( ದಾಟ್ಸ್ ಕನ್ನಡದಲ್ಲಿ ಪ್ರಕಟಿತ : http://kannada.oneindia.in/column/humor/2012/0505-teachers-and-marks-theory-064917.html)
ಇದೀಗ ತಾನೆ ಮಕ್ಕಳ ಪರೀಕ್ಷೆಗಳು ಮುಗಿದಿವೆ. ಚಿಲ್ಟು-ಪಿಲ್ಟು ಪರೀಕ್ಷೆಗಳ ಫಲಿತಾಂಶ ಕೂಡ ಬಂದು ಪಾಲಕರು ತಮ್ಮ ಮಕ್ಕಳಿಗೆ ಕಡಿಮೆ ಮಾರ್ಕು ಬಂದಿದ್ದಕ್ಕೆ ಬಯ್ಯುವ ಕರ್ತವ್ಯ ಕೂಡ ಮಾಡಿ ಮುಗಿಸಿ ನಿರಾಳರಾಗಿದ್ದಾರೆ. ಹತ್ತನೆ ತರಗತಿ, ಹನ್ನೆರಡನೆ ತರಗತಿ ಫಲಿತಾಂಶ ಬರುವ ಯಮಗಂಡಕಾಲ ದೂರವಿದೆ. ಪರೀಕ್ಷೆಗಳು ನಡೆದಾಗ ಅಪ್ಪ-ಅಮ್ಮಂದಿರು ಗಂಭೀರರಾಗಿ 'ಐದು ಮಾರ್ಕಿನ ಕೂಡಿಸಿ ಬರೆಯಿರಿ ಪ್ರಶ್ನೆಗೆ ಏನು ಉತ್ತರ ಬರದಿ? ಹತ್ತು ಮಾರ್ಕಿನ ಎಸ್ಸೆ ಟಾಯಿಪ್ ಪ್ರಶ್ನೆಗೆ ಏನು ಉತ್ತರ ಬರದಿ? ' ಎಂದು ಮಕ್ಕಳ ತಲೆತಿನ್ನುತ್ತಿರುತ್ತಾರಾದ್ದರಿಂದ ನನ್ನ ಲೇಖನ ಓದುವುದಿಲ್ಲ. ಇನ್ನೂ ಹತ್ತು-ಹನ್ನೆರಡನೇ ಅಗ್ನಿ ಪರೀಕ್ಷೆಯ ಫಲಿತಾಂಶ ಬಂದ ಮೇಲಂತೂ ಕಡಿಮೆ ಮಾರ್ಕು ಬಂದದ್ದಕ್ಕೋ, ನಪಾಸಾದದ್ದಕ್ಕೋ ಆತ್ಮಹತ್ಯೆ ಮಾಡಿಕೊಂಡವರ ಸುದ್ದಿಗಳು ದಿನಪತ್ರಿಕೆಯನ್ನು ತುಂಬಿರುತ್ತವಾದ್ದರಿಂದ ನನಗೇ ಈ ಲೇಖನ ಬರೆಯುವ ಉಮೇದು ಇರುವುದಿಲ್ಲ. ಆದುದರಿಂದ ಈಗಿನ ಈ ಶಾಂತಪರ್ವವೇ ನಾವು ನಮ್ಮ ಜೀವನದ "ಆ" ಅಂಕದಲ್ಲಿ ನಮ್ಮನ್ನು ಅಷ್ಟೊಂದು ಕಾಡಿದ ಅಂಕಗಳು- ಮಾರ್ಕುಗಳು- ಅವುಗಳ ಬಗ್ಗೆ ಬರೆದ ಈ ಲಘುಬರಹಕ್ಕೆ ಸೂಕ್ತ ಸಮಯ ಅನಿಸುತ್ತದೆ. ದಯವಿಟ್ಟು ಓದಿ ಪಾಸೋ, ನಪಾಸೋ ಹೇಳ್ಬಿಡಿ, ಸಾಕು !
ಮಾರ್ಕುಗಳ ವಿಷಯ ಬಂದಾಗಲೆಲ್ಲಾ ನನಗೆ ನನ್ನ ಆರನೇ ತರಗತಿಯ ಸ್ನೇಹಿತ ನೆನಪಾಗುತ್ತಾನೆ. ಆಗ ನಮ್ಮ ಗಣೀತದ ಗುರುಗಳು ಒಂದು ಒಳ್ಳೆಯ ರೂಢಿಯನ್ನು ನಮಗೆ ಕಲಿಸುವ ಪ್ರಯತ್ನದಲ್ಲಿದ್ದರು. ಯಾವುದೇ ಲೆಕ್ಕದ ಕೊನೆಗೆ ಬರುವ ಉತ್ತರವನ್ನು ಅಂಡರ್ಲೈನ ಮಾಡಿ, ಅದರ ಪಕ್ಕ ನಾವು ಕೋಡಿನಲ್ಲಿ ಕಮೆಂಟು ಬರೆಯುವ ರೀತಿಯಲ್ಲಿ "// Ans" ಎಂದು ಬರೆಯಿರಿ ಎಂದು ತಲೆ ಒಡಿದುಕೊಂಡಿದ್ದ ನಮ್ಮ ಗುರುಗಳು ಪರೀಕ್ಷೆಯಲ್ಲಿ ಹಾಗೇ ಮಾಡದಿದ್ದರೆ ಅರ್ಧ ಮಾರ್ಕು ಕಡಿಯುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಆ ಸಲದ ಯುನಿಟ್ ಟೆಸ್ಟಿನಲ್ಲಿ ನಾನು ಚನ್ನಾಗಿ ಮಾಡಿದ್ದರಿಂದ ಇಪ್ಪತ್ತೈದಕ್ಕೆ ಇಪ್ಪತ್ತೈದು ಬಂದಿತ್ತು. ನಾವೆಲ್ಲಾ ಉತ್ತರಪತ್ರಿಕೆಗಳನ್ನು ನೋಡಿಕೋಳ್ಳುತ್ತಿರುವಾಗ ನನ್ನ ಸ್ನೇಹಿತ ನನ್ನ ಉತ್ತರ ಪತ್ರಿಕೆಯನ್ನು ಇಸಿದುಕೊಂಡು ತನ್ನ ಉತ್ತರಗಳೊಡನೆ ಹೊಲಿಸಿಕೊಳ್ಳತೊಡಗಿದ. ಒಂದು ಉತ್ತರಕ್ಕೆ ನಾನು "// Ans" ಎಂಬ ಶ್ರೀಕಾರ ಹಾಕಿರಲಿಲ್ಲ. ನನ್ನ ಸ್ನೇಹಿತ ನೇರವಾಗಿ ನಮ್ಮ ಗುರುಗಳ ಹತ್ತಿರಹೋಗಿ ಅದನ್ನು ತೋರಿಸಿದ್ದ. ಕೊಟ್ಟ ಮಾತಿಗೆ ತಪ್ಪದ ಗುರುಗಳು, ಅರ್ಧ ಮಾರ್ಕು ಕಡಿದು ಕೊಟ್ಟಿದ್ದರು, ಇಪ್ಪತ್ತೈದಕ್ಕೆ ಇಪ್ಪತ್ತೈದು ಬಂದ ಖುಷಿಯಲ್ಲಿದ್ದ ನನ್ನ ಬಲೂನಿಗೆ ಸೂಜಿ ಚುಚಿದ್ದರು. ಈ ಘಟನೆಯಾಗಿ ಈಗ ಇಪ್ಪತ್ತು-ಇಪ್ಪತ್ತೈದು ವರುಷಗಳಾಗಿವೆ. ಮಾರ್ಕುಗಳ ವಿಷಯ ಬಂದಾಗಲೆಲ್ಲ ನನಗೆ ಅರ್ಧ ಮಾರ್ಕು ಕಡಿಸಿದ ಗೆಳೆಯ ನೆನಪಾಗುತ್ತಾನೆ, ಮತ್ತು ಪ್ರತೀ ಸಲವೂ ಅವನು ಮಾರ್ಕು ಕಡಿಸಿದ್ದಕ್ಕೆ ನಾನು ಹಲ್ಲು ಕಡಿಯುತ್ತೇನೆ!
ಈಗ ಹೇಗೊ ಏನೋ ಗೊತ್ತಿಲ್ಲ, ನಾವು ಸಣ್ಣವರಿದ್ದಾಗ ಮಾತ್ರ ಮಾಸ್ತರುಗಳು ನಮ್ಮ ಮಾರ್ಕುಗಳಿಗೆ ಬಹಳ ಮಹತ್ವಕೊಡುತ್ತಿದ್ದರು. ಈಗ ವಿಶ್ವವಿದ್ಯಾಲಯಗಳಲ್ಲಿ ಮಾರ್ಕ್ಸವಾದಿಗಳು ಸೇರಿ ಹಿಂಸೆಯನ್ನು ಪ್ರಚೊದಿಸುತ್ತಿದ್ದಾರೆಂದು ಆರೊಪಗಳಿವೆ. ನಮ್ಮ 'ಮಾರ್ಕ್ಸ್'ವಾದಿ ಮಾಸ್ತರುಗಳು ಕೂಡ ನಮಗೆ ಕಡಿಮೆ ಮಾರ್ಕು ಬಂದಾಗ ಕೊಡುತ್ತಿದ್ದ ಹಿಂಸೆಯೇನು ಕಡಿಮೆಯಿರಲಿಲ್ಲ. ಕಡಿಮೆ ಮಾರ್ಕು ಬಂದರೆ ಅವರು ನಮ್ಮ ಕಪಾಳಗಳ ಮೇಲೆ ತಮ್ಮ ಬೆರೆಳುಗಳ ಮಾರ್ಕು ಮೂಡಿಸಿ ಕಡಿಮೆಯಾದ ಮಾರ್ಕುಗಳಿಗೆ ಸಮಾ ಮಾಡಿಕೊಳ್ಳುತ್ತಿದ್ದರು. ನಾವು ಏನಾದರೂ ಕಿತಾಪತಿ ಮಾಡಿದಾಗ, I mean ಮಾಡಿ ಸಿಕ್ಕಿಕೂಡ ಬಿದ್ದಾಗ, ನಮ್ಮ ಗುರುಗಳು ಪೂಜೆ ಶುರುಮಾಡುತ್ತಿದ್ದುದುದೇ "ಈ ಸಲದ ಯುನಿಟ ಟೆಸ್ಟ್ನನ್ಯಾಗ ಮಾರ್ಕು ಎಷ್ಟು ಬಂದಾವು?" ಎಂಬ ನಾಂದಿಯಿಂದ. ಕಡಿಮೆ ಮಾರ್ಕು ಬಂದಿದ್ದರೆ ಉಗ್ರವಾಗುತ್ತಿದ್ದ ಪೂಜೆ, "ಎದೀ ಸೀಳಿದರ ನಾಕ ಅಕ್ಷರ ಇಲ್ಲ, ಕಿತಾಪತಿ ಮಾಡ್ತಾನ, ಕಿತಾಪತಿ" ಎಂಬ ಮಂತ್ರದ ಪುನರುಚ್ಚಾರದ ನಡುವೆ ಸಾಂಗವಾಗುತ್ತಿತ್ತು. ಒಂಚೂರು ಅಡ್ದಿಯಿಲ್ಲ ಎನ್ನಬಹುದಾದ ಮಾರ್ಕು ಬಂದಿದ್ದರೆ, "ಏನು ಅಷ್ಟೇ ಸಾಕಾ?" ಎಂತಲೊ, "ಮಾರ್ಕು ಛಲೊ ಬಂದಾವಂತ ಕೊಡು ಮೂಡ್ಯಾವಾ?" ಎಂಬ ಸ್ತುತಿಯಿಂದ ಸೌಮ್ಯವಾಗಿಯೇ ಮುಗಿಯುತ್ತಿತ್ತು.
ಶಾಲೆಯಲ್ಲಷ್ಟೇ ಅಲ್ಲ, ನಮ್ಮ ಮಾಸ್ತರುಗಳ ಜೀವನದಲ್ಲಿ ಕೂಡ ಮಾತು ಮಾರ್ಕು, ಪಾಸು-ನಪಾಸು, ಫಸ್ಟ ಕ್ಲಾಸು-ಸೆಕೆಂಡು ಕ್ಲಾಸುಗಳ ಸುತ್ತನೇ ಸುತ್ತುತ್ತಿದ್ದವು. ಉದಾಹರಣೆಗೆ ಶಾಲೆಯಿಂದ ಮರಳಿದ ತಕ್ಷಣ ಹೆಂಡತಿ ತಿಂಡಿ ಕೋಟ್ಟರೆ ಅದಕ್ಕೆ ನಮ್ಮ ಮಾಸ್ತರರು ಕೋಡುತ್ತಿದ್ದ ಟಿಪಿಕಲ್ ಫೀಡ್ಬ್ಯಾಕ ಹೀಗಿರುತ್ತಿತ್ತು "ಮೆಣಸಿನಕಾಯಿಬಜಿ ಫಸ್ಟ ಕ್ಲಾಸ ಆಗ್ಯಾವು. ಚುಮ್ಮರಿ ಅಡ್ಡಿಯಿಲ್ಲ, ನೂರಕ್ಕ ಐವತ್ತು ಕೋಡಬಹುದು. ಆದರ ಚಾ ಮಾತ್ರ ನಪಾಸ್ - ತೀರ ಕಲಗಚ್ಚ ಆಗೇತಿ."!
ಈ 'ಅಂಕಾ'ಲಾಜಿ - ಅಂಕಗಳಿಗೆ ಅನವಶ್ಯಕ ಪ್ರಾಮುಖ್ಯತೆ ಕೊಡುವ ರೋಗ, ಒಂದು ಬಗೆಯ ಕ್ಯಾನ್ಸರ್ - ಆವಾಗ ಬಹಳ ಪಾಲಕರಿಗೆ ಅಮರಿಕೊಂಡಿತ್ತು. ನಮ್ಮಂತಹ ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಅಷ್ಟೇನು ಹದಗೆಟ್ಟಿರಲಿಲ್ಲವಾದರೂ, ನಗರ ಪ್ರದೇಶದಲ್ಲಿ ಅದು ಅತೀಯಾಗಿತ್ತು. ಇಲ್ಲವಾದರೆ, ಜೀವನದಲ್ಲಿ ಎಂದೆಂದಿಗೂ, ಯಾರ್ಯಾರಿಗೂ ಉಪಯೋಗವಾಗದ ಹತ್ತನೆ ತರಗತಿ ಪರೀಕ್ಷೆಯಲ್ಲಿ ಹೆಚ್ಚಿನ ಮಾರ್ಕ್ಸ ಬರುತ್ತವೆ ಎಂಬ ಮೂಢನಂಬಿಕೆಯಿಂದ ಕನ್ನಡದ ಬದಲು ಸಂಸ್ಕೄತ ವಿಷಯ ತೆಗೆದುಕೊಳ್ಳಲು ಪಾಲಕರು ಯಾಕೆ ಒತ್ತಾಯ ಮಾಡುತ್ತಿದ್ದರು ? ಅದಿರಲಿ, ಆದ್ಯಾವನೋ ಅಡ್ಡಕಸುಬಿ ಮಾಸ್ತರು ತನ್ನ ಹತ್ತಿರ ಟ್ಯೂಶನ್ನಿಗೆ ಬಂದವರಿಗೆ ಕ್ಲಾಸ್ ಪರೀಕ್ಷೆಗಳಲ್ಲಿ ಹೆಚ್ಚಿನ ಮಾರ್ಕು ಕೊಡುತ್ತಾನೆ ಎಂದು ಅವನ ಹತ್ತಿರ ತಮ್ಮ ಮಕ್ಕಳನ್ನು ಯಾಕೆ ಕಳುಹಿಸುತ್ತಿದ್ದರು ?
ಇದೆಲ್ಲಾ ಶಾಲೆಗಳಲ್ಲಿದ್ದಾಗಿನ ಮಾತಾಯ್ತು. ಇನ್ನು ಕಾಲೇಜಿಗೆ ಬಂದಾಗ 'ಅಂಕ'ಗಣೀತದಲ್ಲಿ ಇನ್ನೊಂದು ಅಧ್ಯಾಯ ಶುರುವಾಗುತ್ತಿತ್ತು. ಕಾಲೇಜು ಹಾಸ್ಟಲ್ಲಿರುತ್ತಿದರಿಂದ 'ಈ ಸಲ ಟೆಸ್ಟ್ ನ್ಯಾಗ ಛಲೋ ಮಾರ್ಕ್ಸ್ ತಗೊಬೇಕ್ ನೋಡ್" ಎಂದು ಜೀವ ತಿನ್ನಲು ಅಪ್ಪ-ಅಮ್ಮ ಹತ್ತಿರವಿರುತ್ತಿರಲಿಲ್ಲ. ಆದರೆ ನಮ್ಮ ಕಾಲೇಜಿನ ಬಹಳಷ್ಟು ಮಾಸ್ತರರು - ಅವರೆಲ್ಲರ ಹೊಟ್ಟೆ ತಣ್ಣಗಿರಲಿ- ಮಾರ್ಕುಗಳಿಗಾಗಿ ನಮ್ಮ ಜೀವ ತಿನ್ನುತ್ತಿದ್ದರು.ನಮ್ಮ ಹಿಂದಿನ ತಲೆಮಾರಿನಲ್ಲಿ, ಕಾಲೇಜು ಶಿಕ್ಷಣ ಪಡೆಯುವವರೇ ಕಮ್ಮಿಯಿರುತ್ತಿದ್ದಾಗ, ಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿರುವ ಕಾಲೇಜು ಶಿಕ್ಷಕರು ಕಾಲೇಜು ಶುರುವಾದ ತಕ್ಷಣ ವಿದ್ಯಾರ್ಥಿಗಳಲ್ಲಿ ತಮ್ಮ ಭಾವಿ ಅಳಿಯನನ್ನು ಹುಡುಕಿ, ಅವನಿಗೆ ತಮ್ಮ ಕೈಲಾದಷ್ಟು ಹೆಚ್ಚಿಗೆ ಮಾರ್ಕು ಕೊಟ್ಟು, ತಮ್ಮ ಸ್ನೇಹಿತ ಉಪನ್ಯಾಸಕರಿಂದ ಕೊಡಿಸಿ, ಡಿಗ್ರಿ ಮುಗಿದಮೇಲೆ ಮಗಳನ್ನು ಕೊಡತಿದ್ದರಂತೆ. ಆಗ ಕುಟುಂಬ ಯೋಜನೆ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲವಾಗಿ ಗುರುಪುತ್ರಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುತ್ತಿತಂತೆ. ಆದರೆ ನಮ್ಮ ಕಾಲೇಜುಕಾಲದ ಹೊತ್ತಿಗೆ ಆ ಸುಭಿಕ್ಷದ ಕಾಲ ಹೊರಟೋಗಿತ್ತು. ಮಗಳನ್ನು ಕೊಡೊದು ದೂರ ಉಳಿಯಿತು, ನಾವು ಕಷ್ಟಪಟ್ಟು ಓದಿ, ನಿಯತ್ತಾಗಿ ಬರೆದ ಉತ್ತರಗಳಿಗೆ ಮಾರ್ಕುಕೊಡಲು ಜಿಪುಣತನಮಾಡುತ್ತಿತ್ತು ನಮ್ಮ ಗುರುವೃಂದ. ಇರಲಿ, ಎಲ್ಲಕ್ಕೂ ಪಡೆದುಬಂದಿರಬೇಕು...
ಮಾರ್ಕುಗಳನ್ನು ತಮ್ಮ ಮನೆಯ ಗಂಟಿನಂತೆ ಭಾವಿಸುವುದು ಹೆಚ್ಚುಕಡಿಮೆ ಎಲ್ಲಾ ಗುರುಗಳ ಸಾಮಾನ್ಯ ಗುಣವಾಗಿತ್ತಾದರೂ, ಕೆಲ ಗುರುಜನ ಮಾರ್ಕುಗಳ ವಿಷಯದಲ್ಲಿ ಇನ್ನೂ ಕೆಲ ವಿಶೇಷತೆಗಳನ್ನು ಹೊಂದಿದ್ದರು. ಒಬ್ಬ ಗುರುಗಳು ತಮ್ಮ ವಿಷಯದಲ್ಲಿ ನಾವು ಪಡೆಯುವ ಮಾರ್ಕುಗಳ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿರುತ್ತಿದ್ದರೆಂದರೆ ನಾವು ಯಾವಾಗಲೂ ಅವರ ವಿಷಯವನ್ನೇ ಓದಬೇಕೆಂದು ಬಯಸುತ್ತಿದ್ದರು!
ಇನ್ನೊಬ್ಬ ಗುರುಗಳು ತಮ್ಮ ವಿಷಯದಲ್ಲಿ ಯಾರಿಗೂ, ಯಾವತ್ತಿಗೂ ನೂರಕ್ಕೆ ಅರವತ್ತೈದಕ್ಕಿಂತ ಹೆಚ್ಚು ಮಾರ್ಕು ಕೊಡುತ್ತಿರಲಿಲ್ಲ. ಅದ್ಯಾಕೆ ಹಾಗೆ ಎಂದು ಒಬ್ಬ ವಿದ್ಯಾರ್ಥಿ ಕೇಳಿದಾಗ ನಮ್ಮ ಗುರುವರ್ಯರು "ಅಲ್ಲೋ ತಮ್ಮ್ಯಾ, ನಾ ಕಲಿಯುವಾಗ ನನಗ ಈ ವಿಷಯದಾಗ ನನಗ ಅರವತ್ತೈದು ಮಾರ್ಕ್ಸ್ ಬಂದಿದ್ವು. ನೀನು ನನ್ನ ಕೈಯಾಗ ಕಲ್ತು ನನಗಿಂತ ಶ್ಯಾಣ್ಯಾ ಆಗಿರ್ತೀಯೇನೂ ? ಮತ್ತ, ನಿನಗ ಅರವತ್ತೈದ್ ಕ್ಕಿಂತಾ ಹೆಚ್ಚಿಗಿ ಹ್ಯಾಂಗ್ ಕೊಡಾಕ್ ಬರ್ತೈತಿ ?" ಎಂದು ದಬಾಯಿಸಿದ್ದರಂತೆ ಎಂಬ ಕತೆ ನಮ್ಮ ಕಾಲೇಜಿನ ಮೌಖಿಕ ಸಾಹಿತ್ಯದಲ್ಲಿ ದಾಖಲಾಗಿತ್ತು. ರೂಪಾಯಿಗೆ ಸೇರು ಅಕ್ಕಿ ಬರತಿದ್ದ ಕಾಲದಲ್ಲಿ ಕಾಲೇಜು ಕಲಿತ ಗುರುಗಳಿಗೆ, ನಲವತ್ತು ರೂಪಾಯಿಗೆ ಕಿಲೋ ಅಕ್ಕಿಯಾಗಿರುವ ಈ ಕಾಲದಲ್ಲಿ ಉಳಿದಿದ್ದೆಲ್ಲಾ ತುಟ್ಟಿಯಾದರೂ ಮನುಷ್ಯನ ಜೀವ ಮತ್ತು ಮಾರ್ಕ್ಸು ಮಾತ್ರ ಸೋವಿ ಎಂದು ಯಾರು ಹೇಳ್ಬೇಕು ?
ನಮ್ಮ ಇನ್ನೊಬ್ಬ ಮಾಸ್ತರರು ಮಾರ್ಕುಗಳ ವಿಷಯದಲ್ಲಿ ಎಷ್ಟು ಲೋಭಿಯಾಗಿದ್ದರೆಂದರೆ ತಾವು ಇಂಟರ್ನಲ್ ಪರೀಕ್ಷೆಗಳ ಪೇಪರುಗಳನ್ನು ಚೆಕ್ ಮಾಡುತ್ತಿದ್ದಾಗ ತಮ್ಮ ಖಾಸಾ ಚೇಲಾನೊಬ್ಬನನ್ನು ಪಕ್ಕಕ್ಕೆ ಕೂಡಿಸಿಕೊಂಡಿರುತ್ತಿದ್ದರು. ಮಾಸ್ತರರ ದೃಷ್ಟಿಗೆ ಬೀಳದ ಮಾರ್ಕುಕಡಿಯುವ ಅವಕಾಶವನ್ನು ಅವರಿಗೆ ತೋರಿಸಿ ಶಭಾಶಗಿರಿ ಪಡೆಯುವುದು ಚೇಲಾನ ಆಫೀಶಿಯಲ್ ಸ್ಟೇಟ್ ಮೆಂಟ್ ಆಫ್ ವರ್ಕ್ ಆಗಿತ್ತು. ಆದರೆ ಆ ಚೇಲಾನೂ ಪಾಕಡಾ ಆಸಾಮಿ ಇದ್ದದ್ದರಿಂದ ತನಗೆ ಬೇಕಾದವರ ಪೇಪರುಗಳಲ್ಲಿನ ತಪ್ಪುಗಳಿಗೆ ಡಿಸ್ಕೌಂಟು ಕೊಟ್ಟು, ತನಗಾಗದವರ ಪೇಪರುಗಳಲ್ಲಿನ ಇಲ್ಲದ ತಪ್ಪು ತೋರಿಸಿ ಮಾರ್ಕು ಕಡಿಸುತ್ತಿದ್ದ. ಹೀಗಾಗಿ ನಾವು ಒಳ್ಳೆ ಇಂಟರ್ನಲ್ ಮಾರ್ಕುಗಳಿಗಾಗಿ ಮಾಸ್ತರರ ಅಷ್ಟೆ ಅಲ್ಲದೇ ಅವರ ಚೇಲಾನದೂ ಮರ್ಜಿ ಕಾಯಬೇಕಾಗುತ್ತಿತ್ತು !!
ನಾವು ಹೀಗೆ ಮಾರ್ಕುಗಳಿಗಾಗಿ ಪರದಾಡುತ್ತಿದ್ದಾಗ ನಮ್ಮ ಗೆಳೆಯರ ಬಳಗದಲ್ಲೊಬ್ಬ ವಿಜಯ್ ಎಂಬವನಿದ್ದ. ಅವನು ಪರೀಕ್ಷೆಗಳು - ಮಾರ್ಕುಗಳು - ಪಾಸು - ಫೇಲುಗಳ ಬಗ್ಗೆ ಅಗಾಧ ನಿರ್ಲಿಪ್ತತನ ಬೆಳೆಸಿಕೊಂಡಿದ್ದ. ಉಳಿದೆಲ್ಲ ದಿನಗಳಲ್ಲಿ ಊರ ಉಸಾಬರಿ ಮಾಡುತ್ತ, ಬಾರಾ ಭಾನಗಡಿಗಳಲ್ಲಿ ಭಾಗಿಯಾಗುತ್ತ, ಪರೀಕ್ಷೆ ಬಂದಾಗ ಸರಿಯಾಗಿ ಮೂವತ್ತೈದು ಮಾರ್ಕುಗಳಿಗೆ ತಯಾರಿ ಮಾಡಿಕೊಂಡು ಪರೀಕ್ಷೆ ಬರಿಯುತ್ತಿದ್ದ. ಹೀಗಾಗಿ ಪ್ರತಿ ಸಲವೂ ಒಂದಾದರೂ ವಿಷಯ ಪಾಸಾಗದೇ ಉಳಿಯುತ್ತಿದ್ದ. ಪ್ರತೀ ಫಲಿತಾಂಶದ ನಂತರ ನಾವು ಕೊಡುತ್ತಿದ್ದ ಪಾರ್ಟಿ ಅವನು ಬರುತ್ತಿದ್ದನಾದರೂ ಅವನಿಗೆ ಪಾರ್ಟಿ ಕೊಡುವ ಅವಕಾಶವೇ ಸಿಕ್ಕಿರಲಿಲ್ಲ. ಕೊನೆಯ ವರ್ಷದ ಪರೀಕ್ಷೆ ನಾವು ಮುಗಿಸಿ ನಮ್ಮ-ನಮ್ಮ ಊರಿಗೆ ಹೋಗುವ ಮೊದಲು ವಿಜಯ್ "ದೋಸ್ತಗಳಾ, ಬರೀ ನಿಮ್ಮದೇ ಪಾರ್ಟಿಲಿ ತಿಂದಿದಿನಿ, ಈ ಸಲ ನಾನು ಪಾರ್ಟಿ ಕೊಡತೇನಿ. ಈ ಸಲನೂ ನೀವು ಚೆನ್ನಾಗಿ ಪಾಸ್ ಆಗ್ತೀರಿ, ಮತ್ತು ನನ್ನವು ಒಂದೆರಡು ವಿಷಯ ಉಳಿತಾವು. ಉಳಿವಲ್ಯಾಕ, ಆದರ ಅಂತೂ-ಇಂತೂ ಈ ಕಾಲೇಜು ಮುಗಿಸಿದೆನಲ್ಲಾ, ಆ ಖುಷಿಲೇ ಪಾರ್ಟಿ" ಎಂದು ಒಂದು ಸಕತ್ ಪಾರ್ಟಿ ಕೊಟ್ಟಿದ್ದ. ನಾವು ಡಿಗ್ರಿ ಮುಗಿಸಿ ಒಂದೆರಡು ವರುಷದ ನಂತರ ಹಳೇ ಬಾಕಿಯಲ್ಲಾ ತೀರಿಸಿ, ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಹಿಡಿದ ವಿಜಯ ಈಗ ಜಬರ್ ದಸ್ತಾಗಿದ್ದಾನೆ !!
ವಿದ್ಯಾರ್ಥಿ ಜೀವನವನ್ನು ಮುಗಿಸಿ, ಗೃಹಸ್ಥ/ ಗ್ರಸ್ತ ಜೀವನದಲ್ಲಿರುವ ನಾನು ಈಗ ನನ್ನ ಮಾರ್ಕುಗಳ ಬಗ್ಗೆ ಚಿಂತಿಸುವ ಹಂತ ದಾಟಿ, ನನ್ನ ಮಗನ ಮಾರ್ಕುಗಳ ಬಗ್ಗೆ ಚಿಂತಿಸುವ ಹಂತಕ್ಕೆ ಬಂದಿದ್ದೇನೆ. ನಾನು ಕೂಡ ಆಗಾಗ ದಾರ್ಶನಿಕವಾಗಿ ವಿಜಯನಂತೆ ವಿಚಾರ ಮಾಡುತ್ತೇನೆ - ಅಗಾಧವಾದ, ಅನಂತವಾದ ದೇಶ-ಕಾಲಗಳ ಲೆಕ್ಕದಲ್ಲಿ ಕ್ಷುಲ್ಲಕವಾದ ಯಾವುದೋ ಒಂದು ಪರೀಕ್ಷೆಯ ಅಂಕಗಳ ಬಗ್ಗೆ ನಾವು ಚಿಂತಿಸಬೇಕಾ ? ಲೋಭ ಪಡಬೇಕಾ ? ಹೆಮ್ಮೆ ಇಲ್ಲವೇ ಅವಮಾನ ಪಡಬೇಕಾ ? 'ಜೀವನ ಯೋಗ ಧರ್ಮ' ದಯಪಾಲಿಸಿದ ಕವಿ ಡಿವಿಜಿ ಹತ್ತನೇ ಇಯತ್ತೆಯನ್ನೂ ಪಾಸಾಗಿರಲಿಲ್ಲವಲ್ಲ ? 'ಕಡಲ ತೀರದ ಭಾರ್ಗವ' ಕಾರಂತರು ಡಿಗ್ರಿಯನ್ನೇ ಪಾಸಾಗಿರಲಿಲ್ಲವಲ್ಲ ? ಇನ್ನೇನು 'ಶಾಲಾ ಪರೀಕ್ಷೆಯ ಮಾರ್ಕುಗಳು ಬೂಸಾ' ಎಂಬ ಸಿದ್ಧಾಂತಕ್ಕೆ ಬರೋಣವೆನ್ನುವಷ್ಟರಲ್ಲಿ 'ಕನ್ನಡದ ಆಸ್ತಿ' ಮಾಸ್ತಿ ನೆನಪಾಗುತ್ತಾರೆ. ಪರೀಕ್ಷೆಗಳಲ್ಲಿ ಕೈತುಂಬ ಮಾರ್ಕು ಪಡೆದು, ಒಳ್ಳೆಯ ಕೆಲಸವನ್ನು ಪಡೆದು, ಪರೋಪಕಾರಿಯಾಗಿ ಬಾಳಿ, ತುಂಬು 'ಜೀವನ' ನಡೆಸಿದ ಮಾಸ್ತಿಯವರನ್ನು ನೆನಸಿಕೊಂಡು ನನ್ನ ಸಿದ್ಧಾಂತವನ್ನು ಒಂಚೂರು ಬದಲಿಸಿಕೊಳ್ಳುತ್ತೇನೆ 'ಜೀವನದ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡೊದು ಮುಖ್ಯ, ಅದರ ಜೊತೆಗೆ ಶೈಕ್ಷಣಿಕ ಪರೀಕ್ಷೆಗಳಲ್ಲೂ ಚೆನ್ನಾಗಿ ಮಾಡಿದರೆ ಇನ್ನೂ ಒಳ್ಳೆಯದು..'

No comments:
Post a Comment