Tuesday, September 2, 2008

ನಿಮ್ಮಮಗುವಿನ ಯಶಸ್ಸಿಗಾಗಿ ನಿಮಗೆ ಮೂರು ಸರಳ ಸೂತ್ರಗಳು:

ಒಂದು ಹಳೆಯ ಜೋಕ್ ಇದೆ, ನೀವು ಕೇಳಿರಬಹುದು : ಒಬ್ಬ ತಂದೆ ತನ್ನ ಉಡಾಳ ಮಗನಿಗೆ ಬುದ್ಧಿ ಹೇಳ್ತಾ ಜಾನ್ ಎಫ್ ಕೆನಡಿ ನಿನ್ನ ವಯಸ್ಸಿನಲ್ಲಿ ಏನು ಮಾಡ್ತಾ ಇದ್ರು ಗೊತ್ತಾ ? ಎಂದು ಕೇಳ್ತಾನೆ. ಅದಕ್ಕೆ ಉಡಾಳ ಮಗ ಹೇಳ್ತಾನೆ "ಗೊತ್ತಿಲ್ಲ.. ಆದರೆ ಅವರು ನಿಮ್ಮ ವಯಸ್ಸಿನಲ್ಲಿ ಅಮೇರಿಕದ ಅಧ್ಯಕ್ಷರಾಗಿದ್ದರು!!"

ಈ ಹನಿಯಲ್ಲಿ ಎಂತಹ ಕಹಿಸತ್ಯ ಇದೆಯಲ್ಲವೇ ? ನಾವು ನಮ್ಮ ಮಕ್ಕಳು ಕವಿಯಾಗಲಿ, ಸಾಹಿತಿಗಳಾಗಲಿ, ಕಲಾವಿದರಾಗಲಿ ವಿಜ್ಞಾನಿಗಳಾಗಲಿ ಎಂದೆಲ್ಲ ಆಶಿಸುತ್ತೇವೆ. ಅಂಥವರ ಜೀವನ ಚೆರಿತ್ರೆಗಳನ್ನು ತಂದು ಕೊಟ್ಟು ಓದಲು ತಲೆತಿನ್ನುತ್ತೇವೆ. ಓದಿದನಂತರ ಅವರು ಅಷ್ಟನೇ ವಯಸ್ಸಿಗೆ ಇಷ್ಟು ಮಾಡಿದ್ದರು, ನೀನು ಅವರಿಗಿಂತ ಹೆಚ್ಚು ಮಾಡು ಎಂದು ಕಿರಿಕಿರಿ ಮಾಡುತ್ತೇವೆ. ನಾವು ಅರ್ಥಮಾಡಿಕೊಳ್ಳದ ಒಂದು ವಿಷಯವೆಂದರೆ ಮಕ್ಕಳು ಪುಸ್ತಕದಲ್ಲಿ ಓದಿದ ಯಾವುದೋ ವ್ಯಕ್ತಿಯ ಆದರ್ಶ ಪಾಲಿಸುವುದಕ್ಕಿಂತ ತಮ್ಮ ಕಣ್ಣೆದುರಿಗಿರುವ ವ್ಯಕ್ತಿಯಯನ್ನು ನೋಡಿ ಅನಾಯಾಸವಾಗಿ ಕಲಿಯುತ್ತವೆ. ಅವುಗಳ ದುರದೃಷ್ಟಕ್ಕೆ ಅವುಗಳ ಕಣ್ಣಿಗೆ ನಿತ್ಯಬೀಳುವವರು ಕೆನಡಿಯೋ, ಟ್ಯಾಗೋರರೋ ಅಥವಾ ಭೀಮಸೇನ್ ಜೋಷಿಯೋ ಆಗಿರದೇ ನಾವಾಗಿರುತ್ತೇವೆ!! ನಾವು ಮೂಗಿನಲ್ಲಿ ಬೆರಳು ಹಾಕಿ ಗಿರಮಿಟ್ಟು ತಿರುವುದನ್ನು ನೋಡಿಯೇ ನಮ್ಮ ಮಗನೂ ಕಲಿಯುವುದು. ನಾವು ಬಿಟ್ಟಗಣ್ಣಿಂದ ಟೀವಿ ನೋಡ್ತಾ ಇರೊದನ್ನು ನೋಡಿಯೇ ಅವನು ಟೀವಿಗೆ ಅಡಿಕ್ಟಾಗುವುದು. ರಸ್ತೆಬದಿಗೆ ನಿಂತು ನಾವು ಮುಂಗಾರು ಮಳೆ ಮಾಡುವುದನ್ನು ನೋಡಿಯೇ ಅವನಿಗೆ ಸಾರ್ವಜನಿಕ ಸ್ವಚ್ಚತೆಯ ಬಗ್ಗೆ ಅಲರ್ಜಿ ಬೆಳೆಯುವುದು!!

ನಾನು ಹೇಳುವ ಮೊದಲ ಸೂತ್ರ ತುಂಬ ಸರಳವಿದೆ: ನಿಮ್ಮ ಮಗು ಏನಾಗಬೇಕೆಂದು ನೀವು ಬಯಸುತ್ತೇರೋ, ಅದಾಗಲು ನೀವು ಮೊದಲು ಪ್ರಯತ್ನಿಸಿ. ನಿಮ್ಮ ಮಗ ಝಕೀರ್ ಹುಸೇನ್ ಆಗಬೇಕಿದ್ದರೆ ನೀವು ಮೊದಲು ಅಲ್ಲಾರಖಾ ಆಗಿ. ಅವನು ತೇಜಸ್ವಿ ಆಗಬೇಕಿದ್ದರೆ ನೀವು ಮೊದಲು ಕುವೆಂಪು ಆಗಿ. ಇಲ್ಲವೇ ಅವನು ಕಿರು ಅಂಬಾನಿಯಾಗ ಬೇಕೆಂದಿದ್ದರೆ, ನೀವು ಧೀರು ಅಂಬಾನಿಯಾಗಿ.

"ರೈತ ಆಗ ಬೇಕಿದ್ದರೆ ರೈತನ ಮಗನೇ ಆಗಿರಬೇಕು, ಅಕ್ಕಸಾಲಿಗನಾಗಬೇಕೆಂದರೆ ಅಕ್ಕಸಾಲಿಗನ ಮಗನೇ ಆಗಬೇಕೆಂದು" ಹೇಳುವ ನವ-ಮನು ಸಿದ್ಧಾಂತ ಇದೆಂದು ತಳ್ಳಿ ಹಾಕಬೇಡಿ. ಆದೆರೆ ನೀವೇ ವಿಚಾರ ಮಾಡಿನೋಡಿ ರೈತ ಗ್ರಾಮ ಪಂಚಾಯತಿಯ ಅಧ್ಯಕ್ಶನಾದದ್ದೇ, ರೈತನ ಮಗ ( ರೈತ ಮತ್ತು ಮಣ್ಣಿನ ನಡುವೆ ಇರುವ ಪ್ಯಾಟರ್ನಿಟಿ ಡಿಸ್‌ಫ್ಯೂಟ್ ಸ್ವಲ್ಪ ಬದಿಗಿಡಿ:-)) ದೇಶದ ಪ್ರಧಾನಿಯಾಗಲು ಮೊದಲ ಸ್ಫೂರ್ತಿಯಲ್ಲವೇ ? ಮಹಾರಾಜ ಸಿಂಗ** ರಣಜಿ ಆಡಿದ್ದೇ ಯುವರಾಜ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಮಿಂಚಲು ಸ್ಪೂರ್ತಿಯಾಗಿಲ್ಲ ಎನ್ನುತ್ತಿರಾ ?

ಆದ್ದರಿಂದ ನನ್ನ ಎರಡನೆ ಸೂತ್ರ: ಸಾಧನೆಯ ಹಾದಿಯಲ್ಲಿ ಕೆಲವಾದರೂ ಹೆಜ್ಜೆಗಳನ್ನು ನೀವಿಡಿ. ನಂತರ ನಿಮ್ಮ ಮಗು ನಿiದೇ ಹೆಜ್ಜೆಗಳಲ್ಲಿ ನಡೆದು ನಿಮ್ಮನ್ನು ದಾಟಿ ಹೋಗುತ್ತಾನೆ.

ಹಾಗಾದರೆ, ಗಾಂಧಿ ವರ್ಸಸ್ ಗಾಂಧಿಯ ಹರಿಲಾಲನೋ, "ದಾಟ್ ಇಸ್ ರಾಮನ್ಸ್ ಎಫ್ಫೆಕ್ಟ್ ಅಂಡ್ ದಿಸ್ ಇಸ್ ರಾಮನ್ಸ್ ಡಿಫ್ಫೆಕ್ಟ್" ಎಂದು ಹೇಳಿಕೊಂಡ ಸೀವಿರಾಮನ್ನರ ಮಗನೋ ಸಾಧಕರ ಮಕ್ಕಳಾಗಿದ್ದೂ ಯಾಕೆ ವಿಫಲರಾದರು ಎಂದು ನಿಮ್ಮ ಪ್ರಶ್ನೆಯಾಗಿದ್ದರೆ, ನಿಮಗಾಗಿದೆ ನನ್ನ ಮೂರನೆ ಸೂತ್ರ:
ದಯವಿಟ್ಟು ನಿಮ್ಮ ನೆರಳು ನಿಮ್ಮ ಮಗುವಿನ ಮೇಲೆ ಬೀಳದಂತೆ ಎಚ್ಚರವಹಿಸಿ. ಬೆಟ್ಟದಾ ಕೊರಕಲಿನಲಿ ಬಿದ್ದ ಬೀಜ ಭಗವಂತನ ಕೃಪೆಯಿಂದ ಬೆಳೆದು ಹೆಮ್ಮರವಾಗುವಂತೆ, ನಿಮ್ಮ ಮಗುವು ಬೆಳೆದಾನು, ಆದರೆ ನಿಮ್ಮ ನಿರಾಶಾವಾದದ ಪ್ರಭಾವಲಯದಲ್ಲಿ ಅವನು ಬೆಳೆಯುವುದು ಸಾಧ್ಯವಿಲ್ಲ.

1 comment:

sunaath said...

ಭಾರತದಲ್ಲಿ ಮುಖ್ಯ ಮಂತ್ರಿಯ ಮಗ ಮುಖ್ಯ ಮಂತ್ರಿಯೇ ಆಗುತ್ತಾನೆ; ಪ್ರಧಾನ ಮಂತ್ರಿಯ ಮಗ ಪ್ರಧಾನ ಮಂತ್ರಿಯೇ ಆಗುತ್ತಾನೆ!