Showing posts with label Sonಕತೆ. Show all posts
Showing posts with label Sonಕತೆ. Show all posts

Saturday, August 17, 2013

Sonಕತೆ

ವ್ಯಕ್ತಿಗಳ ಹೆಸರುಗಳನ್ನೋ, ವಸ್ತುಗಳ ಹೆಸರುಗಳನ್ನೋ ಹೃಸ್ವೀಕರಿಸಿ ಅದು ಯಾವುದರ ಹೆಸರು ಕಂಡು ಹಿಡಿಯಲು ಇನ್ನೊಬ್ಬರಿಗೆ ಸವಾಲು ಹಾಕುವುದು ನನ್ನ , ನನ್ನ ಮಗ ಅನ್ನಪ್ಪನ ಮೆಚ್ಚಿನ ಟೈಮ್-ಪಾಸ್ ಆಟ. ಉದಾಹರಣೆಗೆ ನಾನು ‘ಕಿರಾಚೆ’ ಎಂದರೆ ‘ಕಿತ್ತೂರು ರಾಣಿ ಚೆನ್ನಮ್ಮ’ ಎಂದು ಅವನು ಉತ್ತರಿಸುವುದು, ಅವನು ‘ಸಂರಾ’ ಎಂದರೆ ನಾನು ‘ಸಂಗೊಳ್ಳಿ ರಾಯಣ್ಣ ‘ ಎಂದು ಲಾಂಗ್ ಫಾರ್ಮ್ ಹೇಳುವುದು ಹೀಗೆ.



ಆಟದಲ್ಲಿ ಬಂದ ಕೆಲ ಶಬ್ದಗಳು ನಮ್ಮ ಮನೆಯ ಶಬ್ದಭಂಡಾರದಲ್ಲಿ ಕಾಯಂ ಜಾಗ ಪಡೆದುಕೊಂಡಿವೆ. ಅನ್ನಪ್ಪನ ಮೆಚ್ಚಿನ ತಿಂಡಿ ಗಾರ್ಲಿಕ್ ಬ್ರೆಡ್ , ‘ಗಾಬ್ರೆ’ ಯಾಗಿಯೇ ನಮ್ಮ ಮನೆಯಲ್ಲಿ ಪ್ರಸಿದ್ಧವಾಗಿದೆಯಾದರೆ, ಅವನನ್ನು ರಮಿಸಲು ಉಪಯೋಗಿಸುವ ‘ಜಾಣಮರಿ’ ಶಬ್ದ ‘ಜಾಮ’ ಆಗಿ ಪ್ರಚಲಿತವಾಗಿದೆ. ಹಾಗೆಯೆ ಅನ್ನಪ್ಪನ ಮಾಮ ಮಲ್ಹಾರ ಪಾಟೀಲ್ ನ ಹೆಸರು ‘ಮಪಾ’ ಎಂದು ಹೃಸ್ವಗೊಂಡಿದ್ದರೆ, ನನ್ನ ತೀವ್ರ ವಿರೋಧದ ನಡುವೆಯೂ ಅನ್ನಪ್ಪ ಹ್ಯಾಗೋ ಕೊಂಡುಕೊಳ್ಳುವ ಕಿಂಡರ್ ಜಾಯ್, ‘ಕಿಜಾ’ ಎಂದು ಗುರುತಿಸಲ್ಪಡುತ್ತದೆ.


ಸಮಯ ಸಂದರ್ಭ ನೋಡದೇ, ಯಾವುದ್ಯಾವುದೋ ಪದಗಳನ್ನೂ ಹೃಸ್ವೀಕರಿಸಿ, ಅದು ಏನು ನನಗೆ ಸವಾಲು ಎಸೆಯುವ ಅನ್ನಪ್ಪನ ಆಟ ನನಗೆ ಒಂದೊಂದು ಸಾರಿ ಕಿರಿಕಿರಿ ಮಾಡುತ್ತದಾದರೂ ಅದು ಅವನ ಮತ್ತು ನನ್ನ ಮೆದುಳಿಗೆ ಒಂದು ರೀತಿಯ ವ್ಯಾಯಾಮ ಎಂದು ನಾನು ಸುಮ್ಮನಿರುತ್ತೇನೆ. ಆದರೆ ಅವನ ಈ ಮಿನಿಚರೈಜೇಶನ್ ನನಗೂ ಟೆನ್ಷನ್ ತರಬಹುದು ಎಂದು ನಾನು ಮೊನ್ನೆಯವರೆಗೂ ಅಂದು ಕೊಂಡಿರಲಿಲ್ಲ. ಅವತ್ತು ಅನ್ನಪ್ಪ ಬಂದು “ಇವತ್ತು ನಾನು ಮಿಸ್ಸ್ ಹೆಸರನ್ನು ಶಾರ್ಟ್ ಫಾರ್ಮ್ ಮಾಡಿದ್ದಕ್ಕೆ ನನಗೆ ಬಯ್ದರು“ ಎಂದದ್ದಕ್ಕೆ ನನಗೆ ಯಾಕೆ ಎಂದು ಅರ್ಥವಾಗಿರಲಿಲ್ಲ.


ಅಲ್ಲಾ ಅನ್ನಪ್ಪನ ಮಿಸ್ಸಿಗೆ ಯಾಕೆ ಸಿಟ್ಟು ಬಂದಿರಬಹುದು? ಕುವೆಂಪು, ಹಾಮಾನಾ, ಚಂಪಾ ಇತ್ಯಾದಿ ದೊಡ್ಡ-ದೊಡ್ಡ ಹೆಸರು ಮಾಡಿದ ಮಹನೀರೆಲ್ಲಾ ತಮ್ಮನ್ನು ಚಿಕ್ಕ-ಚಿಕ್ಕ ಹೆಸರುಗಳಿಂದನೇ ಕರೆಸಿಕೊಳ್ಳುತ್ತದ್ದರು. ಮಾಸ್ತರ ಜನರಲ್ಲಿಯಂತೂ ಹೃಸ್ವ ಹೆಸರು ಉಪಯೋಗಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿರುವ ಪರಂಪರೆ. ನಮಗೆ ಕಲಿಸುತ್ತಿದ್ದ ಎಲ್ ಕೃಷ್ಣಾನಂದ್ ಸರ್ ಗೆ ನಾವು ‘ಎಲ್ಕೆ ಸರ್’ ಎಂದು, ಸಹಿ ಮಾಡಲು ವಿ ಬರೆದು ಒಂದು ಚುಕ್ಕಿ ಇಟ್ಟು ಸಿ ಬರೆಯುತ್ತಿದ್ದ ವಿಜಯಾ ಸಿ ಮ್ಯಾಡಂಗೆ ನಾವು ‘ವಿ ಡಾಟ್ ಸಿ ಮ್ಯಾಡಂ’ ಎಂದು ಕರೆದಾಗ ಯಾರೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಆಗಿಲ್ಲದ್ದು ಈಗ್ಯಾಕೆ ಅಪಥ್ಯ ವಾಗಿರಬೇಕು? ಎಂದು ವಿಚಾರ ಮಾಡುತ್ತಾ, ಅನ್ನಪ್ಪನಿಗೆ ಅವರ ಮಿಸ್ಸಿನ ಹೆಸರೇನು ಎಂದು ಕೇಳಿದ.


“ಹೇಮ ಲತಾ ಮ್ಯಾಮ್” ಎಂದು ಅನ್ನಪ್ಪನ ಉತ್ತರ ಕೇಳಿ, ನಾನು ‘ಹೇಮ’ ದಲ್ಲಿ ‘ಹೇ’ ಅಕ್ಷರವನ್ನು ‘ಲತಾ’ ದಲ್ಲಿನ ‘ಲ’ವನ್ನು ತೆಗೆದುಕೊಂಡು ಶಾರ್ಟ್ ಫಾರ್ಮ್ ಮಾಡಿ ಅನ್ನಪ್ಪ ‘ಹೇ* ಮ್ಯಾಡಂ’ ಎಂದಿರುತ್ತಾನೆ ಎಂದು ಲೆಕ್ಕಾ ಹಾಕಿ, ಮುಂದಿನ ಪೇರೆಂಟ್ಸ್-ಟೀಚರ್ಸ್ ಮೀಟಿಂಗಿನಲ್ಲಿ ಹೇಮಲತಾ ಮ್ಯಾಡಂ ಅನ್ನು ಹ್ಯಾಗೆ ಎದುರಿಸೋದು ಎಂದು ಟೆನ್ಷನ್ ಮಾಡಿಕೊಂಡೆ.

Friday, March 15, 2013

ಅನ್ನಪ್ಪನ ಚಿನ್ನಾಟಗಳು

ಅನ್ನಪ್ಪನ ಚಿನ್ನಾಟಗಳು


ನನಗೆ ಸಿನಿಮಾ ಬಗ್ಗೆ ಆಸಕ್ತಿ ಕಮ್ಮಿ, ನಟರ ಬಗ್ಗೆ ಅಭಿಮಾನ ಅಷ್ಟಕಷ್ಟೆ. ಇನ್ನು ಬಾಲಿವುಡ್ ಮತ್ತು ಅದರ ನಟರ ಬಗ್ಗೆ ಅಭಿಮಾನ ಎಳ್ಳಷ್ಟು ಇಲ್ಲ. ಇನ್ನು ಅವರ ಎಕ್ಸ್ಟ್ರಾ ಯಾಕ್ಟಿಂಗು, ಅವುಗಳಿಗೆ ನಮ್ಮ ಪತ್ರಿಕೆಗಳು, ಚಾನಲ್ಲುಗಳು ಕೊಡುವ ಅನಗತ್ಯ ಪ್ರಚಾರದ ಬಗ್ಗೆ ನನಗೆ ಕಿರಿಕಿರಿಯೇ ಇದೆ.

ಇಂತಹ ಬಾಲಿವುಡ್ ನಟನೊಬ್ಬ ಅದೆಲ್ಲೋ ಕುಡಿದು ಮಾಡಿದ ಗಲಾಟೆಯ ಸಂಗತಿಯನ್ನು ಕನ್ನಡದ ಸುದ್ದಿ ವಾಹಿನಿಯೊಂದು ಅದೇನೋ ಮಹತ್ವದ ಸುದ್ದಿಯಂದು ತೋರಿಸಿಯೇ ತೋರಿಸುತ್ತಿತ್ತು. ಅದನ್ನು ನೋಡುತ್ತಿದ್ದ ನನಗೋ ಕಿರಿಕಿರಿಯಾಗಿ “ಆ ದರಿದ್ರ ಸೂ.. ಮಗ ಏನೋ ಒಂದ್ ಸಲ ಕುಡುದು ಗದ್ದಲಾ ಮಾಡಿದ. ಆದ್ರ ಈ ಟೀವಿ ಚಾನಲ್ಲಿನವರಿಗೆ ಏನ್ ಬ್ಯಾರೆ ಸುದ್ದಿ ಇಲ್ಲೇನ, ಬರೇ ಆ ದರಿದ್ರ ಸೂ.. ಮಗನ ತೋರಿಸಿ ತೋರಿಸಿ ಅಂವ್ಗ ಫುಕ್ಕಟೆ ಪ್ರಚಾರ ಕೊಡ್ತಾರ “. ಎಂದು ಗೊಣಗಿಕೊಂಡೆ. ನಾನು ಗೊಣಗಿ ಕೊಂಡದ್ದು ಅಲ್ಲಿಯೇ ಆಟ ಆಡಿಕೊಂಡಿದ್ದ ನನ್ನ ಮಗ ಅನ್ನಪ್ಪನ ಕಿವಿಗೆ ಬಿದ್ದಿರ ಬೇಕು. ಅವನಿಗೆ ‘ದರಿದ್ರ ಸೂ.. ಮಗ’ ಎಂಬ ಶಬ್ದ ಭಾರೀ ಆಕರ್ಷಕವಾಗಿ ಕಂಡಿತ್ತು ಅನಿಸುತ್ತೆ. ಅವನು ನನ್ನ ಹತ್ತಿರ ಬಂದು “ಅಪ್ಪಾಜಿ ಯಾರು ದರಿದ್ರ ಸೂ.. ಮಗ ?” ಎಂದ. ನಾನು ಅವನು ಆ ಬಯ್ಗಳನ್ನು ಉಪಯೋಗಿಸಿದ್ದನ್ನು ಗಮನಿಸದೇ, ಟೀವಿಯ ಕಡೆ ತೋರಿಸಿ “ಅವನ ನೋಡ್” ಎಂದಿದ್ದೆ. ಆ ನಟ ಅನ್ನಪ್ಪನಿಗೆ ಗೊತ್ತು – ಅವನು ಅನ್ನಪ್ಪನ ಮೆಚ್ಚಿನ ಕಾರಿನ ಜಾಹಿರಾತಿನಲ್ಲಿ ಬರುತ್ತಿದ್ದ. ಹೀಗಾಗಿ ಅನ್ನಪ್ಪ “ಓ ಅವ್ನಾ?” ಎಂದು ಉದ್ಘಾರ ತೆಗೆದು ಹೊರಟು ಹೋದ.

‘ಸೂ.. ಮಗ’ ಎನ್ನುವ ಪದ ಪ್ರಯೋಗ ಧಾರವಾಡ ಕನ್ನಡಿಗರಲ್ಲಿ ಅಪರೂಪವಲ್ಲವಾದರೂ, ಸುಶಿಕ್ಷಿತರು ಮನೆಗಳಲ್ಲಿ ಉಪಯೋಗಿಸುವುದು ಕಡಿಮೆ. ನಾನೂ ಕೂಡ ನನ್ನನ್ನು ಸುಶಿಕ್ಷಿತರ ಲೆಕ್ಕದಲ್ಲಿ ಹಿಡಿದುಕೊಳ್ಳುತ್ತೇನಾದ್ದರಿಂದ ಆ ಪದದ ಉಪಯೋಗ ಮಾಡುವುದು ಕಡಿಮೆ, ಅವತ್ತು ಅದ್ಯಾವುದೋ ಮಾಯೆಯಲ್ಲಿ ಮಗನಿದ್ದಾನೆಂಬ ಖಬರಿಲ್ಲದೇ ಉಪಯೋಗಿಸಿಬಿಟ್ಟಿದ್ದೆ.

ಇದಾದ ಸ್ವಲ್ಪ ದಿನಕ್ಕೆ ನಾನೂ, ಅನ್ನಪ್ಪನೂ ಕ್ಷೌರಕ್ಕೆ ಹೋಗಿದ್ದೆವು. ಅನ್ನಪ್ಪನ ಕ್ಷೌರ ಮುಗಿದಿತ್ತು, ನನ್ನದು ಇನ್ನೂ ನಡೆದಿತ್ತು. ವೇಟಿಂಗಿನಲ್ಲಿ ಕುಳಿತ ಹಿರಿಯ ಜೀವವೊಬ್ಬರನ್ನು ಅನ್ನಪ್ಪ ಇಂಪ್ರೆಸ್ ಮಾಡಿದ್ದ. ಅವರು ಹಿಡಿದಿದ್ದ ಕನ್ನಡ ಪೇಪರಿನ ಹೆಡ್ ಲೈನುಗಳನ್ನು ಓದಿದ್ದನ್ನು ನೋಡಿ, ಅವರು ನಾಲ್ಕು ವರ್ಷಕ್ಕೆ ಅಕ್ಷರ ಕಲಿತಿದ್ದಾನಲ್ಲ ಎಂದು ಅಚ್ಚರಿಗೊಡಿದ್ದರು. ಅವರೂ ಕೂಡ ಹೆಸರು ಏನು, ಯಾವ ಸ್ಕೂಲು , ಒಂದು ರೈಮ್ ಹೇಳು ಎಂದೆಲ್ಲ ಕೇಳುತ್ತಾ ಇವನನ್ನು ಎಂಗೇಜ್ ಇಟ್ಟಿದ್ದರು. ಅವರ ಕೈಯಲ್ಲಿದ್ದ ಪೇಪರಿನಲ್ಲಿ ಅನ್ನಪ್ಪನ ಮೆಚ್ಚಿನ ಕಾರಿನ ಜಾಹೀರಾತೂ ಬಂದಿರಬೇಕೆ ? ಅನ್ನಪ್ಪ ಆ ಕಾರಿನ ಕಂಪನಿ ಯಾವುದು, ಮಾಡೆಲ್ ಯಾವುದು, ಪೆಟ್ರೋಲಾ ಅಥವಾ ಡಿಜಲ್ಲಾ ಇತ್ಯಾದಿ ವಿವರಗಳೆನೆಲ್ಲಾ ಹೇಳಿ ಹಿರಿಯರನ್ನು ದಂಗುಗೊಳಿಸುತ್ತಿರ ಬೇಕಾದರೆ, ಕ್ಷೌರಿಕ ಹೊಚ್ಚಿದ ಪಾವಡದಲ್ಲಿ ನಾನು ಎದೆ ಉಬ್ಬಿಸಿ ಕುಳಿತಿದ್ದೆ. ಆದರೆ ಅನ್ನಪ್ಪ ಅಷ್ಟಕ್ಕೆ ನಿಲ್ಲದೇ, “ಆ ಅಡ್ವೈಟೈಸ್‌ನ್ಯಾಗ ಇರೂ ಯಾಕ್ಟರೂ ನನಗ ಗೊತ್ತು, ಅವಾ ದರಿದ್ರ ಸೂ.. ಮಗ” ಎಂದು ಬಿಟ್ಟ ! ಇಷ್ಟೊತ್ತು ಆಶ್ರಮದ ಗಿಳಿಯ ರೀತಿ ಮಾತನಾಡುತ್ತಿದ್ದವ ಈಗ್ಯಾಕೆ ರಿವರ್ಸ್ ಗೇರ್ ಹಾಕಿ ಕಸಾಯಿಖಾನೆಯ ಗಿಳಿಯ ರೀತಿ ಮಾತನಾಡುತ್ತಿದ್ದಾನೆ ಎಂದು ಹಿರಿಯರು ದಿಗ್ಭ್ರಾಂತರಾದರು. ಸಾವರಿಸಿಕೊಂಡು “ಅಯ್ಯೋ ಹಾಗ್ ಅನ್‌ಬಾರ್ದು. ಗುಡ್‍ಬಾಯ್‍ಗಳು ಅಂಥಾ ಬೈಗುಳದ ಮಾತು ಉಪಯೋಗಿಸೋಲ್ಲಾ” ಎಂದು ಅನ್ನಪ್ಪನಿಗೆ ಬುದ್ಧಿ ಹೇಳತೊಡಗಿದರು.



ಅಷ್ಟರಲ್ಲಾಗಲೇ ತನ್ನ ಇಂಪ್ರೆಷನ್ ಹಾಳು ಮಾಡಿಕೊಂಡಿದ್ದ ಅನ್ನಪ್ಪ ನನ್ನ ಮರ್ಯಾದಿಯನ್ನು ಮೂರುಕಾಸಿಗೆ ಹರಾಜು ಹಾಕಲು ರೆಡಿಯಾಗಿದ್ದ ಅನಿಸುತ್ತೆ. “ನಮ್ಮ ಅಪ್ಪಾಜಿ ಕೂಡ ಅವನಿಗೆ ದರಿದ್ರ ಸೂ.. ಮಗ ಎಂದೇ ಹೇಳುತ್ತಾರೆ. ಹಾಗಾದ್ರೆ ಅಪ್ಪಾಜಿ ಗುಡ್‌ಬಾಯ್‌ ಅಲ್ವಾ?” ಎಂದದ್ದನ್ನು ಕೇಳಿ, ಕೂದಲಾ ಕತ್ತರಿಸುವ ಕ್ಷೌರಿಕ ಕುತ್ತಿಗೆನೂ ಕತ್ತರಿಸಬಾರದೇ ಎಂದುಕೊಳ್ಳುತ್ತಾ ಕುಳಿತೆ...