Saturday, August 30, 2014

ನಾನು, ನನ್ನ ರೂಂಮೇಟುಗಳು ಮತ್ತು ಈರಣ್ಣ 'ದಿ ಅಭಿನವ ವಿವೇಕಾನಂದ'

ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುವ ಬಹಳಷ್ಟು ಜನ ನಮ್ಮ ಸ್ನೇಹಿತರು, ಮೊದಲು ನಮ್ಮ ರೂಂಮಿನಲ್ಲಿದ್ದು, ಕೆಲಸ ಸಿಕ್ಕ ಮೇಲೆ ಬೇರೆ ರೂಂ ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಒಂದೊಂದು ಸಲ ಮೊದಲು ನಮ್ಮ ರೂಮಿನಲ್ಲಿದ್ದು ಹೋಗಿ ರೂಮು ಮಾಡಿ ಕೊಂಡಿದ್ದವನಿಗೆ, ಹೊಸದಾಗಿ ಕೆಲಸ- ರೂಮು ಹುಡುಕಿ ಕೊಳ್ಳುತ್ತಿರುವವನನ್ನು ಪರಿಚಯಿಸಿ, ಜೋಡಿ ಮಾಡುವ ಪುಣ್ಯದ ಕೆಲಸವನ್ನೂ ನಾವು ಮಾಡುತ್ತಿದ್ದೆವು. ಹೀಗೆ ನಮ್ಮಿಂದ ಸಹಾಯ ಪಡೆದ ಜನರ ದೊಡ್ಡ ಜಾಲವೇ ಆಗಿ, ನಮ್ಮ ರೂಮು ಆ ಜಾಲದ ಹೆಡ್ಡಾಫೀಸಿನ ತರ ಕೆಲಸ ಮಾಡುತ್ತಿತ್ತು. ಬ್ರ್ಯಾಂಚಾಫೀಸಿನ ಜನ ಆಗಾಗ ಹೆಡ್ಡಾಫೀಸಿಗೆ ಬಂದು ತೀರ್ಥ ಸಮಾರಾಧನೆಗಳಲ್ಲಿ ಭಾಗವಹಿಸುವದೂ ಸಾಮಾನ್ಯವಾಗಿತ್ತು.

ಈರಣ್ಣ, ಉರ್ಫ್ ಈರಣ್ಣ  ಮಲ್ಲಣ್ಣ ಮತ್ತಿಗಟ್ಟಿ, ಅಲಿಯಾಸ್  ಐ.ಎಮ್. ಮತ್ತಿಗಟ್ಟಿ, ಆಲ್ಸೊ ನೋನ್ ಆಸ್ ಅಭಿನವ ವಿವೇಕಾನಂದ, ಕೂಡ ಇದೇ ರೀತಿ ನಮ್ಮ ರೂಮಿಗೆ ಬಂದಿದ್ದ. ಅವನು ನನ್ನದೇ ಊರಿನವ, ನನ್ನ ಬಾಲ್ಯ ಸ್ನೇಹಿತ. ಊರಲ್ಲಿ ಅವರಪ್ಪ ದೊಡ್ಡ ಕುಳ. ಎರಡು ಅಡತಿ ಅಂಗಡಿ, ಒಂದು ಕಿರಾಣಿ ಅಂಗಡಿ ಇದ್ದವು. ಈರಣ್ಣ ಯಾವುದೋ ಹುಡುಗಿಯನ್ನು ಇಷ್ಟ ಪಟ್ಟಿದ್ದನಂತೆ. ಆದರೆ ಹುಡುಗಿಯ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನು ಸರಿ ಇರಲಿಲ್ಲ. ಅದಕ್ಕಾಗಿ ಈರಣ್ಣನ ಅಪ್ಪ ಆ ಸಂಬಂಧಕ್ಕೆ ಒಪ್ಪಿರಲಿಲ್ಲ. ಪರಿಣಾಮವಾಗಿ ಈರಣ್ಣ ತಮ್ಮಪ್ಪನೊಂದಿಗೆ ಜಗಳಾಡಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ. ಯಾವುದೋ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಅವನಿಗೆ ಸೂಪರುವೈಸರ್ ಕೆಲಸವೂ ಸಿಕ್ಕಿತ್ತು. ಫ್ಯಾಕ್ಟರಿಯ ಹತ್ತಿರ, ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಇತರರ ಜೊತೆ ಸೇರಿ ರೂಮೂ ಮಾಡಿದ್ದ. ಆದರೆ ವಾರಕ್ಕೊಮ್ಮೆಯಾದರೂ ನಮ್ಮ ರೂಮಿಗೆ ಬಂದು, ಇದ್ದು ಹೋಗುವುದು ಅವನ ರೂಢಿಯಾಗಿತ್ತು.

ಈರಣ್ಣ ಒಳ್ಳೆಯ ಮನುಷ್ಯ. ಆದರೆ ಅವನು ಏನೇ ಆಮಿಷ ತೋರಿಸಿದರೂ, ಅವನ ಜೊತೆಗೆ ಸಿನೆಮಾಕ್ಕೆ ಮಾತ್ರ ಹೋಗ ಬೇಡಿ ಎಂದು ನನ್ನ ರೂಂಮೇಟುಗಳಿಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದೆ. ರಾಮ-ಲಕ್ಷ್ಮಣರಿಲ್ಲದ ವೇಳೆಯಲ್ಲಿ ರಾವಣ ಸೀತೆಯನ್ನು ಕದ್ದೊಯ್ದಂತೆ, ನಾನಿಲ್ಲದ ವೇಳೆ ನನ್ನ ರೂಂಮೇಟುಗಳನ್ನು ಯಾವುದೋ ಆಶೆ ತೋರಿಸಿ, ಸಿನೆಮಾಕ್ಕೆ ಕರೆದೊಯ್ದು ತಲೆ ಕೊರೆದು ಬಿಟ್ಟಾನು ಎನ್ನುವುದು ನನ್ನ ಭಯ. ಆ ಭಯಕ್ಕೂ ಕಾರಣವಿತ್ತು. ಹಿಂದೆ ಹೈಸ್ಕೂಲು ದಿನಗಳಲ್ಲಿ, ನಮ್ಮಂತಹ ಹುಡುಗರ ಹತ್ತಿರ ದುಡ್ಡು-ಕಾಸು ಇರುತ್ತಿರಲಿಲ್ಲ. ಆದರೆ ಅಂಗಡಿಗಳಲ್ಲಿ ಆಗಾಗ ಗಲ್ಲೆ ಮೇಲೆ ಕೂಡುತ್ತಿದ್ದ ಈರಣ್ಣನ ಹತ್ತಿರ ಅವರಪ್ಪನ ಕಣ್ಣು ತಪ್ಪಿಸಿ ಎತ್ತಿಟ್ಟುಕೊಂಡ ದುಡ್ಡು ಇರುತ್ತಿತ್ತು. ಅದೇ ದುಡ್ಡು ತೋರಿಸಿ ಒಮ್ಮೆ ನನಗೆ 'ಶನಿವಾರ ಮಧ್ಯಾಹ್ನದ ಆಟಕ್ಕೆ ಹೋಗೋಣ ಬರತಿಯಾ ?' ಎಂದು ಕೇಳಿದ್ದ.  ಬಿಟ್ಟಿ ಸಿನೆಮಾ ನೋಡೋಕೆ ಸಿಗುತ್ತೆ ಅಂತ ನಾನು ಒಪ್ಪಿಕೊಂಡಿದ್ದೆ. ಸಿನೆಮಾಕ್ಕೆ ಹೋದ ನಂತರವಷ್ಟೇ ತಿಳಿದದ್ದು, ಸಿನೆಮಾದ ವಿಷಯದಲ್ಲಿ ಈರಣ್ಣ ಕಣ್ಣಿದ್ದು ಧೃತರಾಷ್ಟ್ರ. ಅವನಿಗೆ ಸಿಕ್ಸ್ತ್ ಸೆನ್ಸ್ ತರಹದ ಇಂಗ್ಲೀಷು ಸಿನೆಮಾ ಬಿಡಿ, ಅವಾರ್ಡ್ ಗೆದ್ದ ಬುದ್ಧಿಜೀವಿ ಸಿನೆಮಾಗಳನ್ನು ಬಿಟ್ಟುಬಿಡಿ, ಕನ್ನಡದ ಸರಳ ಸಿನೆಮಾಗಳ ಕಥೆಗಳೂ ಅರ್ಥವಾಗುತ್ತಿರಲಿಲ್ಲ, ಅವನಿಗೆ ತೆರೆಯ ಮೇಲೆ ನಡೆಯುತ್ತಿರುವುದನ್ನು ವಿವರಿಸಿ ಹೇಳಲು ಒಬ್ಬ ಸಂಜಯನ ಆವಶ್ಯಕತೆ ಇತ್ತು. ನಡು-ನಡುವೆ ಈರಣ್ಣನಿಗೆ ಉದ್ಭವವಾಗುತ್ತಿದ್ದ ಡೌಟುಗಳನ್ನು ಬಗೆಹರಿಸುವುದೂ ಸಂಜಯನ ಕರ್ತವ್ಯವಾಗಿರುತ್ತಿತ್ತು. ಅದಕ್ಕಾಗಿ ಯಾವುದಾದರೂ ಬಕರಾನನ್ನು ಹಿಡಿದುಕೊಂಡು, ಅವನ ಟಿಕೀಟು ತೆಗೆಸಿ, ಸಿನೆಮಾಕ್ಕೆ ಕರೆದುಕೊಂಡು ಹೋಗುವುದು ಈರಣ್ಣನ ರಣತಂತ್ರವಾಗಿತ್ತು. ನಾನು ಸಂಜಯನಾಗಿ ಹೋಗಿದ್ದ ಸಿನೆಮಾ ಟೈಗರ್ ಪ್ರಭಾಕರ್ ಖಳಪಾತ್ರದಲ್ಲಿ ನಟಿಸಿದ ಕೊನೆಯ ಸಿನೆಮಾಗಳಲ್ಲಿ ಒಂದು. ಅದಾಗಲೇ ಟೈಗರ್‌ರು ನಾಯಕ ನಟನಾಗಿ ಜನಪ್ರಿಯರಾಗಿ ನಮ್ಮ ಈರಣ್ಣನ ಆರಾಧ್ಯ ದೈವವಾಗಿದ್ದರು. ಹೀಗಾಗಿ ನಾನು ಎಷ್ಟೇ ಕಷ್ಟ ಪಟ್ಟು ವಿವರಿಸಿದರೂ ಈರಣ್ಣನಿಗೆ ಹೀರೋಯಿನ್, ಟೈಗರ್ ಪ್ರಭಾಕರ್‌ರನ್ನು ಬಿಟ್ಟು ಆ ದರವೇಶಿ ಹೀರೋನನ್ನು ಯಾಕೆ ಲವ್ ಮಾಡ್ತಾ ಇದ್ದಳು ಅಂತ ಅರ್ಥವಾಗಲಿಲ್ಲ!!

ನಮ್ಮ ಜೊತೆ ಬಂದು ಇರತೊಡಗಿದ ನಂತರ ಈರಣ್ಣನ ಇತರ ಗುಣಗಳು ನಮಗೆ ಪರಿಚಯವಾಗ ತೊಡಗಿದವು. ಅವನಾಗಲೇ ಭಗ್ನ ಪ್ರೇಮದಿಂದಾಗಿ ನೊಂದು, ಮದುವೆ ಆಗಬಾರದು ಎಂದು ನಿರ್ಧರಿಸಿ ಬಿಟ್ಟಿದ್ದ. ಸ್ವಾಮಿ ವಿವೇಕಾನಂದರನ್ನು ತನ್ನ ರೋಲ್ ಮಾಡಲ್ ಮಾಡಿಕೊಂಡಿದ್ದ. ತನ್ನನ್ನು ತಾನೇ 'ಅಭಿನವ ವಿವೇಕಾನಂದ' ಎಂದು ಕರೆದುಕೊಳ್ಳುತ್ತಿದ್ದ.  'ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮರಣ', 'ಭಗವಂತನ ಸಾಕ್ಷಾತ್ಕಾರ: ಎಲ್ಲಿ? ಎಂತು?' ಇತ್ಯಾದಿ ಪುಸ್ತಕಗಳನ್ನು ಭಯ-ಭಕ್ತಿಗಳಿಂದ ಓದಿ ಮುಗಿಸಿದ್ದ. ಓದಿದ ವಿಷಯ ಅವನ ಮೆದುಳಿನಲ್ಲಿ ಉಳಿಯದೇ, ಅವನ ಬಾಯಿಯಿಂದಲೂ ಹೊರ ಚೆಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿತ್ತು. ನಮ್ಮ 'ತೀರ್ಥ'ಯಾತ್ರೆಯ ಸಂದರ್ಭದಲ್ಲಿ ಈರಣ್ಣನಿದ್ದರಂತೂ, ನನ್ನನ್ನು ಬಹಳ ಧರ್ಮಸಂಕಟಕ್ಕೆ ಸಿಲುಕಿಸುತ್ತಿದ್ದ. ನನ್ನಿಬ್ಬರೂ ರೂಂಮೇಟುಗಳಿಗೆ ಮಾಂಸ-ಮದ್ಯಗಳನ್ನು ವರ್ಜಿಸಿ, ಭಗವತ್ ಪ್ರೀತಿಗೆ ಪಾತ್ರರಾಗುವಂತೆ ಉಪದೇಶ ಕೊಡುತ್ತಿದ್ದ. ಮೊದಮೊದಲು ಇವನ ಮಾತಿನಿಂದ ಅವರಿಬ್ಬರಿಗೂ ಮುಜುಗರವಾದರೂ, ನನ್ನ ಮುಖನೋಡಿ ಸುಮ್ಮನಿರುತ್ತಿದ್ದರು. ಸ್ವಲ್ಪ ಸಲಿಗೆ ಬೆಳೆದ ಮೇಲೆ ಅವನ ಮಾತನ್ನು ಅಷ್ಟೇನು ಗಂಭೀರವಾಗಿ ತೆಗೆದುಕೊಳ್ಳದೇ ತಮಾಷೆ ಮಾಡಿ ತೇಲಿಸಿ ಬಿಡುತ್ತಿದ್ದರು. ಒಂದು ಸಲ ಈರಣ್ಣನ ಉಪದೇಶವನ್ನು ತೇಲಿಸುವ ಭರದಲ್ಲಿ ವಿನಾಯಕ ವೇದಕಾಲದಲ್ಲಿ ಋಷಿಮುನಿಗಳು ಮಾಂಸ-ಮದ್ಯವನ್ನು ತಾವೂ ಸೇವಿಸುತ್ತಿದ್ದರು, ದೇವರಿಗೂ ನೇವಿದ್ಯ ಮಾಡುತ್ತಿದ್ದರು ಎಂಬ ಬಾಂಬು ಸಿಡಿಸಿದ. ಅದರಿಂದ ಈರಣ್ಣನಷ್ಟೇ ಅಲ್ಲ, ನಾನೂ ಮತ್ತು ನಿರ್ಮಲಕುಮಾರ ಕೂಡ ತತ್ತರಿಸಿದೆವು. ಬೌದ್ಧ - ಜೈನ ಧರ್ಮದ ಪ್ರಭಾವ ಹೆಚ್ಚಾದ ಮೇಲೆನೇ ಮಾಂಸ-ಮದ್ಯಗಳು ವರ್ಜವಾದವು ಎಂದು ಮುಂದುವರಿಸಿದ. ವಿನಾಯಕ ಓದಿದ ಯಾವ ಪುಸ್ತಕದಲ್ಲಿ ಯಾವ ವಿದ್ವಾಂಸ ಈ ವಾದವನ್ನು ಮಂಡಿಸಿದ್ದನೋ? ಅದು ಅವನ ಮಿದುಳಿನ ಯಾವ ಮೂಲೆಯಲ್ಲಿ ಹೋಗಿ ಕುಳಿತಿತ್ತೋ? ಮದ್ಯ ಅದನ್ನು ಹುಡುಕಿ, ಅವನ ಬಾಯಿಯಿಂದ ಹೊರಡಿಸಿತ್ತು.   ನಾವಿನ್ನೂ ಬಾಂಬು ದಾಳಿಯಿಂದ ಸುಧಾರಿಸಿಕೊಳ್ಳುವ ಮುನ್ನವೇ ಈರಣ್ಣ, ಬಹುತೇಕ ಬಂಗಾಳಿಗಳು ಮೀನು ತಿನ್ನುತ್ತಾರೆ, ನಿಮ್ಮ ಆರಾಧ್ಯ ದೈವ ವಿವೇಕಾನಂದರೂ ಕೂಡ ಮತ್ಸ್ಯಾಹಾರಿ ಇದ್ದಿರಬಹುದು. ಅವರ ಜೀವನ ಚರಿತ್ರೆಯಲ್ಲಿ ಏನು ಹೇಳಿದೆ ? ಎಂದು ಇನ್ನೊಂದು ಬಾಂಬು ಹಾಕಿದ. ಈರಣ್ಣ ಈ ಔಟ್ ಆಫ್ ಸಿಲೇಬಸ್ ಪ್ರಶ್ನೆಗೆ ಉತ್ತರ ಕೊಡದೆ ಸುಮ್ಮನಾಗಿ, ನಂತರ ವಿಷಯವಾಗಿ ಮಾತನಾಡುವುದನ್ನು ನಿಲ್ಲಿಸಿದ.

ಈರಣ್ಣನ ಇನ್ನೊಂದು ಅಭ್ಯಾಸ ನನಗೆ ಬಹಳ ಕಿರಿಕಿರಿಯುಂಟು ಮಾಡುತ್ತಿತ್ತು. ಯಾವುದೋ ಚರ್ಚೆಯಲ್ಲಿ ತನ್ನ ವಾದವನ್ನು ಮಂಡಿಸಿ ಈರಣ್ಣ, ಬೇಕಂದರ ಗದುಗಿನ ಅಜ್ಜಾರನ್ನ ಕೇಳೋಣ ಎಂಬ ಬಾಲಂಗೂಚಿ-ಯನ್ನು ಸೇರಿಸುತ್ತಿದ್ದ. ನನ್ನನ್ನೂ ಸೇರಿಸಿದಂತೆ, ನಮ್ಮ ಭಾಗದ ಬಹು ಜನರಿಗೆ ಗದುಗಿನ ಜಗದ್ಗುರುಗಳ ಬಗ್ಗೆ  ಬಹಳ ಭಯ-ಭಕ್ತಿ. ಈರಣ್ಣನಿಗೂ ಕೂಡ ಗದುಗಿನ ಅಜ್ಜಾವರ ಬಗ್ಗೆ ಬಹು ಗೌರವ ಭಾವ. ಆದ್ದರಿಂದಲೇ ಅವರನ್ನು ತಾನು ಹೇಳುವ ಸತ್ಯದ ಧೃಡೀಕರಣಕ್ಕೆ ಅವರನ್ನು ಮಾತಿನಲ್ಲಿ ಎಳೆದು ತರುವುದು ಅವನ ಗೀಳು. ಆದರೆ 'ತೀರ್ಥ' ಸಮಾರಾಧನೆಯ ವೇಳೆಯ 'ಕನ್ನಡ ಚಿತ್ರರಂಗದಲ್ಲಿ ಯಾರು ಬೆಷ್ಟು ? ರಕ್ಷಿತಾನೋ, ರಮ್ಯಾನೋ ಅಥವಾ ರಾಧಿಕಾನೋ?' ಎಂಬ ಚರ್ಚೆಗೆ ಈರಣ್ಣ  ರಾಧಿಕಾ ಎಲ್ಲಾರಿಗಿಂತ ಬೆಷ್ಟು, ಬೇಕಂದರ ಗದುಗಿನ ಅಜ್ಜಾರನ್ನ ಕೇಳೋಣ ಎಂದರೆ ಹ್ಯಾಗನಿಸುತ್ತೆ? ವಿಭೂತಿ ಪುರುಷರಾದ ಅಜ್ಜಾವರು ನಾವು ಕುಳಿತ ಮೂರನೆ ದರ್ಜೆ ಬಾರಿಗೆ ಬಂದು ಕನ್ನಡ ಚಿತ್ರರಂಗದಲ್ಲಿ ರಾಧಿಕಾನೇ ಎಲ್ಲಾರಿಗಿಂತ ಬೆಷ್ಟು, ಇದಕೆ ಸಂಶಯ ಬೇಡ. ಕೂಡಲಸಂಗಮ ದೇವನ ಮೇಲಾಣೆ, ಇದು ಸತ್ಯ ಎಂದು ಹೇಳುವುದನ್ನು ಕಲ್ಪಿಸಿಕೊಳ್ಳಿ, ನಿಮಗೂ ಕಿರಿಕಿರಿಯಾಗುತ್ತದೆ.

ಈರಣ್ಣನ ಗಂಟೆಗಟ್ಟಲೇ ಧ್ಯಾನ ಮಾಡುವ ಅಭ್ಯಾಸ ಕೂಡ ಒಮ್ಮೆ ನಮಗೆ ಫಜೀತಿ ತಂದಿಟ್ಟಿತ್ತು. ಆವಾಗಲಿನ್ನೂ ಈರಣ್ಣ ನಮ್ಮದೇ ರೂಮಿನಲ್ಲಿದ್ದ, ತನ್ನ ರೂಂ ಮಾಡಿಕೊಂಡು ಹೋಗಿರಲಿಲ್ಲ. ಅವತ್ತು ಅವನಿಗೆ ರಾತ್ರಿ ಪಾಳಿ ಇದ್ದುದರಿಂದ ಮನೆಯಲ್ಲಿ ಅವನನ್ನು ಬಿಟ್ಟು ನಾವೆಲ್ಲಾ ಆಫೀಸಿಗೆ ಹೋಗಿದ್ದೆವು. ಸಾಯಂಕಾಲ ಮನೆಗೆ ಬಂದು ನಾವು ರೂಂಮೇಟುಗಳು, ಬಾಗಿಲು ಬಡಿದರೆ ಒಳಗಿನಿಂದ ಯಾವುದೇ ಉತ್ತರವಿಲ್ಲ. ಕಾಲಿಂಗ್ ಬೆಲ್ಲು ಬಾರಿಸಿದರೂ, ಏನೂ ಪ್ರಯೋಜನವಾಗಲಿಲ್ಲ. ದೊಡ್ಡ ದನಿಯಲ್ಲಿ ಈರಣ್ಣನ ನಾಮಸ್ಮರಣೆ ಮಾಡಿದುದರಿಂದನೂ ಯಾವುದೇ ಉಪಯೋಗವಾಗಲಿಲ್ಲ. ನಮ್ಮ ಗದ್ದಲಕ್ಕೆ ಜನ ಸೇರಿದರು. ವಿಷಯ ತಿಳಿದುಕೊಂಡು ಕೆಲವರು 'ಒಳಗಿನ ಆಸಾಮಿ ಗೊಟಕ್ಕಂದಿರಬೇಕು, ಅದ್ಕೆ ಬಾಗಲು ತೆಗೀತಾ ಇಲ್ಲ, ಬಾಗಿಲು ಮುರಿಸಿಬಿಡಿ' ಎಂಬ ಸಲಹೆಕೊಟ್ಟರು. ಅದರಂತೆ ನಾವು ಒಂದು ನಾಲ್ಕು ಜನ ಬಾಗಿಲು ಮುರಿಯುವ ಪ್ರಯತ್ನದಲ್ಲಿ ಕಲ್ಲಿನಿಂದ ಬಾಗಿಲಿಗೆ ಏಟು ಹಾಕಿದೊಡನೆ ಒಳಗಿನಿಂದ ಯಾರು? ಎಂಬ ದನಿಯೂ, ಅದರ ಹಿಂದೆಯೇ ಈರಣ್ಣನ ಆಕೃತಿಯೂ ಬಂದು ಬಾಗಿಲು ತೆಗೆಯಿತು. ಧ್ಯಾನ ಪ್ರ್ಯಾಕ್ಟೀಸು ಮಾಡುತ್ತಿದ್ದೆ, ಅದಕ್ಕ ಬಾಗ್ಲು ತಗಿಯುದು ಸ್ವಲುಪ ತಡಾ ಆತು ಎಂದು ಸ್ವಾಮಿ ವಿವೇಕಾನಂದರಂತೆ ಕೈಕಟ್ಟಿಕೊಂಡು ಪೋಸು ಕೊಟ್ಟ.


ಇಂತಹ ಅಭಿನವ ವಿವೇಕಾನಂದ ಕೆಲ ವಾರಗಳವರೆಗೆ ನಮ್ಮ ರೂಮಿನ ಕಡೆಗೆ ಹಾಯದೇ, ಒಂದು ದಿನ ಫೋನು ಮಾಡಿ 'ಇವತ್ತು ಮಧ್ಯಾಹ್ನ ಹನ್ನೆರಡಕ್ಕೆ ನನ್ನ ಮದುವೆ. ಮೆಯೋಹಾಲ್ ಹತ್ತಿರದಲ್ಲಿರುವ ಸಬ್-ರಜಿಸ್ಟರ್ ಆಫೀಸಿಗೆ ಬಂದು ಬಿಡಿ' ಎಂದು ಆಮಂತ್ರಣಕೊಟ್ಟಾಗ ನಮಗೋ ಭಾರೀ ಆಶ್ಚರ್ಯ. ಇಂತಹ ಅಭಿನವ ವಿವೇಕಾನಂದರನ್ನು ಭವದ ಬಲೆಗೆ ಬೀಳಿಸಿದ ಸುಂದರಿ ಹೇಗಿರಬಹುದು ಎಂಬ ಕುತೂಹಲ. ನಾವು ಮೂರು ಜನ ಆಫೀಸಿಗೆ ಅರ್ಧ ದಿನ ರಜೆ ಹಾಕಿ ಮದುವೆಗೆ - ಅಂದರೆ ಮದುವೆಯ ರಜಿಸ್ಟ್ರೇಷನ್‌ಗೆ- ಹೋದೆವು. ಈರಣ್ಣನ ಮನಗೆದ್ದ ಹುಡುಗಿ ಸಾಧಾರಣ ರೂಪಿನ, ಪೀಚು ದೇಹದ, ವಯಸ್ಸು ಹದಿನೆಂಟರ ಆಚೆ ಬದಿಗೋ ಅಥವಾ ಈಚೆ ಬದಿಗೋ ಎಂದು ನಿರ್ದಿಷ್ಟವಾಗಿ ಹೇಳಲಾರದಷ್ಟಿದ್ದಳು. ಈರಣ್ಣನ ಕಂಪನಿಯಲ್ಲಿಯೇ ಕೆಲಸ ಮಾಡುತ್ತಿದ್ದಳಂತೆ. ಅಲ್ಲಿಯೇ ಇಬ್ಬರ ಮನುಸ್ಸು ಕೂಡಿತಂತೆ. ಹುಡುಗಿಯ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲವಂತೆ. ನಾವು ಮೂರು ಜನ ಅಲ್ಲದೇ, ಅವರ ಫ್ಯಾಕ್ಟರಿಯ ನಾಲ್ಕು ಜನನೂ ಬಂದಿದ್ದರು. ಮದುವೆಯ ನಂತರ ಎಲ್ಲರನ್ನೂ ಕಾಮತ ಹೋಟಲ್ಲಿಗೆ ಕರೆದುಕೊಂಡು ಹೋಗಿ ಈರಣ್ಣ ಭರ್ಜರಿಯಾಗಿ ಊಟಕ್ಕೆ ಹಾಕಿಸಿದ. ಊಟದ ನಂತರ ನಾವು ಮೂರು ಜನರನ್ನು ಪಕ್ಕಕ್ಕೆ ಕರೆದ ಈರಣ್ಣ ಮೆಲು ದನಿಯಲ್ಲಿ ಆಕಿ ಮನ್ಯಾಗ ಸ್ವಲುಪ ಪ್ರಾಬ್ಲಮ್ ಐತಿ. ಅದಕ್ಕ ಒಂದಿಷ್ಟು ದಿನ ನಿಮ್ಮ ರೂಮಿನ್ಯಾಗ ಇರತೇವಿ ಎಂದು ಬೇಡಿಕೊಂಡ. ಪ್ರೇಮಿಗಳಿಗೆ ಸಹಾಯ ಮಾಡಿದರೆ ಹತ್ತು ಜನ್ಮಕ್ಕಾಗುವಷ್ಟು ಪುಣ್ಯಬರುತ್ತದೆ ಎಂದು ನಂಬಿರುವ ನಾವು ಅದಕ್ಕೆ ಒಪ್ಪಿದೆವು. ಈರಣ್ಣ ದಂಪತಿಗಳಿಗೆ ಮನೆಯ ಒಂದು ಕೀಲಿಕೈಯನ್ನು ಕೊಟ್ಟು ನಮ್ಮ ಮನೆಯನ್ನು ನಿಮ್ಮದೇ ಮನೆ ಎಂದು ತಿಳಿದುಕೊಳ್ಳಿ ಎಂದು ಹೇಳಿ ನಾವು ಆಫೀಸಿಗೆ ಹೋಗಲು ಒಂದು ರಿಕ್ಷಾ ಏರಿದೆವು.


ಟೀವಿಯಲ್ಲಿ ಕ್ರೈಮ್ ಡೈರಿ ಕಾರ್ಯಕ್ರಮ ಬರುತ್ತಾ ಇತ್ತು. ಅದರಲ್ಲಿ ನಮ್ಮ ಈರಣ್ಣನದೇ ಎಪಿಸೋಡು. ರವಿ ಬೆಳೆಗೆರೆ ತಮ್ಮ ಕೀರಲು ದನಿಯಲ್ಲಿ ಚೀರಿ ಚೀರಿ ಹೇಳ್ತಾ ಇದಾರೆ ಆಲ್‌ರೈಟ್, ಆಲ್‌ರೈಟ್ ಪ್ರೀತಿ ಮಾಡು ತಪ್ಪೇನಿಲ್ಲ ಎಂದು ನಮ್ಮ ಪ್ರೇಮಲೋಕದ ರವಿಚಂದ್ರನ್ ಅವರೇ ಹೇಳಿದಾರೆ. ಅದರಲ್ಲೇನು ತಪ್ಪಿಲ್ಲ. ಆದರೆ ಮದುವೆಯಾಗ ಬೇಕು ಅಂದರೆ ಕಾನೂನಿನ ಪ್ರಕಾರ ಪ್ರಾಪ್ತವಯಸ್ಕರಾಗಿರ ಬೇಕಲ್ಲಾ ? ಇಲ್ಲೊಬ್ಬ ಖದೀಮ ಇದಾನೆ ನೋಡಿ ಈರಣ್ಣ, ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಓಡಿಸಿಕೊಂಡು ಹೋಗಿ ಮದುವೆಯಾಗಿದಾನೆ ಎನ್ನುತ್ತಿರುವಾಗ ಈರಣ್ಣನ ಫೋಟೋ ಗಿರಗಿರನೇ ತಿರುಗುತ್ತಾ ಪರದೆಯ ಮೇಲೆ ಬಂತು. ಪಾಪ ನೌಕರಿಗೆ ಸೇರುವಾಗ ತೆಗೆಸಿದ್ದಾ ಅನಿಸುತ್ತೆ. ಟೈ ಕಟ್ಟಿಕೊಂಡು, ಸ್ಟೈಲಾಗಿ ತಲೆಬಾಚಿಕೊಂಡು ಸ್ಮಲ್ ಕೊಡ್ತಾ ಇದ್ದ. ಬೆಳೆಗೆರೆ ಮುಂದುವರಿಸಿ ಈರಣ್ಣನ ಬಗ್ಗೆ ಜನ ಒಳ್ಳೆಯ ಮಾತನ್ನೇ ಹೇಳುತ್ತಾರೆ. ಬೆಳ್ಳಗಿರೋದು ಎಲ್ಲಾ ಹಾಲೇ ಅಲ್ಲ ನೋಡಿ. ಈರಣ್ಣ ಈ ಮುಗ್ಧ ಅಪ್ರಾಪ್ತ ಬಾಲಕಿಯನ್ನು ಓಡಿಸಿ ಕೊಂಡು ಹೋದುದರಲ್ಲಿ ಯಾವುದಾದರೂ ದುರುದ್ದೇಶವಿದೆಯೇ ? ಈರಣ್ಣನ ಮಾಸ್ಟರ್ ಪ್ಲಾನಿನಲ್ಲಿ ಇವನ ಮದುವೆಗೆ ಸಾಕ್ಷಿಯಾದ ಆ ಮೂರು ಜನರ ಕೈವಾಡವಿದೆಯೆ? ಎಂದು ಹೇಳುತ್ತಿರುವಾಗ ಇನ್ನೇನು ನಾವು ಮೂರು ಜನರ ಫೋಟೋಗಳು ಗಿರಗಿರನೆ ತಿರುಗುತ್ತಾ ಬರುತ್ತವೆ ಎಂದುಕೊಂಡೆ. ಬೆಳೆಗೆರೆ ಮುಂದುವರಿಸಿ ಅನ್ನೋದನ್ನ ಒಂದು ಚಿಕ್ಕ ಬ್ರೇಕ್‌ನ ನಂತರ ಹೇಳ್ತಿನಿ, ಪ್ಲೀಸ್ ಡೋಂಟ್ ಗೋ ಅವೇ ಎಂದು ಹೇಳಿ ತಾವು ಗೋ ಅವೇ ಆದರು. ಅಷ್ಟರಲ್ಲಿ ಸ್ಪೀಡ್ ಬ್ರೆಕರ್ ಮೇಲೆ  ನಮ್ಮ ರಿಕ್ಷಾ ಜಿಗಿದು ಹಾರಿತು, ನನ್ನ ನಿದ್ದೆಯೂ ಹಾರಿತು. ಕಾಮತ ಹೋಟೆಲಿನ ಊಟದಿಂದಾಗಿ ನನಗೆ ನಿದ್ದೆ ಹತ್ತಿದ್ದು,  ಕ್ರೈಮ್ ಡೈರಿಯಲ್ಲಿ ನಮ್ಮ ಈರಣ್ಣನ ಎಪಿಸೋಡು ಬಂದದ್ದು ನನ್ನ ಕನಸು ಎಂದು ತಿಳಿದು ನಿರಾಳವಾದೆ.  ಏನೇ ಆದರೂ ಈರಣ್ಣನನ್ನು ಅವನ ಹೆಂಡತಿಗೆ ಹದಿನೆಂಟು ವಯಸ್ಸಾಗಿದೆಯೋ ಇಲ್ಲವೋ ಕೇಳಿಯೇ ಬಿಡಬೇಕೆಂದು ನಿರ್ಧರಿಸಿದೆ. ಪಕ್ಕದಲ್ಲಿ ಕುಳಿತ ನಿರ್ಮಲ್ ಕುಮಾರ ವಿನಾಯಕನಿಗೆ ಡೌಟು ಕೇಳ್ತಾ ಇದ್ದ ಈರಣ್ಣದಲ್ಲಿ 'ಅಣ್ಣ' ಅನ್ನುವ ಬ್ರದರ್ಲೀ ಸ್ಯಾಲುಟೇಷನ್ ಇದೆ ಅಲ್ವಾ ? ಅವನ ಹೆಂಡತಿ ಅವನಿಗೆ ಹಾಗಂತ ಕರೆಯಬಹುದಾ? ಅದಕ್ಕೆ ವಿನಾಯಕ ನನಗೊಬ್ಬ ಗುಜರಾತಿ ದಂಪತಿ ಗೊತ್ತಿದ್ದಾರೆ. ಅವರ ಹೆಸರು ಕೇಷುಭಾಯಿ-ಮಾಯಾಬೆನ್. ಅವರಿಗೆ ಹನ್ನೆರಡುವರೆ ಜನ ಮಕ್ಕಳು. ಹನ್ನೆರಡು ಹುಟ್ಟಿವೆ, ಇನ್ನೊಂದು ಇನ್ನೂ ಹೊಟ್ಟೆಯಲ್ಲಿದೆ. ನೀನು ಹೇಳಿದ ಹಾಗೆ ಬ್ರದರ್ಲೀ ಸ್ಯಾಲುಟೇಷನ್, ಸಿಸ್ಟರ್ಲೀ ಸ್ಯಾಲುಟೇಷನ್ ಅಂತ ವಿಚಾರ ಮಾಡ್ತಾ ಕೂತಿದ್ರೆ, ಅಷ್ಟು ಸಾಧನೆ ಮಾಡ್ಲಿಕ್ಕೆ ಆಗುತ್ತಿತ್ತಾ ? ಬೈ ದಿ ಬೈ, ನನ್ನ ಆಫೀಸು ಬಂತು, ಸಾಯಂಕಾಲ ಸಿಗೋಣ ಎಂದು ಇಳಿದು ಹೋದ.



ಸಾಯಂಕಾಲ ಮನೆಗೆ ಬಂದು ನಾವು ರೂಂಮೇಟುಗಳು, ಬಾಗಿಲು ಬಡಿದರೆ ಒಳಗಿನಿಂದ ಯಾವುದೇ ಉತ್ತರವಿಲ್ಲ. ಕಾಲಿಂಗ್ ಬೆಲ್ಲು ಬಾರಿಸಿದರೂ, ಏನು ಪ್ರಯೋಜನವಾಗಲಿಲ್ಲ. ದೊಡ್ಡ ದನಿಯಲ್ಲಿ ಈರಣ್ಣನ ನಾಮಸ್ಮರಣೆ ಮಾಡಿದುದರಿಂದನೂ ಯಾವುದೇ ಉಪಯೋಗವಾಗಲಿಲ್ಲ. ಆದರೂ ನಾವು ಈ ಸಲ ಗದ್ದಲ ಮಾಡಿ ಜನ ಸೇರಿಸಲಿಲ್ಲ. ಈರಣ್ಣನೂ, ಅವನ ಹೊಸ ಹೆಂಡತಿಯೂ ಸೇರಿ ಧ್ಯಾನ ಪ್ರ್ಯಾಕ್ಟೀಸು ಮಾಡ್ತಿರ ಬೇಕು ಎಂದುಕೊಂಡು ಸಮಾಧಾನದಿಂದ ಕಾಯತೊಡಗಿದೆವು.

No comments: