನಂತೆ. ಆಕಳನ್ನು ಓಡಿಸಲು ಬಲರಾಮ ಒಂದು ಕಲ್ಲನ್ನೆತ್ತಿ ಒಗೆದಾಗ, ಕಲ್ಲು ಬಡಿದು ಆಕಳು ಸತ್ತು ಹೋಯಿತಂತೆ. ಆ ಗೋಹತ್ಯಾ ಪಾಪ ಪರಿಹಾರ ಮಾಡಿಕೊಳ್ಳಲು ಬಲರಾಮ ತೀರ್ಥಯಾತ್ರೆಗೆ ಹೋಗಿ, ಕುರುಕ್ಷೇತ್ರದ ಯುದ್ಧಕ್ಕೆ ಗೈರು ಹಾಜರಾಗ ಬೇಕಾಯಿತಂತೆ. ಶೌಚದ ವಿಷಯವಾದದ್ದರಿಂದ ವ್ಯಾಸ ಕವಿಯೂ ಮುಜುಗರ ಪಟ್ಟುಕೊಂಡು ಮೂಲ ಭಾರತದಲ್ಲಿ ಈ ಘಟನೆಯನ್ನು ಬರೆಯದಿರಬಹುದು. ಆದರೆ ನಮ್ಮೂರಿನ ಕೀರ್ತನಾಚಾರಿಗಳು ಹೇಳಿದ್ದರಿಂದ ಆ ಘಟನೆ ನಡೆದಿತ್ತು ಎಂದುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.



ಈ ಘಟನೆಯಿಂದ ಶೌಚಕ್ಕೆ ಕುಳಿತಾಗ ಕಲ್ಲು ಒಗೆಯುತ್ತಾ ಕೂಡುವ ಹವ್ಯಾಸಕ್ಕೆ ಒಂದು ಭವ್ಯ ಪರಂಪರೆಯೇ ಇದೆ ಎಂದು ತಿಳಿಯುತ್ತದೆ. ನಾವು ಯಾದವ ಕುಲ - ಅಂದರೆ ಲಾಲು-ಮುಲಾಯಮ್‌ರ ಕುಲವಲ್ಲ, ಕೃಷ್ಣ-ಬಲರಾಮರ ಕುಲ - ಸಂಜಾತರಲ್ಲದಿದ್ದರೂ, ಚಿಕ್ಕವರಿದ್ದಾಗ ಶೌಚಕ್ಕೆ ಕುಳಿತಾಗ ಸಣ್ಣ ಕಲ್ಲುಗಳನ್ನು ಎಸೆಯುತ್ತಾ ಕೂರುವುದು ನಮ್ಮಂತಹ ಹುಡುಗರ ಹವ್ಯಾಸವಾಗಿತ್ತು.



ಚಿಕ್ಕಂದಿನಿಂದಲೂ ನಾನು ಮತ್ತು ನಮ್ಮಣ್ಣನದು ಜಾಯಿಂಟ್ ಅಕೌಂಟ್ ತತ್ವ - ಗೋಲಿಗುಂಡಾ ಗೆದ್ದು, ಕೂಡಿಸಿ ಇಡುವುದರಿಂದ ಹಿಡಿದು, ದೊಡ್ಡವರು ಕೊಟ್ಟ ಹತ್ತು ಪೈಸೆ ಇಪ್ಪತ್ತು ಪೈಸೆ ಕೂಡಿಸಿ ಬ್ಯಾಂಕಿಗೆ ಹಾಕುವವರೆಗೆ ಎಲ್ಲಾ ವ್ಯವಹಾರಗಳೂ ನಮ್ಮಿಬ್ಬರ ಮಧ್ಯೆ ಪಾರ್ಟನರ್‌ಶಿಪ್‌ನಲ್ಲಿಯೇ ನಡೆಯುತ್ತಿದ್ದವು. ಸಹಜವಾಗಿಯೇ ಶೌಚಕ್ಕೆ ಹೋದಾಗ ತಂಬಿಗೆಯ ನೀರನ್ನು ವನ್-ಬೈ-ಟೂ ಮಾಡುವುದು ಕೂಡ ನಮ್ಮ ಪದ್ಧತಿಯಾಗಿತ್ತು. ಈ ವನ್-ಬೈ-ಟೂ ತತ್ವವನ್ನು ಪಾಲಿಸುವ ನಮ್ಮ ವಾರಿಗೆಯ ಕೆಲ ಅಣ್ಣತಮ್ಮಂದಿರೂ, ಚಿಕ್ಕದೊಡ್ಡಪ್ಪನ ಮಕ್ಕಳು, ಅಳಿಯಾ-ಮಾವ ಜೋಡಿಗಳು ನಮ್ಮ ಓಣಿಯಲ್ಲಿದ್ದರು. ಎಲ್ಲ ಸೇರಿ ಬೆಳಿಗ್ಗೆ ಸಾಮೂಹಿಕ ಶೌಚ ಯಾತ್ರೆಗೆ ಹೋಗುವುದು ಸಾಮಾನ್ಯವಾಗಿತ್ತು. ಹೋಗ್ ಹೋಕ್ತಾ, ದಾರಿಯಲ್ಲಿ ಬಿದ್ದಿರುತ್ತಿದ್ದ ಸಣ್ಣಕಲ್ಲುಗಳನ್ನು ಆರಿಸಿಕೊಳ್ಳುತ್ತಾ ಹೋಗುತ್ತಿದ್ದೆವು. ಶೌಚಕ್ಕೆ ಕುಳಿತಾಗ ಮುಂದೆ ಕಲ್ಲಿನ ಕುಟ್ರಿಹಾಕಿಕೊಂಡು, ಶೌಚಾಪಹಾರಿಗಳಾದ ನಾಯಿ-ಹಂದಿ-ಎಮ್ಮೆಗಳು ಹತ್ತಿರ ಬರದಂತೆ ಕಲ್ಲು ಎಸೆಯುತ್ತಿದ್ದೆವು. ಅವು ಯಾವೂ ಹತ್ತಿರ ಬರದಿದ್ದರೆ ಮುಂದೆ ಸ್ವಲ್ಪ ದೂರದಲ್ಲಿ ಒಂದು ದೊಡ್ಡ ಕಲ್ಲನ್ನು ಇಟ್ಟು ಎಲ್ಲರೂ ಅದಕ್ಕೆ ಕಲ್ಲಿನಿಂದ ಹೊಡೆಯುತ್ತ 'ಕೈಗುರಿ' ಪ್ರ್ಯಾಕ್ಟೀಸು ಮಾಡುತ್ತಿದ್ದೆವು- ಶೌಚ ಕಾಲೇ ಶಸ್ತ್ರಾಭ್ಯಾಸ ಮಾಡುತ್ತಿದ್ದೆವು. ಈ 'ಕೈಗುರಿ' ನಾವಾಗ ಆಡುತ್ತಿದ್ದ ಗೋಲಿಗುಂಡ,ಚಿಣಿ-ಪಣಿ ಅಷ್ಟೇ ಅಲ್ಲದೇ ಕ್ರಿಕೆಟ್ಟಿನಲ್ಲಿಯೂ ಕೂಡ ತುಂಬ ಅವಶ್ಯಕವಾದ ಕೌಶಲ್ಯವಾಗಿತ್ತು. ಆಗಾಗ ನಮ್ಮ ಕೈಗುರಿ ಪ್ರ್ಯಾಕ್ಟೀಸಿಗೆ ಯಾರಾದಾದರೂ ತಂಬಿಗೆ ಬಲಿಯಾಗುವುದೂ ಇತ್ತು! ಹಿಂದಿನ ಕುಟ್ರಿ ಹೆಚ್ಚಾಗಿ ಮುಂದಿನ ಕಲ್ಲುಗಳ ಕುಟ್ರಿ ಖಾಲಿಯಾದರೆ ಅಂದಿನ ಕೈಗುರಿ ಪ್ರ್ಯಾಕ್ಟಿಸಿಗೆ ಪ್ಯಾಕ್-ಅಪ್ ಹೇಳುವ ಸಮಯ ಬಂದಿತೆಂದು ಅಲಿಖಿತ ನಿಯಮ!



ಇದು ಸಣ್ಣ ಹುಡುಗರ ಶೌಚ ಹವ್ಯಾಸದ ಕತೆಯಾದರೆ, ದೊಡ್ಡವರದು ಇನ್ನೊಂದು ತರಹವಿರುತ್ತಿತ್ತು. ಬಹಳಷ್ಟು ಜನ ಶೌಚಕ್ಕೆ ಹೋಗುವ ದಾರಿಯಲ್ಲಿ ಸಿಗುವ ಕರಿಜಾಲಿಯ ಕಡ್ಡಿಯನ್ನು ಮುರಿದುಕೊಂಡು ಬರುತ್ತಿದ್ದರು. ಶೌಚಕ್ಕೆ ಕುಳಿತಾಗ ಅದರ ಒಂದು ತುದಿಯನ್ನು ಜಗಿದು ಬ್ರಶ್ ತರಹ ಮಾಡಿ ಅದರಿಂದ ಹಲ್ಲುಜ್ಜುತ್ತಿದ್ದರು. ಈ ಮಲ್ಟಿಟಾಸ್ಕಿಂಗ್ ಪರಿಣಿತರು ಶೌಚ ಮುಗಿಯುವ ಸಮಯಕ್ಕೆ ಸರಿಯಾಗಿ ಹಲ್ಲುಜ್ಜುವುದನ್ನು ಮುಗಿಸಿ, ತಂದ ಒಂದು ಚರಗಿಯ ನೀರಿನಲ್ಲಿಯೇ ಅನ್ನಪಥದ ಎರಡೂ ತುದಿಗಳನ್ನು ತೊಳೆದುಕೊಳ್ಳುತ್ತಿದ್ದರು. ಇದಕ್ಕಿಂತ ಒಂಚೂರು ಬೇರೆ ಹವ್ಯಾಸ ಉಳ್ಳವರು ಧೂಮಪಾನಿಗಳು. ಕೈಯಲ್ಲಿ ಚುಟ್ಟ ಹಿಡಿದು ದಮ್ಮು ಎಳೆಯದಿದ್ದರೆ ಇವರಿಗೆ ಶೌಚವೇ ಆಗುತ್ತಿರಲಿಲ್ಲ. ಸಾಮಾನ್ಯವಾಗಿ ಪೊದೆಗಳ ಹಿಂದೆ ಶೌಚಕ್ಕೆ ಕುಳಿತವರು ಬೇರೆಯವರು ಹತ್ತಿರ ಬರದಿರಲಿ ಎಂದು ಬೇಕುಬೇಕೆಂದೇ ಕೆಮ್ಮುವುದು ರೂಢಿ. ಆದರೆ ಈ ಧೂಮ್ರಪಾನಿಗಳಿಗೆ ಕೆಮ್ಮು ನೈಸರ್ಗಿಕವಾಗಿಯೇ ಬರುತ್ತಿದ್ದರಿಂದ ಅವರಿಗೆ ಕೆಮ್ಮನ್ನು ನಟಿಸುವ ಅವಶ್ಯಕತೆಯೇ ಇರುತ್ತಿರಲಿಲ್ಲ. ನಮ್ಮೂರಲ್ಲಿ ಇಂತಹ ಒಬ್ಬ ಧೂಮಪ್ರಾಣಿ ಒಮ್ಮೆ ಸೇದಿ ಒಗೆದ ಚುಟ್ಟದ ತುಂಡಿನಿಂದ ಬೆಂಕಿ ಹತ್ತಿ ಹೊಲದಲ್ಲಿ ಒಟ್ಟಿದ್ದ ಒಂದು ಬಣವಿಗೇ ಬೆಂಕಿಬಿದ್ದಿತ್ತು!



ಇಂದಿಗೂ ಕೂಡ ಧೂಮಪಾನ ಶೌಚಕಾಲದ ಅತೀ ಜನಪ್ರಿಯ ಹವ್ಯಾಸವಾಗಿದೆ. ಮೊನ್ನೆಯ ಶೌಚ ಸಮೀಕ್ಷೆಯೂ ಅದನ್ನೇ ನಂಬರ್ ಒನ್ ಶೌಚ ಹವ್ಯಾಸ ಎಂದು ಹೇಳಿದೆ. ಅದಕ್ಕಾಗಿಯೇ ವಿಮಾನದ ಶೌಚಾಲಯದಲ್ಲಿ 'ಇಲ್ಲಿ ಧೂಮಪಾನ ಮಾಡಿದರೆ, ಭೋಂಗಾ ಒದರಿ ನಿಮ್ಮ ಮಾನ-ಮರ್ಯಾದಿ ಹರಾಜುಹಾಕಿಬಿಡುತ್ತೆ' ಎಂಬ ಎಚ್ಚರಿಕೆ ಬರೆದಿರುತ್ತಾರೆ.



ಎರಡನೇ ಜನಪ್ರಿಯ ಹವ್ಯಾಸ ದಿನಪತ್ರಿಕೆ ಓದುವುದು. ನಮ್ಮ ಒಬ್ಬ ಸ್ನೇಹಿತರು ಮನ-ಮನೆ ತುಂಬ ಕನ್ನಡ ತುಂಬಿಕೊಂಡಿರುವ ವ್ಯಕ್ತಿ. ಅವರಿಗೂ ಶೌಚಕಾಲದಲ್ಲಿ ದಿನಪತ್ರಿಕೆ ಓದುವ ಚಟ. ಒಮ್ಮೆ ಅವರ ಮನೆಯಲ್ಲಿ ನಾನು ವಸ್ತಿಮಾಡಬೇಕಾಗಿ ಬಂದಾಗ ಗಮನಿಸಿದ್ದೇನೆಂದರೆ, ಅಷ್ಟೆಲ್ಲ ಕನ್ನಡ ಕನ್ನಡ ಎಂದು ಬಡಿದುಕೊಳ್ಳುವ ಅವರಿಗೂ ಶೌಚದಲ್ಲಿ ಓದಲು ಇಂಗ್ಲೀಷು ದಿನ ಪತ್ರಿಕೆಯೇ ಬೇಕು. ಅದಕ್ಕೆ ನಾನು 'ಇದ್ಯಾಕೆ ಹೀಗೆ?' ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ ಬಹಳ ಮೌಲಿಕವಾಗಿತ್ತು. "ನೋಡ್ರಿ ಕನ್ನಡ ಪತ್ರಿಕೆ ಓದಿದರ ಸರಳವಾಗಿ ಅರ್ಥವಾಗಿಬಿಡತೈತಿ. ಆದರ ಇಂಗ್ಲೀಷು, ಅದೂ ಈ ಪತ್ರಿಕೆಯ ಇಂಗ್ಲೀಷು" ಎಂದು ತಮ್ಮ ಕೈಯಲ್ಲಿದ್ದ ಕಠಿಣ ಪದಗಳನ್ನು ಉಪಯೋಗಿಸುವಲ್ಲಿ ಹೆಸರುವಾಸಿಯಾಗಿರುವ ಇಂಗ್ಲೀಷು ಪತ್ರಿಕೆಯನ್ನು ತೋರಿಸುತ್ತಾ "ಅರ್ಥ ಆಗಬೇಕಂದರ ಭಾಳ ತಿಣಕಬೇಕು. ಹಿಂಗಾಗಿ ಸಂಡಾಸು ಆರಾಮ ಆಗಿಬಿಡ್‌ತೈತಿ" ಎಂದು ಹೇಳಿದ್ದನ್ನು ಕೇಳಿ ನಾನೂ ತಲೆದೂಗಿದ್ದೆ.



ಮೂರನೆಯ ಜನಪ್ರಿಯ ಶೌಚ-ಹವ್ಯಾಸ ಮೋಬೈಲು ಉಪಯೋಗಿಸುವುದು. ‘ಅದ್ಯಾಕೆ ಮೂರನೆ ನಂಬರಿನಲ್ಲಿದೆ, ಅದೇ ನಂಬರ್ ಒನ್ ಹವ್ಯಾಸ’ ಅಂದ್ರಾ ? ಮೋಬೈಲು, ಫೋನು ಕಾಲ್- ಎಸ್ಸೆಮ್ಮೆಸು - ಎಫ್ಫೆಮ್ ಗಳನ್ನು ದಾಟಿ ಇಂಟರ್ನೆಟ್ಟಿಗೆ ಲಾಗಾನ್ ಆದ ಮೇಲೆ, ನಿಮ್ಮ ದಿನಪತ್ರಿಕೆ ಕೂಡ ಮೋಬೈಲಲ್ಲಿ ಬಂದುಕೂತಿದೆ, ನಿಮ್ಮ ಬ್ಯಾಂಕು, ನಿಮ್ಮ ಮೆಚ್ಚಿನ ಪುಸ್ತಕದಂಗಡಿ, ಡಿಪಾರ್ಟ್ಮೆಂಟಲ್ ಸ್ಟೋರ್ ಎಲ್ಲ c/o ನಿಮ್ಮ ಮೋಬೈಲ್ ಆಗಿಹೋಗಿವೆ. ಹೀಗಾಗಿ ಶೌಚಕಾಲದಲ್ಲಷ್ಟೇ ಅಲ್ಲ, ಯಾವುದೇ ಸಮಯದಲ್ಲಿಯೂ ಕೂಡ ಮೋಬೈಲು ಉಪಯೋಗಿಸುವುದು ಜನರ ನೆಚ್ಚಿನ ಹವ್ಯಾಸ ಅನ್ನುವುದು ನನ್ನ ಅಭಿಪ್ರಾಯ ಕೂಡ. ಆದರೆ ಈ ಸಮೀಕ್ಷೆಯ ಡಾಟಾ ಒಂಚೂರು ಹಳೆಯದಿರಬಹುದು, ಅದಕ್ಕೆ ಅವರು ಮೂರನೆ ರ್ಯಾಂಕ್ ಕೊಟ್ಟಿದ್ದಾರೆ. ಅದಿರಲಿ, ಶೌಚಕಾಲದಲ್ಲಿ ಜನ ಮೋಬೈಲು ಉಪಯೋಗಿಸುತ್ತಾರೆ ಎಂದು ನಾನು ಮೊದಲ ಸಲ ತಿಳಿದುಕೊಂಡ ಘಟನೆ ತಮಾಷೆಯಾಗಿದೆ, ಕೇಳಿ.

ನಾನು ಮೊದಲಸಲ ಅಮೇರಿಕಕ್ಕೆ ಹೋಗಿದ್ದಾಗಿನ ಘಟನೆ. ಅಮೇರಿಕದಲ್ಲಿ ಯಾರಾದರೂ ಎದುರುಬಂದರೆ - ಪರಿಚಯವಿಲ್ಲದವರೂ ಕೂಡ - "ಹಾಯ್, ಹೌ ಆರ್ ಯು ?" ಎನ್ನುವುದು ರೂಢಿ. ನಾನು ಕೂಡ ಅಪರಿಚಿತರಿಗೆ 'ಹಾಯ್' ಎನ್ನುವುದನ್ನು ರೂಢಿಮಾಡಿಕೊಳ್ಳುತ್ತಿದ್ದೆ. ಒಮ್ಮೆ ನಾನು ಕಂಪನಿಯ ಕಟ್ಟಡದಲ್ಲಿ ಶೌಚಕ್ಕೆ ಹೋಗಿದ್ದೆ. ಆಗ ಪಕ್ಕದ ಶೌಚಾಲಯದಿಂದ ಒಂದು ಗಡಸು ದನಿ "ಹಾಯ್, ಹೌ ಆರ್ ಯು?" ಎಂದು ನನ್ನನ್ನು ಮಾತನಾಡಿಸಿತು. ಶೌಚ ಸಮಯದಲ್ಲಿ ಕುಶಲೋಪರಿ ವಿಚಾರಿಸುವುದು ನನಗೇನು ಗೊತ್ತಿರದ ವಿಷಯವಾಗಿರಲಿಲ್ಲ. ನಮ್ಮೂರಿನಲ್ಲಿ ದೊಡ್ಡವರೂ ಕೂಡ ಬಯಲು ಶೌಚಾಲಯದಲ್ಲಿ ರಾಜಕೀಯ-ವ್ಯಾಪಾರ-ಕ್ರೀಡಾ ವಿಚಾರಗೋಷ್ಠಿ ನಡೆಸುತ್ತಿದ್ದರು. ಅತ್ತೆಮನೆಯ ಸೊಸೆಯಂದಿರು ಕತ್ತಲಾದ ಮೇಲೆ ತಮ್ಮ ಸ'ಹೇಲಿ'ಯರೊಂದಿಗೆ ಶೌಚಕ್ಕೆ ಹೋಗಿದ್ದಾಗ ತಮ್ಮ ಹೊಟ್ಟೆಯಲ್ಲಿದ್ದದ್ದನ್ನು ಹೊರಹಾಕಿಕೊಳ್ಳುತ್ತಿದ್ದರು ಎಂದು ಗೊತ್ತಿತ್ತು. ಆದರೆ ಬೆಂಗಳೂರಿನ ಸಾರ್ವಜನಿಕ ಶೌಚಾಲಯದಲ್ಲಿ ಜನ ಉಳಿದ ಸಹ-ಶೌಚಿಗಳೊಂದಿಗೆ ಉಭಯಕುಶಲೋಪರಿ ಮಾಡುವುದನ್ನು ನಾನು ನೋಡಿರಲಿಲ್ಲ. ಹೀಗಾಗಿ ಆ ಗಡಸು ದನಿಗೆ ಉತ್ತರಿಸಲು ನಾನು ಒಂಚೂರು ಹಿಂಜರಿದೆ. ಆದರೆ ಅಪರಿಚಿತರು ಎದುರಾದರೆ 'ಹಾಯ್' ಎನ್ನುವ ಶಿಷ್ಟಾಚಾರವಿರುವ ಈ ದೇಶದಲ್ಲಿ ಶೌಚಸಮಯದಲ್ಲೂ ಮಾತನಾಡಿಸುವ ಪದ್ಧತಿಯಿರಬಹುದು ಎಂದುಕೊಂಡು, ನಾನು ' ಫೈನ್. ಹೌ ಆರ್ ಯು?' ಎಂದು ಉತ್ತರಿಸಿದೆ.

ಆದರೆ ಗಡಸು ದನಿ ಅಷ್ಟಕ್ಕೆ ನಿಲ್ಲಿಸದೇ "ಹೌ ಈಸ್ ಇಟ್ ಗೋಯಿಂಗ್?" ಎಂದು ಕೇಳಿತು. 'ಯಾವ ಗೋಯಿಂಗ್ ಬಗ್ಗೆ ಅವನು ಕೇಳ್ತಾ ಇದಾನೆ ? ಶೌಚ ಹೇಗೆ ನಡಿತಾ ಇದೆ ಅಂತ ಕೇಳುವುದು ಏನು ಸಭ್ಯತೆ ?' ಎಂದು ಕೊಂಡೆನಾದರೂ ಹಾಳಾಗಿಹೋಗ್ಲಿ ಅಂತ "ಫೈನ್" ಎಂದೆ. ಆ ಧಡಿಯ ನಿನ್ನೆ ಸೂಪರ್ ಬೌಲ್ ಮ್ಯಾಚ್ ನೋಡಿದೆಯಾ ? ಅಂತ ಮತ್ತೆ ಮಾತಿಗೆ ಎಳೆಯತೊಡಗಿದ. ನನ್ನ ಆಸಕ್ತಿಯ ಆಟ ಕ್ರಿಕೆಟ್ಟು ಮಾತ್ರ, ಈ ಅಮೇರಿಕನ್ ಸೂಪರ್ ಬೌಲ್ ಅಂದರೆ ನನಗೆ ಯಾವ ಆಸಕ್ತಿಯೂ ಇಲ್ಲ. ಹಾಗೆಯೇ ಆ ಧಡಿಯನಿಗೆ ಉತ್ತರಿಸಿದೆ. ಆದರೂ ಧಡಿಯ ನಿಲ್ಲದೇ ಹಿಂದಿನ ದಿನದ ಆಟದಲ್ಲಿ ಯಾರ್ಯಾರು ಏನೇನು ಪರಾಕ್ರಮ ಮೆರೆದರು ಎಂಬುದನ್ನು ಕೊರೆಯತೊಡಗಿದ. ಕೊನೆಗೆ "ಇವತ್ತಿನ ಮ್ಯಾಚ್ ಕೌಬಾಯ್ಸ್ ಟೀಮೇ ಗೆಲ್ಲೋದು, ಬೆಟ್ ಕಟ್ತೀಯಾ ?" ಎಂದು ಕೇಳಿದ. ನಾನು "ಸೂಪರ್ ಬೌಲ್ನಲ್ಲಿ ನನಗೆ ಆಸಕ್ತಿ ಇಲ್ಲ" ಎನ್ನುತ್ತಿದ್ದೆ. ಆತ ನನ್ನ ಮಾತನ್ನು ಅರ್ಧಕ್ಕೆ ತುಂಡರಿಸುತ್ತ "ನಾನು ಫೋನಲ್ಲಿ ನಿನಗೆ ಕೇಳಿದ್ದಕ್ಕೆಲ್ಲ ಪಕ್ಕದ ಟಾಯ್ಲೆಟ್ಟಿನಲ್ಲಿ ಕೂತಿರುವ ತರಲೆ ಉತ್ತರ ಕೊಡ್ತಾ ಇದಾನೆ. ಒಂದ್ನಿಮಿಷ ಇರು, ನಾನು ವಾಪಸು ಫೋನು ಮಾಡ್ತೇನಿ" ಎಂದ. ಆತ ಅಷ್ಟೊತ್ತಿನವರೆಗೆ ಮಾತನಾಡಿದ್ದು ನನ್ನೊಂದಿಗಲ್ಲ, ಮೋಬೈಲ್ ಫೋನಿನಲ್ಲಿ ಇನ್ಯಾರದೋ ಜೊತೆಗೆ ಎಂದು ತಿಳಿದು ನಾನು ಥಂಡಾಹೊಡೆದು ಹೋದೆ. ಅದಾದ ಮೇಲೆ ಒಂದು ಗಂಟೆ ನಾನು ಕೂತಿದ್ದು, ಪಕ್ಕದ ಶೌಚದ ಧಡಿಯ ಟಾಯ್ಲೆಟ್ಟಿನಿಂದ ಕಿಲೋಮೀಟರ್ ದೂರ ಹೋಗಿದ್ದಾನೆ ಎಂದು ನನ್ನ ಮನಸಿಗೆ ಒಪ್ಪಿಗೆಯಾದಮೇಲೆ ನಾನು ಹೊರಬಿದ್ದಿದ್ದೆ.



ಶೌಚ-ಸಮೀಕ್ಷೆಯಲ್ಲಿ ಇನ್ನೇನು ವಿಷಯವಿವೆ ಎಂಬ ಕುತೂಹಲ ನಿಮಗಾಗಿದೆಯೇ ? ಹಾಗಾದರೆ ನೀವು ನನ್ನ ಮುಂದಿನ ಲೇಖನದವರೆಗೆ ಕಾಯಬೇಕು. ನಾನು ಶೌಚಾಲಯದಲ್ಲಿ ಕುಳಿತು ನನ್ನ ಸ್ಯಾಮಸಂಗ್ ಟ್ಯಾಬ್ನಲ್ಲಿ ಈ ಲೇಖನ ಬರೆಯುತ್ತಿದ್ದೇನೆ. ಈಗ ನನ್ನ ಕೆಲಸ ಮುಗಿದಿದ್ದರಿಂದ ನಾನು ಹೋಗಬೇಕು, ಅದಕ್ಕೆ ಈ ಲೇಖನವನ್ನು ಇಲ್ಲಿಯೇ ಮುಗಿಸುತ್ತಿದ್ದೇನೆ. ಮತ್ತೆ ಸಿಗೋಣ, ನಮಸ್ಕಾರ !!

3 comments:

Keshav.Kulkarni said...

Super! Super!! Super!!!
Hilarious.

Harsha said...

very good article guru, keep going :-)

Manjunatha Kollegala said...

ಸೊಗಸಾದ ಬರಹ... ಶೌಚದಲ್ಲಿ ಕುಳಿತಾಗ ಇಂಥಾ ಬರಹಗಳು ಬರುವುದಾದರೆ ದಿನವೆಲ್ಲಾ ಶೌಚದಲ್ಲೇ ಕುಳಿತಿದ್ದರೂ ಅಡ್ಡಿಯಿಲ್ಲ.