Showing posts with label ಸುಮ್ಸುಮ್ನೆ. Show all posts
Showing posts with label ಸುಮ್ಸುಮ್ನೆ. Show all posts

Thursday, March 14, 2019

ಕನ್ನಡದ ಕಾಸು/Cause


ಇದು ಒಂದು ರೀತಿಯ #99yearChallenge.

ಈ ಹಿಂದಿನ ನೂರು ವರ್ಷಗಳಲ್ಲಿ #ಕನ್ನಡಿಗ ರಿಗೆ 'ರೂಪಾಯಿ'ಯಲ್ಲಿ ಒಂದು ಪೈಸೆಯೂ ಬದಲಾಗಿಲ್ಲ..

 



#




(ಮೊದಲನೆಯದು 1918 ರ ಬಾಂಬೆ ಟಂಕಸಾಲೆಯ ಬ್ರಿಟೀಷ್ ಭಾರತದ 1 ರೂಪಾಯಿ ನಾಣ್ಯ, ಬಲಗಡೆ ಇರೋವು 2017ರ ಮುಂಬಯಿ ಟಂಕಸಾಲೆಯ ಒಂದು ರೂಪಾಯಿ ನಾಣ್ಯಗಳು)


ನೂರು ವರ್ಷಗಳ ಹಿಂದೆ ಉರ್ದು ಇತ್ತು, ಇಂದು ಹಿಂದಿ ಇದೆ. ಅಂದಂಗೆ ಹಿಂದಿಗೆ ಉರ್ದುಗೆ ಲಿಪಿಯ ಬಿಟ್ಟು ಏನು ವ್ಯತ್ಯಾಸ? ರೂಪಾಯಿಗೆ ಬದಲು  ಹದಿನಾರಾಣೆ ಅಂದಂಗೆ ತಾನೆ ?!!

 
#ಕನ್ನಡ ಯಾವಾಗ ಕಾಸಿನ ಭಾಷೆ ಯಾವಾಗ ಆಗಿತ್ತು ಎಂದು ಕೇಳತಾ ಇದ್ದೀರಾ? ಅದು ಸ್ವಲ್ಪ ಕಾಲವೇ ಆಯಿತು. ಉತ್ತರ ಕರ್ನಾಟಕದ ಬಹುತೇಕ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯ ಇರುವವರೆಗೆ ಕನ್ನಡ ನಾಣ್ಯಗಳಿದ್ದವು. ಮೈಸೂರಿನ  ಮಹಾರಾಜರ ನಾಣ್ಯಗಳು #ಕನ್ನಡ ಹೊಂದಿದ್ದವಾದರೂ ೧೮೪೩ರಲ್ಲಿ ಆಂಗ್ಲರು ಮೈಸೂರಿನ ನಾಣ್ಯಗಳ ಬದಲಿಗೆ ತಮ್ಮ ನಾಣ್ಯಗಳನ್ನು ಜಾರಿಗೆ ತಂದರು.




ಸ್ವಾತಂತ್ರ್ಯ ಬಂದ ನಂತರವಾದರೂ #ಕನ್ನಡ ಕ್ಕೆ ಕಾಸಿನಲ್ಲಿ ಕಿಮ್ಮತ್ತು ಸಿಕ್ಕೀತು ಎಂದರೆ ಉರ್ದು ಹೋಗಿ ಹಿಂದಿ ಬಂದು,  'ಊದೋದು ಹೋಗಿ ಬಾರಿಸೋದು ಬಂದಿದೆ', ಡುಂ ಡುಂಮ್‌ಕ್..

 ನಮ್ಮ ೨೨ ಅಧಿಕೃತ ಭಾಷೆಗಳನ್ನು ನಾಣ್ಯದ ಮೇಲೆ ಮುದ್ರಿಸಲು ಸಾಧ್ಯವಿಲ್ಲ ಅದಕ್ಕಾಗಿ ಇಂಗ್ಲೀಷ/ಹಿಂದಿ ಸಾಕು ಎಂದು ಗುಲಾಮಿ ಸಂಸ್ಕೃತಿಯ ಪ್ರತಿಪಾದಕರು ವಾದಿಸಿಯಾರು..

ನಾಣ್ಯದ ಒಂದು ಬದಿ ಸಾಮಾನ್ಯವಾಗಿದ್ದು, ಇನ್ನೊಂದು ಬದಿಯಲ್ಲಿ ದೇಶದ ಆಯಾ ಭಾಗದಲ್ಲಿ, ಅಲ್ಲಿನ ಭಾಷೆ ಇರುವ ನಾಣ್ಯಗಳನ್ನು @rbi ಬಿಡುಗಡೆ ಮಾಡಬಹುದಲ್ಲ?  ಯುರೋ ರಾಷ್ಟ್ರಗಳು ಮಾಡಿಕೊಂಡ ಇಂತಹ ವ್ಯವಸ್ಥೆ ನಮಗೆ ಮಾದರಿಯಾಗ ಬೇಕಲ್ಲವೇ ?
 
 
(ಎಡಗಡೆಯದು 2010ರ ಫ್ರಾನ್ಸ್ ದೇಶದ ನಾಣ್ಯ, ಬಲಗಡೆಯದು 2002ರ ಗ್ರೀಸ್ ದೇಶದ ನಾಣ್ಯ. ಕೆಳಗಡೆ ಸಾಲಿನಲ್ಲಿ ಎರಡೂ ನಾಣ್ಯಗಳ ಸಾಮಾನ್ಯ ಬದಿ.)
ಇದರಿಂದ ಆಯಾ ಪ್ರದೇಶದ ಬಹು ಜನರಿಗೆ ಅನುಕೂಲ. ಅಕಸ್ಮಾತ್ತಾಗಿ ಒಂದು ಪ್ರದೇಶದ ನಾಣ್ಯ ಇನ್ನೊಂದು ಪ್ರದೇಶಕ್ಕೆ ಹೋದರೆ, ಅದನ್ನು ನೋಡಿದವರಿಗೆ ನಮ್ಮ ದೇಶದ ವೈವಿಧ್ಯತೆಯ ಪರಿಚಯವೂ ಆಗುತ್ತದೆ. ಮುಖ್ಯವಾಗಿ ಜನರಿಗೆ ಇಂಡಿಯಾ ಎಂದರೆ ಹಿಂದಿಯಾ ಅಷ್ಟೇ ಅಲ್ಲ ಎಂಬ ಪಾಠವಾಗುತ್ತದೆ.


 
@rbi ತನ್ನ ಪ್ರಾದೇಶಿಕ ಕಚೇರಿಗಳ ಜಾಲದಿಂದ ಈ ವ್ಯವಸ್ಥೆಯನ್ನು ಸುಲಭವಾಗಿ ಮಾಡಬಹುದು. ಆಯಾ ಪ್ರದೇಶಕ್ಕೆ 'ಸಂಬಂಧಿಸಿದ' ನಾಣ್ಯಗಳ ವಿಲೇವಾರಿಯನ್ನು @rbi ಈಗಾಗಲೇ ಮಾಡುತ್ತಿದೆ.. ಹೀಗಾಗಿಯೇ ನಿಮಗೆ ಶ್ರೀ ಬಸವೇಶ್ವರರಿರುವ ೫ ರೂಪಾಯಿ ಕರ್ನಾಟಕದಲ್ಲಿ ಸಿಕ್ಕಷ್ಟು ಬೇರೆ ರಾಜ್ಯಗಳಲ್ಲಿ ಸಿಗುವುದಿಲ್ಲ, ಮಾತಾ ವೈಷ್ಣೋದೇವಿ ನಾಣ್ಯ ಕರ್ನಾಟಕದಲ್ಲಿ ಅಪರೂಪ.

 

ಹಾಗೆಯೇ ಪ್ರತಿ ಮೌಲ್ಯದ ಹಲವಾರು ವಿಧದ ನಾಣ್ಯಗಳನ್ನು ಏಕಕಾಲದಲ್ಲಿ @rbi ಈಗಲೂ ಪೂರೈಸುತ್ತಿದೆ, ಹೀಗಾಗಿ ವಿವಿಧ ಭಾಷೆಗಳ ನಾಣ್ಯಗಳನ್ನು ಪೂರೈಸುವುದು ಕಷ್ಟದ ಕೆಲಸವಲ್ಲ.
ದೃಷ್ಟಿಹೀನರಿಗೆ ಅನುಕೂಲವಾಗಲಿ ಎಂದು ನಾಣ್ಯಗಳಲ್ಲಿ ಹೊಸತು ತರುವ ನಮ್ಮ ಸರಕಾರ ಭಾರತದ ಭಾಷಾ ವೈವಿಧ್ಯತೆಗೆ ಯಾಕೆ ಕುರುಡಾಗಿದೆಯೋ?




#
 



ತನ್ನ #ಹಿಂದಿಹೇರಿಕೆ ಯ ಜಿಹಾದಿ ಉತ್ಸಾಹದಿಂದ ಕಾನೂನಿಗೆ ವಿರುದ್ಧವಾಗಿ ದೇವನಾಗರಿ ಅಂಕೆಗಳನ್ನು ಹೊಸ ನೋಟುಗಳಲ್ಲಿ ಉಪಯೋಗಿಸಿ, ನಂತರ 'ಅವು ಅಂಕೆಗಳಲ್ಲ ಚಿತ್ರಗಳು' ಎಂದು ಭಂಡತನ ತೋರಿಸುವ ನಮ್ಮ ಸರಕಾರ, ಏನಾದರಾಗಲಿ-ಎಂತಾದರಾಗಲಿ, ಭಾರತದ ಭಾಷಾ ವೈವಿಧ್ಯತೆ ನಾಶಮಾಡಲು ಪಣತೊಟ್ಟಿದೆ.



  • ಸುರಕ್ಷಾ ಸೂಚನೆಗಳು-ರೈಲಿನಲ್ಲಿ, ವಿಮಾನದಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ, ಕೊನೆಗೆ ಅಡುಗೆ ಸಿಲೆಂಡರಿನ ಮೇಲೆ ಕೂಡ #ಕನ್ನಡದಲ್ಲಿ ಇಲ್ಲ.
  • #ಕನ್ನಡ ಗ್ರಾಹಕರಿಗೆ ಅವರು ಕಾಸು ಕೊಟ್ಟು ಕೊಳ್ಳುವ - ಔಷಧಿ ಸಹಿತ - ಯಾವುದೇ ವಸ್ತುವಿನ ಮಾಹಿತಿ #ಕನ್ನಡದಲ್ಲಿ ಇಲ್ಲ.
  • #ಕನ್ನಡ ಗ್ರಾಹಕರಿಗೆ ಬ್ಯಾಂಕ್, ಉಗ್ರಾಣ ಇತ್ಯಾದಿಗಳಲ್ಲಿ #ಕನ್ನಡ ದಲ್ಲಿ ಸೇವೆ ಇಲ್ಲ, #ಕನ್ನಡ ವಷ್ಟೇ ಗೊತ್ತಿರುವವರಿಗೆ ಅಲ್ಲಿ ನೌಕರಿಯೂ ಇಲ್ಲ..

ಇಂತಹ ಪರಿಸ್ಥಿತಿಯಲ್ಲಿ #ಕನ್ನಡಿಗರು ಕಾಸಿನಲ್ಲಿ #ಕನ್ನಡ ಕೇಳುವುದು ಜುಟ್ಟಿಗೆ ಮಲ್ಲಿಗೆ ಕೇಳಿದಂತಲ್ಲವೇ ?


ಹೌದು, ಆದರೆ ಬಹು ವೈವಿಧ್ಯತೆಯ ನಮ್ಮ ಈ ಪ್ರೀತಿಯ ದೇಶದಲ್ಲಿ ಪ್ರತಿ ವಿಷಯದಲ್ಲಿಯೂ ನುಡಿ ಸಮಾನತೆಗಾಗಿ ಹಕ್ಕಿನಿಂದ ಕೇಳುವುದು ನಮ್ಮ ಕರ್ತವ್ಯ, ಅದನ್ನು ಬಿಟ್ಟು ಕುರಿಗಳಂತೆ ಅಸಮಾನತೆಯನ್ನು ಒಪ್ಪಿಕೊಳ್ಳುವುದು ನಾವು ಈ ದೇಶಕ್ಕೆ ಮಾಡುವ ದ್ರೋಹ. ಹಾಗಾಗಿಯೇ ಇಂದು ನಾವು ಹೇಳಬೇಕು -#ServeInMyLanguage



#ಜೈ_ಭಾರತ_ಜನನಿಯ_ತನುಜಾತೆ

 

(ಈ ಚಿತ್ರಗಳಲ್ಲಿ ಇರುವ ನಾಣ್ಯಗಳು ನನ್ನ ಸಂಗ್ರಹದಿಂದ)


Tuesday, July 14, 2015

ನದಿಯ ನೆನಪಿನ ಹಂಗು



ಮಲ್ಲನಗೌಡನ ಸೊಸಿ ಮಲ್ಲವ್ವನ  ಬಲಿದಾನದಿಂದ  ಹರಿದಿದ್ದೇ ಈ ನದಿ  ಎಂಬುದು ಕತೆ. ಅದಕ್ಕಾಗಿಯೇ ಇವಳಿಗೆ ಮಲ್ಲವ್ವನ ಹೊಳಿ ಎನ್ನುವುದು ರೂಢಿ.  ತಾನು ಹರಿದಲ್ಲಿ ಕೊಳೆ ತೊಳೆದು ಹಸನುಮಾಡುತ್ತಾಳೆ ಎನ್ನುವ ಕಾರಣಕ್ಕೆ ಇವಳಿಗೆಮಲಾಪಹಾರಿ ಎಂದೂ ಹೆಸರು.  ದೂರದ ನವಿಲು ಕೊಳ್ಳದ ಹತ್ತಿರ ಇವಳು ಬೆಟ್ಟವನ್ನು ಬಳಸಿ ಹರಿಯುತ್ತಿರುವುದನ್ನು ನವಿಲೊಂದು ನೋಡಿ “ಬೆಟ್ಟಕಂಜಿ ಬೆಳವಲಾ ಸೇರತಾಳ ಮಲ್ಲಿಎಂದು ನಕ್ಕಿತ್ತಂತೆ. ಅದರಿಂದ ಸಿಟ್ಟಿಗೆದ್ದಿದ್ದ ಇವಳು ಸರಕ್ಕನೇ ಆ ನವಿಲನ್ನು ಕೊಚ್ಚಿಹಾಕಿ ಬೆಟ್ಟವನ್ನು ಸೀಳಿ ಧುಮ್ಮಿಕ್ಕಿ  ಹರಿಯತೊಡಗಿದಳಂತೆ. ಹೀಗಾಗಿ ನವಿಲುಕೊಳ್ಳದ ಹತ್ತಿರ ಇವಳನ್ನು ಇನ್ನೂ “ಒಡಕಲು  ಹೊಳಿ” ಎಂದೇ ಕರೆಯುತ್ತಾರೆ. ಅಧಿಕೃತವಾಗಿ ಮಲಪ್ರಭ ಎಂಬ ಹೆಸರಿನಿಂದ ಕರೆಯಲ್ಪಡುವ ಇವಳು ಹರಿದು ಹಸನುಗೊಳಿಸಿದ ಊರುಗಳಲ್ಲಿ ನನ್ನೂರು ಕೂಡ ಒಂದು.
ಎಲ್ಲವನ್ನೂ ಕೊಚ್ಚಿ ಹರಿದು ಹೋಗುವುದೇ ನದಿಯ ಸಹಜ ಗುಣವಾದರೂ ನನ್ನ ಬಾಲ್ಯದ ಹಲವಾರು ನೆನಪುಗಳಲ್ಲಿ ನಿಶ್ಚಲವಾಗಿ, ನಿಚ್ಚಳವಾಗಿ ಮಲಪ್ರಭೆ ನಿಂತು ಬಿಟ್ಟಿದ್ದಾಳೆ. ನನ್ನ ಬಾಲ್ಯದ ಆರೆಂಟು ವರುಷ ಪ್ರತಿದಿನ ಬೆಳಿಗ್ಗೆ - ಮಳೆಯೇ ಬರಲಿ- ಚಳಿಯೇ ಇರಲಿ- ನನ್ನ ತಂದೆ ನದಿಗೆ ಸ್ನಾನಕ್ಕೆ ಕರೆದುಕೊಂಡು ಹೋಗುತ್ತಿದ್ದರಿಂದ ಆ ವರುಷಗಳ ಹಲವಾರು ಘಟನೆಗಳ ನೆನಪಿನ ಬ್ಯಾಕ್ ಗ್ರೌಂಡಿನಲ್ಲಿ ಮಲಪ್ರಭೆ ಭದ್ರವಾಗಿದ್ದಾಳೆ. ಅದಕ್ಕಾಗಿಯೇ ಊರು ಬಿಟ್ಟು ಬೆಂಗಳೂರು ಸೇರಿರುವ ನಾನು ನನ್ನ ಮನೆಗೆ ಇಟ್ಟ ಹೆಸರು – “ಮಲಪ್ರಭಾ”!
***************************************************  
ನಾನು ಈ ಮೊದಲೇ ಹೇಳಿದಂತೆ ನನ್ನ ತಂದೆಯದು 24x7 ಮಾಸ್ತರಿಕೆ. ಅಪ್ಪನ ವಿದ್ಯಾರ್ಥಿ ಗಣ ಹೆಚ್ಚು ಕಡಿಮೆ ನಮ್ಮ ಮನೆಯಲ್ಲಿಯೇ ಇರುತ್ತಿತ್ತು. ರಾತ್ರಿ ಪಾಠ ಹೇಳಿಸಿಕೊಂಡು ನಮ್ಮ ಮನೆಯಲ್ಲಿಯೇ ಮಲಗಿರುತ್ತಿದ್ದ ‌ಅವರನ್ನು ನಸುಕಿನಲ್ಲಿ ಎಬ್ಬಿಸಿ, ಒಂದು ಗಂಟೆ ಓದು ಬರಹ ಮಾಡಿಸಿ, ಅಪ್ಪ ನದಿಗೆ ಸ್ನಾನಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅವರ ಜೊತೆಗೆ ನಾನೂ, ನನ್ನ ಅಣ್ಣನೂ ನದಿಗೆ ಹೋಗುತ್ತಿದ್ದೆವು. ನದಿ ಊರಿಂದ ಸುಮಾರು ಒಂದು ಕಿಲೋಮೀಟರು ದೂರದಲ್ಲಿತ್ತು. ಆ ಒಂದು ಕಿಲೋಮೀಟರು ದೂರವನ್ನು ನಾವು ಕೆಂಪನೇ ಸೂರ್ಯ ಗೋವಿನಜೋಳದ ತೆನೆಗಳ ನಡುವಿಂದ ಹಣಿಕಿ ಹಾಕುವುದನ್ನು ನೋಡುತ್ತಾ, ಪಠ್ಯಪುಸ್ತಕಗಳಲ್ಲಿ ಬಾಯಿಪಾಠ ಮಾಡಬೇಕಾಗಿದ್ದ ಕನ್ನಡ ಪದ್ಯಗಳನ್ನು ಜೋರಾಗಿ ಹಾಡುತ್ತಲೋ, ಅಥವಾ ಅಪ್ಪ ಕೇಳುತ್ತಿದ್ದ ವ್ಯಾಕರಣದ ಸಂಧಿ-ಸಮಾಸ, ಗಣೀತದ ಫಾರ್ಮುಲಾ ಅಥವಾ ವಿಜ್ಞಾನದ ಪ್ರಶ್ನೆಗಳಿಗೋ ಉತ್ತರ ಹೇಳುತ್ತಾ ಕ್ರಮಿಸುತ್ತಿದ್ದೆವು. ಹೀಗೆ ಒಮ್ಮೆ ಅಪ್ಪ ಕೇಳಿದ ಎ ಪ್ಲಸ್ ಬಿ ಹೋಲ್ ಸ್ಕ್ವೇರ್ ಅಂದರೆಎಂಬ ಪ್ರಶ್ನೆಗೆ  ಉತ್ತರ ಹೇಳಬೇಕಾಗಿದ್ದ ದೊಡ್ಡ ತರಗತಿಯ ವಿದ್ಯಾರ್ಥಿ ಮುದುವೀರನೋ, ನಾಗಲಿಂಗನೋ ಉತ್ತರ ಹೇಳಲು ಆತ್ಮವಿಶ್ವಾಸ ಸಾಲದೇ ಸಣ್ಣದನಿಯಲ್ಲಿ ತನ್ನಷ್ಟಕ್ಕೆ ತಾನೆ ಹೇಳಿಕೊಂಡದ್ದು ಕೇಳಿಕೊಂಡು ನಾನು ಜೋರಾಗಿ ಹೇಳಿ ಅಪ್ಪನ ಶಭಾಷಗಿರಿ ಪಡೆದದ್ದು ನೆನಪಿದೆ. ಬಹುತೇಕವಾಗಿ ನಮ್ಮ ತಂದೆ ಹಿರಿಯ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪ್ರಶ್ನೆ ಕೇಳುತ್ತಿದ್ದರಾದರೂ, ಒಮ್ಮೊಮ್ಮೆ ನನ್ನ ಟೈಮು ಸರಿಯಿರದ ದಿನ “ನೀ ಹದಿನೇಳರ ಮಗ್ಗಿ ಅನ್ನಲೇ” ಎಂದು ನನಗೆ ಗಾಳ ಹಾಕುತ್ತಿದ್ದ. ಅಕಸ್ಮಾತ್ ನಾನೇನಾದರೂ ಮಗ್ಗಿ ತಪ್ಪಿದರೆ, ಅವತ್ತು ನದೀ ಸೇರುವವರೆಗೆ ಅಪ್ಪ “ದೊಡ್ಡ ದೊಡ್ಡ ಮಾತಾಡತಾನ, ಮಗ್ಗಿ ಅನ್ನಾಕ ಬರೂದುಲ್ಲ” ಎಂದು ನನಗೆ ಚಿಟುಕು ಮುಳ್ಳಾಡಿಸುತ್ತಿದ್ದ.   

ಅಪರಿಚಿತರ್ಯಾರೋ ದೂರದಿಂದ ನೋಡಿ ಪಂಡರಪುರಕ್ಕೆ ಹೊರಟ ದಿಂಡಿ ಎಂದುಕೊಳ್ಳ ಬಹುದಾಗಿದ್ದ ನಮ್ಮ ಗುಂಪು, ನದಿ ದಂಡೆ ಮುಟ್ಟಿದ ಮೇಲೆ ನಮ್ಮ ಚಟುವಟಿಕೆಗಳು ಇನ್ನಷ್ಟು ಗರಿಗೆದರುತ್ತಿದ್ದವು. ನಿತ್ಯಕಾರ್ಯಗಳನ್ನು ಮುಗಿಸಿದ ದೊಡ್ಡವರು ಸೂರ್ಯ ನಮಸ್ಕಾರ,  ವ್ಯಾಯಾಮ ಮಾಡುತ್ತಿದ್ದರೆ, ನಾನು ಹೊಳೆಯ ಉಸುಕಿನಲ್ಲಿ  ಶಂಖ, ಕಪ್ಪೆಚಿಪ್ಪು , ಬೆನಕನ ಕಲ್ಲು ಇತ್ಯಾದಿಗಳನ್ನು ಹುಡುಕಿ ಕಿಸೆ ತುಂಬಿಸಿಕೊಳ್ಳುತ್ತಿದ್ದೆ.  ಹೊಳೆ ಹತ್ತಿರದಲ್ಲಿಯೇ ಹಿಂದಿನ ರಾತ್ರಿ ಲಂಬಾಣಿಗಳು  ಕಾಸಿದ  ಕಳ್ಳಭಟ್ಟಿ ಸರಾಯಿ ಕುಡಿದ ಕುಡುಕರು ಖಾಲಿ ಸಿಗರೇಟು- ಕಡ್ಡಿ ಪೆಟ್ಟಿಗೆಗಳನ್ನು ಬೀಸಾಕಿ ಹೋಗಿರುತ್ತಿದ್ದರು. ಖಾಲಿ ಸಿಗರೇಟುಪ್ಯಾಕು, ಛಂದ ಛಂದದ ಚಿತ್ರಗಳಿದ್ದ ಕಡ್ಡಿಪೆಟ್ಟಿಗೆಗಳೆಂದರೆ ಆವಾಗ ನನ್ನ ಪಾಲಿಗೆ ವಜ್ರ-ವೈಢೂರ್ಯ!  ನಾನು ಅವುಗಳನ್ನು ಚಾಪಾ ಮಾಡಲೋ, ಅಥವಾ ಗಾಡಿ ಮಾಡಲು ಸಂಗ್ರಹಕ್ಕೆ ಸೇರಿಸಿಕೊಳ್ಳುತ್ತಿದ್ದೆ. ಒಂದೊಂದು ಸಲ ಈ ಕಲೆಕ್ಟ್ಮಾಡುವ ಕಲೆಕ್ಟರ್ಕೆಲಸ ಬೇಜಾರಾದರೆ, ನಾನು ಇಂಜನೀಯರ್ ಕೆಲಸಕ್ಕೆ ನಿಲ್ಲುತ್ತಿದ್ದೆ. ಚಿಕ್ಕವನಿದ್ದಾಗ ಪಾದದ ಮೇಲೆ ತೇವದ ಉಸುಕನ್ನು ತಟ್ಟಿ ಗುಬ್ಬಚ್ಚಿ ಗೂಡು ಕಟ್ಟುತ್ತಿದ್ದೆನಾದರೂ, ಒಂಚೂರು ದೊಡ್ಡವನಾದ ಮೇಲೆ ವಿಶ್ವೇಶ್ವರಯ್ಯನವರ ಆತ್ಮವೇ ಮೈಯಲ್ಲಿ ಹೊಕ್ಕಂತೆ ನಾನು ಉಸುಕಿನಲ್ಲಿ ಕಾಲುವೆ ಮಾಡಿ, ಕಾಲುವೆಗೊಂದು ಆಣೆಕಟ್ಟು ಕಟ್ಟಿ, ಕಾಲುವೆಗೆ ಅಲ್ಲಲ್ಲಿ ಸೇತುವೆ ಕಟ್ಟಿ ಆಟ ಆಡುತ್ತಿದ್ದೆ!   
ಉಸುಕಿನಲ್ಲಿ ಕಸರತ್ತು ಮುಗಿಸಿ,  ಒಂಚೂರು ಸೂರ್ಯ ಮೇಲೆ ಬಂದಾಗ ಹೊಳೆಗೆ ಇಳಿಯುತ್ತಿದ್ದೆವು. ಮೊದಲು ಈಜು ಕಲಿಯಲು ಸಿಂಗಡಿ ಕಾಯಿ ನಡಕ್ಕೆ ಕಟ್ಟುತ್ತಿದ್ದರಂತೆ. ನಾನು ಈಜು ಕಲಿಯುವ ಹೊತ್ತಿಗೆ ಆ ಕಾಲ ಹೊರಟು ಹೋಗಿತ್ತು. ಅದಾಗಲೇ ಪ್ಲಾಸ್ಟಿಕ್ ಕೊಡಗಳು ಉಪಯೋಗಕ್ಕೆ ಬಂದಿದ್ದವು. ನಾನು ಪ್ಲಾಸ್ಟಿಕ್ ಕೊಡದಲ್ಲಿ ನೀರು ಹೋಗದಂತೆ ಹಿಡಿದು ಕೊಂಡು, ಅದರ ಮೇಲೆ ಭಾರ ಹಾಕಿ ತೇಲುತ್ತಾ ಈಜು ಕಲಿತಿದ್ದು. ಈ ಈಜು ಕಲಿಯುವ ಸಮಯದಲ್ಲಿ ನದಿಯಲ್ಲಿ ಬಾಳೆಯ ದಿಂಡೊಂದು ತೇಲಿ ಬಂದರೆ ಅಂದು ನಮಗೊಂದು ಹಬ್ಬವಾಗುತ್ತಿತ್ತು. ಬಾಳೆ ದಿಂಡು ಹಿಡಿದುಕೊಂಡು ಈಜುವುದು ಬಹಳ ಸರಳ.
 ಹೊಳೆಯಲ್ಲಿ ನಾವು ಆಡುತ್ತಿದ್ದ ಆಟಗಳಿಗೆ ಲೆಕ್ಕವಿಲ್ಲ. ಚಪ್ಪಟೆಯಾದ ಕಲ್ಲನ್ನೋ,  ಹಂಚಿಬಿಲ್ಲಿಯನ್ನೋ ನದಿಯ ನೀರಿನ ಮೇಲ್ಮೆಗೆ ಸಮನಾಗಿ ಬೀಸಿ ಒಗೆದರೆ, ಅದು ನೀರಿನಲ್ಲಿ ಮುಳುಗುವ ಮೊದಲು ಐದಾರು ಸಲವಾದರೂ ಪುಟಿಯುತ್ತಿತ್ತು. ಯಾರು ಹೆಚ್ಚು ಸಲ ಪುಟಿಸುತ್ತಾರೆ ಎಂದು ನಮ್ಮ-ನಮ್ಮಲ್ಲಿಯೇ ಸ್ಪರ್ಧೆ ಇರುತ್ತಿತ್ತು. ಹಾಗೆಯೇ ಯಾರು ಹೆಚ್ಚು ಹೊತ್ತು ನೀರಿನಲ್ಲಿ ಉಸಿರು ಹಿಡಿದಿರುತ್ತಾರೆ ಎಂಬ ಸ್ಪರ್ಧೆ, ಅಥವಾ ಬಾಹುಬಲಿ- ಭರತರು ಆಡಿದ್ದ ಒಬ್ಬರಿಗೊಬ್ಬರು ನೀರುಗೊಜ್ಜುವ ಜಲಯುದ್ಧ ಇತ್ಯಾದಿ ಆಟಗಳಿರುತ್ತಿದ್ದವು. ಈ ಆಟಗಳ ನಡುವೆಯೇ ಯಾರೋ ನದಿಯ ಆಚೆ ಬದಿಗೆ ಹೋಗಿ, ಅಲ್ಲಿ ನದಿಯ ಮೇಲೆ ಬಾಗಿರುತ್ತಿದ್ದ  ಅತ್ತಿಯ ಮರವನ್ನೋ, ಹುಣಸೆ ಮರವನ್ನೋ ಅಥವಾ ನೀರಲ ಮರವನ್ನೋ  ಏರಿ ನಮಗೆ ಹಣ್ಣು ಸಪ್ಲಾಯ್ ಮಾಡುತ್ತಿದ್ದರು, ನಾವು ಸ್ನಾನದ ನಡುವೆಯೇ ಸಂತರ್ಪಣವನ್ನೂ ಸವಿಯುತ್ತಿದ್ದೆವು.      
ಸ್ನಾನ ಮುಗಿಸಿ ದಂಡೆಗೆ ಬರುವ ಹೊತ್ತಿಗೆ,  ಸಪ್ತರ್ಷಿಗಳು ಬಂದು ತಮ್ಮ ತಾಮ್ರ ಕೊಡಗಳನ್ನು ಹುಣಸಿಹಣ್ಣು ಹಚ್ಚಿ ಥಳಥಳಗೊಳಿಸುತ್ತಾ ಗೋಷ್ಟಿಯಲ್ಲಿ ತೊಡಗಿರುತ್ತಿದ್ದರು. ಅದಾಗಲೇ ಅರವತ್ತು ದಾಟಿದ್ದ  ಕರಕಿಕಟ್ಟಿ ಗಂಗಪ್ಪ, ಕಟಗೇರಿ ತಿರಕಪ್ಪ, ಸತ್ತಿಗೇರಿ ಶಂಕ್ರಪ್ಪ ಇತ್ಯಾದಿ ಏಳು ಜನ ಬಿಳಿತಲೆಯ ದಿಗ್ಗಜರೇ ಆ ಸಪ್ತರ್ಷಿಗಳು. ಅವರ ಗುಂಪಿಗೆ ನಮ್ಮ ತಂದೆಯೇ  ಸಪ್ತರ್ಷಿಗಳುಎಂದು ಹೆಸರು ಕೊಟ್ಟಿದ್ದ. ಥಳಥಳ ಹೊಳೆಯುವ ತಾಮ್ರದ ಕೊಡಗಳು ಅವರ ಗುಂಪಿನ ಹೆಗ್ಗುರುತಾಗಿದ್ದವು. ಸಪ್ತರ್ಷಿಗಳ  ಗೋಷ್ಟಿಗಳಲ್ಲಿ “ಒರತಿ ನೀರು ಬೇಷೋ, ಇಲ್ಲಾ ಹರಿಯುವ ನದಿ ನೀರು ಬೇಷೋ?, “ಪ್ಲಾಸ್ಟಿಕ್ ಕೊಡದಾಗಿನ ನೀರು ಕುಡಿದರೆ ಎನ್ ರೋಗ ಬರತಾವ್ ?” ಇತ್ಯಾದಿ ವಿಷಯಗಳ ದೀರ್ಘ ಚರ್ಚೆಗಳಾಗುತ್ತಿದ್ದವು.  ಆ ಚರ್ಚೆಯನ್ನು ಕೇಳುತ್ತ ನಾವು ನಮ್ಮ ಬಟ್ಟೆಗಳನ್ನು ತೊಳೆದುಕೊಂಡು ವಾಪಸು ಮನೆಯ ದಾರಿ ಹಿಡಿಯುತ್ತಿದ್ದೆವು. ಅದಾಗಲೆ ಚುರುಗುಟ್ಟ ತೊಡಗಿರುತ್ತಿದ್ದ  ಬಿಸಿಲಿಂದ ರಕ್ಷಣೆ ಪಡೆಯಲು ನಾವು ನಮ್ಮ ಚಡ್ಡಿಗಳನ್ನು ತಲೆಗೆ ಹೆಲ್ಮೆಟ್ಟಿನಂತೆ ಹಾಕಿಕೊಂಡು, ಚುರುಗುಟ್ಟುತ್ತಿದ್ದ ಹೊಟ್ಟೆಯ ನಿರ್ದೇಶನದಂತೆ  ಮನೆಗೆ ಎಕ್ಸ್ ಪ್ರೆಸ್ಸ್ ಗಾಡಿ ಬಿಡುತ್ತಿದ್ದೆವು.
ಅದು ನನ್ನ ಬಾಲ್ಯದ ಫ್ಲ್ಯಾಷ್ ಬ್ಯಾಕ್.  ನನ್ನ ಮಗನಿಗೆ ನಾನು ಫ್ಲ್ಯಾಶ್ ಬ್ಯಾಕಿನಿಂದ ಆಗಾಗ ಬಾಲ್ಯದ ಘಟನೆಗಳನ್ನು ನೆನೆಸಿಕೊಂಡು ಹೇಳಿಕೊಳ್ಳುವಾಗ, ಅವುಗಳಲ್ಲಿ ನಮ್ಮೂರ ಹೊಳಿ, ಹೊಳಿದಾರಿ, ಹೊಳಿದಂಡೆಯ ಮರಗಳ ರೆಫೆರೆನ್ಸ್ ಕೇಳಿ ಅವನಿಗೆ ನಮ್ಮೂರ ಹೊಳಿ ನೋಡ ಬೇಕೆಂದು ಹುಕಿ ಹೊಕ್ಕಿತು. ಊರಿಗೆ ಕರೆದುಕೊಂಡು ಹೋಗಲು ನನಗೆ ಗಂಟು ಬಿದ್ದ. ಊರಲ್ಲಿನ ಮನೆ ಮಾರಿ ಬೆಂಗಳೂರಿನಲ್ಲಿಯೇ ಝಂಡಾ ಊರಿ, ಕೆಲ ವರುಷಗಳಿಂದ ಊರಿಗೆ ಹೋಗಿರದ ನಾನು, ಅವನ ಕಾಟ ತಡೆಯಲಾರದೇ ಊರಿಗೆ ಕರೆದುಕೊಂಡು ಹೋದೆ. ಊರಲ್ಲಿ ಪರಿಚಿತರನ್ನು ಭೇಟಿ ಮಾಡಿದನಂತರ, ಊರಲ್ಲಿಯೇ ಇರುವ ಗೆಳೆಯನ ಹತ್ತಿರ ಹೊಳೆ ದಾರಿಯ ಬಗ್ಗೆ ವಿಚಾರಿಸಿದೆ. ಮೊದಲು ಚಕ್ಕಡಿಗಳು, ಟ್ರ್ಯಾಕ್ಟರುಗಳು ಮಳೆಗಾಲದಲ್ಲಿ ಓಡಾಡಿ ದಾರಿಯಲ್ಲಿ ದೊಡ್ಡ- ದೊಡ್ಡ ತಗ್ಗುಗಳಾಗಿರುತ್ತಿದ್ದವು, ಅವುಗಳ ನಡುವೆ ನನ್ನ ಕಾರು ಹೋದೀತೆ ಎನ್ನುವುದು ನನ್ನ ಅನುಮಾನವಾಗಿತ್ತು. ನನ್ನ ಗೆಳೆಯ “ಡಾಂಬರ್ ಹಾಕಿದ ಮ್ಯಾಗ ಹೊಳಿದಾರಿ ಭಾಳ ಬೆಷ್ಟ್ ಆಗೇತಿ. ಹೊಳಿಗಿ ಈಗ ಪೂಲ್ ಕಟ್ಟ್ಯಾರ, ಹಿಂಗಾಗಿ ನೀನು ಕಾರಿನ್ಯಾಗ ಆ ಕಡಿ ದಂಡಿಗೆ ಸೈತ ಹೋಗಿ ಬರಬಹುದು. ಹೊಳಿ ದಂಡಿ ಮ್ಯಾಗ ಈಗ ಒಂದು ಹಣಮಪ್ಪನ ಗುಡಿ ಕಟ್ಟ್ಯಾರ.” ಎಂದು ಮಾಹಿತಿ ಕೊಟ್ಟ. ಅಷ್ಟೇ ಅಲ್ಲದೇ “ಗುಡಿಯ ಕಟ್ಟಿಯ ಮ್ಯಾಲ ಹತ್ತು ನಿಮಿಷ ಕುಂತು ಬಂದರ ಮನಸು ಪ್ರಶಾಂತ ಆಕ್ಕತಿ” ಎಂದು ಅರ್ಧ ಕಣ್ಣು ಮುಚ್ಚಿ ಕೈ ಮುಗಿದು ಹೇಳಿದ. ಅಷ್ಟಕ್ಕೆ ನಿಲ್ಲದೇ “ಈಗ ಊರಾಗ ನಳ ಬಂದ ಮ್ಯಾಗ ಹೊಳಿ ಕಡೇ ಯಾರೂ ಹೋಗುದಿಲ್ಲ. ಅದಕ ಕತ್ತಲ್ಯಾದ ಮ್ಯಾಗ ಜನರ ಉಲುವು ಭಾಳ ಕಡಿಮಿ ಇರತೈತಿ, ಜಲ್ದೀ ವಾಪಸ್ ಬಂದು ಬಿಡ್ರಿ “ ಎಂದೂ ಕೂಡ ಸೇರಿಸಿದ.     
ನಾನೂ ನನ್ನ ಮಗ ಹೊಳೆಗೆ ಕಾರಿನಲ್ಲಿ ಹೊರಟೆವು. ಗೆಳೆಯ ಹೇಳಿದಂತೆ ಹೊಳೆ ದಾರಿಗೆ ಟಾರು ಹಾಕಿದ್ದರು. ತಕ್ಕ ಮಟ್ಟಿಗೆ ಅಗಲ ಕೂಡ ಮಾಡಿದ್ದರು. ಹೊಳೆಯ ದಂಡೆಯ ಮುಟ್ಟಿದಾಗ ಚಿಕ್ಕದಾದರೂ ಚೊಕ್ಕದಾದ ಹಣಮಪ್ಪನ ಗುಡಿ ಕಂಡಿತು, ನದಿಗೆ ಕಟ್ಟಿದ ಸೇತುವೆಯೂ ಇತ್ತು.  ಗುಡಿಯ ಕಟ್ಟೆಯ ಮೇಲೆ ಕುಳಿತು ಬೀಸುವ ತಂಗಾಳಿಯ ಆನಂದಿಸುತ್ತ ಹೊಳೆಯ ಕಡೆ ನೋಡಿದರೆ – ಅಲ್ಲೇನಿದೆ ? ನದಿಯು ಬತ್ತಿ ಹೋಗಿ, ಅಲ್ಲಲ್ಲಿ ಮರಳು ತೆಗೆದ ಗುಂಡಿಗಳನ್ನು ಬಿಟ್ಟರೆ, ನಮ್ಮ ನೈಸು ರೋಡಿನಂತೆ ಸಪಾಟಾಗಿ  ಕಾಣುತ್ತಿದೆ  :-(

ಬಾಲಂಗೂಚಿ:
1.      1.ಈ ಬರಹದ ತಲೆಬರಹ ಜೋಗಿಯವರ ಕಾದಂಬರಿ “ನದಿಯ ನೆನಪಿನ ಹಂಗು” ಹೆಸರಿನಿಂದ ಸ್ಪೂರ್ತಿಗೊಂಡಿದೆ. ಹೀಗಾಗಿ ಈ ಬರಹ ನದಿಯ ನೆನಪಿನ ಜೊತೆಗೆ ಜೋಗಿಯವರ ಹಂಗಿನಲ್ಲಿ ಕೂಡ ಇದೆ.
2.     2.ನಾನು ಊರಿಗೆ ಹೋಗಿದ್ದು ಕೆಲ ತಿಂಗಳುಗಳ ಹಿಂದೆ. ಈಗ ಚನ್ನಾಗಿ ಮಳೆಯಾಗಿ ಮಲಾಪಹಾರಿ ಮೈತುಂಬಿ ತನ್ನ ಹಿಂದಿನ ಗತ್ತಿನಲ್ಲಿಯೇ ಹರಿಯುತ್ತಿರಲಿ ಎಂದು ಹಾರೈಕೆ.         

Tuesday, July 1, 2014

ಅಚ್ಚಿ ದಿನ ಬರಲಿ

ಅದ್ಯಾರೋ ಆರಿಸಿ ಬಂದದ್ದಕ್ಕೆ ಅಚ್ಛೆ ದಿನ ಬರತಾವು ಅಂತ ಜನ ಮಾತಾಡ್ತಾರ. ಅಚ್ಛೆ ದಿನ ಬರಲಿ, ಬಿಡಲಿ, ನಾವು-ನೀವು ಮಾತ್ರ 'ಅಚ್ಚಿ ದಿನ' (ಜೋಳದ ರೊಟ್ಟಿಗೆ ಉತ್ತರ ಕರ್ನಾಟಕದಲ್ಲಿ  ಚಿಕ್ಕಮಕ್ಕಳು ಅಚ್ಚಿ ಎನ್ನುತ್ತಾರೆ) ಮಾಡೋಣ. ಅವರ 'ರಾಮ'ರಾಜ್ಯ ಬಂದರೂ, ಬರದಿದ್ದರೂ ರಾಗಿ-ಜೋಳ-ನವಣೆ-ಸಜ್ಜೆ ಇತ್ಯಾದಿ ಕಿರು ಧಾನ್ಯಗಳನ್ನು ಆದಷ್ಟು ಉಪಯೋಗಿಸಿ, ಮಾಲಿನ್ಯ-ಗ್ಲೋಬಲ್ ವಾರ್ಮಿಂಗ್- ಜಲಕ್ಷಾಮ ಇತ್ಯಾದಿ ಸುಟ್ಟು-ಸುಡುಗಾಡುಗಳನ್ನು ಕಡಿಮೆ ಮಾಡುವ ಕಿರು ಪ್ರಯತ್ನ ಮಾಡೋಣ. 
 
ಅಂದ ಹಾಗೆ ದಕ್ಷಿಣ ಬೆಂಗಳೂರಲ್ಲಿ ನೀವಿದ್ದು, 'ಅಚ್ಚಿ ದಿನ' ಮಾಡಬೇಕೆಂದಿದ್ದರೆ, ನಿಮಗೆ ಇನ್ನೊಂದು ಹೊಸ ಆಯ್ಕೆ ಇದೆ:  
 

ಉಳಿದಂತೆ ಬೆಂಗಳೂರಿನ ರೊಟ್ಟಿ ಅಂಗಡಿ ಕಿಟ್ಟಪ್ಪಗಳ ಪಟ್ಟಿ ನನ್ನ ಬ್ಲಾಗಿನಲ್ಲಿ ಇದೆ, ನೋಡಿ.

 

Wednesday, August 14, 2013

ಸ್ವಾತಂತ್ರ್ಯದಿನದ ಶುಭಾಶಯಗಳು


ಭಾರತದ ಸ್ವಾತಂತ್ರ್ಯ ಸಂಗ್ರಾಮ ಎನ್ನುವುದು ಹಲವು ತೊರೆಗಳ ಮಹಾನದಿ. ಜೋಗ ಜಲಪಾತದ ಹತ್ತಿರವಿರುವ ಮಾವಿನಗುಂಡಿಯಲ್ಲೂ ಅಂತಹ ಒಂದು ಸ್ವಾತಂತ್ರ್ಯ ಸಂಗ್ರಾಮದ ಸೆಲೆಯ ಸ್ಮಾರಕವಿದೆ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದಲ್ಲಿ ಹಲವು ಬಲಿದಾನಗಳ ಪಾಲಿದೆ. ಆ ಎಲ್ಲ ಬಲಿದಾನಗಳಿಗೆ ಸ್ವಾತಂತ್ರ್ಯದಿನದಂದು ಒಂದು ಶರಣು..






Saturday, March 16, 2013

ಒಂದು ಹಳೆಯ ಬರಹ : ಮನೆಯ ಹಣೆ’ಬರಹ’

ಹಿಂದೆ ಒಮ್ಮೆ ಟಿವಿಯಲ್ಲಿ ಲೋಕಾಯುಕ್ತರು ಯಾವುದೋ ಕಂದಾಯ ಇಲಾಖೆಯ ಅಧಿಕಾರಿಯ ಮನೆಯ ಮೇಲೆ ದಾಳಿ ಮಾಡಿದ್ದನ್ನು ತೋರಿಸುತ್ತಿದ್ದರು. ಆ ಅಧಿಕಾರಿಯು ಅಕ್ರಮವಾಗಿ ಎಷ್ಟೊಂದು ಕಿಲೋ ಬೆಳ್ಳಿ ಬಂಗಾರ, ಎಷ್ಟು ಸೈಟು, ತೋಟ-ಪಟ್ಟಿ ಸಂಪಾದಿಸಿದ್ದ ಎಂಬುದನ್ನು ವರದಿಗಾರ ಹೇಳುತ್ತಿದ್ದ. ಆ ಅಧಿಕಾರಿಯು ಕಟ್ಟಿಕೊಂಡಿದ್ದ ಅಂಥ ಅಲೀಶಾನ್ ಬಂಗಲೆಯನ್ನು ತೋರಿಸುತ್ತ, ಅದರ ಈಗಿನ ಮಾರುಕಟ್ಟೆ ಬೆಲೆ ಎಷ್ಟು ಎಂದು ವಿವರಿಸುತ್ತಿದ್ದ. ಅಧಿಕಾರಿಯ ಅಕ್ರಮ ಗಳಿಕೆ ನನಗೆ ಆಶ್ಚರ್ಯ ತರಿಸಲಿಲ್ಲ. ನಮ್ಮ ಸರಕಾರಿ ಅಧಿಕಾರಿಗಳು ‘ಸರಕಾರದ ಕೆಲಸ-ದೇವರ ಕೆಲಸ’ ಎಂದುಕೊಂಡು ದುಡಿದಿದ್ದರೆ, ನಮ್ಮದ್ಯಾವಗಲೋ ರಾಮರಾಜ್ಯವಾಗ ಬೇಕಿತ್ತು. ಅದು ಬಿಡಿ. ನನ್ನ ಕಣ್‌ಸೆಳೆದದ್ದು ಆ ಅಧಿಕಾರಿ ತನ್ನ ಅರಮನೆಯಂತಹ ಮನೆಗೆ ಇಟ್ಟ ಹೆಸರು ‘ಸುಮ್ಮನೆ’. ಇಂತಹ ಹೆಸರಿಟ್ಟವನು ವಿಕ್ಷಿಪ್ತನಾ ? ಅಥವಾ ‘ಇಲ್ಲಿರುವುದು ಸುಮ್ಮನೆ. ಅಲ್ಲಿರುವುದು ನಮ್ಮನೆ’ ಎಂದು ಹೇಳಿಕೊಳ್ಳಬಯಸುವ ದಾರ್ಶನಿಕನಾ ? ಇಲ್ಲವೇ ‘ಸುಮ್ಮನೆ ಅಂತ ಈ ಮನೆ ಕಟ್ಟೀದಿನಿ. ನಾನು ಮನಸು ಮಾಡಿದ್ರೆ ರಾಷ್ಟ್ರಪತಿ ಭವನಾನೆ ಕಟ್ತಿದ್ದೆ’ ಎಂದು ಹೇಳುವ ಮಹಾಗರ್ವಿಯಾ? ನನಗೆ ಬಗೆಹರಿದಿರಲಿಲ್ಲ.




ಇದಾಗಿ ಎಷ್ಟೋ ದಿನಗಳಾದರೂ ‘ಸುಮ್ಮನೆ’ ಎಂಬ ಹೆಸರು ಸುಮ್ಮನಿರದೇ ನನ್ನನ್ನು ಕೊರೀತಾ ಇತ್ತು. ಮನೆಗೆ ಹೀಗೆ ಏನಾದರೂ ಹೆಸರು ಇಡಬಹುದಾ? ಹೆಸರು ಇಡಲೇ ಬೇಕಾ ? ನಗರಸಭೆಯವರು ಕೊಟ್ಟ ಬಾಗಿಲ ಸಂಖ್ಯೆ ಸಾಕಾಗಲ್ವ ? ಇಷ್ಟಾಗಿ ಮನೆಗೆ ಹೆಸರಿಡುವ ಸಂಪ್ರದಾಯ ಯಾವಾಗಿನಿಂದ ಶುರುವಾಯ್ತು ? ವೇದಕಾಲದಲ್ಲಿ ಹೀಗೆ ಹೆಸರಿಡ್ತಾ ಇದ್ರಾ ? ಪ್ರಾಚೀನ ಇಜಿಪ್ಷಿಯನ್ನರು, ಗ್ರೀಕರು, ರೋಮನ್ನರು ಮನೆಗೆ ಹೆಸರಿಡ್ತಾ ಇದ್ರಾ ? ಆದಿಮಾನವ ತನ್ನ ಗುಹೆಗೆ ಹೆಸರಿಡ್ತಾ ಇದ್ನಾ ? ಏನಪ್ಪ ಇವನು ಇದ್ಯಾವುದೋ ಸಮಾಜೋ-ಐತಿಹಾಸಿಕ ಸಂಗತಿಗಳನ್ನು ಇಲ್ಲಿ ಚರ್ಚಿಸುತ್ತಿದ್ದಾನೆ ಅಂತ ನೀವೆಂದುಕೊಂಡಿದ್ರೆ, ಅದರಿಂದ ಉದ್ವೇಗಗೊಂಡಿದ್ದರೆ, ರಿಲಾಕ್ಸ್!! ಪಿಎಚ್‌ಡಿ ಮಾಡಿಕೊಳ್ಳುವವರು ಯಾರಾದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿ, ನಾನು ಈ ಲೇಖನದಲ್ಲಿ ಮನೆಬರಹ - ಅಂದ್ರೆ ಮನೆಯ ಹಣೆಬರಹ , ಅಂದ್ರೆ ಮನೆಯ ಹೆಸರು - ಅದರ ಬಗ್ಗೆ ಸ್ವಲ್ಪ ಲಘು ಚರ್ಚೆ ಮಾಡ್ತಾಇದ್ದೇನೆ.



ನಾನು ಸಣ್ಣವನಿದ್ದಾಗ, ಯಾವುದೇ ಮನೆಯನ್ನು ಗುರುತಿಸ ಬೇಕೆಂದರೆ ಅದಕ್ಕೆ ಹೆಸರು ಬೇಕಾಗುತ್ತಿರಲಿಲ್ಲ- ಬರೀ ಅದರ ಲಕ್ಷಣಗಳಿಂದಲೇ ಗುರುತಿಸುತ್ತಿದ್ದೆವು. ಬಂಕದ ಮನೆ, ಅಟ್ಟದ ಮನೆ, ಕಟ್ಟಿಯ ಮನೆ, ಮೆಟ್ಟಿಲ ಮನೆ, ಹಂಚಿನ ಮನೆ ಹೀಗೆ. ಒಂದೊಂದು ಸಲ ಆ ಮನೆಯಲ್ಲಿರುವವರಿಂದ ಮನೆಯನ್ನು ಗುರುತಿಸುತ್ತಿದ್ದೆವು - ಉದಾಹರಣೆಗೆ ಮೀಸೆಗೌಡರ ಮನೆ, ಹಾಲಿನ ಶಾಂತವ್ವನ ಮನೆ, ಸೈಕಲ್ ಅಂಗಡಿ ಮೈಬುಸಾಬನ ಮನೆ ಹೀಗೆ. ಬಹುಶಃ ನಾನು ಕನ್ನಡಶಾಲೆಯಲ್ಲಿ ಕಲಿಯುತ್ತಿರುವ ಸಮಯದಲ್ಲಿ ನಮ್ಮೂರಿಗೂ ಸಿಮೆಂಟಿನ ಕಟ್ಟಡಗಳು ಬಂದವು. ಆಗ ಮನೆ ಕಟ್ಟಿದವರೆಲ್ಲ ತಮ್ಮ ಮನೆಯ ಮೇಲೆ ಸಿಮೆಂಟಿನಿಂದ ತಮ್ಮ ಇಷ್ಟದೇವತಾ ಹೆಸರುಗಳನ್ನೂ ಮತ್ತು ಕಟ್ಟಿಸಿದ ಇಸ್ವಿಯನ್ನು ಬರೆಸುತ್ತಿದ್ದರು. ‘ಶ್ರೀ ಗೊಡಚಿ ವೀರಭದ್ರೇಶ್ವರ ಪ್ರಸನ್ನ - ೧೯೮೩’, ‘ಎಡೆಯೂರು ಸಿದ್ದಲಿಂಗೇಶ್ವರ ಕೃಪಾ ೧೯೮೫’ ಹೀಗೆ ಬರೆದಿರುತ್ತಿದ್ದರು. ಹೋಳಿ ಹುಣ್ಣಿಮೆಯ ಸಮಯದಲ್ಲಿ ನಾವು ಹುಡುಗರು ‘ಎಚ್ಚರೇಶ್ವರ’ ಮನೆಮುಂದ ಎರಡು ಹೊರಿ ಕಟಗಿ ಹಾಕ್ಸ್ಯಾರ.. ‘ಮಾಲತೇಶ’ ಮನಿಯವರು ಹಿತ್ತಲದಾಗ ಕುಳ್ಳು ಹಚ್ಚ್ಯಾರ.. ಎಂದು ಇನ್ಫಾರ್‍ಮೇಶನ್ ಕೂಡಿಸಿ ಕಾಮದಹನಕ್ಕಾಗಿ ಉರುವಲನ್ನು ಎಲ್ಲೆಲ್ಲಿಂದ ಕದ್ದು ತರಬೇಕೆಂದು ಪ್ಲಾನು ಮಾಡುತ್ತಿದ್ದೆವು. ಬಹುಶಃ ಆವಾಗಲೇ ನನಗೆ ಮೊದಲ ಬಾರಿಗೆ ಮನೆಗಳನ್ನು ಅಕ್ಷರಗಳಿಂದ ಗುರುತಿಸಬಹುದೆಂದು ತಿಳಿದಿದ್ದು.



ನಾನು ಕಾಲೇಜು ಓದಲು ಧಾರವಾಡಕ್ಕೆ ಬಂದಾಗ, ಅಲ್ಲಿಯ ಬಹುತೇಕ ಮನೆಗಳಿಗೆ ಅದಾಗಲೇ ಹೆಸರುಗಳು ಬಂದಿದ್ದವು. ಆ ಹೆಸರುಗಳನ್ನು ಇಡುವುದರಲ್ಲಿ ವಿವಿಧ ನಿರ್ದಿಷ್ಟ ಕ್ರಮಗಳನ್ನು ಗುರುತಿಸಬಹುದಿತ್ತು. ಸ್ವಲ್ಪ ದೈವಭಕ್ತಿ ಇದ್ದವರು ‘ಬನಶಂಕರಿ ನಿಲಯ’, ‘ಮಲ್ಹಾರ ಕೃಪಾ’,’ದುರ್ಗಾ ನಿಲಯ’, ‘ಲಕ್ಷ್ಮಿ ನಿವಾಸ’ ಎಂದು ಇಟ್ಟಿರುತಿದ್ದರು. ದೇವರ ಮೇಲಿನ ಭಕ್ತಿಗಿಂತ ಮಕ್ಕಳ, ಹೆಂಡತಿಯ ಮೇಲೆ ಪ್ರೀತಿಹೊಂದಿರುವವರು ಅವರ ಹೆಸರುಗಳನ್ನೇ - ಸಂತೋಷ, ಸಂಭ್ರಮ, ಪ್ರತಿಮಾ, ಕುಸುಮಾ- ಇತ್ಯಾದಿಗಳನ್ನೇ ಮನೆಗೂ ಇಟ್ಟಿರುತ್ತಿದ್ದರು. ಇರುವಷ್ಟು ದಿನ ಅತ್ತೆ-ಮಾವಂದಿರನ್ನು ನಿಗ್ಗರಿಸಿ-ನೀರುಹೊಯ್ಸಿದವರು, ಅತ್ತೆ-ಮಾವ ಓಂ ನಮಃ ಶಿವಾಯಃ ಅಂದಮೇಲೆ ಅವರ ಹೆಸರುಗಳನ್ನೇ ತಮ್ಮ ಮನೆಗಳಿಗೆ ಇಟ್ಟು ಕೃತಾರ್ಥರಾಗಿರುತ್ತಿದ್ದರು. ಕಲಾವಿದರು, ಸಾಹಿತಿಗಳು ತಮಗೆ ಹೆಸರು-ದುಡ್ಡು ತಂದುಕೊಟ್ಟ ಕೃತಿಗಳ ಹೆಸರನ್ನೇ - ಹಸಿರು ಹಾವು, ಹಳದಿ ಚೇಳು, ಕಾಳಿಂಗ ಸರ್ಪ, ಜ್ವಾಲಾಮುಖಿ ಇತ್ಯಾದಿ- ತಮ್ಮ ಮನೆಗಳಿಗೂ ಇಟ್ಟಿರುತ್ತಿದ್ದರು. ಧಾರವಾಡದಲ್ಲಿ ಕವಿಗಳ ಸಂಖ್ಯೆ ಗಣನೀಯ. ಆದುದರಿಂದಲೇ ಅಲ್ಲಲ್ಲಿ ಬೆಳದಿಂಗಳು, ಚಂದ್ರಿಕೆ, ಚಕೋರ, ತಂಗಾಳಿ, ಮಂದಾನಿಲ ಇತ್ಯಾದಿ ** ಆದ ಮನೆ ಹೆಸರುಗಳು ಕಾಣಿಸ್ತಿದ್ದವು. ನಮ್ಮ ಪ್ರಾಧ್ಯಾಪಕರೊಬ್ಬರ ಮನೆಯ ಹೆಸರು ಸ್ವಲ್ಪ ಭಿನ್ನವಾಗಿತ್ತು. ಅವರು ಬಹಳ ಓದಿಕೊಂಡವರು, ಬುದ್ಧಿವಂತರು. ಚೆನ್ನಾಗಿ ಪಾಠವನ್ನೂ ಮಾಡುತ್ತಿದ್ದರು, ಖಾಸಗಿ ಟ್ಯೂಶನಲ್ಲಿ!! ಇಂಜನೀಯರಿಂಗ್ ಡ್ರಾಯಿಂಗ್(ED) ಮತ್ತು ಇಂಜನೀಯರಿಂಗ್ ಮೆಕ್ಯಾನಿಕ್ಸ್ (EM) ವಿಷಯಗಳಿಗೆ ಇಂಜನೀಯರಿಂಗ್, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಮನೆಪಾಠ ಹೇಳಿ, ಆ ದುಡ್ಡಿನಿಂದ ಭವ್ಯವಾದ ಮನೆಕಟ್ಟಿದ್ದರು. ತಮಗೆ ಅಷ್ಟೈಶ್ವರ್ಯ ನೀಡಿದ ಆ ಎರಡು ವಿಷಯಗಳಿಗೆ ಕೃತಜ್ಞತೆ ಎಂಬಂತೆ ಮನೆಗೆ ಎಡೆಮ್ (EDEM) ಎಂದು ಹೆಸರಿಟ್ಟಿದ್ದರು. ಧಾರವಾಡದಲ್ಲಿದ್ದ ಇನ್ನೊಂದು ಮನೆಹೆಸರೂ ನನಗೆ ಬಹಳ ದಿನಗಳವರೆಗೆ ಸೊಜಿಗವನ್ನುಂಟು ಮಾಡಿತ್ತು. ‘ಗರಗಸ’ ಎನ್ನುವ ಆ ಮನೆಯ ಮುಂದಿನಿಂದ ನಾನು ಪ್ರತಿದಿನ ಹೋಗುವಾಗ-ಬರುವಾಗ ‘ಮನೆಗೆ ಹೀಗೆಲ್ಲ ಹೆಸರಿಡಬಹುದಾ ? ಇಂಥ ಹೆಸರಿಡುವುದೇ ಒಂದು ಫಾಶನ್ನಾದರೆ ಜನ ನಾಳೆ ತಮ್ಮ ಮನೆಗಳಿಗೆ ಸುತ್ತಿಗೆ, ಸ್ಕ್ರೂಡ್ರೈವರು, ಪಕ್ಕಡು, ಸಲಿಕೆ, ಗುದ್ದಲಿ ಎಂದು ಹೆಸರಿಡಬಹುದಲ್ಲವೇ ?’ ಎಂದು ವಿಸ್ಮಯಿಸುತ್ತಿದ್ದೆ. ಒಂದಿನ ‘ಗರಗಸ’ದ ಮುಂದೆ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ, ಮನೆಯ ಮಾಲಿಕರು ಗೇಟಿನ ಹತ್ತಿರ ನಿಂತಿರುವುದು ಕಾಣಿಸಿತು. ಮನೆಗೆ ಹಾಗೇಕೆ ಹೆಸರಿಟ್ಟಿದ್ದೇರೆಂದು ಕೇಳಿದೆ. ಒಳ್ಳೆ ಪೈಲ್ವಾನರಂತಿದ್ದ ಅವರು ‘ನೋಡು ತಮ್ಮ್ಯಾ, ನನ್ನ ಹೆಸರು ಗಣಪತಸಾ, ಹೆಣತಿದು ರಜನಿ, ಮಗಂದು ಗಜಾನನ ಮತ್ತ* ಮಗಳದ್ದು ಸರಿತಾ. ಎಲ್ಲಾರ ಹೆಸರಿನ ಮೊದ್ಲೆ ಅಕ್ಷರದಲೇ ಮನಿಹೆಸರಿಟ್ಟೇವಿ. ನಿನ್ನದೇನಾರ ತಕರಾರ ಐತೇನು ?’ ಎಂದು ಉಟ್ಟ ಲುಂಗಿಯನ್ನು ಮೇಲೆ ಕಟ್ಟುತ್ತ ನನ್ನೆಡೆಗೆ ಬರತೊಡಗಿದ್ದರು. ಯಾಕೆ ಬೇಕು ಗರಗಸದ ಸಹವಾಸ ಎಂದುಕೊಂಡು ಸೈಕಲ್ಲಿನ ಮೇಲೆ ಹಾರಿ ಕುಳಿತು ನಾನು ಓಟಕಿತ್ತಿದ್ದೆ.

ಮನೆಮಾಲಿಕರು ತಮ್ಮಮನೆಗೆ ಏನೇ ಹೆಸರಿಟ್ಟರೂ, ಆ ಹೆಸರನ್ನು ಎಷ್ಟೇ ದೊಡ್ಡದಾಗಿ, ಕನ್ನಡ-ಇಂಗ್ಲೀಷ್ ಎರಡರಲ್ಲಿಯೂ ಬರೆದು ಹಾಕಿದರೂ ಜನ ಮನೆಗಳನ್ನು ತಮ್ಮದೇ ರೀತಿಯಿಂದ ಗುರುತಿಸತಿದ್ದರು. ಬಹಳಷ್ಟು ಸಲ ಮನೆ ಮಾಲಿಕರ ಹೆಸರು-ವೃತ್ತಿಗಳಿಂದಲೇ ಗುರುತಿಸುತ್ತಿದ್ದರು. ‘ಕಲಘಟಗಿ ಕಂಟ್ರಾಕ್ಟರರ ಮನಿ’, ‘ರೋಣದ ವಕೀಲರ ಮನಿ’, ‘ಜೋಷಿ ಡಾಕ್ಟರ್ ಮನಿ’, ‘ದೇಶಪಾಂಡೆ ಮಾಸ್ತರ ಮನಿ’ ಹೀಗೆ. ನನ್ನಂತಹ ಪಡ್ಡೆಗಳು ಮಾತ್ರ ಇತರ ಆಸಕ್ತಿಕರ ವಿಷಯಗಳನ್ನು ಪಾಯಿಂಟ್ ಆಫ ರೆಫರೆನ್ಸ್ ಮಾಡಿಕೊಂಡಿರುತ್ತಿದ್ದೆವು. ‘ಟಿವಿಎಸ್ ಚಂಪಿ ಮನಿ’, ‘ ಕನೈಟಿಕ್ ಕಮಲಿ ಮನಿ’, ‘ಲೂನಾ ಲಲತಿ ಮನಿ’ ಹೀಗೆ.

ಧಾರವಾಡವನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಈಗ ಬಹಳ ದಿನಗಳೇ ಆಗಿವೆ. ಇಂದಿರಾನಗರ - ಕೋರಮಂಗಲದ ರಸ್ತೆಗಳು, ಓಣಿಗಳೂ ಅಂಗೈಯೊಳಗಿನ ಗೆರೆಗಳಷ್ಟೇ ಪರಿಚಯವಾದರೂ, ಇಲ್ಲಿಯ ಮನೆಗಳ ಹೆಸರುಗಳು ಇನ್ನೂ ನನಗೆ ಆತ್ಮೀಯವಾಗಿಲ್ಲ. ಇಲ್ಲಿ ‘ಲಾ-ಡೆ-ಪರ್ಲೆ’, ‘ಮಂಜಿಲ್-ಎ-ಆಸಮಾ’, ‘ಬೆಹನೋಯಿಯಾ ಆಶಿಯಾನಾ’ ಹೀಗೆ ಏನೇನೋ ಹೆಸರಿರುವ ಮನೆಗಳಿವೆ. ಆ ಹೆಸರುಗಳು ಯಾವ ಭಾಷೆಯವೋ ಏನೋ ? ಆಯಾ ಭಾಷೆಗಳಲ್ಲಿ ಒಳ್ಳೆಯ ಅರ್ಥವಿದೆಯೋ ಅಥವಾ ಅವು ಬೈಗುಳಗಳೋ ದೇವರಿಗೇ ಗೊತ್ತು. ಇದು ಅರ್ಥಗೊತ್ತಾಗದಂತಹ ಹೆಸರುಗಳ ಕತೆಯಾದರೆ, ಅರ್ಥಗೊತ್ತಾಗುವಂತಹ ಹೆಸರುಗಳ ಗೋಳು ಇನ್ನೊಂದು. ‘ಸುಖವಿಲ್ಲಾ’, ‘ಧನವಿಲ್ಲಾ’, ‘ಜ್ಞಾನವಿಲ್ಲಾ’ ಎಂದೆಲ್ಲಾ ಮನೆಗೆ ಹೆಸರಿಟ್ಟುಕೊಂಡವರ ಮಾನಸಿಕ ಸ್ಥಿತಿ ಬಗ್ಗೆ ನನಗೆ ಮರುಕ ಬರುತ್ತದೆ. ಅದಿಲ್ಲ, ಇದಿಲ್ಲ ಎಂದು ಕೊರಗಿ, ಆ ಕೊರಗನ್ನೇ ಮನೆಗೆ ಹೆಸರಿಡುವ ಈ ಮನೆಮಾಲಿಕರುಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಹೊಂದಿರುವ ತೃಪ್ತಿಯಾದರೂ ಇರಬಾರದೇ? ಇನ್ನೊಂದಿಷ್ಟು ಮನೆ ಹೆಸರುಗಳಿವೆ - ಶುದ್ಧಾಂಗ ಶಾಪಗಳು. ಸಾಯಿ ರಕ್ಷಿತಾ, ಸಾಯಿ ದರ್ಶನ್, ಸಾಯಿ ಪ್ರಭಾ, ಸಾಯಿ ನಯನಾ ಇತ್ಯಾದಿ. ರಕ್ಷಿತಾನೋ ದರ್ಶನನೋ ಸಾಯಲಿ ಎನ್ನುವ ಕೀಳು ಆಸೆ ಮನದಲ್ಲಿದ್ದರೆ, ಮನೆಹೆಸರಲ್ಲಿಯೂ ಬರಬೇಕಾ? ಸಕಲ ಜೀವಜಾತಕೂ ಲೇಸನ್ನೇ ಬಯಸಿದ ಮಹಾನುಭಾವರ ಈ ನಾಡಿನಲ್ಲಿ ಇದೇನಿದು ಅಮಂಗಳಕರ ಹೆಸರುಗಳ ಹಾವಳಿ ?



ಬೆಂಗಳೂರಿನ ಈ ಭಾಗದ ಜನರು ಸ್ವಲ್ಪ ಮಾನಗೆಟ್ಟವರೇ ಎಂದು ಅನುಮಾನ ಬರುವಂತೆ ತಮ್ಮ ಮನೆಗಳಿಗೆ ಶಾಂತಿ’ಸ್ ಅಥವಾ ಅನ್ಸಿ’ಸ್ ಎಂದು ಬೋರ್ಡು ಹಾಕಿಕೊಂಡಿರುತ್ತಾರೆ. ನಮ್ಮೂರಲ್ಲಿ ಶಾಂತಾ ಅಥವಾ ಅನಸೂಯ ಎಂದು ಹೆಸರಿಟ್ಟುಕೊಂಡವರಿಗೆ ಅವರೊಂದಿಗೆ ದ್ವೇಷವಿದ್ದವರು ಮಾತ್ರ ಅವರನ್ನು ಹಿಂದಿನಿಂದ ಶಾಂತಿ, ಅನಿಸಿ ಎಂದು ಕರೆಯುತ್ತಾರೆ. ಉಳಿದವರೆಲ್ಲ ಅವರನ್ನು ಶಾಂತಕ್ಕಾ, ಶಾಂತವ್ವ, ಶಾಂತಾಬಾಯಿ ಎಂತಲೋ ಅನಸಕ್ಕಾ, ಅನಸವ್ವ, ಅನಸಾ ಎಂತಲೋ ಕರೆಯುತ್ತಾರೆ. ಯಾರಾದರೋ ಅವರ ಮನೆಯ ಮುಂದೆ ನಿಂತು ‘ಇದು ಅನಿಸಿ ಮನಿ, ಇದು ಶಾಂತಿ ಮನಿ’ ಎಂದರೆ ಮಚ್ಚೆ-ಮೂರುಪಾಲು ಜಗಳಗಳಾಗುತ್ತವೆ. ಆದರೆ ಈ ಜನ ‘ಇದು ಶಾಂತಿ ಮನೆ’ ‘ಇದು ಅನಿಸಿ ಮನೆ’ ಎಂದು ಬೋರ್ಡು ಬರೆದು ಹಾಕಿಕೊಳ್ಳುತ್ತಾರಲ್ಲ, ಇವರಿಗೆ ಮಹಿಳೆಯರ ಬಗ್ಗೆ ಗೌರವ ಇದೆ ಎಂದು ಹೇಗೆ ಹೇಳುವುದು ?



ಮುಗಿಸುವ ಮುನ್ನ:

ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಹೊಂದಬೇಕೆಂಬ ಕನಸು ಎಲ್ಲರಂತೆ ನನಗೂ ಇತ್ತು. ಹಾಗೆ ಹೊಂದಬಹುದಾದ ಮನೆಗೆ ಒಂದು ಒಳ್ಳೆಯ ಹೆಸರನ್ನೂ ನಿರ್ಧರಿಸಿಟ್ಟಿದ್ದೆ. ಆದರೆ ನನ್ನ ಆರ್ಥಿಕ ಮಿತಿಯಲ್ಲಿ ನನಗೆ ಬೇಕಾದಂತಹ ಮನೆ ಸಿಕ್ಕಿರಲಿಲ್ಲ. ಒಂದು ದಿನ ಬ್ಯಾಂಕಿನಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರೊಬ್ಬರು ಫೊನು ಮಾಡಿ ‘ನಮ್ಮ ಸುಸ್ತಿದಾರರೊಬ್ಬರ ಮನೆ ಲಿಲಾವಿಗೆ ಬಂದಿದೆ. ನೀವು ಪ್ರಯತ್ನಿಸಬಹುದು’ ಎಂದರು. ಅವರು ಹೇಳಿದ ಮನೆಯ ವಿಳಾಸವನ್ನು ಹುಡುಕಿಕೊಂಡು ಹೋದೆ. ಮನೆಯೇನೋ ಬಹಳ ಚೆನ್ನಾಗಿತ್ತು, ಆದರೆ ಮನೆಯ ಹೆಸರೇನು ಗೊತ್ತೇ? ‘ಕೃಷ್ಣಾರ್ಪಣ’!!

ಈ ಹೆಸರಿನಿಂದಲೇ ಮನೆ ಬ್ಯಾಂಕಾರ್ಪಣವಾಗುವ ಸನ್ನಿವೇಶ ಬಂದಿದೆ ಏನೋ ಎಂದು ಅಂದುಕೊಂಡೆ. ಅಂದೇ ಲಿಲಾವು ಶುರುವಾಯ್ತು. ಮೊದಲೆರಡು ಕೂಗಿನಲ್ಲಿಯೇ ಮನೆ ನನ್ನ ಮಿತಿಯನ್ನು ಮೀರಿದೆ ಎಂದು ಅನಿಸಿತು. ಆದರೂ ಇದು ಎಷ್ಟಕ್ಕೆ ಏರುತ್ತದೆ ಎಂಬುದನ್ನು ನೋಡಿಯೇ ಬಿಡೋಣವೆಂದು ನಿಂತುಕೊಂಡೆ. ಮನೆಯ ಬೆಲೆ ನನ್ನ ಕಲ್ಪನೆಯ ಪರಿಧಿಯನ್ನು ದಾಟಿ ಹೋಗುತ್ತಿರುವುದನ್ನು ಅಸಹಾಯಕತೆಯಿಂದ ನೋಡುತ್ತಾ ಬೆಂದಕಾಳೂರಿನಲ್ಲಿ ಸ್ವಂತ ಮನೆಯನ್ನು ಹೊಂದುವ ಮತ್ತು ಅದಕ್ಕೊಂದು ಸಾರ್ಥಕ ಹೆಸರಿಡುವ ಆಶೆಯನ್ನು ‘ಕೃಷ್ಣಾರ್ಪಣ’ ಮಾಡಿದೆ.