Friday, April 26, 2013

ಅಳಗಪ್ಪನ ಅಲ್ಗಾರಿದಮ್

(ವಿಜಯ್ ನೆಕ್ಸ್ಟ್ http://vijayanextepaper.com/Details.aspx?id=1266&boxid=185429953 ನಲ್ಲಿ ಪ್ರಕಟವಾದ ನನ್ನ ಕತೆ)
ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಅಳಗಪ್ಪನ ಪೂರ್ತಿ ಹೆಸರು ಎ ಪಳನಿಯಪ್ಪನ್. ಅಂದರೆ ಅಳಗಪ್ಪನ್ ಪಳನಿಯಪ್ಪನ್. ಅಂದರೆ ಅವನ ಹೆಸರು ಪಳನಿಯಪ್ಪನ್, ಅವನಪ್ಪನ ಹೆಸರು ಅಳಗಪ್ಪನ್. ಹೆಚ್ಚು ಕಡಿಮೆ ಎಲ್ಲಾ ತಮಿಳರ ಹೆಸರುಗಳಲ್ಲಿ ಯಾವುದು ಫಸ್ಟ್ ನೇಮ್ , ಯಾವುದು ಮಿಡಲ್ ನೇಮ್, ಇನ್ನ ಸರ್ ನೇಮ್ ಯಾವುದು ಎಂಬ ಕನ್ಫೂಶನ್ ಅವನ ಹೆಸರಲ್ಲಿದ್ದರಿಂದ, ಅವನಿಗೇ ಅಳಗಪ್ಪನ್ ಎಂದು ನಾವು ಕರೆಯುತ್ತಿದ್ದೆವು. ಅದಕ್ಕೆ ಮಗ ಅಳಗಪ್ಪನಾಗಲಿ, ಅವರಪ್ಪ ಅಳಗಪ್ಪನಾಗಲಿ ಯಾವುದೇ ತಕರಾರು ಎತ್ತಿರಲಿಲ್ಲವಾದ್ದರಿಂದ, ಅಧಿಕೃತ ದಾಖಲೆಗಳಲ್ಲಿ ‘ಪಳನಿಯಪ್ಪನ್’ ಎಂಬ ಸ್ವನಾಮಧೇಯವನ್ನು ಹೊತ್ತಿರುವ ಈ ಕತೆಯನಾಯಕನನ್ನು ನಾನು ಈ ಕತೆಯಲ್ಲಿ ಅಳಗಪ್ಪ/ಅಳಗಪ್ಪನ್ ಎಂದೇ ಕರೆಯುತ್ತೇನೆ. ಓದುಗ ದೊರೆಗಳಾದ ನಿಮಗೂ, ಪಳನಿಯ ದೊರೆಯಾದ ಆ ದೇವ ಕಾರ್ತಿಕೇಯನಿಗೂ ಯಾವುದೇ ತಕರಾರಿಲ್ಲ ಎಂದು ಭಾವಿಸುತ್ತೇನೆ.


ಅಳಗಪ್ಪನು ತುಂಬಾ ಜಾಣ. ಕಷ್ಟಪಟ್ಟು ಕೆಲಸ ಕೂಡ ಮಾಡುತ್ತಿದ್ದ. ಒಂದು ಕೆಲಸ ಒಪ್ಪಿಕೊಂಡರೆ ಅವನು ಹಗಲೂ ರಾತ್ರಿ ಕಷ್ಟ ಪಟ್ಟು ದುಡಿದು ಕೆಲಸ ಮುಗಿಸಿದಾಗಲೇ ಅವನಿಗೆ ಸಮಾಧಾನ. ಅವನು ಒಂದೇ ತರಹದ ಎರಡು ಕೆಲಸಗಳನ್ನು ಎರಡು ಸಲ ಮಾಡಿದ್ದೇ ಇಲ್ಲ. ಮೊದಲನೇ ಕೆಲಸ ಮಾಡಿ, ಅದನ್ನು ಇನ್ನೊಮ್ಮೆ ಮಾಡಬೇಕಾಗಿ ಬಂದರೆ ಎಂದು ಲೆಕ್ಕಾ ಹಾಕಿ, ಅದಕ್ಕಾಗಿ ಅದೇ ಕೆಲಸವನ್ನು ಮಾಡಲು ಎಂದು ಒಂದು ಕಂಪ್ಯೂಟರ್ ಪ್ರೋಗ್ರಾಮ್ ಬರೆಯುವುದು ಅಳಗಪ್ಪನ ವಿಧಾನ. ಮುಂದಿನ ಸಲ ಆ ತರಹದ ಸಮಸ್ಯೆ ಬಂದಾಗ ತನ್ನ ಕಂಪ್ಯೂಟರ್ ಪ್ರೊಗ್ರಾಮಿನಿಂದ ಆ ಕೆಲಸಮಾಡಿಸಲು ಪ್ರಯತ್ನಿಸಿ, ಹೆಚ್ಚುಕಡಿಮೆ ಮೂಲ ಕೆಲಸಕ್ಕೆ ಬೇಕಾಗುವಷ್ಟೇ ಸಮಯ ತೆಗೆದುಕೊಂಡು, ತನ್ನ ಪ್ರೊಗ್ರಾಮಿನ ತಪ್ಪುಗಳನ್ನು ತಿದ್ದಿ, ಕೆಲಸ ಮುಗಿಸುತ್ತಿದ್ದನಾದರೂ, ಅಟೋಮೇಶನ್ ಮಾಡುವುದರಲ್ಲಿ ಅವನಿಗೆ ಯಾವಾಗಲೂ ರಣೋತ್ಸಾಹ. ಅದಲ್ಲದೇ ಊರ ಉಸಾಬರಿ ಮಾಡುತ್ತ, ಯಾವುದೇ ಗುಂಪಿನಲ್ಲಿ ಯಾರೇ ಯಾವುದೇ ಟೆಕ್ನಿಕಲ್ ಸಮಸ್ಯೆ ಎದುರಿಸುತ್ತಿದ್ದರೂ, ಅಟ್ಟಾಡಿಸಿಕೊಂಡು ಹೋಗಿ, ಅವರು ಕೇಳಲಿ-ಬಿಡಲಿ, ಸಮಸ್ಯೆಗೆ ಪರಿಹಾರ ಸೂಚಿಸುವುದು ಅವನ ರೂಢಿ.

ಒಟ್ಟಿನಲ್ಲಿ ಐಟಿ ಕಂಪನಿಗಳು ತಿರುಪತಿಗೆ ಹರಕೆ ಹೊತ್ತು ಹೈರ್‌ ಮಾಡಬಹುದಾದಂತಹ ಪ್ರತಿಭೆ ನಮ್ಮ ಅಳಗಪ್ಪ. ಆದರೆ ಅಳಗಪ್ಪನದು ಒಂದೇ ಒಂದು ಸಮಸ್ಯೆ –ಅದು ‘ಹತಗೊಂಡು ಹಲೇ’ ಸಿಂಡ್ರೋಮ್. ಈ ರೋಗಕ್ಕೆ ಬಲಿಯಾದವರ ತಲೆಯಲ್ಲಿ ಏನಾದರೂ ಬಂದರೆ, ಅದರ ಬಗ್ಗೆನೇ ಅವರ ವಿಚಾರ,ಅದರ ಬಗ್ಗೆನೇ ಮಾತು,ಅದರ ಬಗ್ಗೆನೇ ಜನರ ತಲೆ ತಿನ್ನೋದು. ಒಟ್ಟಿನಲ್ಲಿ ತಮ್ಮ ತಲೆಯಲ್ಲಿ ಬಂದ ವಿಚಾರವೇ ಜಗತ್ತಿನ ಏಕಮೇವ ಅದ್ವೀತೀಯ ವಿಚಾರ ಎಂದುಕೊಂಡು ಉಳಿದ ಕ್ಷುಲ್ಲಕ ಜೀವಿಗಳ ತಲೆಗಳನ್ನು ಕೆಡಿಸಿ ಮಸರು ಗಡಿಗೆ ಮಾಡಿಬಿಟ್ಟುತ್ತಾರೆ. ಆ ರೋಗದ ದೆಸೆಯಿಂದಾಗಿ ಒಂದು ವಿಷಯಕ್ಕೆ ಹತಗೊಂಡು ಹಲೇ ಎನ್ನುತ್ತಿರಬೇಕಾದರೆ ಉಳಿದ ವಿಷಯಗಳಿಗೆ ಅಷ್ಟೊಂದು ಗಮನ ಕೊಡೋದಿಲ್ಲ ಎನ್ನುವ ಮಾತುಗಳು ಅಳಗಪ್ಪನ ಬಗ್ಗೆ ಇದ್ದರೂ ಅವನೊಬ್ಬ ಒಳ್ಳೆಯ ಇಂಜನೀಯರು ಎಂಬ ಬಗ್ಗೆ ಯಾರಲ್ಲಿಯೂ ಭಿನ್ನಾಭಿಪ್ರಾಯವಿರಲಿಲ್ಲ.

ಇಂತಹ ಅಳಗಪ್ಪ ಈಗ ಶೇರು ಮಾರುಕಟ್ಟೆಯ ಬಗ್ಗೆ ‘ಹತಗೊಂಡು ಹಲೇ’ ಎನ್ನತೊಡಗಿದ್ದ. ಶೇರುಮಾರುಕಟ್ಟೆಯ ಬಗ್ಗೆ ಹತ್ತು ಹಲವಾರು ಪುಸ್ತಕಗಳನ್ನು ಓದಿ, ದಿನವೂ ಒಂದೊಂದು ವೆಬ್‌ಸೈಟ್‌ ಓದಿ, ಅದ್ಯಾವುದೋ ಚಾನೆಲ್ ನೋಡಿ, ಯಾವುದೋ ಟ್ರೇನಿಂಗ್ ಅಟೆಂಡ್ ಮಾಡಿ, ಒಟ್ಟಿನಲ್ಲಿ ಒಂದು ಸವಿಸ್ತಾರದ ತಯಾರಿಯ ನಂತರ ಶೇರು ವ್ಯವಹಾರದಲ್ಲಿ ಅಳಗಪ್ಪ ಡೈವ್ ಹೊಡೆದಿದ್ದ. ದಿನವೂ ನಮ್ಮ ಜೊತೆ ಊಟದ ಸಮಯದಲ್ಲಿ “ಗುರು, ಇವತ್ತು ರಿಲಾಯನ್ಸು ಎಂಗೆ ಗಿರ್ಕಿ ಹೊಡೆಯುತು ಗೊತ್ತಾ ?” ಎಂದೋ “ಏವಿಯಷನ್‌ನಲ್ಲಿ ಎಫ್‌ಡಿಆಯ್‌ಗೆ ಅನುಮತಿ ಸಿಕ್ತಾ ? ಇನ್ನು ಕಿಂಗ್‌ಫಿಷರ್ ಎಂಗೆ ಹಾರುತ್ತೆ ನೋಡ್ತಾ ಇರಿ” ಎಂದು ಕೊರೆಯುತ್ತಾ , ನಮ್ಮಲ್ಲೂ ಶೇರು ಮಾರುಕಟ್ಟೆಯ ಬಗ್ಗೆ ಆಸಕ್ತಿ ಮೂಡಿಸತೊಡಗಿದ್ದ. ಅವರಿವರಾರದರೂ ಆಗಿದ್ದರೆ ಅದೇ ರಿಲಾಯನ್ಸು, ಅದೇ ಯುನೈಟೆಡ್ ಬ್ರಿವರೀಸ್ ಶೇರುಗಳನ್ನು ಮಾರುತ್ತಾ, ಕೊಳ್ಳುತ್ತ, ಬಂದ ಲಾಭದ ಬಗ್ಗೆ ಕೊಚ್ಚಿಕೊಳ್ಳುತ್ತ, ಆದ ಹಾನಿಯ ಬಗ್ಗೆ ಲೊಚಗುಡುತ್ತಾ ಇದ್ದು ಬಿಡುತ್ತಿದ್ದರು. ಆದರೆ ಅಳಗಪ್ಪನೊಳಗಿದ್ದ “ಅಟೋಮೇಷನ್‌ ದಾಹಿ” ಹಾಗಾಗಗೊಟ್ಟಿರಲಿಲ್ಲ. ಅವನು ತನ್ನ ಪರವಾಗಿ ಶೇರು ವ್ಯವಹಾರ ನಡೆಸಲು ಒಂದು ಪ್ರೋಗ್ರಾಮ್ ಬರೆದು, ದಿನವೂ ತಾನು ಆಫೀಸಿಗೆ ಬಂದಾಗ ಮನೆಯಲ್ಲಿನ ಕಂಪ್ಯೂಟರಿನ ಮೇಲೆ ಆ ಪ್ರೋಗ್ರಾಮ್‌ನ್ನು ರನ್ ಮಾಡಿ ಬಂದಿರುತ್ತಿದ್ದ !


=============================================================


"ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂ ತಗಡು ಗುರು. ಈ ವಿಂಡೋಸ್ ಮೋಬೈಲ್ ನೋಡು ಹ್ಯಾಗೆ ಚಿಂದಿ ಆಗಿದೆ.." ಎನ್ನುತ್ತಾ ಬಂದ ಅಳಗಪ್ಪನ್ ನನ್ನ ಕಣ್ಣಮುಂದೆ ತನ್ನ ಹೊಸ ಮೋಬೈಲ್ ಹಿಡಿದ. ಈಗಾಗಲೇ ಹೇಳಿದಂತೆ ಅಳಗಪ್ಪನಿಗೆ ‘ ಹತಗೊಂಡ್ ಹಲೇ’ ಸಿಂಡ್ರೋಮ್ . ಈಗ ನಮ್ಮ ಅಳಗಪ್ಪನ್ ವಿಂಡೋಸ್ ಮೋಬೈಲಿಗೆ ‘ಹತಗೊಂಡು ಹಲೆ’ ಎನ್ನುತ್ತಿದ್ದಾನಾದ್ದರಿಂದ ಅವನಿಗೆ ಅದೇ ಒಳ್ಳೆಯದಾಗಿ ಕಂಡು, ಆಂಡ್ರಾಯಿಡ್ ತಗಡಾಗಿ ಕಾಣಿಸುತ್ತಾ ಇದೆ. ಸ್ವಲ್ಪ ದಿನಗಳ ಹಿಂದೆ ಇದೇ ಅಳಗಪ್ಪನ್ನು ಅದೇ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂ ಅನ್ನು ತಲೆಮೇಲೆ ಹೊತ್ತು ಮೆರೆಸಿದ್ದ.. ಆವಾಗ ಅವನು ಆಂಡ್ರಾಯಿಡ್ಗೆ ‘ಹತಗೊಂಡು ಹಲೆ’ ಎನ್ನುತ್ತಿದ್ದ!

ಈಗ ಅಳಗಪ್ಪನ್ ನನ್ನ ಮುಂದೆ ಹಿಡಿದಿರುವುದು ಹೊಸ ಮೋಬೈಲಾದರೂ, ಅವನಿಗೆ ತೋರಿಸಲು ಬಂದಿದ್ದು ಹೊಸ ಮೋಬೈಲಲ್ಲ, ಆದರೆ ಅವನ ಶೇರು ವ್ಯವಹಾರದ ರಿಟರ್ನ್ ಅಂತ ನನಗೆ ಅನುಮಾನವಿತ್ತು. ಅಳಗಪ್ಪನ ಮಾತುಗಳು ಕೆಲದಿನಗಳಿಂದ ಒಂದು ನಿಶ್ಚಿತ ಪಥದಲ್ಲಿಯೇ ಸಾಗುತ್ತಿದ್ದವು. ಮಾತು ಶುರುವಾಗುತ್ತಿದ್ದದು ಮೋಬೈಲ್ ಬಗೆಗೆ ಆಗಿರಬಹುದು, ಇಲ್ಲವೇ ರಾಜಕೀಯ, ಕ್ರಿಕೆಟ್ಟು, ಸಿನೇಮಾ ಇತ್ಯಾದಿ ಯಾವುದೇ ವಿಷಯದಿಂದ ಆಗತ್ತಿತ್ತಾದರೂ ಮಾತು ಮುಗಿಯುತ್ತಿದ್ದದು ಮಾತ್ರ ಶೇರುಮಾರುಕಟ್ಟೆಯ ಮಾತಿನಿಂದಲೇ. ಒಂದು ದಿನ ವಾರೆನ್ ಬಫೆಟ್ ಬಗ್ಗೆ ದೀರ್ಘ ಉಪನ್ಯಾಸವಾದರೆ, ಮತ್ತೊಂದು ದಿವಸ ಝುಂಝುನವಾಲನ ಸ್ಟ್ರ್ಯಾಟಜಿ ಬಗೆಗೆ ಪೆಪ್‍ಟಾಕ್. ಒನ್ಸ್ ಅಗೇನ್ ಶೇರುಮಾರ್ಕೆಟ್ಟಿನ ಸಬ್-ಟಾಪಿಕ್ಕಿನ್ನಲ್ಲೂ ಅವನ ಅಲ್ಗೋರಿದಮ್ ಬಗ್ಗೆ ಒಂದೈದು ನಿಮಿಷದ ಮಾತಿರಲೇಬೇಕು. ಹೀಗಾಗಿ ನನ್ನ ನಾನು ಅನುಮಾನ ಪಡುವುದು ಸಹಜವಾಗಿತ್ತು.

ಐದು ನಿಮಿಷ ವಿಂಡೋಸ್ ಮೋಬೈಲಿನ ಬಗ್ಗೆ ಕೊರೆದು, ನಾನೆಂದುಕೊಂಡಂತೆಯೇ ತನ್ನ ಶೇರು ವ್ಯವಹಾರದ ಚಾರ್ಟನ್ನು ಮೋಬೈಲಿನಲ್ಲಿ ತೋರಿಸುತ್ತಾ, “ಗುರು, ಈ ವಾರ ನನ್ನ ಅಲ್ಗಾರಿದಮ್ ಭರ್ಜರಿ ಏಳು ಪರ್ಸೆಂಟು ರಿಟರ್ನ್ ಕೊಟ್ಟಿದೆ ಗೊತ್ತಾ?” ಎಂದು ಮೋಬೈಲನ್ನು ನನ್ನ ಕಣ್ಣಿಂದ ಎರಡು ಫೂಟು ದೂರದಲ್ಲಿ ಹಿಡಿದ. ನಾನು ಮೋಬೈಲಿಗೆ ಕೈಚಾಚಿದರೆ ಮೋಬೈಲನ್ನು ತೆಗೆದುಕೊಂಡು ಕಿಸೆಯಲ್ಲಿ ಇಟ್ಟುಕೊಂಡು “ನನ್ನ ಅಲ್ಗೋರಿದಮ್ ಅನ್ನು ಈಗಲೇ ನಿನಗೆ ತೋರಿಸುವುದಿಲ್ಲ. ಅದು ನನ್ನ ಇಂಟಲೆಕ್ಚುವಲ್ ಪ್ರಾಪರ್ಟಿ ..” ಎಂದ.

‘ಹಾಳಾಗಿ ಹೋಗಲಿ ಅವನೂ, ಅವನ ಅಲ್ಗಾರಿದಮ್ಮೂ‘ ಎಂದುಕೊಂಡು ನನ್ನ ಕೆಲ್ಸ ನಾನು ಮಾಡಿಕೊಂಡು ಕುಳಿತಿರಬೇಕಾದರೆ ಮತ್ತೆ ಬಂದ. “ನಾನು ಹಾಗೆ ಮಾತಾಡಿದ್ದಕ್ಕೆ ಬೇಜಾರಾಯ್ತಾ ? ಇವತ್ತು ಸಾಯಂಕಾಲ ನಾಲ್ಕೂವರೆಗೆ ಕೆಫೆಟೇರಿಯಾದ ಮೂಲೆ ಟೇಬಲ್ಲಿನ ಮೇಲೆ ಸೇರೋಣ. ಅಲ್ಲಿ ನಾನು ನನ್ನ ಅಲ್ಗಾರಿದಮ್ ಬಗ್ಗೆ ಇನ್ನಷ್ಟು ಮಾಹಿತಿ ಕೊಡುತ್ತೇನೆ.” ಎಂದು ಹೇಳಿದ.



ಸಾಯಂಕಾಲ ಸರಿಯಾದ ಸಮಯಕ್ಕೆ ಕೆಫೆಟೇರಿಯಾದ ಮೂಲೆ ಟೇಬಲ್ಲಿಗೆ ಹೋದೆ. ಅದಾಗಲೇ ನಮ್ಮದೇ ಕಂಪನಿಯಲ್ಲಿ ಕೆಲಸ ಮಾಡುವ ರವಿ ಮತ್ತು ಹರಕತುಲ್ಲಾ ಬಂದು ಮೂಲೆ ಟೇಬಲ್ಲಿನಲ್ಲಿ ಪ್ರತಿಷ್ಠಾಪಿತಗೊಂಡಿದ್ದರು. ನನ್ನ ಹಿಂದೆಯೇ ಬಂದ ಅಳಗಪ್ಪ ನಾವು ಮೂರೂ ಜನರಿಗೆ ಯಾವುದೇ ಪ್ರಸ್ತಾವನೆ ಇಲ್ಲದೆಯೇ “ನಮ್ಮ ಐಟಿ ಕೆಲಸ ನೀರ ಮೇಲಿನ ಗುಳ್ಳೆಯಂತಹದು. ಕೆಲಸ ಹೋದರೆ ನೀವು ಮೂರು ಜನ ಏನು ಮಾಡಬೇಕೆಂದುಕೊಂಡಿದ್ದೀರಿ ?” ಎಂದು ಕೇಳಿದ. ನಾನು “ನಿಯತ್ತಾಗಿ ಊರಿಗೆ ಹೋಗಿ ನಾಕು ಎಮ್ಮೆ ಕಟ್‌ತೀನಿ” ಎಂದು ಹೇಳಿದೆನಾದರೂ, ರವಿ ಏನೋ ಅಪಶಕುನ ಕೇಳಿದವರಂತೆ ಚಿಕ್ಕ ಮುಖ ಮಾಡಿದ. ಹರಕತುಲ್ಲಾ ಏನೋ ಹೇಳಲು ಬಾಯಿ ತೆಗೆದನಾದರೂ ಅಳಗಪ್ಪ ಅವನಿಗೆ ಅವಕಾಶ ಕೊಡದೇ “ನನ್ನ ಹತ್ತಿರ ಒಂದು ಸಲ್ಯೂಷನ್ ಇದೆ.” ಎಂದು ಹೇಳಿದಾಗ ನನಗೆ ಅಳಗಪ್ಪ ತನ್ನ ಅಟ್ಟಡಿಸಿಕೊಂಡು ಬಂದು ಸಮಸ್ಯೆಗೆ ಪರಿಹಾರ ಕೊಡುವ ಗುಣದ ಇನ್ನೊಂದು ಸ್ಯಾಂಪಲ್ ಕೊಡ್ತಾ ಇದಾನೆ ಎನಿಸಿತ್ತು. ಅಳಗಪ್ಪ ಮುಂದುವರಿಸಿ “ನೀವು ಮೂರು ಜನ ನನ್ನ ಶೇರ್ ಟ್ರೇಡಿಂಗ್ ಅಲ್ಗೋರಿದಮ್ಗೆ ಫಂಡ್ ಮಾಡಿದರೆ, ಐಟಿ ಇಂಡಸ್ಟ್ರೀ ಹಾಳಾಗಿ ಹೋದರೂ ಈಗ ನೀವು ಪಡೆಯುವಷ್ಟು ಸಂಬಳದಷ್ಟು ಹಣ ತಿಂಗಳಿಗೆ ನಿಮಗೆ ಸಿಗುವ ಗ್ಯಾರಂಟಿ ನಾನು ಕೊಡಬಲ್ಲೆ” ಎಂದ.

ನಾವು ಮೂರೂ ಜನ ಬಹುಷಃ ಅಳಗಪ್ಪನಿಗೆ ವೆಂಚರ್ ಕ್ಯಾಪಿಟಲಿಸ್ಟ್ ಆಗಲು ಮಾನಸಿಕವಾಗಿ ತಯಾರಾಗಿ ಬಂದಿರಲಿಲ್ಲಾ ಅನಿಸುತ್ತೆ. ಹಾಗಾಗಿ ನಾವು ಸುಮ್ಮನೆ ಕುಳಿತೆವು. ಅಳಗಪ್ಪ ನಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದನ್ನು ಗಮನಿಸಿ, ಅವನ ಮೇಲೆ, ಅವನ ಅಲ್ಗೋರಿದಮ್‍ ಮೇಲೆ ನಮಗೆ ಇನ್ನೂ ವಿಶ್ವಾಸ ಬಂದಿಲ್ಲ ಎಂದುಕೊಂಡು ನಮಗೆ ತಿಳಿಹೇಳಲು ತೊಡಗಿದ.

“ನಾನು ಕಳೆದ ಇಪ್ಪತ್ತು ವರುಷಗಳ ಶೇರ್ ಮಾರ್ಕೆಟ್ಟಿನ ಡಾಟಾದ ಮೇಲೆ ನನ್ನ ಅಲ್ಗೋರಿದಮ್‍ನ್ನು ರನ್‍ ಮಾಡಿದ್ದೇನೆ. ಆ ಡಾಟಾದ ಮೇಲೆ ನನ್ನ ಅಲ್ಗಾರಿದಮ್ ಕನಿಷ್ಠ ನಾಲ್ಕುನೂರು ಪ್ರತಿಶತ ರಿಟರ್ನ್‍ ಕೊಟ್ಟಿದೆ. ಕಳೆದ ಒಂದು ವಾರದಿಂದ ನನ್ನ ಅಲ್ಗೋರಿದಮ್ ಲೈವ್ ಟ್ರೇಡ್ ಮಾಡ್ತಾ ಇದೆ. ಈ ಒಂದು ವಾರದಲ್ಲಿ ಅದು ಶೇಕಡಾ ಏಳು ಲಾಭ ಕೊಟ್ಟಿದೆ. ಅಂದರೆ ವರ್ಷಕ್ಕೆ ಹೆಚ್ಚೂ-ಕಮ್ಮಿ ಪ್ರತೀಶತ ಮುನ್ನೂರಾ ಅರವತ್ತು ! ನಾನು ನನ್ನ ಮಾರ್ಜಿನ್‍ ಇಟ್ಟುಕೊಂಡರೂ ನಿಮಗೆ ವರ್ಷಕ್ಕೆ ಮುನ್ನೂರು ಪ್ರತಿಶತ ಲಾಭ ಗ್ಯಾರಂಟಿ” ಎಂದು ಅವನು ಹೇಳಿ ಎಲ್ಲರ ಮುಖಗಳನ್ನು ಗಮನಿಸತೊಡಗಿದ. ರವಿಯ ಮುಖದಲ್ಲಿ ಅದ್ಯಾಕೋ ಇನ್ನೂ ಅದೇ ನಿರಾಶಾ ಭಾವವಿದ್ದರೆ, ಹರಕತುಲ್ಲಾನ ಮುಖದಲ್ಲಿದ್ದ ಉತ್ಸಾಹ ಅಳಗಪ್ಪನ ಅಲ್ಗಾರಿದಮ್‍ಗೆ ಕಾಸುಕೊಡಲು ರೆಡಿ ಎಂದು ಸಾರಿ ಹೇಳುತ್ತಿತ್ತು. ನನ್ನಲ್ಲಿ ಇನ್ನೂ ಹಲವಾರು ಅನುಮಾನಗಳಿದ್ದವು.

ನಾನು “ಅಳಗಪ್ಪ, ಶೇರು ಮಾರ್ಕೆಟಿನಲ್ಲಿ ಏರಿಳಿತ ಇದ್ದದ್ದೇ. ನೀನು ಅದ್‍ಹ್ಯಾಗೆ ಗ್ಯಾರಂಟೀಡ್ ರಿಟರ್ನ್‍ ಎಂದುಹೇಳುತ್ತಿ ?” ಎಂದು ಪ್ರಶ್ನಿಸಿದೆ.

ಅದಕ್ಕೆ ಆತ “ಗುರು, ಶೇರು ಮಾರ್ಕೆಟಿನಲ್ಲಿ ಎರಡು ಭಾವನೆಗಳ ಪ್ರಭಾವವಿರುತ್ತದೆ. ಒಂದು ಹೆಚ್ಚಿಗೆ ಲಾಭ ಗಳಿಸಬೇಕೆಂಬ ಲಾಲಸೆ, ಮತ್ತೊಂದು ಈಗಾಗಲೇ ಗಳಿಸಿರುವ ಲಾಭ ಕಳೆದುಹೋದಿತೆಂಬ ಭಯ. ಮನುಷ್ಯರಾದವರು ಈ ಎರಡರ ಪ್ರಭಾವಕ್ಕೊಳಗಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಅದೃಷ್ಟವಶಾತ್ ಕಂಪ್ಯೂಟರ್ ಅಲ್ಗಾರಿದಮ್ಮುಗಳಿಗೆ ಭಾವಗಳಿಲ್ಲ. ಹೀಗಾಗಿ ಅವು ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳದೇ, ತಥ್ಯಗಳನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳುತ್ತವೆ. ಹಾಗಾಗಿ ಅವು ತಪ್ಪುಮಾಡುವುದಿಲ್ಲ” ಎಂದು ಮನಮುಟ್ಟುವ ಹಾಗೆ ವಿವರಿಸಿದ.

ನನ್ನ ಅನುಮಾನಗಳಿನ್ನೂ ಪರಿಹಾರಗೊಂಡಿರಲಿಲ್ಲ. ”ನೀನು ಹೇಳಿರುವ ಹಾಗೆ ಕಂಪ್ಯೂಟರ್‌ಗಳು ಭಾವನೆ-ರಹಿತವಾದವುಗಳೆ. ಅವುಗಳಿಗೆ ನಾವು ಕೊಡುವ ಡಾಟಾದ ಮೇಲೆ ಅವುಗಳ ನಿರ್ಧಾರಗಳು ಅವಲಂಬಿತವಾಗಿರುತ್ತವೆ. ನಾವು ಅವುಗಳಿಗೆ ಮಾಹಿತಿಯೇ ತಪ್ಪಾಗಿದ್ದರೆ, ಅವುಗಳ ಮಾಡುವ ನಿರ್ಧಾರಗಳೂ ತಪ್ಪಾಗಿರುತ್ತವೆ. ಸರಿಯಾದ ಡಾಟಾಸಿಗದೇ ಇರುವುದಕ್ಕಾಗಿಯೇ ಯಾರೂ ಇಂತಹ ಪ್ರಯತ್ನ ಮಾಡಿಲ್ಲ ಎನಿಸುತ್ತದೆ” ಎನ್ನುತ್ತಿರುವವನನ್ನು ಅರ್ಧಕ್ಕೆ ತಡೆದ ಅಳಗಪ್ಪ.

“ನೀನು ಹೇಳ್ತಾ ಇರೋದು ತಪ್ಪು. ಈಗಾಗಲೇ ಸುಮಾರಷ್ಟು ಶೇರ್ ಟ್ರೇಡಿಂಗ್ ಕಂಪ್ಯೂಟರ್ ಪ್ರೋಗ್ರಾಮ್‍ಗಳಿಂದಲೇ ಆಗ್ತಾ ಇದೆ. ಪ್ರತೀ ಶೇರಿನ ಸಂಪೂರ್ಣ ಜಾತಕವೂ ಸಿಗುತ್ತದೆ. ಆದರೆ ಉಳಿದವರ್ಯಾರೂ ಸಂಪೂರ್ಣ ಸರಿಯಾಗಿ ಮಾಡ್ತಾ ಇಲ್ಲ, ನಾನು ಮಾತ್ರ ಮಾಡ್ತಾ ಇರೋದು ಸರಿಯಾದ ಅಲ್ಗಾರಿದಂನ ಉಪಯೋಗ” ಎಂದು ಅಸಹನೆಯಿಂದ ಹೇಳಿದ.

ನನಗೇನೋ ಅಳಗಪ್ಪನ ಮೇಲೆ ಪೂರ್ತಿ ನಂಬಿಕೆ ಬರಲಿಲ್ಲ. ಹರಕತುಲ್ಲಾ ಅದಾಗಲೇ ಕುಣಿಕುಣಿದು ಕಾಸುಕೊಡಲು ತಯಾರಾಗಿದ್ದ. ರವಿಯ ಮುಖಭಾವದಿಂದ ಅವನೂ ಇನ್ನೂ ತಯಾರಾಗಿಲ್ಲ ಎನಿಸುತ್ತಿತ್ತು. ಹೀಗಾಗಿ ನಾವು ಮತ್ತೆ ವಿಚಾರಮಾಡಿ ಮಾತನಾಡೋಣ ಎಂದು ಅವತ್ತಿನ ಮೀಟಿಂಗ್ ಮುಗಿಸಿದೆವು. ಹೊರಡುವಾಗ ನನ್ನ ಹಿಂದೆಯೇಬಂದ ರವಿ ನನಗಷ್ಟೇ ಕೇಳುವಂತೆ “ಈ ಹರಕತುಲ್ಲಾನದು ಐರನ್‌ ಲೆಗ್ಗು. ಅವನಿದ್ದ ಯಾವ ಪ್ರಾಜೆಕ್ಟೂ ಸಕ್ಸೆಸ್ ಆಗಿಲ್ಲ. ಇದು ಹಳ್ಳಾ ಹಿಡಿಯೋದು ಗ್ಯಾರಂಟೀ “ ಎಂದು ಹೇಳಿದ.

ನನಗೋ ಕೆಲಸ ಹೋದರೆ ವಾಪಸು ಊರಿಗೆ ಹೋಗಿ ಎಮ್ಮೆ ಕಟ್ಟುವ ಸ್ಕೀಮೇ ರೋಮ್ಯಾಂಟಿಕ ಅನ್ನಿಸಿದ್ದರಿಂದ , ಅದಕ್ಕಿಂತ ಹೆಚ್ಚಾಗಿ ಅದಾಗಲೇ ದುಡ್ಡು ಡಬಲ್ ಮಾಡುತ್ತೇವೆಂದು ಮುಂಡಾ ಮೋಚಿದ ವಿನಿ-ವಿಂಕಾದಿ ಸ್ಕೀಮುಗಳ ನೆನಪಿದ್ದುದರಿಂದ ನಾನು ಅಳಗಪ್ಪನ ವರ್ಷಕ್ಕೆ ದುಡ್ಡು ಮೂರು ಪಟ್ಟಾಗುವ ಸ್ಕೀಮಿಗೆ ಒಪ್ಪಿಕೊಳ್ಳಲಿಲ್ಲ. ರವಿಯೂ ಹರಕತುಲ್ಲಾನ ಐರನ್‌ ಲೆಗ್ಗಿನ ಸಲುವಾಗಿ ದೂರ ಸರಿದ. ಹರಕತುಲ್ಲಾ ಒಬ್ಬನೇ ಅಳಗೊಪ್ಪನ ಜೊತೆಗೂಡಿದ.

ಅದಾಗಿ ಸುಮಾರು ಎರಡು-ಮೂರು ತಿಂಗಳಲ್ಲಿ ಅಳಗಪ್ಪನನ್ನೂ, ಹರಕತುಲ್ಲಾನನ್ನೂ ಕಂಪನಿ ಲೋ-ಪರ್ಮಾನ್ಸ್‌ ಕಾರಣಕೊಟ್ಟು ಕೆಲಸದಿಂದ ತೆಗೆದುಹಾಕಿತು. ಹೋಗುವಾಗ ಅಳಗಪ್ಪ “ನಮ್ಮ ಬಾಸ್‌ನೂ ನನ್ನ ಅಲ್ಗಾರಿದಂ ಮೇಲೆ ದುಡ್ಡು ಹೂಡುತ್ತೇನೆ ಎಂದಿದ್ದ. ಆದರೆ ನಾನು ಅವನನ್ನು ಸೇರಿಸಿಕೊಂಡಿರಲಿಲ್ಲ, ಅದಕ್ಕಾಗಿ ಹೀಗೆ ಮಾಡಿದ್ದಾನೆ” ಎಂದಿದ್ದನಾದರೂ, ಅವನು ತನ್ನ ಅಲ್ಗಾರಿದಂನಲ್ಲಿಯೇ ಮುಳುಗಿ ಕೆಲಸ ಕಡೆಗಣಿಸಿದ್ದಕ್ಕಾಗಿ ಫೈರ್‍ ಆಗಿದ್ದಾನೆ ಎಂದು ಗುಲ್ಲು ಹರಡಿತ್ತು.

ಅದಾದ ಮೇಲೆ ಅಳಗಪ್ಪ ಮತ್ತು ಹರಕತುಲ್ಲ ನಮ್ಮ ನೆನಪಿನಿಂದ ದೂರವಾಗಿಬಿಟ್ಟಿದ್ದರು.


=============================================================


ನನ್ನದೊಂದು ಬಹಳ ಪುರಾತನ ಚಟವೊಂದಿದೆ. ಯಾವುದಾದರೂ ಪತ್ರಿಕೆಯಲ್ಲಿ ಯಾವುದಾದರೂ ಪ್ರಮುಖ ವ್ಯಕ್ತಿಯ ಫೋಟೋ ಬಂದಿದ್ದರೆ,ಆ ಮುಖಕ್ಕೆ ಗಡ್ಡ-ಮೀಸೆ ಹಚ್ಚಿಯೋ, ಹಣೆಗೆ ಈಬತ್ತಿ ಪಟ್ಟ ಅಥವಾ ಕುಂಕುಮ ಹಚ್ಚಿ, ತಲೆಗೆ ಮುಲ್ಲಾನ ಟೊಪ್ಪಿಗೆ,ಇಲ್ಲಾ ಮೈಸೂರ್ ಪೇಟಾ ಅಥವಾ ಗಾಂಧಿ ಟೋಪಿ ಹಾಕಿಯೋ ಅವರು ಹ್ಯಾಗೆ ಕಾಣುತ್ತಾರೆ ಎಂದು ನೋಡುವುದು. ಒಮ್ಮೆ ಸಾಹಿತಿ ಮೂರ್ತಿಯವರ ಚಿತ್ರಕ್ಕೆ ಮುಲ್ಲಾನ ಟೋಪಿ ತೊಡಿಸಿ, ಗಡ್ಡ ಬೆಳೆಸಿದ್ದ ಚಿತ್ರ ನೋಡಿ, ನನಗೇ ಶಾಕ್ ಆಗಿತ್ತು- ನಮ್ಮ ಮೂರ್ತಿಗಳು ಥೇಟು ಒಸಾಮಾ-ಬಿನ್-ಲಾಡೇನ್ ತರ ಕಾಣಿಸುತ್ತಿದ್ದರು! ಹಾಗೆ ನಮ್ಮ ಸಾಹಿತಿ ಶ್ರೀನಿವಾಸ್ ವೈದ್ಯರಿಗೆ ಮೈಸೂರು ಪೇಟಾ ಹಾಕಿದರೆ ಹೂಬೇಹೂಬ್ ಗಾಯಕ ಪಿ.ಬಿ. ಶ್ರೀನಿವಾಸ ಆಗುತ್ತಾರೆ ಎಂದು ಕೂಡ ನಾನು ಮಾಡಿ ತೋರಿಸಿದ್ದೆ.

ಈಗೀಗ ನನ್ನ ಪುರಾತನ ಚಟ ಅಪ್‌ಗ್ರೇಡ್ ಆಗಿ ಟೀವಿಯಲ್ಲಿ ಬರುವ ಮುಖಗಳನ್ನು ನೋಡ್ ನೋಡುತ್ತಾ ಮನಸ್ಸಿನಲ್ಲಿ ಮೈಕ್ರೋಸಾಫ್ಟ್ ಪೇಂಟ್ ಪ್ರೋಗ್ರಾಮ್ ಉಪಯೋಗಿಸಿ ಮುಖಗಳನ್ನು ಬದಲಾಯಿಸಿ ತಮಾಷೆ ಅನುಭವಿಸುತ್ತಿರುತ್ತೇನೆ. ಮೊನ್ನೆ ಒಬ್ಬ ಢೋಂಗಿ ಸ್ವಾಮಿಗೂ ಅದ್ಯಾವುದೋ ಸಂಘಟನೆಯ ಕಾರ್ಯಕರ್ತರಿಗೂ ಮಾರಾಮಾರಿಯಾಗಿ ಎರಡೂ ಬಣಗಳು ತಮ್ಮ ಜಗಳದ ಧಾರಾವಾಹಿಯ ಮುಂದಿನ ಕಂತುಗಳನ್ನು ಟಿವಿ ಸ್ಟುಡಿಯೋಗಳಲ್ಲಿ ಮುಂದುವರಿಸಿದ್ದರು. ನಾನು ಇಂತಹ ಒಂದು ಜಗಳದ ಕಂತು ನೋಡುತ್ತಾ , ಮನಸ್ಸಿನಲ್ಲಿ ಪೇಂಟ್ ಪ್ರೋಗ್ರಾಮ್ ನಡೆಸಿದ್ದೆ. ಸ್ವಾಮಿಯ ಪರವಾಗಿ ಒಬ್ಬ ಶಿಷ್ಯ ಅಗಾಧ ಉತ್ಸಾಹದಿಂದ ಬ್ಯಾಟಿಂಗ್ ನಡೆಸಿದ್ದ. ನಾನು ಮನಸ್ಸೆಂಬ ಕ್ಯಾನವಾಸಿನ್ನಲಿ ಶಿಷ್ಯೋತ್ತಮನ ಚಿತ್ರಕ್ಕೆ ಟಚಪ್ ಕೊಡ್ತಾ ಇದ್ದೆ. ಬೋಳು ತಲೆಗೆ ಸ್ವಲ್ಪ ಕೂದಲು ಸೇರಿಸಿ ಎಡಕ್ಕೆ ಬಾಚಿ,ಕಾವಿಗೆ ಬದಲಾಗಿ ಕೋಟು ತೊಡಿಸುತ್ತಿದ್ದಂತೆ ನನಗೆ ನಂಬಲಾಕ್ತಿಲ್ಲ.. ಅದು ನಮ್ಮ ಅಳಗಪ್ಪನ್!







ಟಿಪ್ಪಣಿಗಳು:

ಅಲ್ಗಾರಿದಮ್: ಗಣಕಯಂತ್ರದ ಕ್ರಮಾವಳಿ, ಒಂದು ಸಮಸ್ಯೆಯ ಪರಿಹಾರಕ್ಕಾಗಿ ರೂಪಿಸುವ ನಿರ್ದಿಷ್ಟ ಆದೇಶಗಳ ಕ್ರಮಬದ್ಧ ಸಮೂಹ.

ಆಂಡ್ರಾಯಿಡ್ ಮತ್ತು ವಿಂಡೋಸ್ : ಈಗಿನ್ ಬಹುತೇಕ ಸ್ಮಾರ್ಟ್ ಫೋನುಗಳಲ್ಲಿ ಉಪಯೋಗಿಸಿರುವ ತಂತ್ರಾಂಶಗಳು.

ಹತಗೊಂಡ್ ಹಲೆ : “ಬಿಟ್ಟೂ ಬಿಡದೇ ಮಾಡುವುದು” / “ನಿರಂತರ ಪರಿಶ್ರಮ” ಗಳಿಗೆ ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ನುಡಿಗಟ್ಟು.

No comments: