Thursday, November 26, 2009

ನಾನು, ನನ್ನ ರೂಂಮೇಟುಗಳು ಮತ್ತು ಒಂದು ’ಧರ್ಮ’ಸಂಕಟ

೩ ರೂಂಮೇಟುಗಳು ಅಂದ ತಕ್ಷಣ ನಿಮಗೆ ಜಾಣ ಜಪಾನಿನ ಮಂಗಗಳು ಕಣ್ಣಮುಂದೆ ಬಂದರೆ, ಸವಿನಯವಾಗಿ ನಿಮ್ಮ ಉಪಮಾನ ತಪ್ಪು ಎಂದು ಹೇಳಬಯಸುತ್ತೇನೆ. ೩ ಮುಖದ ಸಿಂಹ ನಮಗೆ ಸರಿಯಾದ ಉಪಮಾನವಾಗುತ್ತದೆ ಎನ್ನುವುದು ನನ್ನ ಭಾವನೆ. (ನಾಲ್ಕು ಮುಖದ ಸಿಂಹ ಎನ್ನುವುದು ಒಂದು ಮೂಢನಂಬಿಕೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎನ್ನುತ್ತಾರೆ, ನೀವೇನಾದರು ನಾಲ್ಕನೆ ಮುಖ ನೋಡಿದ್ದೀರಾ?) ಮಂಗಗಳಂತೆ ಹುಡುಗಾಟಮಾಡದೇ, ಸಿಂಹಗಳಂತೆ ಗಂಭೀರವಾಗಿರುತ್ತೇವೆ ಅಂತಲ್ಲ. ೩ ಮುಖದ ಸಿಂಹಗಳಂತೆ ನಾವು ೩ ಜನರದು ಬೇರೆ ಬೇರೆ ದೃಷ್ಟಿಕೋನ ಇರುತ್ತವೆ ಎನ್ನುವುದಕ್ಕಾಗಿ ಮಾತ್ರ ! ವಿಷಯ ಯಾವುದೇ ಇರಲಿ, ನಾವು ೩ ಜನರದು ಬೇರೆ ಬೇರೆ ದೃಷ್ಟಿಕೋನ, ಬೇರೆ ಬೇರೆ ಅಭಿಪ್ರಾಯ. ಒಬ್ಬ ಎರಿಗೆ ಎಳೆದರೆ, ಇನ್ನೊಬ್ಬ ಕೆರಿಗೆ ಮತ್ತು ಮುಗದೊಬ್ಬ ಬಾರಿಗೆ ಎಳೆಯುವುದು ಶತಸಿದ್ಧ. ಇನ್ನು ದೇವರು-ಧರ್ಮಗಳಂತಹ ವಿವಿಧ ಮುಖ, ವಿವಿಧ ಆಯಾಮಗಳಿರುವ ವಿಷಯಗಳಲ್ಲಿ ನಮ್ಮದು ಐಕ್ಯ ಮತವಿರುವುದು ಸಾಧ್ಯವೆ?

ವಿನಾಯಕನದು ಅಖಂಡ ವಿಚಾರವಾದಿ ನಿಲುವು - ದೇವರು ಎನ್ನುವವ ಹಿಂದೆ ಇರಲಿಲ್ಲ, ಇಂದು ಇಲ್ಲ, ಮುಂದೆ ಇರುವುದಿಲ್ಲ! ಅದನ್ನು ಸಮರ್ಥಿಸಲು ಆತ ಬೌದ್ಧಮತದ ತತ್ವಗಳಿಂದ, ಪಾಶ್ಚಾತ್ಯ ದರ್ಶನದಿಂದ ಉದ್ದುದ್ದನೆಯ ಉಲ್ಲೇಖಗಳನ್ನು ಕೊಡುತ್ತಿದ್ದ. ಮೂರ್ತಿರಾಯರ ’ದೇವರ’ನ್ನು ನಮಗೆ ಪರಿಚಯಿಸಿದವನೇ ಈ ವಿನಾಯಕ. ಪ್ರತೀ ಶನಿವಾರ ನಮ್ಮ ಜೊತೆ ದೇವಸ್ಥಾನಕ್ಕೆ ಬರುತ್ತಿದ್ದನಾದರೂ, ದೇವಸ್ಥಾನದ ಇತಿಹಾಸ, ಪರಂಪರೆಗಳಿಗೆ ಅವನ ಆಸಕ್ತಿ ಸೀಮಿತ.

ನನ್ನ ವಿಷಯಕ್ಕೆ ಬಂದರೆ ನಾನೊಬ್ಬ ಆಸ್ತಿಕ, ನಾಸ್ತಿಕ ಮತ್ತು ಸಂದೇಹವಾದಿ ಆಲ್-ಇನ್-ಒನ್. ವಿನಾಯಕನ ಬೋಧನೆ ಜೋರಾಗಿದ್ದ ದಿನ ನಾನು ಕಟ್ಟಾ ವಿಚಾರವಾದಿ-ನಾಸ್ತಿಕ. ಬೋಧನೆಯ ಪ್ರಭಾವ ಕಡಿಮೆಯಾದ ಹಾಗೆ ನಾನು ಸಂದೇಹವಾದಿಯಾಗುತ್ತೇನೆ. ಮೂರ್ತಿರಾಯರೇ ತಮ್ಮ ದೇವರಿಗೆ - ಅಂದರೆ ’ದೇವರು’ ಕೃತಿಗೆ - ಪ್ರಶಸ್ತಿ ಬಂದಾಗ "ಪ್ರಶಸ್ತಿ ಕೊಟ್ಟವರಿಗೆ ದೇವರು ಒಳ್ಳೆಯದು ಮಾಡಲಿ" ಎಂದಿರಲಿಲ್ಲವೇ ? ಆದ್ದರಿಂದ ಅವರಿಗೂ ದೇವರು ಇದ್ದಾನೆಂಬ ಸಂದೇಹ ಇದ್ದಿರಬೇಕು, ಎಂದು ನಾನು ಸಮರ್ಥಿಸಿಕೊಳ್ಳುತ್ತೇನೆ. ಈ ಜಗತ್ತಿನಲ್ಲಿ ಕಳ್ಳರು, ಸುಳ್ಳರೂ, ಅತ್ಯಾಚಾರಿಗಳೂ ಇರುವಾಗ, ಕೊನೆಗೆ ರಾಜಕಾರಣಿಗಳೇ ಇರುವಾಗ, ದೇವರು ಎನ್ನುವವ ಒಬ್ಬ ಇದ್ದರೇನಂತೆ ? ಅವನೂ ಇದ್ದುಕೊಳ್ಳಲಿ ಬಿಡಿ ಎಂದುಕೊಳ್ಳುತ್ತೇನೆ. ಹೀಗಿರುವಾಗ ನಾನು ಡಿಸೈನು ಮಾಡಿದ ಮಾಡ್ಯುಲಿನಲ್ಲಿ ಬಗ್ಗುಗಳು ಬರತೊಡಗಿದರೆ, ನಾನು ನಿಧಾನವಾಗಿ ಆಸ್ತಿಕನಾಗಿ ಪರಿವರ್ತನೆಯಾಗುತ್ತೇನೆ. ಬಗ್ಗುಗಳ ಸಂಖ್ಯೆ ಮಿತಿ ಮೀರಿದರೆ, ’ನೀನೇ ಗತಿ’ ಎಂದು ಗಾಳಿ ಆಂಜನೇಯನಿಗೆ ಶರಣಾಗಿ, ಜೋಡುಗಾಯಿಯ ಹರಕೆ ಹೊರುತ್ತೇನೆ. ಬಗ್ಗುಗಳನ್ನು ಬಗ್ಗುಬಡಿದ ಕೆಲದಿನಗಳ ನಂತರ ಮತ್ತೆ ವಿನಾಯಕನ ಬೋಧನೆಯ ಪ್ರಭಾವಕ್ಕೋಳಗಾಗಿ ನಾಸ್ತಿಕನಾಗಿ ಪುನರಪಿ ಜನಿಸುತ್ತೇನೆ.

ನಮ್ಮ ಮೂರನೇ ರೂಂಮೇಟು ನಿರ್ಮಲಕುಮಾರನಿಗೆ ಅತೀ ಎನ್ನುವಷ್ಟು ದೈವಭಕ್ತಿ. ದೇವರಲ್ಲಿ ಅಷ್ಟೇ ಅಲ್ಲ , ಅವನ ಎಜಂಟರಲ್ಲಿಯೂ, ಆ ಎಜಂಟುಗಳ ಸಬ್-ಏಜೆಂಟುಗಳಲ್ಲಿಯೂ ಅವನಿಗೆ ನಂಬಿಕೆ. ಗಣಪತಿಗೆ ಹಾಲು ಕುಡಿಸಿದ ಚಂದ್ರಸ್ವಾಮಿಯಿಂದ ಹಿಡಿದು, ಯೋಗಕಲಿಸುವ ಬಾಬಾ, ಭೋಗ ಕಲಿಸುವ ಬಾಬಾ, ಕೊನೆಗೆ ತಮಿಳು ನಟ ರಜನಿಕಾಂತನ ’ಬಾಬಾ’ ಕೂಡ ನಿರ್ಮಲ್ಕುಮಾರನಿಗೆ ಪೂಜ್ಯರೆನಿಸುತ್ತಾರೆ. ಇನ್ನು ಒಂದು ವಿಶೇಷವೆಂದರೆ, ನಿರ್ಮಲಕುಮಾರನ ಇಷ್ಟದೇವತೆಗಳು ಆಗಾಗ ಬದಲಾಗ್ತಾ ಇರ್ತಾರೆ. ಕೆಲ ದಿನ ಪುಟಪರ್ತಿಗೆ ಶರಣೆಂದವ, ಮುಂದೆ ಪ್ಲೇಟು ಬದಲಿಸಿ ಶಿರಡಿಗೆ ಜೈ ಎನ್ನುತ್ತಾನೆ. ಸ್ವಲ್ಪ ದಿನ ಸ್ವಾಮಿಯೇ ಶರಣಂ ಅಯ್ಯಪ್ಪ ಅಂದರೆ, ಕೆಲವೇ ದಿನಗಳಲ್ಲಿ ದತ್ತಮಾಲೆ ಹಾಕಿರುತ್ತಾನೆ. ಅಪ್ಪುವ ಅಮ್ಮ, ಕಲ್ಕಿಭಗವಾನರೂ ಕೂಡ ಒಂದೊಂದು ಸಾರಿ ನಿರ್ಮಲಕುಮಾರನ ಫೆವರೇಟ್ ದೇವರಾಗಿ, ಈಗ ಮಾಜಿಗಳಾಗಿದ್ದಾರೆ. ನಿರ್ಮಲಕುಮಾರನಿಗೆ ಎಷ್ಟೇ ಪ್ರಯತ್ನಿಸಿದರೂ ಇನ್ನೂ ಯಾವುದೇ ಹಕ್ಕಿ ಬಿದ್ದಿಲ್ಲವಾದ್ದರಿಂದ, ಈ ಎಲ್ಲ ದೇವರುಗಳು ಅವನಿಗೆ ಅನಿವಾರ್ಯವೇ ಅನಿಸುತ್ತದೆ !

ಸುಮಾರು ಸಲ ನಿರ್ಮಲಕುಮಾರನ ಈ ದೈವಭಕ್ತಿ ನಮ್ಮ ಕೀಟಲೆಗೆ ಅಹಾರವಾಗುವ ನಿರುಪದ್ರವಿ ಹವ್ಯಾಸವೆನಿಸಿದರೂ, ಒಮ್ಮೆ ಮಾತ್ರ ನಮಗೆ "ಧರ್ಮ"ಸಂಕಟವನ್ನೇ ತಂದೊಡ್ಡಿತ್ತು. ಆ ಸಲ ವಾರಂತ್ಯದ ತೀರ್ಥಯಾತ್ರೆ ಮುಗಿಸಿ, ನಾವು ೩ ಜನ ವಾಪಸು ಬರುತ್ತಾ ಇದ್ದೆವು. ದಾರಿಯಲ್ಲಿ ಮಳೆಬಂದದ್ದಕ್ಕಾಗಿ ಚಾಟಿ ಹುಡುಕುತ್ತಿದ್ದವರಿಗೆ ಯಾವುದೋ ಕಾರ್ಯಕ್ರಮ ನಡೆದಿದ್ದ ಮಜಬೂತಾದ ಪೆಂಡಾಲು ಕಾಣಿಸಿತು. ಅಲ್ಲಿ ಹೋದರೆ ಅದೊಂದು Devine-healing ಅಂದರೆ ದೈವೀಚಿಕಿತ್ಸೆಯ ಸಭೆ. ಬೆಣ್ಣಿಹೀನನ ಶಿಷ್ಯ ಎಣ್ಣಿ ಸೀನ ಎಂಬುವವ ಅಂದಿನ ಸಭೆಯ ಚಿಕಿತ್ಸಕ. ಬೋರ್ಡು, ಬ್ಯಾನರುಗಳಲ್ಲಿ "Brother Seenu" ಎಂದು ಇಂಗ್ಲೀಷಿನಲ್ಲಿ, "ಸಹೋ. ಸೀನು" ಎಂದು ಕನ್ನಡದಲ್ಲಿ ಬರೆದುಕೊಂಡಿದ್ದನಾದರೂ ಇವನನ್ನು ಜನ ಗುರುತಿಸುತ್ತಿದ್ದದು ’ಎಣ್ಣಿ ಸೀನ’ ಎಂತಲೇ. ತನ್ನ ಪೂರ್ವಾಶ್ರಮದಲ್ಲಿ ಸೀಮೆ ಎಣ್ಣೆ ಎಜೆನ್ಸಿ ಇಟ್ಟುಕೊಂಡಿದ್ದನೆಂದು ಆ ಹೆಸರು. ಸೀನ, ಸೀಮೆ ಎಣ್ಣೆ ಜೊತೆಗೆ ಕೇಬಲ್ ಧಂದೆಯಲ್ಲೂ, ರಿಯಲ್ ಎಸ್ಟೆಟಿನಲ್ಲಿಯೂ ಸೈಡ್ ಬಿಜಿನೆಸ್ ಮಾಡ್ತಾ ಇದ್ದು, ಒಂದೆರಡು ದರೋಡೆಗಳಲ್ಲೂ ಭಾಗವಹಿಸಿದ್ದನಂತೆ. ಇವನ ಸಾಧನೆಯನ್ನು ಗಮನಿಸಿದ ಪೋಲಿಸರು ಇವನನ್ನು ಒಬ್ಬ ’ಇತಿಹಾಸ ಪುರುಷ’- history sheeter- ಎಂದು ಪರಿಗಣಿಸಿ ಇವನ ಬೆನ್ನತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು, ಆಗ ಭಾರತಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಬಂದಿದ್ದ ಬೆಣ್ಣಿ ಹೀನನ ಬೆನ್ನಹಿಂದೆ ಹೋಗಿ ಅಡಗಿಕೊಂಡಿದ್ದ. ಬೆಣ್ಣಿ ಹೀನನ ಮುಂದೆ ಇಡೀ ಸರಕಾರವೇ ಅಡ್ಡಬಿದ್ದಿದ್ದರಿಂದ, ಈ ಎಣ್ಣಿ ಸೀನನನ್ನು ತಡವಲು ಯಾರಿಗೂ ಸಾಧ್ಯವಾಗಿರಲಿಲ್ಲ. ಬೆಣ್ಣಿಹೀನ ಹೊರಟುಹೋದ ನಂತರ ಎಣ್ಣಿಸೀನ "ಸಹೋ. ಸೀನು"ಯಾಗಿ ಚಾಲ್ತಿಗೆ ಬಂದು ಡಿವೈನ್-ಹೀಲಿಂಗ್ ಮಾಡ್ತೇನೆ ಎಂದು ಅಡ್ಡಾಡತೊಡಗಿದ್ದ.


ಪತ್ರಿಕೆಗಳಲ್ಲಿ ಇದನೆಲ್ಲ ಓದಿದ್ದ ನಾವು ಮಳೆ ನಿಲ್ಲುವವರೆಗೆ ಇದ್ದು , ಆಮೇಲೆ ’ಹೊಳೆ ದಾಟಿದ ಮೇಲೆ ಅಂಬಿಗ ಡ್ಯಾಷ್ ಡ್ಯಾಷ್’ ಎನ್ನುವಂತೆ ರೈಟ್ ಹೇಳೋಣ ಎಂದುಕೊಡಿದ್ದೆವು. ಆದರೆ ನಮ್ಮ ದೈವ ಭಕ್ತ ಶಿಖಾಮಣಿ ನಿರ್ಮಲಕುಮಾರ "ಪ್ರತಿಯೊಬ್ಬ ಸಂತನಿಗೂ ಒಂದು ಭೂತವಿದೆ ಮತ್ತು ಪ್ರತಿ ಪಾಪಿಗೆ ಭವಿಷ್ಯವಿದೆ" ಎಂದು ಕೋಟ್ ಹೇಳಿ "ಬ್ರದರ್ ಸೀನುವೂ ಯಾಕೆ ಈಗ ಸಂತನಾಗಿ ಪರಿವರ್ತಿತನಾಗಿರಬಾರದು ?" ಎಂದು ವಾದ ಶುರುಮಾಡಿದ. ಪ್ರತಿವಾದಿ-ಭಯಂಕರ, ಕಟ್ಟಾ ವಿಚಾರವಾದಿ ವಿನಾಯಕ ಈ ಅವಕಾಶವನ್ನು ಬಿಟ್ಟಾನೆಯೇ ? ಹೀಗಾಗಿ ವಿನಾಯಕ ನಿರ್ಮಲಕುಮಾರರ ವಾದ ಮೆಲುದನಿಯಲ್ಲಿ ಶುರುವಾಗಿ, ಅವರ ಗಂಟಲಲ್ಲಿ ಉಳಿದಿದಿದ್ದ ತೀರ್ಥದ ಪಶೆಯ ದೆಶೆಯಿಂದಾಗಿ ಬಹು ಬೇಗ ದೊಡ್ಡದನಿಗೆ ಭಡ್ತಿ ಪಡೆಯಿತು. ಇನ್ನು ಹೀಗೆ ಬಿಟ್ಟರೆ ಇವರ ವಾದ ಕೇಳಿ, ಬ್ರದರ್ ಸೀನನ ಶಿಷ್ಯರು ಬಂದು ನಮ್ಮ ಬೆಂಡೆತ್ತುವುದು ಖರೆ ಎಂದು ನಾನು ಇಬ್ಬರನ್ನು ಸಮಾಧಾನಿಸಿದೆ.
ಅಷ್ಟರಲ್ಲಿ ’ಬ್ರದರ್ ಸೀನು’ ಅರ್ಥಾತ್ ’ಸಹೋ. ಸೀನು’ ಉರ್ಫ್ ’ಎಣ್ಣಿ ಸೀನ’ ವೇದಿಕೆಯ ಮೇಲೆ ಬಂದ. ಮೊದಲು ಎಲ್ಲ ಜನರಿಗೆ ಕೈ ಮೇಲೆತ್ತಿ ಪ್ರಾರ್ಥಿಸಲು ಹೇಳಿದ. ಹಿನ್ನೆಲೆಯಲ್ಲಿ ಬ್ಲೆಸ್ ಡ್ ಬಿ ದಿ ನೇಮ್ ಆಫ್ ಲಾರ್ಡ್ ಎಂಬ ಪ್ರಾರ್ಥನೆ ಮೆಲುದನಿಯಲಿ ಬರತೊಡಗಿತು. ಪ್ರಾರ್ಥನೆ ಮುಗಿದ ನಂತರದ ಕಾರ್ಯಕ್ರಮ ಉಪದೇಶ. ಎಣ್ಣಿ ಸೀನ ಅಮೇರಿಕನ್ ಅಸೆಂಟಿನಲ್ಲಿ ಇಂಗ್ಲೀಷಿನಲ್ಲಿ ಆವೇಶಭರಿತ ಉಪದೇಶ ಹೇಳುವುದು, ಅವನ ಪಕ್ಕ ನಿಂತಿದ್ದ ಇನ್ನೊಬ್ಬ, ಅದನ್ನು ಅದೇ ಆವೇಶದಲ್ಲಿ ಕನ್ನಡದಲ್ಲಿ ಅನುವಾದಿಸುವುದು ಶುರುಮಾಡಿದರು. ಅದನ್ನು ನೋಡಿ, ಆ ದಿನಗಳಲ್ಲಿ ವಿನಾಯಕನ ಪ್ರಭಾವದಿಂದ ನಾಸ್ತಿಕತೆಯ ದೀಕ್ಷೆಯಲ್ಲಿದ್ದ ನಾನು ನಿಧಾನವಾಗಿ ಸಂದೇಹವಾದಿಯಾಗತೊಡಗಿದೆ. ಬಹುಶಃ ಹತ್ತನೆ ತರಗತಿಯೂ ಪಾಸಾಗದ, ಪೋಲಿ ತಿರುಗಿಕೊಂಡಿದ್ದ ಎಣ್ಣಿ ಸೀನ, ಬ್ರದರ್ ಸೀನುನೆಂದು ಗೆಟಪ್ಪು ಬದಲಾಯಿಸಿದ ತಕ್ಷಣ ಅಷ್ಟು ಅಸ್ಖಲಿತ ಇಂಗ್ಲೀಷು ಮಾತನಾಡುವುದು, ಭಗವಂತನ ಕೃಪೆ ಇಲ್ಲದಿದ್ದರೆ ಹೇಗೆ ಸಾಧ್ಯ ? ಅದಕ್ಕಿಂತ ಮುಖ್ಯವಾಗಿ, ಅವನ ಅನುವಾದಕ ಈ ಬೆಂಗಳೂರಿನ ಗಾಳಿ ಕುಡಿದೂ, ಅಷ್ಟು ಶುದ್ಧ ಕನ್ನಡ ಮಾತನಾಡುವುದು ಪವಾಡವಲ್ಲವೇ ? ನಮ್ಮ ಹಿರಿಯರೂ ’ಭಗವಂತನ ಕೃಪೆಯಿದ್ದರೆ ಮೂಕನೂ ವಾಚಾಳಿಯಾಗಬಲ್ಲನು, ಕಾಲಿಲ್ಲದವನು ಬೆಟ್ಟ ಹಾರಬಲ್ಲನು’ ಎಂದು ಹೇಳಿಲ್ಲವೇ ? ಆದ್ದರಿಂದ ಈ ಬ್ರದರ್ ಸೀನುವಿಗೆ ದೈವಸಾಕ್ಷಾತ್ಕಾರವಾಗಿದೆ ಎಂದು ನಾನು ನಂಬಿ, ಬ್ರದರ್ ಸೀನುವಿನ ಶಬ್ದಗಳಲ್ಲಿ "ಬಿಲೀವರ್" ಆಗಿ "ಕನ್ವರ್ಟ್" ಆದೆ.
ನನ್ನ ಬದಲಾದ ನಿಷ್ಠೆಯ ವಾಸನೆ ನನ್ನ ಪಕ್ಕ ನಿಂತಿದ್ದ ವಿನಾಯಕನಿಗೆ ಬಡಿಯಿತು ಅನಿಸುತ್ತೆ. ಅವನು ನನ್ನ ಕಿವಿಯ ಹತ್ತಿರ ಬಾಯಿ ತಂದು ಹೇಳಿದ "ಈ ಸೀನ ಎಂಥಾ ಪಾಕಡಾ ಆಸಾಮಿ ನೋಡು.. ಆ ಬೆಣ್ಣಿ ಹೀನನ ಪ್ರವಚನದ ಸಿಡಿ ಹಾಕಿ ಅದಕ್ಕೆ ಲಿಪ್ ಸಿಂಕ್ ಮಾಡ್ತಾ ಇದಾನೆ. ಕನ್ನಡದಲ್ಲಿ ಅನುವಾದ ಮಾಡುವುವನದೂ ಅದೇ ಕೇಸು. ಒಟ್ಟಿನಲ್ಲಿ ಈ ಕಳ್ ನನ್ ಮಕ್ಳು ಇಡೀ ಕಾರ್ಯಕ್ರಮವನ್ನು ಮೊದಲೆ ಪ್ರ್ಯಾಕ್ಟೀಸುಮಾಡಿ, ಪ್ರಿ-ರೆಕಾರ್ಡೆಡ್ ದನಿಗೆ ತುಟಿ ಅಲ್ಲಾಡಿಸ್ತಾ ಇದಾರೆ" ಎಂದು ನನ್ನನ್ನು ಮತ್ತೆ ನಾಸ್ತಿಕತೆಗೆ ಎಳೆಯತೊಡಗಿದ. ಸ್ವಲ್ಪ ತಡೆದು ನಾನಿನ್ನು ಅವನ ವಾದವನ್ನು ಪೂರ್ತಿ ಒಪ್ಪಿಲ್ಲವೆಂದು "ನೋಡ್ತಾ ಇರು, ಆವಾಗ ಆವಾಗ ಸೀನನ ತುಟಿ ಅಲ್ಲಾಡದಿದ್ದರೂ ದನಿ ಪೂರ್ತಿ ಕೇಳುತ್ತೆ. ಆ ದನಿಯನ್ನು ಸೀನ ತನ್ನ ಬಾಯಿಂದ ಅಲ್ಲದೇ, ಬುಡದಿಂದ ತಗಿತಾನೆ ಅಂತಿಯಾ ? What do you think – there is a mike in his pant as wel ?" ಎಂದು ಒಂದು ಕ್ಷುದ್ರ ನಗೆ ಬೀರಿದ. ಅಷ್ಟರಲ್ಲಿ ಅದನ್ನು ಗಮನಿಸಿದ್ದ ನಾನು ವಿನಾಯಕನ ಜೋಕಿಗೆ ನಗೆ ತಡೆಯಲಾರದೆ ಕಿಸಕ್ಕನೆ ನಕ್ಕೆ. ನನ್ನ ಇನ್ನೊಂದು ಪಕ್ಕ ನಿಂತಿದ್ದ ನಿರ್ಮಲಕುಮಾರನಿಗೆ ನಾನು ನಕ್ಕದ್ದು ಸರಿಬರಲಿಲ್ಲ. ನನ್ನ ಕಾಲನ್ನು ಬಲವಾಗಿ ತುಳಿದು, ತುಟಿಯ ಮೇಲೆ ಬೆರೆಳಿಟ್ಟು ಸುಮ್ಮನಿರುವಂತೆ ಸೂಚಿಸಿದ.
ಇಷ್ಟು ನಡೆದಿರುವಾಗ ಎಣ್ಣಿ ಸೀನನ ದೈವಿ ಚಿಕಿತ್ಸೆ ಶುರುವಾಯಿತು. ಮೊದಲು ಒಬ್ಬ ಕುರುಡ ಎಂದು ಹೇಳಿಕೊಂಡು ವೇದಿಕೆಯ ಮಲೆ ಬಂದ. ಸೀನ ಅವನ ಕಣ್ಣು ಮುಚ್ಚಿಸಿ ಅವನಿಂದ ಪವಿತ್ರ ಪ್ರಾರ್ಥನೆಯನ್ನು ಹೇಳಿಸಿ, ಅವನ ಮುಂದೆ ದೇವರ ಪಟ ಒಂದನ್ನು ಹಿಡಿದು "ನಿಧಾನ, ನಿಧಾನ ಎಂದು ಹೇಳುತ್ತಾ" ಅವನ ಕಣ್ಣು ತೆಗೆಸಿದ. ಕಣ್ಣು ತೆರೆದ ಆ ಕುರುಡ, ದೇವರ ಫೋಟೊವನ್ನು ನೋಡಿ "ಸ್ವಾಮಿ, ಸ್ವಾಮಿಯೇ, ನನಗೆ ಕೊನೆಗೂ ಕಣ್ಣು ಕೊಟ್ಟೆ" ಎಂದು ಜಿಗದಾಡತೊಡಗಿದ. ಎಣ್ಣೆ ಸೀನನ ಹತ್ತಿರ ನಿಂತಿದ್ದ ಇನ್ನೊಬ್ಬನೂ ಜಿಗಿಜಿಗಿದು ಚಪ್ಪಾಳೆ ತಟ್ಟತೊಡಗಿದ. ಎಣ್ಣಿ ಸೀನ ಮಾತ್ರ "ಅದೇನ್-ದೊಡ್ಡ-ದಗದ" ಭಾವವನ್ನು ಮುಖದ ಮೇಲೆ ತಂದುಕೊಂಡು ಮುಗುಳುನಗುತ್ತಾ ನಿಂತಿದ್ದ. ಮುಂದಿನ ಚಿಕಿತ್ಸೆ ಒಬ್ಬ ಮೂಕನದು. ಸೀನನ ಚಿಕಿತ್ಸೆಯಾದ ನಂತರ ಮೂಕ, ಎಣ್ಣಿ ಸೀನ ಹೇಳಿಸಿದ ದೇವರ ಹಿರಿಮೆಯನ್ನು ಸ್ಪಷ್ಟವಾಗಿ ಉಚ್ಚರಿಸಿದ. ವಿನಾಯಕ ಅದನ್ನು ನೋಡಿ "ಮೂಕನ ಯಾಕ್ಟಿಂಗು ಅಡ್ಡಿ ಇಲ್ಲ, ಆದರೆ ಆ ಕುರುಡನದು ತೀರ ಓವರ್ ಯಾಕ್ಟಿಂಗು" ಎಂದು ಸರ್ಟಿಫಿಕೇಟ್ ಕೊಟ್ಟ. ಅಲ್ಲಿ ನಡೆಯುತ್ತಿರುವುದು ಪೂರ್ತಿ ಢೋಂಗಿ ಪ್ರಹಸನ ಎಂದು ನನಗೂ ಮನವರಿಕೆಯಾಯಿತು. ಹೊರಗಡೆ ಮಳೆಯೂ ನಿಂತಿತ್ತು. ಆದ್ದರಿಂದ ಇನ್ನೇನು ನಾವು ಜಾಗ ಖಾಲಿಮಾಡೋಣ ಎಂದರೆ, ನಮ್ಮ ಇನ್ನೊಬ್ಬ ರೂಂಮೇಟು ನಿರ್ಮಲಕುಮಾರನೇ ಕಾಣ್ತಾ ಇರಲಿಲ್ಲ. ತೀರ್ಥ ಹಾಕಿದಾಗ ಮೂತ್ರ ಹೆಚ್ಚು ಎನ್ನುವ ಅನುಭವ ಜ್ಞಾನವಿದ್ದುದರಿಂದ, ಅವನು ಎಲ್ಲೋ ನಿಸರ್ಗದ ಕರೆಗೆ ಓಗೊಟ್ಟು ಹೋಗಿರಬೇಕೆಂದು ಕಾಯತೊಡಗಿದವು.
ನಿರ್ಮಲಕುಮಾರ ನಿಸರ್ಗದ ಕರೆಗೆ ಓಗೊಟ್ಟು ಹೋಗಿರಲಿಲ್ಲ, ಬದಲು ತನ್ನ ಮನದ ಕರೆಗೆ ಓಗೊಟ್ಟು ಹೋಗಿದ್ದ. ಶತ-ಶತಮಾನಗಳಿಂದ ತನಗೆ ಕಾಡುತ್ತಿರುವ ಹಲ್ಲುನೋವಿಗೆ ಬ್ರದರ್ ಸೀನನಲ್ಲಿಯೇ ರಾಮಬಾಣವಿದೆ ಎಂದು ತನ್ನ ಮನಸ್ಸು ಹೇಳಿದ್ದಕ್ಕೆ, ನಿರ್ಮಲ್ ಕುಮಾರ ವೇದಿಕೆಯ ಮೇಲೆ ಹೋಗಿ ಸೀನನ ಮುಂದೆ ನಿಂತು ತನ್ನ ಸಮಸ್ಯೆ ಹೇಳಿಕೊಂಡ. ಸೀನನಿಗೂ ಅವನ ಶಿಷ್ಯ ಬಳಗಕ್ಕೂ, ಸ್ಕ್ರಿಪ್ಟಲ್ಲಿ ಇರದ ಈ ಸೀನ್ ಎದುರಾದದ್ದಕ್ಕೆ ಗಲಿಬಿಲಿಯಾಯಿತು. ಸೀನನೇ ಮೊದಲು ಸುಧಾರಿಸಿಕೊಂಡು, ನಿರ್ಮಲನಿಗೆ "ಸ್ವಾಮಿ, ನಾನಿನ್ನು ದೈವೀ ಚಿಕಿತ್ಸೆ ಮುಖಾಂತರ ಹಲ್ಲುನೋವು ಕಡಿಮೆ ಮಾಡುವುದು ಕಲಿತುಕೊಂಡಿಲ್ಲ" ಎಂದು ಹೇಳುತ್ತಲೆ, ಅವನ ಶಿಷ್ಯರು ನಿರ್ಮಲನ ಬಗಲಲ್ಲಿ ಕೈಹಾಕಿ ವೇದಿಕೆಯಿಂದ ಇಳಿಸಿಕೊಂಡು ಹೋದರು.
ಈಗ ಬರುತ್ತಾನೆ, ಈಗ ಬರುತ್ತಾನೆ ಎಂದು ನಿರ್ಮಲನಿಗೆ ನಾವು ಕಾದದ್ದೇ ಬಂತು, ಅವನೇನು ಬರಲಿಲ್ಲ. ನಾನು, ವಿನಾಯಕ ಅವನನ್ನು ಎಲ್ಲಾ ಕಡೆ ಹುಡುಕಿ, ಹುಡುಕಿ, ಕೊನೆಗೆ ಅವನಿಲ್ಲದೇ ಮನೆಗೆ ಬಂದೆವು.

ಬೆಳಿಗ್ಗೆ ಎದ್ದಾಗ, ರಾತ್ರಿ ಯಾವುದೋ ಘಳಿಗೆಯಲ್ಲಿ ಬಂದು ಮಲಗಿದ್ದ ನಿರ್ಮಲಕುಮಾರನ ವಿರೂಪಗೊಂಡ ಮುಖದರ್ಶನವಾಯಿತು. ದೇವರು ದಯಾಮಯಿ, ಕರುನಾಳು ಇರಬಹುದಾದರೂ ಅವನ ಭಕ್ತರು ಹಾಗಿರಬೇಕೆಂದು ಕಾನೂನೇನು ಇಲ್ಲ. ಸೀನನ ಶಿಷ್ಯರು ನಿರ್ಮಲಕುಮಾರನಿಗೆ ಸರಿಯಾಗಿಯೇ ತದಕಿ ಕಳುಹಿಸಿದ್ದರು. ಉದ್ದೇಶವಿಲ್ಲದೇ, ಒಂದು ಉಪಕಾರವನ್ನೂ ಕೂಡ ಮಾಡಿದ್ದರು. ಅವರ ಹೊಡೆತಕ್ಕೆ ನಿರ್ಮಲಕುಮಾರನ ಹುಳುಕು ಹಲ್ಲು ಬಿದ್ದು ಹೋಗಿ, ಹಲ್ಲುನೋವು ಪರಿಹಾರವಾಗಿತ್ತು - ಯಾವುದೇ ದೈವೀ ಚಿಕಿತ್ಸೆ ಇಲ್ಲದೆ !!

( ೧. ಬೆಣ್ಣಿಹೀನ (Benny Hinn) ಅಮೇರಿಕದ ಒಬ್ಬ ಸ್ವಯಂ ಘೋಷಿತ ದೇವಮಾನವ. ದೈವೀ ಚಿಕಿತ್ಸೆಯಿಂದ ಹತ್ತು-ಹಲವು ರೋಗಗಳನ್ನು ಗುಣಮಾಡಿದ್ದೇನೆಂದು ಹೇಳಿಕೊಳ್ಳುತ್ತಾನಾದರೂ, ಅದಕ್ಕೆ ನಂಬಲರ್ಹ ಸಾಕ್ಷಿಗಳಿಲ್ಲ. ನಮ್ಮ ಬೆಂಗಳೂರಿಗೂ ಬಂದು ದೈವೀ ಚಿಕಿತ್ಸೆಯ ಕಾರ್ಯಕ್ರಮ ಮಾಡಿಹೋಗಿದ್ದ.
೨. ಈ ಯುನಿಕೋಡಿನಲ್ಲಿ ೩ ಅಂತ ಅಕ್ಷರದಲ್ಲಿ ಬರೆದರೆ "ಮೂರು" ಅಂತ ಕಾಣಿಸ್ತಾ ಇದೆ.. ಅದಕ್ಕೆ ಅಂಕಿಯಲ್ಲಿಯೇ ಬರೆದಿದ್ದೇನೆ. ಅಲ್ಲಲ್ಲಿ "mU" ಎನ್ನುವುದು "ಮೂ" ಎಂದು ಕಾಣಿಸ್ತಾ ಇರಬಹುದು.
೩.ಈ ಲೇಖನ ಸ್ಪಂದನ ೦೯ ರಲ್ಲಿ ಮೊದಲು ಪ್ರಕಟವಾಗಿದೆ -ಸ್ಪಂದನ-೦೯ )

1 comment:

Keshav.Kulkarni said...

ಸೂಪರ್ ಕತೆ. ಮೂರು ಸಿಂಹಗಳೂ ನಿಮ್ಮ ದೇವರುಗಳೂ ಹಲ್ಲುನೋವೂ... ಭಲೆ ಮಜಾ!

- ಕೇಶವ (www.kannada-nudi.blogspot.com)