Tuesday, July 14, 2015

ನದಿಯ ನೆನಪಿನ ಹಂಗು



ಮಲ್ಲನಗೌಡನ ಸೊಸಿ ಮಲ್ಲವ್ವನ  ಬಲಿದಾನದಿಂದ  ಹರಿದಿದ್ದೇ ಈ ನದಿ  ಎಂಬುದು ಕತೆ. ಅದಕ್ಕಾಗಿಯೇ ಇವಳಿಗೆ ಮಲ್ಲವ್ವನ ಹೊಳಿ ಎನ್ನುವುದು ರೂಢಿ.  ತಾನು ಹರಿದಲ್ಲಿ ಕೊಳೆ ತೊಳೆದು ಹಸನುಮಾಡುತ್ತಾಳೆ ಎನ್ನುವ ಕಾರಣಕ್ಕೆ ಇವಳಿಗೆಮಲಾಪಹಾರಿ ಎಂದೂ ಹೆಸರು.  ದೂರದ ನವಿಲು ಕೊಳ್ಳದ ಹತ್ತಿರ ಇವಳು ಬೆಟ್ಟವನ್ನು ಬಳಸಿ ಹರಿಯುತ್ತಿರುವುದನ್ನು ನವಿಲೊಂದು ನೋಡಿ “ಬೆಟ್ಟಕಂಜಿ ಬೆಳವಲಾ ಸೇರತಾಳ ಮಲ್ಲಿಎಂದು ನಕ್ಕಿತ್ತಂತೆ. ಅದರಿಂದ ಸಿಟ್ಟಿಗೆದ್ದಿದ್ದ ಇವಳು ಸರಕ್ಕನೇ ಆ ನವಿಲನ್ನು ಕೊಚ್ಚಿಹಾಕಿ ಬೆಟ್ಟವನ್ನು ಸೀಳಿ ಧುಮ್ಮಿಕ್ಕಿ  ಹರಿಯತೊಡಗಿದಳಂತೆ. ಹೀಗಾಗಿ ನವಿಲುಕೊಳ್ಳದ ಹತ್ತಿರ ಇವಳನ್ನು ಇನ್ನೂ “ಒಡಕಲು  ಹೊಳಿ” ಎಂದೇ ಕರೆಯುತ್ತಾರೆ. ಅಧಿಕೃತವಾಗಿ ಮಲಪ್ರಭ ಎಂಬ ಹೆಸರಿನಿಂದ ಕರೆಯಲ್ಪಡುವ ಇವಳು ಹರಿದು ಹಸನುಗೊಳಿಸಿದ ಊರುಗಳಲ್ಲಿ ನನ್ನೂರು ಕೂಡ ಒಂದು.
ಎಲ್ಲವನ್ನೂ ಕೊಚ್ಚಿ ಹರಿದು ಹೋಗುವುದೇ ನದಿಯ ಸಹಜ ಗುಣವಾದರೂ ನನ್ನ ಬಾಲ್ಯದ ಹಲವಾರು ನೆನಪುಗಳಲ್ಲಿ ನಿಶ್ಚಲವಾಗಿ, ನಿಚ್ಚಳವಾಗಿ ಮಲಪ್ರಭೆ ನಿಂತು ಬಿಟ್ಟಿದ್ದಾಳೆ. ನನ್ನ ಬಾಲ್ಯದ ಆರೆಂಟು ವರುಷ ಪ್ರತಿದಿನ ಬೆಳಿಗ್ಗೆ - ಮಳೆಯೇ ಬರಲಿ- ಚಳಿಯೇ ಇರಲಿ- ನನ್ನ ತಂದೆ ನದಿಗೆ ಸ್ನಾನಕ್ಕೆ ಕರೆದುಕೊಂಡು ಹೋಗುತ್ತಿದ್ದರಿಂದ ಆ ವರುಷಗಳ ಹಲವಾರು ಘಟನೆಗಳ ನೆನಪಿನ ಬ್ಯಾಕ್ ಗ್ರೌಂಡಿನಲ್ಲಿ ಮಲಪ್ರಭೆ ಭದ್ರವಾಗಿದ್ದಾಳೆ. ಅದಕ್ಕಾಗಿಯೇ ಊರು ಬಿಟ್ಟು ಬೆಂಗಳೂರು ಸೇರಿರುವ ನಾನು ನನ್ನ ಮನೆಗೆ ಇಟ್ಟ ಹೆಸರು – “ಮಲಪ್ರಭಾ”!
***************************************************  
ನಾನು ಈ ಮೊದಲೇ ಹೇಳಿದಂತೆ ನನ್ನ ತಂದೆಯದು 24x7 ಮಾಸ್ತರಿಕೆ. ಅಪ್ಪನ ವಿದ್ಯಾರ್ಥಿ ಗಣ ಹೆಚ್ಚು ಕಡಿಮೆ ನಮ್ಮ ಮನೆಯಲ್ಲಿಯೇ ಇರುತ್ತಿತ್ತು. ರಾತ್ರಿ ಪಾಠ ಹೇಳಿಸಿಕೊಂಡು ನಮ್ಮ ಮನೆಯಲ್ಲಿಯೇ ಮಲಗಿರುತ್ತಿದ್ದ ‌ಅವರನ್ನು ನಸುಕಿನಲ್ಲಿ ಎಬ್ಬಿಸಿ, ಒಂದು ಗಂಟೆ ಓದು ಬರಹ ಮಾಡಿಸಿ, ಅಪ್ಪ ನದಿಗೆ ಸ್ನಾನಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅವರ ಜೊತೆಗೆ ನಾನೂ, ನನ್ನ ಅಣ್ಣನೂ ನದಿಗೆ ಹೋಗುತ್ತಿದ್ದೆವು. ನದಿ ಊರಿಂದ ಸುಮಾರು ಒಂದು ಕಿಲೋಮೀಟರು ದೂರದಲ್ಲಿತ್ತು. ಆ ಒಂದು ಕಿಲೋಮೀಟರು ದೂರವನ್ನು ನಾವು ಕೆಂಪನೇ ಸೂರ್ಯ ಗೋವಿನಜೋಳದ ತೆನೆಗಳ ನಡುವಿಂದ ಹಣಿಕಿ ಹಾಕುವುದನ್ನು ನೋಡುತ್ತಾ, ಪಠ್ಯಪುಸ್ತಕಗಳಲ್ಲಿ ಬಾಯಿಪಾಠ ಮಾಡಬೇಕಾಗಿದ್ದ ಕನ್ನಡ ಪದ್ಯಗಳನ್ನು ಜೋರಾಗಿ ಹಾಡುತ್ತಲೋ, ಅಥವಾ ಅಪ್ಪ ಕೇಳುತ್ತಿದ್ದ ವ್ಯಾಕರಣದ ಸಂಧಿ-ಸಮಾಸ, ಗಣೀತದ ಫಾರ್ಮುಲಾ ಅಥವಾ ವಿಜ್ಞಾನದ ಪ್ರಶ್ನೆಗಳಿಗೋ ಉತ್ತರ ಹೇಳುತ್ತಾ ಕ್ರಮಿಸುತ್ತಿದ್ದೆವು. ಹೀಗೆ ಒಮ್ಮೆ ಅಪ್ಪ ಕೇಳಿದ ಎ ಪ್ಲಸ್ ಬಿ ಹೋಲ್ ಸ್ಕ್ವೇರ್ ಅಂದರೆಎಂಬ ಪ್ರಶ್ನೆಗೆ  ಉತ್ತರ ಹೇಳಬೇಕಾಗಿದ್ದ ದೊಡ್ಡ ತರಗತಿಯ ವಿದ್ಯಾರ್ಥಿ ಮುದುವೀರನೋ, ನಾಗಲಿಂಗನೋ ಉತ್ತರ ಹೇಳಲು ಆತ್ಮವಿಶ್ವಾಸ ಸಾಲದೇ ಸಣ್ಣದನಿಯಲ್ಲಿ ತನ್ನಷ್ಟಕ್ಕೆ ತಾನೆ ಹೇಳಿಕೊಂಡದ್ದು ಕೇಳಿಕೊಂಡು ನಾನು ಜೋರಾಗಿ ಹೇಳಿ ಅಪ್ಪನ ಶಭಾಷಗಿರಿ ಪಡೆದದ್ದು ನೆನಪಿದೆ. ಬಹುತೇಕವಾಗಿ ನಮ್ಮ ತಂದೆ ಹಿರಿಯ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪ್ರಶ್ನೆ ಕೇಳುತ್ತಿದ್ದರಾದರೂ, ಒಮ್ಮೊಮ್ಮೆ ನನ್ನ ಟೈಮು ಸರಿಯಿರದ ದಿನ “ನೀ ಹದಿನೇಳರ ಮಗ್ಗಿ ಅನ್ನಲೇ” ಎಂದು ನನಗೆ ಗಾಳ ಹಾಕುತ್ತಿದ್ದ. ಅಕಸ್ಮಾತ್ ನಾನೇನಾದರೂ ಮಗ್ಗಿ ತಪ್ಪಿದರೆ, ಅವತ್ತು ನದೀ ಸೇರುವವರೆಗೆ ಅಪ್ಪ “ದೊಡ್ಡ ದೊಡ್ಡ ಮಾತಾಡತಾನ, ಮಗ್ಗಿ ಅನ್ನಾಕ ಬರೂದುಲ್ಲ” ಎಂದು ನನಗೆ ಚಿಟುಕು ಮುಳ್ಳಾಡಿಸುತ್ತಿದ್ದ.   

ಅಪರಿಚಿತರ್ಯಾರೋ ದೂರದಿಂದ ನೋಡಿ ಪಂಡರಪುರಕ್ಕೆ ಹೊರಟ ದಿಂಡಿ ಎಂದುಕೊಳ್ಳ ಬಹುದಾಗಿದ್ದ ನಮ್ಮ ಗುಂಪು, ನದಿ ದಂಡೆ ಮುಟ್ಟಿದ ಮೇಲೆ ನಮ್ಮ ಚಟುವಟಿಕೆಗಳು ಇನ್ನಷ್ಟು ಗರಿಗೆದರುತ್ತಿದ್ದವು. ನಿತ್ಯಕಾರ್ಯಗಳನ್ನು ಮುಗಿಸಿದ ದೊಡ್ಡವರು ಸೂರ್ಯ ನಮಸ್ಕಾರ,  ವ್ಯಾಯಾಮ ಮಾಡುತ್ತಿದ್ದರೆ, ನಾನು ಹೊಳೆಯ ಉಸುಕಿನಲ್ಲಿ  ಶಂಖ, ಕಪ್ಪೆಚಿಪ್ಪು , ಬೆನಕನ ಕಲ್ಲು ಇತ್ಯಾದಿಗಳನ್ನು ಹುಡುಕಿ ಕಿಸೆ ತುಂಬಿಸಿಕೊಳ್ಳುತ್ತಿದ್ದೆ.  ಹೊಳೆ ಹತ್ತಿರದಲ್ಲಿಯೇ ಹಿಂದಿನ ರಾತ್ರಿ ಲಂಬಾಣಿಗಳು  ಕಾಸಿದ  ಕಳ್ಳಭಟ್ಟಿ ಸರಾಯಿ ಕುಡಿದ ಕುಡುಕರು ಖಾಲಿ ಸಿಗರೇಟು- ಕಡ್ಡಿ ಪೆಟ್ಟಿಗೆಗಳನ್ನು ಬೀಸಾಕಿ ಹೋಗಿರುತ್ತಿದ್ದರು. ಖಾಲಿ ಸಿಗರೇಟುಪ್ಯಾಕು, ಛಂದ ಛಂದದ ಚಿತ್ರಗಳಿದ್ದ ಕಡ್ಡಿಪೆಟ್ಟಿಗೆಗಳೆಂದರೆ ಆವಾಗ ನನ್ನ ಪಾಲಿಗೆ ವಜ್ರ-ವೈಢೂರ್ಯ!  ನಾನು ಅವುಗಳನ್ನು ಚಾಪಾ ಮಾಡಲೋ, ಅಥವಾ ಗಾಡಿ ಮಾಡಲು ಸಂಗ್ರಹಕ್ಕೆ ಸೇರಿಸಿಕೊಳ್ಳುತ್ತಿದ್ದೆ. ಒಂದೊಂದು ಸಲ ಈ ಕಲೆಕ್ಟ್ಮಾಡುವ ಕಲೆಕ್ಟರ್ಕೆಲಸ ಬೇಜಾರಾದರೆ, ನಾನು ಇಂಜನೀಯರ್ ಕೆಲಸಕ್ಕೆ ನಿಲ್ಲುತ್ತಿದ್ದೆ. ಚಿಕ್ಕವನಿದ್ದಾಗ ಪಾದದ ಮೇಲೆ ತೇವದ ಉಸುಕನ್ನು ತಟ್ಟಿ ಗುಬ್ಬಚ್ಚಿ ಗೂಡು ಕಟ್ಟುತ್ತಿದ್ದೆನಾದರೂ, ಒಂಚೂರು ದೊಡ್ಡವನಾದ ಮೇಲೆ ವಿಶ್ವೇಶ್ವರಯ್ಯನವರ ಆತ್ಮವೇ ಮೈಯಲ್ಲಿ ಹೊಕ್ಕಂತೆ ನಾನು ಉಸುಕಿನಲ್ಲಿ ಕಾಲುವೆ ಮಾಡಿ, ಕಾಲುವೆಗೊಂದು ಆಣೆಕಟ್ಟು ಕಟ್ಟಿ, ಕಾಲುವೆಗೆ ಅಲ್ಲಲ್ಲಿ ಸೇತುವೆ ಕಟ್ಟಿ ಆಟ ಆಡುತ್ತಿದ್ದೆ!   
ಉಸುಕಿನಲ್ಲಿ ಕಸರತ್ತು ಮುಗಿಸಿ,  ಒಂಚೂರು ಸೂರ್ಯ ಮೇಲೆ ಬಂದಾಗ ಹೊಳೆಗೆ ಇಳಿಯುತ್ತಿದ್ದೆವು. ಮೊದಲು ಈಜು ಕಲಿಯಲು ಸಿಂಗಡಿ ಕಾಯಿ ನಡಕ್ಕೆ ಕಟ್ಟುತ್ತಿದ್ದರಂತೆ. ನಾನು ಈಜು ಕಲಿಯುವ ಹೊತ್ತಿಗೆ ಆ ಕಾಲ ಹೊರಟು ಹೋಗಿತ್ತು. ಅದಾಗಲೇ ಪ್ಲಾಸ್ಟಿಕ್ ಕೊಡಗಳು ಉಪಯೋಗಕ್ಕೆ ಬಂದಿದ್ದವು. ನಾನು ಪ್ಲಾಸ್ಟಿಕ್ ಕೊಡದಲ್ಲಿ ನೀರು ಹೋಗದಂತೆ ಹಿಡಿದು ಕೊಂಡು, ಅದರ ಮೇಲೆ ಭಾರ ಹಾಕಿ ತೇಲುತ್ತಾ ಈಜು ಕಲಿತಿದ್ದು. ಈ ಈಜು ಕಲಿಯುವ ಸಮಯದಲ್ಲಿ ನದಿಯಲ್ಲಿ ಬಾಳೆಯ ದಿಂಡೊಂದು ತೇಲಿ ಬಂದರೆ ಅಂದು ನಮಗೊಂದು ಹಬ್ಬವಾಗುತ್ತಿತ್ತು. ಬಾಳೆ ದಿಂಡು ಹಿಡಿದುಕೊಂಡು ಈಜುವುದು ಬಹಳ ಸರಳ.
 ಹೊಳೆಯಲ್ಲಿ ನಾವು ಆಡುತ್ತಿದ್ದ ಆಟಗಳಿಗೆ ಲೆಕ್ಕವಿಲ್ಲ. ಚಪ್ಪಟೆಯಾದ ಕಲ್ಲನ್ನೋ,  ಹಂಚಿಬಿಲ್ಲಿಯನ್ನೋ ನದಿಯ ನೀರಿನ ಮೇಲ್ಮೆಗೆ ಸಮನಾಗಿ ಬೀಸಿ ಒಗೆದರೆ, ಅದು ನೀರಿನಲ್ಲಿ ಮುಳುಗುವ ಮೊದಲು ಐದಾರು ಸಲವಾದರೂ ಪುಟಿಯುತ್ತಿತ್ತು. ಯಾರು ಹೆಚ್ಚು ಸಲ ಪುಟಿಸುತ್ತಾರೆ ಎಂದು ನಮ್ಮ-ನಮ್ಮಲ್ಲಿಯೇ ಸ್ಪರ್ಧೆ ಇರುತ್ತಿತ್ತು. ಹಾಗೆಯೇ ಯಾರು ಹೆಚ್ಚು ಹೊತ್ತು ನೀರಿನಲ್ಲಿ ಉಸಿರು ಹಿಡಿದಿರುತ್ತಾರೆ ಎಂಬ ಸ್ಪರ್ಧೆ, ಅಥವಾ ಬಾಹುಬಲಿ- ಭರತರು ಆಡಿದ್ದ ಒಬ್ಬರಿಗೊಬ್ಬರು ನೀರುಗೊಜ್ಜುವ ಜಲಯುದ್ಧ ಇತ್ಯಾದಿ ಆಟಗಳಿರುತ್ತಿದ್ದವು. ಈ ಆಟಗಳ ನಡುವೆಯೇ ಯಾರೋ ನದಿಯ ಆಚೆ ಬದಿಗೆ ಹೋಗಿ, ಅಲ್ಲಿ ನದಿಯ ಮೇಲೆ ಬಾಗಿರುತ್ತಿದ್ದ  ಅತ್ತಿಯ ಮರವನ್ನೋ, ಹುಣಸೆ ಮರವನ್ನೋ ಅಥವಾ ನೀರಲ ಮರವನ್ನೋ  ಏರಿ ನಮಗೆ ಹಣ್ಣು ಸಪ್ಲಾಯ್ ಮಾಡುತ್ತಿದ್ದರು, ನಾವು ಸ್ನಾನದ ನಡುವೆಯೇ ಸಂತರ್ಪಣವನ್ನೂ ಸವಿಯುತ್ತಿದ್ದೆವು.      
ಸ್ನಾನ ಮುಗಿಸಿ ದಂಡೆಗೆ ಬರುವ ಹೊತ್ತಿಗೆ,  ಸಪ್ತರ್ಷಿಗಳು ಬಂದು ತಮ್ಮ ತಾಮ್ರ ಕೊಡಗಳನ್ನು ಹುಣಸಿಹಣ್ಣು ಹಚ್ಚಿ ಥಳಥಳಗೊಳಿಸುತ್ತಾ ಗೋಷ್ಟಿಯಲ್ಲಿ ತೊಡಗಿರುತ್ತಿದ್ದರು. ಅದಾಗಲೇ ಅರವತ್ತು ದಾಟಿದ್ದ  ಕರಕಿಕಟ್ಟಿ ಗಂಗಪ್ಪ, ಕಟಗೇರಿ ತಿರಕಪ್ಪ, ಸತ್ತಿಗೇರಿ ಶಂಕ್ರಪ್ಪ ಇತ್ಯಾದಿ ಏಳು ಜನ ಬಿಳಿತಲೆಯ ದಿಗ್ಗಜರೇ ಆ ಸಪ್ತರ್ಷಿಗಳು. ಅವರ ಗುಂಪಿಗೆ ನಮ್ಮ ತಂದೆಯೇ  ಸಪ್ತರ್ಷಿಗಳುಎಂದು ಹೆಸರು ಕೊಟ್ಟಿದ್ದ. ಥಳಥಳ ಹೊಳೆಯುವ ತಾಮ್ರದ ಕೊಡಗಳು ಅವರ ಗುಂಪಿನ ಹೆಗ್ಗುರುತಾಗಿದ್ದವು. ಸಪ್ತರ್ಷಿಗಳ  ಗೋಷ್ಟಿಗಳಲ್ಲಿ “ಒರತಿ ನೀರು ಬೇಷೋ, ಇಲ್ಲಾ ಹರಿಯುವ ನದಿ ನೀರು ಬೇಷೋ?, “ಪ್ಲಾಸ್ಟಿಕ್ ಕೊಡದಾಗಿನ ನೀರು ಕುಡಿದರೆ ಎನ್ ರೋಗ ಬರತಾವ್ ?” ಇತ್ಯಾದಿ ವಿಷಯಗಳ ದೀರ್ಘ ಚರ್ಚೆಗಳಾಗುತ್ತಿದ್ದವು.  ಆ ಚರ್ಚೆಯನ್ನು ಕೇಳುತ್ತ ನಾವು ನಮ್ಮ ಬಟ್ಟೆಗಳನ್ನು ತೊಳೆದುಕೊಂಡು ವಾಪಸು ಮನೆಯ ದಾರಿ ಹಿಡಿಯುತ್ತಿದ್ದೆವು. ಅದಾಗಲೆ ಚುರುಗುಟ್ಟ ತೊಡಗಿರುತ್ತಿದ್ದ  ಬಿಸಿಲಿಂದ ರಕ್ಷಣೆ ಪಡೆಯಲು ನಾವು ನಮ್ಮ ಚಡ್ಡಿಗಳನ್ನು ತಲೆಗೆ ಹೆಲ್ಮೆಟ್ಟಿನಂತೆ ಹಾಕಿಕೊಂಡು, ಚುರುಗುಟ್ಟುತ್ತಿದ್ದ ಹೊಟ್ಟೆಯ ನಿರ್ದೇಶನದಂತೆ  ಮನೆಗೆ ಎಕ್ಸ್ ಪ್ರೆಸ್ಸ್ ಗಾಡಿ ಬಿಡುತ್ತಿದ್ದೆವು.
ಅದು ನನ್ನ ಬಾಲ್ಯದ ಫ್ಲ್ಯಾಷ್ ಬ್ಯಾಕ್.  ನನ್ನ ಮಗನಿಗೆ ನಾನು ಫ್ಲ್ಯಾಶ್ ಬ್ಯಾಕಿನಿಂದ ಆಗಾಗ ಬಾಲ್ಯದ ಘಟನೆಗಳನ್ನು ನೆನೆಸಿಕೊಂಡು ಹೇಳಿಕೊಳ್ಳುವಾಗ, ಅವುಗಳಲ್ಲಿ ನಮ್ಮೂರ ಹೊಳಿ, ಹೊಳಿದಾರಿ, ಹೊಳಿದಂಡೆಯ ಮರಗಳ ರೆಫೆರೆನ್ಸ್ ಕೇಳಿ ಅವನಿಗೆ ನಮ್ಮೂರ ಹೊಳಿ ನೋಡ ಬೇಕೆಂದು ಹುಕಿ ಹೊಕ್ಕಿತು. ಊರಿಗೆ ಕರೆದುಕೊಂಡು ಹೋಗಲು ನನಗೆ ಗಂಟು ಬಿದ್ದ. ಊರಲ್ಲಿನ ಮನೆ ಮಾರಿ ಬೆಂಗಳೂರಿನಲ್ಲಿಯೇ ಝಂಡಾ ಊರಿ, ಕೆಲ ವರುಷಗಳಿಂದ ಊರಿಗೆ ಹೋಗಿರದ ನಾನು, ಅವನ ಕಾಟ ತಡೆಯಲಾರದೇ ಊರಿಗೆ ಕರೆದುಕೊಂಡು ಹೋದೆ. ಊರಲ್ಲಿ ಪರಿಚಿತರನ್ನು ಭೇಟಿ ಮಾಡಿದನಂತರ, ಊರಲ್ಲಿಯೇ ಇರುವ ಗೆಳೆಯನ ಹತ್ತಿರ ಹೊಳೆ ದಾರಿಯ ಬಗ್ಗೆ ವಿಚಾರಿಸಿದೆ. ಮೊದಲು ಚಕ್ಕಡಿಗಳು, ಟ್ರ್ಯಾಕ್ಟರುಗಳು ಮಳೆಗಾಲದಲ್ಲಿ ಓಡಾಡಿ ದಾರಿಯಲ್ಲಿ ದೊಡ್ಡ- ದೊಡ್ಡ ತಗ್ಗುಗಳಾಗಿರುತ್ತಿದ್ದವು, ಅವುಗಳ ನಡುವೆ ನನ್ನ ಕಾರು ಹೋದೀತೆ ಎನ್ನುವುದು ನನ್ನ ಅನುಮಾನವಾಗಿತ್ತು. ನನ್ನ ಗೆಳೆಯ “ಡಾಂಬರ್ ಹಾಕಿದ ಮ್ಯಾಗ ಹೊಳಿದಾರಿ ಭಾಳ ಬೆಷ್ಟ್ ಆಗೇತಿ. ಹೊಳಿಗಿ ಈಗ ಪೂಲ್ ಕಟ್ಟ್ಯಾರ, ಹಿಂಗಾಗಿ ನೀನು ಕಾರಿನ್ಯಾಗ ಆ ಕಡಿ ದಂಡಿಗೆ ಸೈತ ಹೋಗಿ ಬರಬಹುದು. ಹೊಳಿ ದಂಡಿ ಮ್ಯಾಗ ಈಗ ಒಂದು ಹಣಮಪ್ಪನ ಗುಡಿ ಕಟ್ಟ್ಯಾರ.” ಎಂದು ಮಾಹಿತಿ ಕೊಟ್ಟ. ಅಷ್ಟೇ ಅಲ್ಲದೇ “ಗುಡಿಯ ಕಟ್ಟಿಯ ಮ್ಯಾಲ ಹತ್ತು ನಿಮಿಷ ಕುಂತು ಬಂದರ ಮನಸು ಪ್ರಶಾಂತ ಆಕ್ಕತಿ” ಎಂದು ಅರ್ಧ ಕಣ್ಣು ಮುಚ್ಚಿ ಕೈ ಮುಗಿದು ಹೇಳಿದ. ಅಷ್ಟಕ್ಕೆ ನಿಲ್ಲದೇ “ಈಗ ಊರಾಗ ನಳ ಬಂದ ಮ್ಯಾಗ ಹೊಳಿ ಕಡೇ ಯಾರೂ ಹೋಗುದಿಲ್ಲ. ಅದಕ ಕತ್ತಲ್ಯಾದ ಮ್ಯಾಗ ಜನರ ಉಲುವು ಭಾಳ ಕಡಿಮಿ ಇರತೈತಿ, ಜಲ್ದೀ ವಾಪಸ್ ಬಂದು ಬಿಡ್ರಿ “ ಎಂದೂ ಕೂಡ ಸೇರಿಸಿದ.     
ನಾನೂ ನನ್ನ ಮಗ ಹೊಳೆಗೆ ಕಾರಿನಲ್ಲಿ ಹೊರಟೆವು. ಗೆಳೆಯ ಹೇಳಿದಂತೆ ಹೊಳೆ ದಾರಿಗೆ ಟಾರು ಹಾಕಿದ್ದರು. ತಕ್ಕ ಮಟ್ಟಿಗೆ ಅಗಲ ಕೂಡ ಮಾಡಿದ್ದರು. ಹೊಳೆಯ ದಂಡೆಯ ಮುಟ್ಟಿದಾಗ ಚಿಕ್ಕದಾದರೂ ಚೊಕ್ಕದಾದ ಹಣಮಪ್ಪನ ಗುಡಿ ಕಂಡಿತು, ನದಿಗೆ ಕಟ್ಟಿದ ಸೇತುವೆಯೂ ಇತ್ತು.  ಗುಡಿಯ ಕಟ್ಟೆಯ ಮೇಲೆ ಕುಳಿತು ಬೀಸುವ ತಂಗಾಳಿಯ ಆನಂದಿಸುತ್ತ ಹೊಳೆಯ ಕಡೆ ನೋಡಿದರೆ – ಅಲ್ಲೇನಿದೆ ? ನದಿಯು ಬತ್ತಿ ಹೋಗಿ, ಅಲ್ಲಲ್ಲಿ ಮರಳು ತೆಗೆದ ಗುಂಡಿಗಳನ್ನು ಬಿಟ್ಟರೆ, ನಮ್ಮ ನೈಸು ರೋಡಿನಂತೆ ಸಪಾಟಾಗಿ  ಕಾಣುತ್ತಿದೆ  :-(

ಬಾಲಂಗೂಚಿ:
1.      1.ಈ ಬರಹದ ತಲೆಬರಹ ಜೋಗಿಯವರ ಕಾದಂಬರಿ “ನದಿಯ ನೆನಪಿನ ಹಂಗು” ಹೆಸರಿನಿಂದ ಸ್ಪೂರ್ತಿಗೊಂಡಿದೆ. ಹೀಗಾಗಿ ಈ ಬರಹ ನದಿಯ ನೆನಪಿನ ಜೊತೆಗೆ ಜೋಗಿಯವರ ಹಂಗಿನಲ್ಲಿ ಕೂಡ ಇದೆ.
2.     2.ನಾನು ಊರಿಗೆ ಹೋಗಿದ್ದು ಕೆಲ ತಿಂಗಳುಗಳ ಹಿಂದೆ. ಈಗ ಚನ್ನಾಗಿ ಮಳೆಯಾಗಿ ಮಲಾಪಹಾರಿ ಮೈತುಂಬಿ ತನ್ನ ಹಿಂದಿನ ಗತ್ತಿನಲ್ಲಿಯೇ ಹರಿಯುತ್ತಿರಲಿ ಎಂದು ಹಾರೈಕೆ.         

No comments: