Monday, August 6, 2012

ಪ್ಯಾರಿಸಿನಿಂದ ಪ್ರೇಯಸಿಗೆ

(ಕಳೆದ ಸಲ ಪ್ಯಾರೀಸಿಗೆ ಹೋದಾಗ ಬರೆದ ಪತ್ರವನ್ನು ಸಂಬಂಧ ಪಟ್ಟವರ ಅನುಮತಿ ಪಡೆದುಕೊಂಡು, ವೈ/ವಯಕ್ತಿಕ ವಿಷಯಗಳನ್ನು ತೆಗೆದುಹಾಕಿ ಪ್ರಕಟಿಸಲಾಗಿದೆ)




ಹೆಡ್ಡಿಂಗು ನೋಡಿ, ಗುರು ಅದ್ಯಾವಳೋ ಅವನ ಐಟೆಮ್ಮಿಗೆ ಬರದ ಪತ್ರ, ಮಿಸ್ಟೀಕಿನಿಂದ ನನಗೆ ಬಂದಿದೆ ಎಂದು ತಿಳಿದು, ಅಕಟಕಟಾ ಎಂದು ಹಲ್ಲು ಕಡಿಯುತ್ತಾ, "ಯಾವ ಬೋಳಿ ಆಕಿ? ಎಲ್ಲಿದ್ದಾಳಾಕಿ?" ಎಂದು ಹಾರಾಡುತ್ತಿದ್ದರೆ ಒಂಚೂರು ಸಮಾಧಾನ ಮಾಡಿಕೊ. ಇದು ನಿನಗೇ ಬರೆದ ಪತ್ರ. "ಹೌದಾ? ಇದು ಕನಸಾ ?" ಎಂದು ನಿನ್ನನ್ನೇ ನೀನು ಚೂಟಿಕೊಂಡಿಯಾ ? ಹೌದು ಮಾರಾಯ್ತಿ, ಹೌದು, ನಿನಗೇ ಬರದ ಪತ್ರ, ಅನುಮಾನ ಬೇಡ. ಪ್ರೇಯಸಿ ಅಂದರೂ ನೀನೆ, ಹೆಂಡತಿಯಂದರೂ ನೀನೆ, ಅಷ್ಟೇ ಅಲ್ಲ ನಾನು ಅಂದರೂ ನೀನೆ.



ನವರತ್ನ ರಾಯರ ಪುಸ್ತಕದ ಹೆಸರನ್ನು ಕದ್ದು ಈ ಪತ್ರಕ್ಕೆ ಹೆಡ್ಡಿಂಗಾಗಿ ಬರೆದು ಕೆಲದಿನಗಳಾಯಿತಾದರೂ ನನಗೆ ಪ್ಯಾರಿಸ್ಸಿನ ಬಗ್ಗೆ ಬರೆಯುವಂತಾಹದ್ದು ಏನಾದರೂ ಇದೆ ಅನಿಸಿರಲಿಲ್ಲ. ಆದರೆ ಇವತ್ತು ನಮ್ಮ ಮದುವೆಯ ವಾರ್ಷಿಕೋತ್ಸವವಾದದ್ದರಿಂದ ಒಂದು ಸಣ್ಣ ಉಡುಗೊರೆ ಕೊಡೋಣ ಎಂದು ಬರೆಯುತ್ತಿದ್ದೇನೆ. ಒಪ್ಪಿಸಿಕೊ.. ಇಷ್ಟು ದಿನಗಳ ನಿನ್ನ ಒಟ್ಟು ಸಾಂಗತ್ಯಕ್ಕೆ ಚಿರಋಣಿ.



ಪ್ಯಾರಿಸನ್ನು ಕೆಲವರು ಸುಂದರ ನಗರ ಅನ್ನುತ್ತಾರೆ. ನನಗಂತೂ ಹಾಗನಿಸಲಿಲ್ಲ.. ! ಎಷ್ಟು ನೋಡಿದರೂ ಮುಗಿಯದ ಆ 'ಲವ್ರ' ಮ್ಯೂಸಿಯಂ ಎಷ್ಟಂತ ನೋಡುವುದು ? ಎಷ್ಟು ತಿರುಗಿದರೂ ಮುಗಿಯದ ಟ್ಯೂಲರಿಸ ಉದ್ಯಾನವನದಲ್ಲಿ ಎಷ್ಟಂತ ಒಬ್ಬನೇ ತಿರುಗುವುದು ? 'ಪ್ಯಾಲೇಸ್ ಡೆ ಲಾ ಕಾನ್ಕೋರ್ಡ್' ಎನ್ನುವ ಅರಮನೆ ನಮ್ಮ ಮೈಸೂರು ಅರಮನೆ ಮುಂದೆ ಕಾಲಕಸ.. ಅಲ್ಲಿಯ 'ಆರ್ಕ್ ಡೇ ಟ್ರೂಂಫ್'ಗಿಂತಾ ನಮ್ಮ ಇಂಡಿಯಾ ಗೇಟೇ ವಾಸಿ.. ಪ್ಯಾರಿಸ್ಸಿನ ನಟ್ಟ ನದುವೆ ಹರಿಯುವ ನದಿಯ ಹೆಸರು ಸೀನ್.. ಯಾವ ಮಾತಾಯಿ ಸೀನಿ ಈ ನದಿ ಹುಟ್ಟಿತೋ ?? ಇಲ್ಲಿನ ಐಫೆಲ್ ಗೋಪುರಕ್ಕಂತೂ ಜನ ಅಷ್ಟ್ಯಾಕೆ ಮಹತ್ವ ಕೊಡತಾರೋ ? ಅದು ನಮ್ಮೂರಿನ ಯಾವೂದೋ ಮೋಬೈಲ್ ಟವರ್ ಇದ್ದಂತಿದೆ.. ಏನೋ ಒಂಚೂರು ದೊಡ್ಡದಿರಬಹುದೇನೋಪಾ..



ಎಲ್ಲರಿಗೂ ಅಷ್ಟೊಂದು ಮಹಾನ್ ಅನ್ನಿಸುವ ಪ್ಯಾರಿಸ್ಸು ನನಗ್ಯಾಕೆ ಚಿಲ್ರೆ ಅನಿಸ್ ಬೇಕು ? ಯಾವನಿಗೊತ್ತು - ನೀ ಜೊತೆಗಿರಲಾರದ ಪರಿಣಾಮವೇನೋ.. ಮುಂದಿನ ಸಲ ನಿನ್ನ ಜೊತೆ ಬಂದಾಗ ಬಹುಷಃ ಚೆನ್ನಾಗಿ ಕಾಣಬಹುದು..

~ಗುರು

No comments: