Saturday, May 16, 2020

ಕನ್ನಡ ದೂರದರ್ಶನ : ಒಂದು ಆಭಾರಮನ್ನಣೆ


ಈಗ #ಕನ್ನಡದ ಹಲವಾರು ದೂರದರ್ಶನ ವಾಹಿನಿಗಳಿವೆ, ಸಾವಿರಾರು ಜನರಿಗೆ ಅನ್ನ ಕೊಡುತ್ತಿವೆ. ಕೋಟಿ ಕನ್ನಡಿಗರಿಗೆ ಸುದ್ದಿ/ಮನರಂಜನೆ #ಕನ್ನಡದಲ್ಲಿಯೇ ಕೊಡುತ್ತಿವೆ. ಕನ್ನಡ ಗ್ರಾಹಕ ಕೂಟದಂತಹ ಸಂಘಟನೆಗಳ ಪ್ರಯತ್ನದಿಂದ ಮಹಾಭಾರತ/ಮಾಲ್ಗುಡಿ ಧಾರಾವಾಹಿಗಳನ್ನು ಕನ್ನಡಿಗರು #ಕನ್ನಡ ದಲ್ಲಿಯೇ ನೋಡಲು ಅವಕಾಶವಾಗಿದೆ.



ಆದರೆ ನಿಮಗೆ ಗೊತ್ತಾ, ದಶಕಗಳ ಹಿಂದೆ ಐವರು ಎಲೆಮರೆಯ ಕಾಯಿಯಂತೆ ಮಾಡಿದ ಮೌನಕ್ರಾಂತಿಯಿಂದಾಗಿ ನಾವು ಈ #ಕನ್ನಡ ವಾಹಿನಿಗಳ ಫಸಲನ್ನು ನೋಡುತ್ತಿದ್ದೇವೆ ಎಂದು ?


ಕರ್ನಾಟಕದಲ್ಲಿ ದೂರದರ್ಶನ ಮರು ಪ್ರಸಾರ ಕೇಂದ್ರಗಳು ಆರಂಭಗೊಂಡಿದ್ದು 1984ರಲ್ಲಿ. ಆಗ ಈ ಕೇಂದ್ರಗಳು ಕೇವಲ 25 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು ಅವು ಕೇವಲ ದಿಲ್ಲಿ ದೂರದರ್ಶನದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದವು. ಆ ಕಾರ್ಯಕ್ರಮಗಳು ಕೇವಲ ಹಿಂದಿ ಕಾರ್ಯಕ್ರಮಗಳಾದ್ದರಿಂದ ಬಹುಪಾಲು ಕನ್ನಡಿಗರಿಗೆ ಅರ್ಥವಾಗುತ್ತಿರಲಿಲ್ಲ.

ಇಡೀ ಕರ್ನಾಟಕದಲ್ಲಿ ಕೇವಲ ಬೆಂಗಳೂರು ದೂರದರ್ಶನ ಕೇಂದ್ರವೊಂದು ಮಾತ್ರ ಕನ್ನಡ ಕಾರ್ಯಕ್ರಮಗಳನ್ನು ತಯಾರಿಸಿಕೊಂಡು ಪ್ರಸಾರ ಮಾಡುವ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಆ ಕೇಂದ್ರದ ವ್ಯಾಪ್ತಿಯೂ ಸಹ ಬಹಳಷ್ಟು ಚಿಕ್ಕದಾದ ಕಾರಣದಿಂದ ಆ ಕನ್ನಡ ಕಾರ್ಯಕ್ರಮಗಳು ಬಹುಪಾಲು ಕನ್ನಡಿಗರನ್ನು ತಲುಪುತ್ತಲೇ ಇರಲಿಲ್ಲ.



ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು ಮತ್ತು ಕೇರಳದಲ್ಲಿ ಸ್ಥಳೀಯ ಭಾಷೆಯ ಕಾರ್ಯಕ್ರಮಗಳು ಇಡೀ ರಾಜ್ಯಕ್ಕೆ ಪ್ರಸಾರವಾಗುತ್ತಿದ್ದರೆ, ಕರ್ನಾಟಕವೊಂದೇ ಸ್ಥಳೀಯ ಭಾಷೆಯ ಪ್ರಸಾರದಿಂದ ವಂಚಿತವಾಗಿತ್ತು. ಬಹುಪಾಲು ಒಳನಾಡು ಕನ್ನಡಿಗರು ಹಿಂದಿ ಮತ್ತು ಗಡಿನಾಡ ಕನ್ನಡಿಗರು ಬೇರೆ ಭಾಷೆಯ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ನೋಡುವಂತಾಗಿತ್ತು. 

ಇದರ ಬಗ್ಗೆ ನಮ್ಮ ಜನ ಪ್ರತಿನಿಧಿಗಳು ದನಿ ಎತ್ತಲೇ ಇಲ್ಲ. ಕೇಂದ್ರ ಸರ್ಕಾರದವಂತೂ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂತೆ ಈ ಪ್ರಸಾರದ ಮೂಲಕ #ಹಿಂದಿಹೇರಿಕೆ ಯನ್ನು ರಾಜಾರೋಷವಾಗಿ ಮುಂದುವರೆಸಿತ್ತು



ಈ ತಾರತಮ್ಯವನ್ನು ಗಮನಿಸಿದ ಹುಬ್ಬಳ್ಳಿಯ ಮರೇಗುದ್ದಿ ಕುಟುಂಬದ ಸದಸ್ಯರಾದ ಸರ್ವಶ್ರೀ ಗೋವಿಂದ (ಸೈನ್ಯಅಧಿಕಾರಿ), ವೆಂಕಟೇಶ, ಪ್ರದೀಪ ಹಾಗೂ ಗೋವಿಂದ ಅವರ ಮಕ್ಕಳಾದ ರಾಜೀವ ಮತ್ತು ಮಂಜುನಾಥ ಈ ಐವರು ಈ ತಾರತಮ್ಯವನ್ನು ಹೊಗಲಾಡಿಸಿ ಇಡೀ ಕರ್ನಾಟಕಕ್ಕೆ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುವ ವರೆಗೆ ಹೋರಾಟ ಕೈಗೊಳ್ಳಬೇಕೆಂದು ಸಂಕಲ್ಪ ಮಾಡಿದರು.



ಈ ಉದ್ದೇಶಕ್ಕಾಗಿ ಅವರು ಅನುಸರಿಸಿದ್ದು ಪತ್ರ ಚಳುವಳಿ, ಆವಾಗ #ServeInMylangue ಎಂದು ಟ್ವೀಟ್‌ ಚಳುವಳಿಮಾಡುವ ಅವಕಾಶವಿರಲಿಲ್ಲವಲ್ಲಾ!  ಈ ಐದು ಜನರು ತಮ್ಮ ಇತರೆ ಮಿತ್ರರೊಂದಿಗೆ ಸೇರಿ ಹುಬ್ಬಳ್ಳಿ ಮತ್ತು ಧಾರವಾಡದ ಎಲ್ಲಾ ಟಿ.ವ್ಹಿ. ಅಂಗಡಿಗಳಿಗೆ ಭೇಟ್ಟಿ ಕೊಟ್ಟು  “ಕನ್ನಡ ಕಾರ್ಯಕ್ರಮಗಳು ಇಡೀ ಕರ್ನಾಟಕಕ್ಕೆ ಬಿತ್ತರಗೊಂಡರೆ  ಹಳ್ಳಿಯಲ್ಲಿರುವ ಅನೇಕ ಜನ ಟಿವಿ ಕೊಳ್ಳಲು ಮುಂದೆ ಬರುತ್ತಾರೆ, ಇದರಿಂದ ನಿಮ್ಮ ವ್ಯಾಪಾರ-ವಹಿವಾಟು ಹೆಚ್ಚುತ್ತದೆ “ ಎಂದು ವಿವರಿಸಿ ಅವರಿಂದ 15 ಪೈಸೆಯ ಕಾರ್ಡ್ಗಳನ್ನು ಇಲ್ಲವೇ ಅವನ್ನು ಕೊಳ್ಳಲು ಹಣವನ್ನು ಸಂಗ್ರಹಿಸಿದರು. ದುರ್ದೈವದ ಸಂಗತಿ ಏನೆಂದರೆ ಅನೇಕ ಟಿ.ವ್ಹಿ. ಅಂಗಡಿಗಳ ಮಾಲೀಕರಿಗೆ ಇವರ ನಿಸ್ವಾರ್ಥ ದೂರದೃಷ್ಢಿ ತಿಳಿಯಲೇ ಇಲ್ಲ.



ಈ ಉದ್ದೇಶಕ್ಕೆ ಸುಮಾರು 5 ಲಕ್ಷ ಕಾರ್ಡ್ ಗಳು ಬೇಕಾಗಿದ್ದವು. ಅಂದರೆ ಸುಮಾರು 75ಸಾವಿರ ರೂಪಾಯಿಗಳು ಬೇಕಾಗಿತ್ತು.      ಇಷ್ಟು ಹಣ ಹುಬ್ಬಳ್ಳಿಯ ಏಷ್ಟೋ ಸಾರ್ವಜನಿಕ ಗಣೇಶಮಂಡಲಿಗಳಲ್ಲಿ ಅನಾಯಾಸವಾಗಿ ಸಂಗ್ರಹವಾಗುತ್ತದೆ. ಆದರೆ ಕನ್ನಡದ ಕೆಲಸವೆಂದರೆ ಮಾತ್ರ ಒಂದು ನಯಾ ಪೈಸೆ ಸಹ ಹುಟ್ಟುವದಿಲ್ಲ!

ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹೋರಾಟ ಮಾಡಿದ ಈ ಐವರೂ ಸರಿ ಸುಮಾರಾಗಿ ಒಂದು ವರ್ಷದ ಅವಧಿಯಲ್ಲಿ ಸುಮಾರು 2 ಲಕ್ಷದ ಹತ್ತಿರ ಪತ್ರಗಳನ್ನು ಸಂಗ್ರಹಿಸಿದರು. ಈ ಎಲ್ಲಾ ಪತ್ರಗಳನ್ನು ವಿವಿಧ ರೀತಿಯ ಕೈಬರಹದಿಂದ ಅಲ್ಲದೇ ವಿವಿಧ ರೀತಿಯ ಒಕ್ಕಣೆಯಿಂದ ಬರೆಯಬೇಕಾಗಿತ್ತು. ಕೇವಲ ಐದು ಜನ ಎಷ್ಟು ರೀತಿಯ ಕೈಬರಹ ಮತ್ತು ಒಕ್ಕಣೆ  ಹೊಂದಲು ಸಾಧ್ಯ?





ಇದಕ್ಕಾಗಿ ಕೆಲವು ಖಾಲಿ ಇರುವ ಹುಬ್ಬಳ್ಳಿಯ ಹುಡುಗರನ್ನು ಚಾ-ಚುಮ್ಮರಿ ತಿನ್ನಿಸಿ ತಮಗೆ ತಿಳಿದ ಹಾಗೆ ಕನ್ನಡ ಟಿ.ವ್ಹಿ. ಬರಲು ಒತ್ತಾಯಿಸಿ ಬರೆಯಿರಿ ಎಂದು ಹೇಳಿದರು. ಈ ಎಲ್ಲಾ ಪತ್ರಗಳನ್ನು ಬೇರೆ ಬೇರೆ ಸ್ಥಳಗಳಿಂದ ಬೇರೆ ಬೇರೆ ದಿನಾಂಕಗಳಿಂದ  ಅಂದಿನ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಶ್ರೀ ಪಿ. ಉಪೇಂದ್ರರಿಗೆ ರವಾನಿಸಬೇಕಾಗಿತ್ತು





ಪ್ರತಿ 2-3 ದಿನಕ್ಕೊಮ್ಮೆ ಸ್ವಲ್ಪ ಸ್ವಲ್ಪ ಪತ್ರಗಳನ್ನು ಅನೇಕ ಊರುಗಳಿಂದ ಪೋಸ್ಟ್ ಮಾಡಬೇಕೆಂದು ನಿರ್ಧರಿಸಿದ ಇವರು ಈ ಕೆಲಸಕ್ಕಾಗಿ ನೂರಾರು ಕೆ.ಎಸ್.ಆರ್.ಟಿ.ಸಿ. ಚಾಲಕರನ್ನು ಮತ್ತು ನಿರ್ವಾಹಕರನ್ನು ಯಥೇಚ್ಛವಾಗಿ ಬಳಸಿಕೊಂಡರು.  ಅಲ್ಲದೇ ಗೆಳೆಯರು, ಸಂಬಂಧಿಕರು  ಯಾರೇ ಆಗಲಿ ಊರಿಗೆ ಹೊಗುವರಿದ್ದರೆ ಅವರನ್ನು ಕಾಡಿ ಬೇಡಿ ಅವರಿಂದ ಸ್ವಲ್ಪ ಸ್ವಲ್ಪ ಪತ್ರಗಳನ್ನು ಅನೇಕಾನೇಕ ಊರುಗಳಿಂದ ಪೋಸ್ಟ್ ಮಾಡಿಸಿದರು.



ಈ ಎಲ್ಲ ಪ್ರಯತ್ನಗಳ ಫಲವಾಗಿ 1990ರ ನವ್ಹೆಂಬರ್ 1 ರಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಶ್ರೀ ಪಿ. ಉಪೇಂದ್ರ ಅವರು ಬೆಂಗಳೂರಿನಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಿ, ಅವರೂ ಸಹ ಕನ್ನಡದಲ್ಲಿ ಮಾತನಾಡಿ ಈ ಭಾಗದ ಲಕ್ಷಾಂತರ ಜನರ ಮನವಿಗೆ ನಾವು ಸ್ಪಂದಿಸಿ ಈ ಕಾರ್ಯ ಕೈಗೊಂಡೆವು ಎಂದು ಹೇಳಿದರು.



ಮರೇಗುದ್ದಿ ಕುಟುಂಬದ ಆ ಐದು ನಿಸ್ವಾರ್ಥ ಜೀವಿಗಳು ತಮ್ಮ ಸಂಕಲ್ಪ ಪೂರ್ಣಗೊಂಡದ್ದಕ್ಕೆ ಸಂತೃಪ್ತಗೊಂಡವು. ಎಲೆಮರೆಯ ಕಾಯಿಯಂತೆ ದುಡಿದು ಸಾರ್ಥಕತೆ ಪಡೆದ ಆ ಜೀವಿಗಳಿಗೆ ಕನ್ನಡಿಗರೆಲ್ಲರೂ ಆಭಾರಿಯಾಗಿರಬೇಕು.


(ಇದು ಶ್ರೀ ಗಿರೀಶ ಮೆಟಗುಡಮಠ ಅವರ ಬರಹದ(http://angelfire.com/ok/arunry/TPBalaga-Visheshaanka-2005.pdf ದಿಂದ) ಸಂಕ್ಷಿಪ್ತ ರೂಪ .

ಅವರ ಬರಹವನ್ನು ನಾನು ಇಲ್ಲಿ ಹಂಚಿದ್ದಕ್ಕೆ  ಅವರ ಅಭ್ಯಂತರವಿಲ್ಲ ಎಂದು ಕೊಂಡಿದ್ದೇನೆ.



ಶ್ರೀ ಮೆಟಗುಡಮಠ ಮತ್ತು ಮರೆಗುದ್ದಿ ಬಂಧುಗಳು ನನಗೆ ವೈಯಕ್ತಿಕವಾಗಿ ಪರಿಚಿತರಲ್ಲ,



ಅವರ ಕೆಲಸಕ್ಕೆ ಕನ್ನಡಿಗರ ಪರವಾಗಿ ನನ್ನ ನಮನ !)

No comments: