Saturday, May 17, 2008

ನಾನು , ನನ್ನ ರೂಂಮೇಟುಗಳು ಮತ್ತು ಎಪ್ಫೆಮ್

ಬಹುಶಃ ಆಗ ಬ್ರಹ್ಮಚಾರಿಗಳಷ್ಟೇ ಇದ್ದ ಮನೆಗೆ, ಅದರಲ್ಲಿ ಎಷ್ಟೇ ಬೆಡ್ರೂಮು, ಬಾತ್ರೂಮು ಇದ್ದರೂ, ಒಂದು "ರೂಂ" ಎಂದು ಕರೆಯಬೇಕು, ಮತ್ತು ಅಂಥಾ "ರೂಂ"ನಲ್ಲಿ ಮಾಸಿದ ಬಟ್ಟೆಗಳು, ಚಟ್ನಿ ಪುಡಿ ಡಬ್ಬಿ, ನಾತ ಬರುವ ಕಾಲುಚೀಲ, ಖಾಲಿ ಬೀರು ಬಾಟಲು, ಡಿಯೋಡ್ರಂಟಿನ ಟ್ಯೂಬು ಇತ್ಯಾದಿ ಎಲ್ಲ ವಸ್ತುಗಳಿಗೂ ರೂಮಿನ ಯಾವುದೇ ಭಾಗದಲ್ಲಿ ಬಿದ್ದಿರಬಹುದಾದ ಸ್ವಾತಂತ್ರ್ಯವಿರ ಬೇಕು ಎಂಬ ಕಾನೂನೇ ಇತ್ತು ಅನಿಸುತ್ತೆ. ಯಾವುದೇ ರೂಮಿನಲ್ಲಿ ತೆಂಡೂಲ್ಕರನ ಒಂದು ಪೋಸ್ಟರು, "where there is a will..." ಅಥವಾ "ಏಳಿ, ಎದ್ದೇಳಿ.." ತರಹದ ದೊಡ್ಡ ಮನುಷ್ಯರ ಹೇಳಿಕೆಗಳು ಗೋಡೆಯಲ್ಲಿ ಅಲಂಕೃತವಾಗಿರುತ್ತಿದ್ದವು. ಇಂತಹ ರೂಮುಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ ಅವುಗಳಿಂದ ಹೊರಡುತ್ತಿದ್ದ ಅಗಾಧ ಡೆಸಿಬಲ್ ಸಂಗೀತ ! ಆವಾಗ ಇನ್ನೂ ಐ-ಪಾಡ್ ಬಂದಿರಲಿಲ್ಲ. ಬೆಂಗಳೂರಿನಲ್ಲಿ ಇಷ್ಟೊಂದು ಎಪ್ಫೆಮ್ ರೇಡಿಯೋ ವಾಹಿನಿಗಳೂ ಬಂದಿರಲಿಲ್ಲ. ಅಲ್ಲಲ್ಲಿ ವಾಕ್‌ಮನ್ನುಗಳಿದ್ದರೂ ನಮ್ಮಂತಹ ಸಮಾಜವಾದಿಗಳು ಟೂ-ಇನ್-ಒನ್‌ಗಳಿಗೇ ಗಂಟುಬಿದ್ದಿದ್ದೆವು. 'ತಾನೊಬ್ಬನೇ ಸಂಗೀತ ಆನಂದಿಸಬೇಕೆನ್ನುವ ಸಮಾಜ ವಿರೋಧಿ ಸ್ವಾರ್ಥಿಗಳಿಗೆ ವಾಕಮನ್ ಓಕೆ, ನಮ್ಮಂತವರಿಗೆ ಯಾಕೆ' ಎಂಬುದು ನಮ್ಮ ನಿಲುವಾಗಿತ್ತು. ಹಾಗಾಗಿ ನಮ್ಮ ರೂಮಿನಲ್ಲಿ ಬೆಳ್ಳಂ ಬೆಳಿಗ್ಗೆ ಭೀಮಸೇನ್ ಜೋಷಿಯವರು "ಭಾಗ್ಯದ ಲಕ್ಷ್ಮಿ ಬಾರಮ್ಮಾ.." ಎಂದು ತಾರಕ ದಲ್ಲಿ ಹಾಡುತ್ತಿದ್ದರೆ, ನಾಲ್ಕು ಮನೆ ಆಚೆ ಇರುತ್ತಿದ್ದ ನಮ್ಮ ಮನೆ ಕೆಲಸದ ಭಾಗ್ಯಲಕ್ಷ್ಮಿ ತನ್ನನ್ನೇ ಕರದರೇನೋ ಎಂದು ಬಂದು ಬಿಡುತ್ತಿದ್ದಳು ! ಮಳೆಬಂದ ದಿನ ಕೂಡ ದಿನಪತ್ರಿಕೆಯನ್ನು ಗೇಟಿನಲ್ಲಿಯೇ ಬೀಸಾಕಿ ಹೋಗಿಬಿಡಲಾ ಎಂದು ಸ್ಕೆಚ್ ಹಾಕುತ್ತಿದ್ದ ಪೇಪರಿನವನು, ನಮ್ಮ ರೂಮಿನಿಂದ ಕೇಳಿಬರುತ್ತಿದ್ದ ಡಾ| ರಾಜ್‌ರ ದನಿಯಲ್ಲಿ "ಹಾಲಲ್ಲಾದರು ಹಾಕು, ನೀರಲ್ಲಾದರೂ ಹಾಕು.." ಕೇಳಿ ಓಣಿಯ ಎಲ್ಲ ಮನೆಗಳಿಗೆ ಒಳತನಕ ಹೋಗಿ, ಹಾಲ್‌ನಲ್ಲಿ ಪೇಪರ್ ಹಾಕುವಷ್ಟು ಬದಲಾಗಿದ್ದ !!

ಇಂತಹದೇ ದಿನಗಳಲ್ಲಿ ಬೆಂಗಳೂರಿಗೆ ಖಾಸಗಿ ಎಫ಼್ಫೆಮ್ ಒಂದು ಬಂತು. 'ಇಂಗ್ಲೀಷಿನಲ್ಲಿ ಮಾತಾಡು, ಹಿಂದಿಯಲ್ಲಿ ಹಾಡು' ಅವರ ತತ್ವವಾಗಿತ್ತು. ರೇಡಿಯೋಗಳಲ್ಲಿ 'ಸಂಗೂರಿನ ಕಲಾವಿದರಿಂದ ಚೌಡಕಿಪದಗಳನ್ನು ಇದೀಗ ಕೇಳುವಿರಿ`, ''ಈಗ ನಿಂಗೂರಿನ ಕಲಾವಿದರಿಂದ ಸೋಬಾನೆ ಪದ" ಅಥವಾ "ಪ್ರದೇಶ ಸಮಾಚಾರ, ಓದುತ್ತಿರುವವರು ನಾಗೇಶ್ ಶಾನಬಾಗ್" ಇತ್ಯಾದಿಯಾಗಿ ಗಂಭೀರ - ಗೌರವಾನ್ವಿತ ಉದ್ಗೋಷಗಳನ್ನು ಕೇಳಿದ ನಮಗೆ ಈ ಖಾಸಗಿ ವಾಹಿನಿಗಳವರ ತೀರ ಖಾಸಗಿ ಎನಿಸಬಹುದಾದಂತಹ ಮಾತುಕತೆಗಳು ನಾಲ್ಕು ದಿನ ತಮಾಷೆಯನಿಸಿದ್ದು ನಿಜ. ಆದರೆ ನಂತರ ಅವರಾಡುವ ಇಂಗ್ಲೀಷು ತಿಳಿದರೂ, ಹಿಂದಿ ಹಾಡುಗಳು ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿ ಬೋರಾಗತೊಡಗಿದವು. ಅದೇ ಕಾಲಕ್ಕೆ ನಮ್ಮ ಅಕ್ಕ-ಪಕ್ಕದ ಮನೆಗಳಿಂದ ನಮ್ಮ ರೂಮಿನಿಂದ ಬರುವ ಕರ್ಕಶ ಸಂಗಿತದ ಬಗ್ಗೆ ದೂರುಬರತೊಡಗಿತು. ಸರಿ, ಇನ್ನೇನು, ನಾವು ಎಂದಿನಂತೆ ಭೀಮಸೇನ್ ಜೋಷಿಯವರ ದಾಸರ ಪದಗಳನ್ನೋ , ರಾಜಗುರುಗಳ ವಚನಗಳನ್ನೋ ಅಥವಾ ಎಸ್ಪಿಬಿ, ಪಿಬಿಎಸ್, ಡಾ| ರಾಜ್‌ರ ಸಿನೆಮಾ ಹಾಡುಗಳನ್ನೋ ಕ್ಯಾಸೆಟ್ಟು ಹಾಕಿ ಕೇಳೋಣ ಎಂದುಕೊಳ್ತಾ ಇದ್ದೆವು. ಆದರೆ ಅವುಗಳಿಗೆ ನಮ್ಮ ರೂಮಿನಲ್ಲಿ ಮೊದಲ ಬಾರಿಗೆ ವಿರೋಧ ವ್ಯಕ್ತವಾಯಿತು.

ನಿರ್ಮಲಕುಮಾರ ತಮಿಳನಾದರೂ, ಎಷ್ಟೋ ದಿನಗಳಿಂದ ನಮ್ಮೊಂದಿಗೆ ಹೊಂದಿಕೊಂಡಿದ್ದ. ಎಂದಿಲ್ಲದ ಭಿನ್ನಾಭಿಪ್ರಾಯ ಇಂದು ನಿರ್ಮಲಕುಮಾರನಿಂದ -- ಒಬ್ಬ ತಮಿಳನಿಂದ ಹಿಂದಿ ಹಾಡುಗಳಿಗಾಗಿ - ಬಂದಿದ್ದು ನಮಗೆ ತೀರ ಅನಿರೀಕ್ಷಿತವಾಗಿತ್ತು. ನಿರ್ಮಲಕುಮಾರ ತನ್ನ ವಿರೋಧಕ್ಕೆ ಕೊಟ್ಟ ಕಾರಣ ಮೌಲಿಕವಾಗಿತ್ತು "ನೀವು ಹಾಕುವ ಅರ್ಧ ಭಾವಗೀತೆಗಳನ್ನು ಸಿಹಿ ಅಶ್ವತ್ ಅಂಕಲ್ ಹಾಡಿರ್ತಾರೆ. ಅವರು ಸಾಹಿತ್ಯ ಹೇಗೆ ಇರಲಿ, ಅದನ್ನು ರೌದ್ರ,ವೀರರಸಗಳಲ್ಲಿ ಹಾಡಬೇಕೆಂದು ಪ್ರತಿಜ್ಞೆ ಮಾಡಿದವರಂತೆ ಹಾಡುತ್ತಾರೆ. ಅವರ ಆ 'ಹೆಂಡ್ತೆ,ಹೆಂಡ್ತೆ' ಹಾಡಂತೂ ಕರ್ಣಕಠೋರ. ಇನ್ನು ನಿಮ್ಮ ಹೊಸ ಸಿನೆಮಾ ಹಾಡುಗಳಲ್ಲಿ ಅರ್ಧ ಬೇರೆ ಭಾಷೆಗಳಿಂದ ಕದ್ದ ಟ್ಯೂನ್‌ಗಳಿರತ್ತವೆ, ಸ್ವಂತ ಟ್ಯೂನ್‌ಗಳಿದ್ದರೂ ಅವುಗಳನ್ನು ಕನ್ನಡ ಬಾರದ ಗಾಯಕರಿಂದ ಹಾಡಿಸಿ ಕುಲಗೆಡಿಸಿ ಬಿಟ್ಟಿರುತ್ತೀರಿ. ಅವುಗಳನ್ನು ಕೇಳುವುದಕ್ಕಿಂತ ರೇಡಿಯೋದಲ್ಲಿ ಹಿಂದಿ ಹಾಡು ಕೇಳುವುದೇ ಒಳ್ಳೆಯದು". ಅವನ ವಾದದಲ್ಲಿ ಸ್ವಲ್ಪ ಹುರುಳಿದ್ದರೂ, ನಿರ್ಮಲಕುಮಾರನ ಹಿಂದಿ ಪ್ರೇಮಕ್ಕೆ ಇದಷ್ಟೇ ಕಾರಣ ಅಲ್ಲ ಅಂತ ನಮಗೆ ಗುಮಾನಿ ಇತ್ತು.

ನಮ್ಮ ಗುಮಾನಿ ಸ್ವಲ್ಪ ದಿನಗಳಲ್ಲಿಯೇ ನಿಜವೆಂದು ಸಾಬಿತಾಯಿತು. ಕಂಪನಿಯಲ್ಲಿ ಒಬ್ಬ ನಾರ್ಥಿ ಹುಡುಗಿ ನಿರ್ಮಲಕುಮಾರನ ಟೀಮ್ ಸೇರಿಕೊಂಡಿದ್ದಳು. "ಎಲೈ ನಾರಥಿ, ನಾನೇ ನಿನಗೆ ಸಾರಥಿ" ಎಂದು ನಿರ್ಮಲಕುಮಾರ ಕಾಳು ಹಾಕಲು ಶುರು ಮಾಡಿದ್ದ. ಆದರೆ ಅವಳಿಗೆ ಇಂಗ್ಲೀಷು ಸ್ವಲ್ಪ ತುಟ್ಟಿ, ನಿರ್ಮಲಕುಮಾರನಿಗೆ ಹಿಂದಿ ನಾಸ್ತಿ. ಹೀಗಾಗಿ ಅವರಿಬ್ಬರ ಸ್ನೇಹ ಮುಂದುವರಿಯುವುದು ಕಠಿಣವಾಗಿತ್ತು. ಅವಳಿಗೆ ಇಂಗ್ಲೀಷು ಬರುವುದು ಅಸಾಧ್ಯವೇ ಎಂದರಿತು ನಿರ್ಮಲಕುಮಾರ ಹಿಂದಿ ಕಲಿಯಲು ಮುಂದಾಗಿದ್ದ. 'ಮೂವತ್ತು ದಿನಗಳಲ್ಲಿ ಹಿಂದಿ ಕಲಿಯಿರಿ' ಪುಸ್ತಕ ತಂದು ಅದರಲ್ಲಿಯ "ಗಿಲಾಸ್ ಮೇ ಪಾನಿ ಹೈ", "ಮೇಜ್ ಪರ್ ಕಿತಾಬ್ ಹೈ" ಮುಂತಾದ ಪಾಠಗಳನ್ನು ನಾಕು ದಿನ ಕಲಿತ. ಆದರೆ ಮುಂದೆ ಬೋರಾಗಿ ಕಲಿಯುವದಿದ್ದರೆ "ಮೊಹಬ್ಬತ್", "ಇಷ್ಕ್", "ಜಿಂದಗಾನಿ" ಮುಂತಾದ ಪವರ್‌ಫುಲ್ ಶಬ್ದಗಳನ್ನೆ ಕಲಿಯಬೇಕೆಂದು ಹಿಂದಿ ಹಾಡುಗಳಿಗೆ ಗಂಟು ಬಿದ್ದಿದ್ದ. ಆದದ್ದರಿಂದ ನಮಗೆ ಹಿಂದಿ ಎಫ಼್ಫೆಮ್ ಕೇಳುವುದು ಬಿಡಲಾರದ ಕರ್ಮವಾಯ್ತು !

ಸರಿ ಇನ್ನೇನು, ಹಣೆಯಲ್ಲಿ ಬರೆದ ಹಾಗಾಗಲಿ ಇಂದು ನಾವು ಸುಮ್ಮನಾದೆವು. ಆ ಎಫ಼್ಫೆಮ್ಮ್ ವಾಹಿನಿಯಲ್ಲಿ ಸೂ ಎನ್ನುವ ಒಂದು ಹೆಣ್ಣು ಬೆಳ್ಳಂ ಬೆಳಿಗ್ಗೆನೆ ಬಂದು ತಲೆತಿನ್ನುತ್ತಿತ್ತು. ಪ್ರತಿ ಬೆಳಿಗ್ಗೆ "ನಿಮಗೆ ಯಾವ ಬಣ್ಣದ ಒಳಚೆಡ್ಡಿ ಇಷ್ಟ - ಹಸಿರೋ, ಹಳದಿನೋ?" ಅಥವಾ "ನೀವು ಎಷ್ಟು ದಿನಕ್ಕೊಮ್ಮೆ ಕಿವಿಯಲ್ಲಿನ ಕೂಕಣಿ ತೆಗೆಯುತ್ತೀರಿ ?" ಎಂಬ ಪಿಂಜರಾಪೋಲಿ ಪ್ರಶ್ನೆ ಕೇಳಿ "ನಿಮ್ಮ ಉತ್ತರಗಳನ್ನು ೭೬೫೬ಕ್ಕೆ ಎಸ್ಸೆಮ್ಮೆಸ್ ಮಾಡಿ" ಎನ್ನುತ್ತಿತ್ತು. ತನ್ನ ಕಾರ್ಯಕ್ರಮ ಮುಗಿಸಿ ಹೋಗುವ ಮುನ್ನ ಸೂ "೫೭% ಬೆಂಗಳೂರಿಗರು ಹಳದಿ ಒಳಚೆಡ್ಡಿಯನ್ನು ಬಯಸುತ್ತಾರೆ" ಅಥವಾ "೭೨% ಬೆಂಗಳೂರಿಗರು ವಾರಕ್ಕೊಮ್ಮೆ ಕೂಕಣಿ ತೆಗೆಯುತ್ತಾರೆ" ಎಂದು, ಅದೆನೋ ಮಹತ್ವಪೂರ್ಣ ಅಂಕಿ ಅಂಶವೆನ್ನುವಂತೆ, ಅನೌನ್ಸ್ ಮಾಡಿ ಹೋಗುತ್ತಿದ್ದಳು. ನನಗೀಗಲೂ ವಿಚಿತ್ರ ಅನಿಸುತ್ತೆ, ಅಂತಹ ತುಟ್ಟಿಯ ಕಾಲದಲ್ಲಿಯೂ - ಆಗ ಒಂದು ಎಸ್ಸೆಮ್ಮೆಸ್ಸಿಗೆ ಎರಡು ರೂಪಾಯಿ ಇತ್ತು - ಜನ ಯಾಕೆ ಇಂತಹ ನಯಾಪೈಸೆ ಉಪಯೋಗ ಇಲ್ಲದ್ದಕ್ಕೆ ಎಸ್ಸೆಮ್ಮೆಸ್ಸು ಕಳಿಸುತ್ತಿದ್ದರು ಅಂತ. ಕೆಲ ಜನ ಸ್ವಾರ್ಥ-ಪರಮಾರ್ಥ ಎರಡೂ ಆಗಲಿ ಎಂದು ಉತ್ತರ ಕಳಿಸಿ ಇಂತಹ ಹಾಡನ್ನು ಇಂತವರಿಗಾಗಿ ಪ್ರಸಾರಮಾಡಿ ಎಂಬ ಬೇಡಿಕೆಯನ್ನೂ ಕಳುಹಿಸಿರುತ್ತಿದ್ದರು. ಇನ್ನೂ ಸ್ವಲ್ಪ ಜನ ರಸಿಕರು ಉತ್ತರದ ಜೊತೆ ಎಸ್ಸೆಮ್ಮೆಸ್ಸಿನಲ್ಲಿ ತಮ್ಮ ಮನದ ಮಾತುಗಳನ್ನೂ ಬರೆದಿರುತ್ತಿದ್ದರು. "ಸೂ ಸೂ ನಿನ್ನ ದನಿ ಸಕತ್ ಸೆಕ್ಸಿ" ಅಂತಾನೋ "ಸೂ ಸೂ ನಾ ನಿನ್ನ ಲೌ ಮಾಡ್ತೀನಿ" ಬರೆದಿರತಿದ್ದರು. ಆ ನಾಚಿಕೆಗೆಟ್ಟ ಹೆಂಗಸು ಅಂತಹ ವೈಯಕ್ತಿಕ ಸಂದೇಶಗಳನ್ನೂ ಬಿತ್ತರಮಾಡಿ ಕಿಸಿಕಿಸಿ ನಗುತ್ತಿತ್ತು ! ಇಲ್ಲಿ ನನ್ನವೆರಡು ಮಾತು - ಮೊದಲನೆಯದಾಗಿ "ಸೂಸೂ" ಎನ್ನುವುದನ್ನು ನಿಮ್ಮ ಮಕ್ಕಳು ಮೂತ್ರ ವಿಸರ್ಜನ್ನುವ ಅರ್ಥದಲ್ಲಿ ಉಪಯೋಗಿಸುತ್ತಿದ್ದರೆ, ಕ್ಷಮಿಸಿ ಇಲ್ಲಿ ಅದು ಆ ಅರ್ಥದಲ್ಲಿ ಉಪಯೋಗವಾಗಿಲ್ಲ. ಎರಡನೆಯದಾಗಿ "ಸೆಕ್ಸಿ" ಅನ್ನುವ ಪದ ಯಾವಾಗ ತನಗಂಟಿದ ಲೈಂಗಿಕ ನಂಟನ್ನು ಬಿಡಿಸಿಕೊಂಡು ಸರ್ವಮಾನ್ಯವಾಯಿತೋ ಗೊತ್ತಿಲ್ಲ, ಆದರೆ ನಿಮಗೆ ಅದರಿಂದ ಇರುಸು ಮುರುಸಾದರೆ ದಯವಿಟ್ಟು ನನ್ನ ತಪ್ಪನ್ನು ಹೊಟ್ಟೇಯಲ್ಲಿ ಹಾಕಿಕೊಂಡು, ಅದನ್ನು 'ಸೆ ಟಿಮ್ ಟಿಮ್' ಎಂದು ಓದಿಕೊಳ್ಳಿ !

ನಮ್ಮ ರೂಮ್‌ಮೇಟು ನಿರ್ಮಲಕುಮಾರನೂ ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಭಯಭಕ್ತಿಗಳಿಂದ 'ಸೂ'ಳ ಪ್ರಶ್ನೆಗೆ ಉತ್ತರವನ್ನು ಕಳಿಸಿ ಜೊತೆಗೆ ನಾರ್ಥಿ ಹುಡುಗಿಗಾಗಿ ಒಂದು ಹಾಡನ್ನು ಪ್ರಸಾರಿಸಿ ಎಂದು ಅಂಗಲಾಚುತ್ತಿದ್ದ. ಬಹುತೇಕ ಸಲ ಸೂ ಅವನ ಬೇಡಿಕೆಗೆ ಸ್ಪಂದಿಸಿ ಒಂದು ಹಾಡು ಹಾಕುತ್ತಿದ್ದಳು. ಆ ನಂತರವೇ ನಿರ್ಮಲಕುಮಾರ ನಿತ್ಯ ಕಾರ್ಯಗಳಿಗೆ ಹೊರಡುತ್ತಿದ್ದ. ಒಂದೊಂದು ದಿನ ಪರಿಸ್ಥಿತಿ ಇಷ್ಟು ಸರಳ ಇರುತ್ತಿರಲಿಲ್ಲ. ಬಹಳಷ್ಟು ಬೇಡಿಕೆಗಳಿದ್ದ ದಿನ ನಿರ್ಮಲ ತಾನು ಕೇಳಿದ ಹಾಡಿಗಾಗಿ ಕಾದು ಕಾದು, ಕೊನೆಗೆ ಹೊಟ್ಟೆಯಲ್ಲಿನ ಜೈವಿಕ ಒತ್ತಡವನ್ನು ತಾಳಲಾಗದೇ ಟೂ-ಇನ್-ಒನ್ನನ್ನೇ ಸಂಡಾಸಿಗೆ ಎತ್ತಿಕೊಂಡು ಹೋಗಿ ರೇಡಿಯೋ ಕೇಳುತ್ತಾ ಕೂಡುತ್ತಿದ್ದ. ಇಂತಹ ಕಾರ್ಯಕ್ರಮಕ್ಕೆ, ನಾವು ಇತರ ರೂಮ್‌ಮೇಟುಗಳು 'ರೇಡಿಯೋ shitty ' ಎಂದು ಹೆಸರಿಟ್ಟಿದ್ದೆವು !

****************************************************

ಒಂದು ದಿನ ನಿರ್ಮಲಕುಮಾರ ಆಫೀಸಿನಿಂದ ಬಂದವನೇ ಎಂದಿನಂತೆ ರೇಡಿಯೋ ಹಚ್ಚಿದ. ಅದರಲ್ಲಿ ಶೇನ್ ವಾರ್ನ್ ಯಾವುದೋ ಹೆಂಗಸಿಗೆ ಅಶ್ಲೀಲ ಎಸ್ಸೆಮ್ಮೆಸ್ಸು ಕಳಿಸಿದ್ದಕ್ಕೆ ಏನು ಶಿಕ್ಷೆ ಕೊಡಬೇಕು ಎಂದು ಚರ್ಚೆ ನಡಿತಾ ಇತ್ತು. ನಿರ್ಮಲ್‌ಕುಮಾರ ಪಟಕ್ಕನೆ ರೇಡಿಯೋ ಆರಿಸಿ ಅಣ್ಣಾವರ ದನಿಯಲ್ಲಿನ "ದಾರಿ ಕಾಣದಾಗಿದೆ, ರಾಘವೇಂದ್ರನೇ"ದ ಕ್ಯಾಸೆಟ್ ಹಾಕಿದ. ಸುಮಾರು ಮೂರ್ನಾಲ್ಕು ವಾರಗಳಿಂದ ಎಫ಼್ಫೆಮ್ ರೇಡಿಯೋ ಬಿಟ್ಟು ಬೇರೇನು ಕೇಳದಿದ್ದ ನಮಗೆ ಒಂದು ರೀತಿಯ ನಿರಾಳ. ಆದರೆ ನಿರ್ಮಲಕುಮಾರ ಯಾಕೆ ತನ್ನ ನಿಲುವು ಬದಲಿಸಿದ ಎಂಬ ಕುತೂಹಲಇದ್ದೇ ಇತ್ತು. ಸ್ವಲ್ಪ ಸುಧಾರಿಸಿಕೊಂಡ ನಿರ್ಮಲ "ಇವತ್ತು ಎಫ಼್ಫೆಮ್ಮಿನ ಸೂಸೂ ಆಫೀಸಿಗೆ ಬಂದಿದ್ದಳು.." ಎಂದ. ಅದಕ್ಕೆ ವಿನಾಯಕ "ಹಾಗಾದರೆ ಆಕೆಗೆ ನಿನ್ನ ಒಂದು ತಿಂಗಳಿನ ಹಾಡಿನ ಬೇಡಿಕೆಗಳನ್ನು ಕೊಟ್ಟು ಬಿಡಬೇಕಾಗಿತ್ತು, ಅಷ್ಟೊಂದು ಎಸ್ಸೆಮ್ಮೆಸ್ಸುಗಳ ದುಡ್ಡು ಉಳಿಯುತ್ತಿತ್ತು.." ಎನ್ನುತ್ತಿರುವಂತೆಯೇ ನಿರ್ಮಲ ಅವನ ಮೇಲೆ ಕೌಕ್ಕೆಂದು ಹರಿಹಾಯ್ದ. "ಸ್ವಲ್ಪ ಮುಚ್ಚಿಕೊಂಡು ಕುತ್ಕೋತಿಯಾ? ವಿಷಯ ಸೀರಿಯಸ್ಸಿದೆ " ಎಂದಾಗ ನಾನು, ವಿನಾಯಕ ನವರಂದ್ರಗಳನ್ನು ಮುಚ್ಚಿಕೊಂಡು ನಿರ್ಮಲ ಹೇಳುವುದಕ್ಕೆ ಕಿವಿಯಾಗಿ ಕುಳಿತುಕೊಂಡೆವು. "ಆಕಿ ಪೋಲಿಸರನ್ನೂ ಕರೆದುಕೊಂಡು ಬಂದಿದ್ದಳು.." ಎಂದು ಅವನೆಂದಾಗ, 'ಹಾಃ' ಎಂದು ನಾವಿಬ್ಬರು ಬಾಯಿ ತೆಗೆದು ವಿಷಯ ನಮ್ಮ ನಿರೀಕ್ಷೆಗಿಂತ ಬಹಳ ಸೀರಿಯಸ್ಸಗಿದೆ ಎಂದುಕೊಂಡೆವು. ನಿರ್ಮಲ್ ಮುಂದುವರಿಸಿ "ನಾನು ಕಳಿಸುವ ಎಸ್ಸೆಮ್ಮೆಸುಗಳು ಅಶ್ಲೀಲ ಇರತಾವೆಂದು ಪೋಲೀಸು ಕಂಪ್ಲೇಟು ಕೊಟ್ಟಿದ್ದಳಂತೆ. ಅದಕ್ಕೆ ಪೋಲಿಸರು ಆಕಿನ್ನು ಕರಕೊಂಡು ಬಂದು ನನಗೆ ಬೈಯ್ದು ವಾರ್ನಿಂಗ್ ಕೊಟ್ಟು ಹೋದರು" ಎಂದು ನಿಟ್ಟುಸಿರಿಟ್ಟ. ನಾನು ನಿರ್ಮಲನನ್ನು ಸಮಾಧಾನ ಮಾಡುವ ಉದ್ದೇಶದಿಂದ "ಹೋಗಲಿ ಬಿಡು, ಈ ಒಂದು ತಿಂಗಳಿನಲ್ಲಿ ನಿನ್ನ ಅಫೇರು ಒಂದು ಹಂತಕ್ಕೆ ಬಂದಿದೆ, ಇನ್ನೇನು ಆ ಹುಡುಗಿಗಾಗಿ ರೇಡಿಯೋದಲ್ಲಿ ಹಾಡು ಹಾಕಿಸುವ ಅವಶ್ಯಕತೆ ಇಲ್ಲ" ಎಂದೆ. "ಪೋಲಿಸರು ಬಂದು ನನ್ನ ಮಾನ ಹರಾಜು ಹಾಕುತ್ತಿರುವಾಗ ಅವಳೂ ಅಲ್ಲಿಯೇ ಇದ್ದಳು. ಪೋಲಿಸರು ಹೋದ ಮೇಲೆ ಒಂದು ಗಂಟೆ ನನಗೆ ಛೀಮಾರಿ ಹಾಕಿ ಹೋದಳು. ಇನ್ನೆಲ್ಲಿಯ ಅಫೇರು.." ಎಂದು ನಿರ್ಮಲ ಇನ್ನೂ ದೊಡ್ಡ ನಿಟ್ಟುಸಿರಿಟ್ಟ. ನಾವು ಮಾಡಿದ ಒಂದು ಸಣ್ಣ ಕಿತಾಪತಿ ನಿರ್ಮಲಕುಮಾರನಿಗೆ ಇಷ್ಟು ತೊಂದರೆ ಮಾಡಿದ್ದು ನನಗೂ, ವಿನಾಯಕನಿಗೂ ಬೇಜಾರಾಗಿತ್ತು.

ವಿಷಯ ಏನು ಅಂದ್ರೆ - ಇದನ್ನು ನಾವು ನಿರ್ಮಲನಿಗೆ ಹೇಳಿಲ್ಲ, ನೀವೂ ದಯವಿಟ್ಟು ಹೇಳಬೇಡಿ - ರೂಮಿನಲ್ಲಿ ನಮಗೆ ಎಫ಼್ಫೆಮ್ ಹಾಡು ಕೇಳಿ-ಕೇಳಿ ಬೇಜಾರಾಗಿತ್ತು. ಅದಕ್ಕಿಂತ ಹೆಚ್ಚಾಗಿ ನಿರ್ಮಲನ 'ರೇಡಿಯೋ shitty ' ಕಾರ್ಯಕ್ರಮದಿಂದಾಗಿ ಬಹಳ ತೊಂದರೆಯಾಗುತ್ತಿತ್ತು. ಟೂ-ಇನ್-ಒನ್ನನ್ನು ಸಂಡಾಸಿಗೆ ಹೊತ್ತು ಒಯ್ಯುತ್ತಿದ್ದ ನಿರ್ಮಲಕುಮಾರ ಎಲ್ಲವನ್ನೂ ಮರೆಯುತ್ತಿದ್ದ. ಶೌಚಕ್ಕೆ ಹೋಗಲು ನಾವು ಗಂಟೆಗಟ್ಟಲೇ ಕಾಯಬೇಕಾಗುತ್ತಿತ್ತು. ಇದಕ್ಕೆ ಏನಾದರೂ ಮಾಡಬೇಕೆಂದು ಯೋಚಿಸಿ ಯೋಚಿಸಿ ನಾನು ಮತ್ತು ವಿನಾಯಕ ಒಂದು ಉಪಾಯ ಮಾಡಿದೆವು. ಒಂದಿನ 'ರೇಡಿಯೋ shitty' ಕಾರ್ಯಕ್ರಮ ನಡೆಯುತ್ತಿರುವಾಗ ನಿರ್ಮಲ ಸಂಡಾಸಿನಲ್ಲಿ ಜಗವನ್ನೇ ಮರೆತಿದ್ದ. ನಾವು ಅವನ ಮೋಬೈಲಿನಿಂದ ೭೬೫೬ಗೆ ನಾಲ್ಕು ಪರಮ ಪೋಲಿ ಎಸ್ಸೆಮ್ಮೆಸ್ಸುಗಳನ್ನು ಕಳುಹಿಸಿದ್ದೆವು. ಆ ಎಸ್ಸೆಮ್ಮೆಸುಗಳೇ ನಿರ್ಮಲಕುಮಾರನಿಗೆ ಪೋಲಿಸರಿಂದ ವಾರ್ನಿಂಗ್ ಕೊಡಿಸಿ, ಅವನನ್ನು "ದಾರಿ ಕಾಣದಾಗಿದೆ, ರಾಘವೇಂದ್ರನೇ"ದ ದಾರಿಗೆ ತಂದಿದ್ದವು !!


No comments: