(ಮೊನ್ನೆ ಬಹುಮಾನ ಪಡೆದ ಲೇಖನದ ಪೂರ್ಣಪಾಠ ಇಲ್ಲಿದೆ. ಅಪರಂಜಿ ವಿಶೇಷ ಸಂಚಿಕೆ, ಜನೆವರಿ ೨೦೧೦ರಲ್ಲಿ ಈ ಲೇಖನ ಪ್ರಕಟವಾಗಿದೆ)
"ಮಾತು ಬಲ್ಲವಗೆ ಜಗಳವಿಲ್ಲ", "ಮಾತು ಮನೆ ಕೆಡಿಸಿತು", "ಮಾತೇ ಮಾಣಿಕ್ಯ", "ಮಾತೇ ಜ್ಯೋತಿರ್ಲಿಂಗ" ಕೊನೆಗೆ "ಮಾತೇ ಮಹಾದೇವಿ(!)" ಎಂದೆಲ್ಲಾ ನಮ್ಮ ಹಿರಿಯರು ಮಾತಿನ ಮಹತ್ತನ್ನು ಸಾರಿದ್ದಾರೆ. ವಿವಿಧ ಹಿನ್ನೆಲೆಯ ಜನಗಳ ಸಂಗಮವಾದ ನಮ್ಮ ರೂಮಿನಲ್ಲಿ ಮಾತಿನ ದೆಸೆಯಿಂದಾದ ಪ್ರಸಂಗಗಳಿಗೆ ಲೆಕ್ಕ ಇಲ್ಲ.
ನಮ್ಮ ರೂಂಮೇಟು ನಿರ್ಮಲಕುಮಾರನದು ಅರ್ಧ ಕನ್ನಡ, ಅರ್ಧ ತೆಲುಗು ಮನೆಮಾತು. ಆದರೆ ಆತ ಹುಟ್ಟಿ ಬೆಳೆದದ್ದು ತಮಿಳುನಾಡಿನಲ್ಲಿ. ಓದಿದ್ದು ಇಂಗ್ಲೀಷು ಮೀಡಿಯಮ್ಮು, ಆದರೆ ಪ್ರಥಮ ಭಾಷೆಯಾಗಿ ಕಲಿತದ್ದು ಸಂಸ್ಕೃತ. ಹೀಗಾಗಿ ನಿರ್ಮಲಕುಮಾರನ ಶಬ್ದಕೋಶದಲ್ಲಿ ಈ ಎಲ್ಲಾ ಭಾಷೆಗಳ ಶಬ್ದಗಳಿದ್ದವು. ಆದರೆ ಒಂದು ಭಾಷೆಯನ್ನು ಮಾತನಾಡುವಾಗ ಇನ್ನೊಂದು ಭಾಷೆಯ ಶಬ್ದಗಳು ಬಾಯಿಗೆ ಬಂದು ಭಯಂಕರ ಗಲಿಬಿಲಿ ಉಂಟು ಮಾಡಿಬಿಡುತ್ತಿದ್ದವು. ಒಮ್ಮೊಮ್ಮೆಯಂತೂ ಭಾಷೆಗಳ ಈ ಗಿರ್ಮಿಟ್ಟು ಅವಾಂತರವನ್ನೇ ಉಂಟು ಮಾಡಿಬಿಡುತಿತ್ತು.
ಒಂದು ಸಲ ನಿರ್ಮಲಕುಮಾರನಿಗೆ ಕಣ್ಣು ನೋವು ಬಂದಿತ್ತು. ಕಣ್ಣಿನ ತಜ್ಞರ ಹತ್ತಿರ ಕರೆದುಕೊಂಡು ಹೋಗಿದ್ದೆ. ಅವರು ಸಮಸ್ಯೆ ಏನು ಎಂದು ಕೇಳಿದಾಗ ನಿರ್ಮಲ ಕುಮಾರ ಎರಡೂ ಕಣ್ಣೂ ಏಕ ಆಗಿವೆ ಎಂದು ಹೇಳಿದ. ಡಾಕ್ಟರಿಗೂ, ನನಗೂ ಏನು ಎಂತ ಅರ್ಥವಾಗಲಿಲ್ಲ. ಕಣ್ಣು-ಕಣ್ಣೂ ಸೇರಿ ಏಕಾದಾಗ ಪ್ರೀತಿ ಹುಟ್ಟುತ್ತೆ ಅಂತ ಗೊತ್ತು. ಆದರೆ ಅವೆರಡು ಬೇರೆ-ಬೇರೆ ವ್ಯಕ್ತಿಗಳ ಕಣ್ಣುಗಳಾಗಿರಬೇಕಲ್ಲಾ! ಇನ್ನು ನಾರ್ಸಿಸಮ್ ಎಂದು ಕರೆಸಿಕೊಳ್ಳುವ ಸ್ವಮೋಹದ ರೋಗಕ್ಕೊಳಗಾದಾಗ ಹಿಂಗಾಗುತ್ತೋ ಏನೋ ಎಂದು ನಾನು ವಿಚಾರ ಮಾಡುತ್ತಾ ಇದ್ದೆ. ನಮ್ಮ ಮುಖದ ಮೇಲೆ ಮೂಡಿದ ಪ್ರಶ್ನಾರ್ಥಕ ಚಿನ್ಹೆಯನ್ನು ಕಂಡು, ನಿರ್ಮಲಕುಮಾರ ಕಣ್ಣುಗಳಲ್ಲಿ ಏಕ್ - ಅಂದರೆ ಂ-ಛಿ-h-e ಎಂದು ಸ್ಪೆಲಿಂಗ್ ಸಹಿತವಾಗಿ ಹೇಳಿದಾಗ, ನಾನೂ ಡಾಕ್ಟರರೂ ಜ್ಞಾನೋದಯವಾಗಿ ನಿಟ್ಟುಸಿರು ಬಿಟ್ಟಿದ್ದೆವು.
ತಮಿಳು ಸ್ವಲ್ಪ ಆಕ್ರಮಣಕಾರಿ ಭಾಷೆ ಅನಿಸುತ್ತೆ, ನಿರ್ಮಲ್ ಕುಮಾರನ ಜಿಹ್ವಾಸಾಮ್ರಾಜ್ಯದಲ್ಲಿ ಅದು ಆಗಾಗ ಉಳಿದ ಭಾಷೆಗಳ ಮೇಲೆ ಅತಿಕ್ರಮಣ ಮಾಡುತ್ತಿತ್ತು. ತಮಿಳಿನಲ್ಲಿ ’ಕ’-’ಗ’ ಗಳು ಒಂದೇ, ’ಚ’-’ಸ’ಗಳು ಬೇರೆಯಲ್ಲ, ’ತ’-’ದ’ಗಳು ಅದ್ವೈತ. ಹೀಗಾಗಿ ನಿರ್ಮಲನ ಬಾಯಲ್ಲಿ ಕವಿರಾಜ, ಗವಿರಾಜನಾಗಿ, ಗುರುರಾಜ- ಕುರುರಾಜನಾಗಿ ಹೆಸರು ಕೆಡಿಸಿಕೊಳ್ಳುತ್ತಿದ್ದರು. ಹಾಗೆಯೇ ಚಾಮರಾಜ - ಸಾಮರಾಜನಾಗಿ, ಶೀಲಾ- ಚೀಲಾ ಆಗಿ ಬದ್ನಾಮಾಗುತ್ತಿದ್ದರು. ಒಮ್ಮೆ ವೀರಪ್ಪನ್ ಬಗ್ಗೆ ಮಾತಾಡ್ತಾ ಇದ್ದಾಗ ನಿರ್ಮಲಕುಮಾರ ಅವನು ಕೌಂಟರ್ ಜಾತಿಯವನು, ಅವನ ಜಾತಿಯ ಓಟುಗಳ ಮೇಲೆ ಕಣ್ಣಿಟ್ಟುರುವ ರಾಜಕಾರಣಿಗಳು ಅವನ ಬಗ್ಗೆ ಮೃದುವಾಗಿದ್ದಾರೆ ಎಂದು ತನ್ನದೊಂದು ಸಿದ್ಧಾಂತವನ್ನು ಮುಂದಿಟ್ಟಿದ್ದ. ನಮಗೆ ಕ್ಯಾಷ್-ಕೌಂಟರ್ ಗೊತ್ತು, ಫುಡ್ ಕೌಂಟರ್ ಗೊತ್ತು, ಇದೇನಿದು ಕೌಂಟರ್ ಜಾತಿ ಎಂದು ವಿಸ್ಮಯಿಸಿ, ವೀರಪ್ಪನ್ನನದು ಕೌಂಟರ್ ಜಾತಿಯಾದರೆ, ಪೋಲಿಸರದು ಎನ್-ಕೌಂಟರ್ ಜಾತಿಯೇ ಸರಿ ಎಂದು ನಾವು ಲೆಕ್ಕ ಹಾಕಿದ್ದೆವು. ನಂತರ ತಿಳಿದದ್ದೇನೆಂದರೆ ವೀರಪ್ಪನದು ಗೌಂಡರ್ ಜಾತಿ. ನಿರ್ಮಲನ ನಾಲಿಗೆ ’ಕೌ-ಗೌ’ ಮತ್ತು ’ಡ-ಟ’ ಗಳ ಮಧ್ಯೆ ಅಭೇದ ಕಲ್ಪಿಸಿ ನಮ್ಮನ್ನು ಬೇಸ್ತು ಬೀಳಿಸಿತ್ತು.
ನಾನು, ನನ್ನ ಇನ್ನೊಬ್ಬ ರೂಂಮೇಟು ವಿನಾಯಕ ಮತ್ತು ನಮ್ಮ ರೂಂನಲ್ಲಿ ಆಗಾಗ ಝಂಡಾ ಹಾಕುತ್ತಿದ್ದ ಬಹುತೇಕ ಸ್ನೇಹಿತರೆಲ್ಲರೂ ಬಿಳಿಜೋಳದ ಖಡಕ ರೊಟ್ಟಿಯಂತಹ ಮಾತಿನವರು. ನಾನು, ವಿನಾಯಕ ತಕ್ಕ ಮಟ್ಟಿಗೆ ಈ ಹಳೇ ಮೈಸೂರು ಕನ್ನಡವನ್ನು ಕಲಿತು, ಅಲ್ಲಿಯೂ ಸಲ್ಲುತ್ತಾ, ಇಲ್ಲಿಯೂ ಸಲ್ಲುತ್ತಿದ್ದೆವು. ಆದರೆ ನಮ್ಮ ರೂಂಮಿನ ಕಾಯಂ ಅತಿಥಿ ಈರಣ್ಣನಿಗೆ ಎರೆಮಣ್ಣಿನ ವಾಸನೆಯ ಕನ್ನಡವನ್ನು ಒಂದು ಗಾಲಿಯಾಗಿಸಿ, ಮಲ್ಲಿಗೆಯ ಘಮದ ಕನ್ನಡವನ್ನು ಇನ್ನೊಂದು ಗಾಲಿಯಾಗಿಸಿ, ಸೈಕಲ್ಲು ಹೊಡೆಯುವ ಕಲೆ ಕೊನೆಗೂ ಸಾಧ್ಯವೇ ಆಗಿರಲಿಲ್ಲ. ಚುರುಮುರಿಗೆ ಪುರಿ ಯಾಕೆ ಅನ್ನ ಬೇಕು ? ಚುರುಮುರಿಗೆ ಪುರಿ ಅಂದರ ಎಣ್ಣ್ಯಾಗ ಕರದು ಮಾಡುವ ಪುರೆಕ್ಕ ಏನ್ ಅನಬೇಕು? ನೆಲದ ಕೆಳಗ ಬೆಳೆಯುವ ಶೇಂಗಾಕ್ಕ ಕಡಲೆ ಅಂದರ ನೆಲದ ಮ್ಯಾಗ ಬೆಳೆಯುವ ಕಡಲೆ - ಣhe gಡಿಚಿms - ಅವಕ್ಕ ಏನನ್ನಬೇಕು? ಅನ್ನಕ್ಕ ಸಕ್ಕರಿ ಹಾಕಿ ಮಾಡುವ ಅಡಿಗಿ ಕೇಸರಿ ಭಾತು. ಶಿರಾಕ್ಕೂ ಕೇಸರಿಭಾತು ಅಂದರ ಮೊದಲಿಂದಕ್ಕ ಏನನ್ನಬೇಕು? ಎಂಬ ಅವನ ಮೂಲಭೂತ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ.
ನಮ್ಮ ಇನ್ನೊಬ್ಬ ಸ್ನೇಹಿತ ಖಾನನದು ಈರಣ್ಣನ ಉಲ್ಟಾ ಕೇಸು. ನಮ್ಮ ಹಾಗೆ ಈ ಖಾನನೂ ರೊಟ್ಟಿ ಖಾರಬ್ಯಾಳಿ ತಿಂದೇ, ತುಂಗಭದ್ರೆ-ಕೃಷ್ಣೆ-ಮಲಪ್ರಭೆಯರ ನೀರು ಕುಡಿದೇ ಬೆಳೆದವನು. ಆದರೆ ಬೆಂಗಳೂರಿಗೆ ಬಂದು ಕಾವೇರಿ ನೀರು ಸೋಕಿದ ತಕ್ಷಣ ನಾನು ಕಣೋ ಖಾನು ಎನ್ನುವಷ್ಟು ಬದಲಾಗಿದ್ದ. ಏನ್ಲೇ ಮಗನ ಎಂಬ ಆತ್ಮೀಯ ಸಂಬೋಧನೆ ಏನ್ ಕಣೋ ಎಂದು, ಅಕ್ಕಾವರ, ಅವ್ವಾವರ ಅನ್ನುವ ಗೌರವ ಪೂರ್ವಕ ಸಂಬೋಧನೆಗಳು ಅಮ್ಮಾ ಎಂದು ಬದಲಾಗಿ ಖಾನನ ಮಾತನಾಡುವ ಶೈಲಿ ಸಂಪೂರ್ಣ ಪರಿವರ್ತನೆ ಹೊಂದಿತ್ತು. ಒಮ್ಮೆ ನಮ್ಮ ಖಾನು ಊರಿಗೆ ಹೋಗಿದ್ದಾಗ ಅವರ ಕೋಳಿ ಅಂಗಳದಲ್ಲಿ ತತ್ತಿ ಇಟ್ಟಿತಂತೆ. ಅದನ್ನು ತನ್ನ ತಾಯಿಗೆ ಹೇಳಲು ಖಾನ್ ಸಾಹೇಬರು ಯವ್ವಾಬೇ, ಕೋಳಿ ತತ್ತಿ ಇಟ್ಟೈತಿ ಎಂದು ಹೇಳದೇ ಅಮ್ಮಾ, ಕೋಳಿ ಮೊಟ್ಟೆ ಇಟ್ಟಿದೆ ಎಂದು ಕೂಗಿ ಹೇಳಿದರಂತೆ. ಅದನ್ನು ಕೇಳಿದ ಖಾನ ಸಾಹೇಬರ ಮಾತೋಶ್ರೀಯವರು ಮೊದಲು ದಿಙ್ಮೂಢರಾಗಿ, ನಂತರ ಸುಧಾರಿಸಿಕೊಂಡು ಇಂತಹ ಭಾಷಾ-ಪ್ರಯೋಗ ಬೆಂಗಳೂರು ಹುಡುಗಿಯೊಬ್ಬಳು ತನ್ನ ಮಗನನ್ನು ಮಾಯಾಜಾಲದಲ್ಲಿ ಸಿಕ್ಕಿಸಿದರ ಪರಿಣಾಮವೇ ಎಂದು ತೀರ್ಮಾನಿಸಿದರಂತೆ. ಅಂಗಳದಲ್ಲಿ ಬಿದ್ದಿದ್ದ ಮಂಡ ಮಚ್ಚೆಗಳನ್ನು ತೆಗೆದುಕೊಂಡು ರಪರಪ ಎಂದು ಹೊಡೆಯುತ್ತ ಯಾವ ಮಿಟುಕಲಾಡಿ ನಿನಗಿಂತಾ ಮಾತ್ ಕಲಿಸಿದಾಕಿ ? ಯಾವೂರ ಲೌಡಿ ಆಕೀ? ಎಂದು ಖಾನ ಸಾಹೇಬರಿಗೆ ಸನ್ಮಾನ ಮಾಡಿದ್ದರಂತೆ!
ಇತ್ತೀಚಿನ ವರದಿಗಳ ಪ್ರಕಾರ ಮಂಡ ಮಚ್ಚೆಗಳ ಸನ್ಮಾನದಿಂದಾಗಿ ಸ್ವಲ್ಪ ದಿನ ಎಲ್ಲರಂತಿದ್ದ ಖಾನ್ ಸಾಹೇಬರು ಈ ಸಲ ’ಚಮಕಾಯಿಸಿ, ಚಿಂದಿ ಉಡಾಯಿಸಿ’ ಭಾಷೆಯ ದೀಕ್ಷೆ ತೊಟ್ಟಿದ್ದಾರೆ. ಆದ್ದರಿಂದ ಏನು ಕಣೋ ಸಂಬೋಧನೆ ಏನ್ ಮಚ್ಚಾ ಎಂದು ಬದಲಾಗಿದೆ ಅಂತೆ!
ಅಂದ ಹಾಗೆ ’ಹಕೂನ ಮಟಾಟ’ ಎಂಬ ನುಡಿಗಟ್ಟು ನಿಮಗೆ ಗೊತ್ತಿರ ಬೇಕಲ್ಲಾ ? ಆಫ್ರಿಕದ ಭಾಷೆಯೊಂದರಲ್ಲಿ ಅದರ ಅರ್ಥ ’ನೋ ಪ್ರಾಬ್ಲಂ’ ಅಂತ. ’ನಿರ್ಲಜ್ಜಂ ಸದಾಸುಖಿ’ ಎಂದು ನಂಬಿ, ನಡೆಯುವವರ ಮನೋಭಾವವನ್ನು ’ಹಕೂನ ಮಟಾಟ’ ನುಡಿಗಟ್ಟು ಪ್ರತಿನಿಧಿಸುತ್ತದೆ. ನಮ್ಮ ಖಾನ ಸಾಹೇಬರ ಕೋಳಿ ಮೊಟ್ಟೆ ಪ್ರಸಂಗದ ದೆಸೆಯಿಂದಾಗಿ, ಯಾರಾದರೂ ನಮ್ಮ ಸ್ನೇಹಿತರು ಸಂಪೂರ್ಣ ಬೆಂಗಳೂರಿಗರಾಗಿ ಪರಿವರ್ತಿತರಾಗಿದ್ದಾರೆ ಎಂದು ಹೇಳಲು ’ಅವರ ಕೋಳಿ ಮೊಟ್ಟೆ ಇಡ್ತಾ ಇದೆ ಕಣೋ’ ಎಂದು ಹೇಳುವುದು ಚಾಲ್ತಿಗೆ ಬಂತು. ಉದಾಹರಣೆಗೆ ಗಿರಿ ಸಂಪೂರ್ಣ ಬೆಂಗಳೂರಿಗನಾಗಿ ಪರಿವರ್ತಿತನಾಗಿದ್ದರೆ, ಗಿರಿಯ ಕೋಳಿ ಮೊಟ್ಟೆ ಇಡ್ತಾ ಇದೆ ಕಣೋ ಎನ್ನುವುದು. ನಮ್ಮ ಸ್ನೇಹಿತರ ವಲಯದಲ್ಲಿ ...ರ ಕೋಳಿ ಮೊಟ್ಟೆ ಇಡ್ತಾ ಇದೆ ಕಣೋ ನುಡಿಗಟ್ಟು ಹಕೂನ ಮಟಾಟ ದಷ್ಟೇ ಜನಪ್ರಿಯವಾಯಿತು!!
ನಿರಾಶಾವಾದಿಗಳು ಕನ್ನಡ ಕೆಲವೇ ದಿನಗಳಲ್ಲಿ ಕಣ್ಮರೆಯಾಗಿ, ಅಡಿಗೆ ಮನೆಯ ಭಾಷೆಯಾಗಲಿದೆ ಎಂದು ಹೇಳುತ್ತಿರುತ್ತಾರೆ. ಆ ಹೇಳಿಕೆಯ ಎರಡೂ ಭಾಗಗಳೂ ಸತ್ಯವಲ್ಲ ಎನಿಸುತ್ತದೆ. ಮೊದಲನೆಯದಾಗಿ, ನೀವು-ನಾವು ಕನ್ನಡದಲ್ಲಿಯೇ ಬರೆದು-ಓದಿ-ಮಾತಾಡಿ-ಹಾಡಿ ಬದುಕುತ್ತಿರುವುದರಿಂದ ಕನ್ನಡವು ಕಣ್ಮರೆಯಾಗುವುದು ಅಥವಾ ಅದನ್ನು ಕಣ್ಮರೆಯಾಗಿಸುವ ಯತ್ನಗಳು ಯಶಸ್ವಿಯಾಗುವುದು ಕೆಲವೇ ದಿನಗಳಲ್ಲಿ ಸಾಧ್ಯವಿಲ್ಲ. ಈಗಂತೂ ಇಂಟರ್ನೆಟ್ಟು-ಬ್ಲಾಗು ಇತ್ಯಾದಿಗಳಲ್ಲಿ ಕನ್ನಡದ ಇನ್ನೊಂದು ಲೋಕವೇ ಸೃಷ್ಟಿಯಾಗುತ್ತಿದೆ. ಆದ್ದರಿಂದ ಮೂವತ್ತು-ನಲವತ್ತು ವರುಷಗಳಿಂದ ಕನ್ನಡ ಕಣ್ಮರೆಯಾಗುತ್ತೆ ಎಂದು ಆಶಿಸುತ್ತಿರುವರ ಆಶೆ ಅಷ್ಟು ಬೇಗ ಈಡೇರುವ ಸಾಧ್ಯತೆಗಳಿಲ್ಲ.
ಹೇಳಿಕೆಯ ಎರಡನೇ ಭಾಗಕ್ಕೆ ಬರುವ ಮುಂಚೆ ನಮ್ಮ ರೂಂಮಿನ ಅಡಿಗೆ ಕೆಲಸ ಮಾಡುವ ಭಾಗ್ಯಮ್ಮನ ಬಗ್ಗೆ ಒಂಚೂರು ಹೇಳಬೇಕು.
ನಮ್ಮ ಭಾಗ್ಯಮ್ಮನಿಗೆ ’ಸ್ವಚ್ಛ ಮಾಡು’ ಅಂದರೆ ತಿಳಿಯೋದಿಲ್ಲ, ಅವಳಿಗೆ ’ಕಿಲೀನು ಮಾಡು’ ಅಂದರಷ್ಟೇ ಅರ್ಥವಾಗೋದು. ಗಜ್ಜರಿ ಅಂದರೆ ಅವಳಿಗೆ ಗೊತ್ತಿಲ್ಲ, ಆದರೆ ಕ್ಯಾರೆಟ್ ಗೊತ್ತು. ಕೊತ್ತಂಬರಿ-ಬೆಳ್ಳುಳ್ಳಿ ಅಂದರೆ ’ಅದೇನು ಕನ್ನಡದಲ್ಲಿ ಹೇಳಿ ಸಾ’ ಅಂತಾಳೆ, ಆದರೆ ಕೋರಿಯಂಡರ್-ಗಾರ್ಲಿಕ್ ಅವಳ ನಾಲಿಗೆ ಮೇಲೆ ನಲಿದಾಡುವ ಪದಗಳು. ’ಕಿತ್ತಳೆ ಗೊತ್ತಾ?’ ಅಂತ ಕೇಳಿದರೆ ಅವಳ ಉತ್ತರ ’ಊಹ್ಞೂಂ’, ’ಆರೇಂಜಿ’ ಅಂದರೆ ’ಹ್ಞಾಂ’ !
ಇಲ್ಲಿಯೇ ಹುಟ್ಟಿ ಬೆಳೆದು, ಇಲ್ಲಿಯೇ ದುಡಿದು ತಿನ್ನುವ ಭಾಗ್ಯಮ್ಮನಿಗೆ ಈ ಪರಿಯ ಇಂಗ್ಲೀಷು ದೀಕ್ಷೆ ದೊರೆತದ್ದು ಹೇಗೆ ? ನನ್ನ ಪತ್ತೆದಾರಿಕೆಯ ಪ್ರಕಾರ ಟೀವಿಯೇ ಈ ’ಭಾಷಾಂತರ’ಕ್ಕೆ ಕಾರಣ. ಟೀವಿಯಲ್ಲಿ ಭಾಗ್ಯಮ್ಮ ಎಎಕ್ಸೆನ್ನು, ಎಚ್ಬಿಓ ಇತ್ಯಾದಿ ಇಂಗ್ಲೀಷು ವಾಹಿನಿಗಳನ್ನು ನೋಡ್ತಿರುತ್ತಾಳೆ ಅಂದುಕೊಳ್ಳಬೇಡಿ. ಅವಳು ನೋಡುವುದು ’ಮೂರು ಮತ್ತೊಂದು’ ಇರುವ ಸಿರಿಗನ್ನಡದ ವಾಹಿನಿಗಳನ್ನೇ. ಕನ್ನಡ ಟೀವಿ ವಾಹಿನಿಗಳಲ್ಲಿ ಬರುವ ಅಡಿಗೆ ಕಾರ್ಯಕ್ರಮಗಳಲ್ಲಿ, ನಿರೂಪಕರೂ, ಅತಿಥಿಗಳೂ ಇಬ್ಬರೂ ಸ್ಪರ್ಧೆಗೆ ಬಿದ್ದವರಂತೆ ಇಂಗ್ಲೀಷು ಶಬ್ದಗಳನ್ನು ಬಳಸುವುದನ್ನು ನೀವೂ ನೋಡಿಯೇ ಇರುತ್ತೀರಿ. ಆ ಜನ ವಗ್ಗರಣೆ ಹಾಕುವುದಕ್ಕೆ ಸೀಜನಿಂಗ್ ಅನ್ನುತ್ತವೆ, ’ಕುದಿಸಿ’ ಅನ್ನಲಿಕ್ಕೆ ’ಬಾಯಿಲ್ ಮಾಡುವುದು’ ಅನ್ನುತ್ತವೆ. ಹಸಿ ಮೆಣಸಿನಕಾಯಿಗೆ ’ಗ್ರೀನ್ ಚಿಲ್ಲಿ’, ಒಣ ಮೆಣಸಿನಕಾಯಿಗೆ ’ರೆಡ್ ಚಿಲ್ಲಿ’ ಎಂದು ಅವರು ಹೇಳದಿದ್ದರೆ ದೇವರ ಮೇಲಾಣೆ. ದೋಸೆಯ ಹಿಟ್ಟಿಗೆ ಅವರು ದೋಸಾ ಬ್ಯಾಟರ್ ಅನ್ನದಿದ್ದರೆ ನಾನು ಅಗ್ನಿಪ್ರವೇಶಕ್ಕೂ ತಯಾರು! ಇನ್ನು, ಟೀವಿಗಳಲ್ಲಿನ ಧಾರಾವಾಹಿಗಳ ಬಗ್ಗೆಯಂತೂ ಹೇಳುವುದೇ ಬೇಡ. ಈ ಧಾರಾವಾಹಿಗಳಲ್ಲಿ ಯಾರಿಗೂ ನೋವಾಗುವುದಿಲ್ಲ, ಎಲ್ಲರಿಗೂ ’ಹರ್ಟ್’ ಆಗುತ್ತೆ. ಅವರಿಗೆ ಜೀವನದಲ್ಲಿ ಸಮಸ್ಯೆಗಳು ಬರೋದೇ ಇಲ್ಲ, ಬರೀ ’ಪ್ರಾಬ್ಲಮ್’ಗಳು ಬರ್ತಾವೆ ! ಇಂತಹ ಟೀವಿ ಕಾರ್ಯಕ್ರಮ- ಧಾರಾವಾಹಿ ನೋಡಿದ ಭಾಗ್ಯಮ್ಮನಿಗೆ ಶುದ್ಧ ಕನ್ನಡ ಅರ್ಥವಾಗುವುದಿಲ್ಲ ಎನ್ನುವುದರಲ್ಲಿ ಏನು ಆಶ್ಚರ್ಯ?
ಭಾಗ್ಯಮ್ಮ ಮತ್ತು ಈರಣ್ಣ ಇಬ್ಬರೂ ಕನ್ನಡಿಗರಾದರೂ ಇಬ್ಬರ ನಡುವೆ ಸರಾಗ ಸಂಭಾಷಣೆಗೆ ಇನ್ನೊಬ್ಬ ದುಭಾಷಿಯ ಅವಶ್ಯಕತೆ ಇರುತ್ತಿತ್ತು. ದುಭಾಷಿ ಇಲ್ಲದಿದ್ದರೆ, ಪರಿಣಾಮ ಕೆಲವೊಮ್ಮೆ ಭೀಕರವಾಗಿರುತ್ತಿತ್ತು. ಈರಣ್ಣ ಹೊಸದಾಗಿ ಬಂದಾಗ ಭಾಗ್ಯಮ್ಮ ಪರಿಚಯಿಸಿಕೊಳ್ಳುತ್ತಾ, ತನ್ನನ್ನು ಅಡಿಗೆ ಹೆಂಗಸಾಗಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಳು. ನಮ್ಮ ಕಡೆ ಹೆಂಗಸು ಇಟ್ಟು ಕೊಳ್ಳುವುದು ಅಂದರೆ ಪಂಚ ಮಹಾ ಪಾತಕಗಳಲ್ಲಿ ಒಂದು. ಈರಣ್ಣ ಭಾಗ್ಯಮ್ಮನ ಮಾತಿಗೆ ಆ ಅರ್ಥ ಹಚ್ಚಿ ಖೋಕ್ ಖೋಕ್ ನಕ್ಕಿದ್ದಷ್ಟೇ ಅಲ್ಲ, ಮೂರ್ಖತನದಿಂದ ತಾನು ಯಾಕೆ ನಕ್ಕೆ ಎಂಬುದನ್ನು ಭಾಗ್ಯಮ್ಮನಿಗೆ ಹೇಳಿಯೂ ಬಿಟ್ಟಿದ್ದ. ಅವತ್ತು ಈರಣ್ಣನನ್ನು ಭಾಗ್ಯಮ್ಮನ ಚಪ್ಪಲಾಘಾತದಿಂದ ಪಾರುಮಾಡುವಲ್ಲಿ ನನ್ನ ಪೀಪಲ್ ಮ್ಯಾನೆಜ್ಮೆಂಟ್ ಕೌಶಲ್ಯವೆಲ್ಲಾ ಖರ್ಚಾಗಿ ಹೋಗಿತ್ತು!
ಬೆಂಗಳೂರಿಗೆ ಅಲ್ಲಿಂದ, ಇಲ್ಲಿಂದ, ಎಲ್ಲೆಲ್ಲಿಂದಲೋ ಜನ ಬಂದು ತಳವೂರುತ್ತಿರುವುದರಿಂದ ಭಾಗ್ಯಮ್ಮನಂತವರ ಶಬ್ದಕೋಶಗಳಲ್ಲಿ ಆ-ಈ ಭಾಷೆಗಳ ಪದಗಳೂ ಬರುತ್ತಿವೆ. ಸ್ವಲ್ಪ ಅಟ್ಟಾ ಕಲಿಸಿ, ಡವ್ ಮಾಡಿ ಬಿಡ್ತೀನಿ ಎನ್ನುವುದು ಭಾಗ್ಯಮ್ಮನ ಚಪಾತಿ ಮಾಡಲಿಕ್ಕೆ ಮುಂಚಿನ ಮುನ್ನುಡಿಯಂತಹ ಮಾತು. ನಿಮಗೆ ಗೊತ್ತಿಲ್ಲದಿದ್ದರೆ - ’ಅಟ್ಟಾ’ ಅಂದರೆ ಹಿಟ್ಟು, ಒಂದು ಪರದೇಶಿ ಭಾಷೆಯಲ್ಲಿ, ’ಡವ್’ ಅಂದ್ರೆ ಕಣಕ, ಮತ್ತೊಂದರಲ್ಲಿ. ಆಗಿನ್ನೂ ನಮ್ಮ ಗುರು ಜಗ್ಗೇಶರ ’ಡವ್’ ಅರ್ಥ ಮಾತ್ರ ನಮಗೆ ಗೊತ್ತಿತ್ತು. ಭಾಗ್ಯಮ್ಮನ ಮುನ್ನಡಿಯನ್ನು ಮೊದಲ ಸಲ ಸ್ವಲ್ಪ ಅಟ್ಟಾಡಿಸಿ, ಡವ್ ಮಾಡಿ ಬಿಡ್ತೀನಿ ಎಂದು ಕೇಳಿಸಿಕೊಂಡು, ಜಗ್ಗೇಶರು ಭಾಗ್ಯಮ್ಮನಂತೆ ಮೇಕಪ್ ಮಾಡಿಕೊಂಡು ಬಂದು ಸೆನ್ಸಾರಾಗದ ಡೈಲಾಗು ಹೇಳ್ತಾ ಇದ್ದಾರೇನೋ ಎಂಬ ಅನುಮಾನವಾಗಿತ್ತು!
ಭಾಗ್ಯಮ್ಮನ ಭಾಷಾಮಾಲಿನ್ಯದ ಬಗ್ಗೆ ಓದಿದ ಮೇಲೆ ನಿಮಗೆ ಈಗಾಗಲೇ ಆ ಹೇಳಿಕೆಯ ಎರಡನೇ ಭಾಗವೂ ಸತ್ಯವಲ್ಲ ಎಂದು ಅನಿಸಿರಬಹುದು. ಹೌದು, ಅಕಸ್ಮಾತ್ ಕನ್ನಡವು ಕಣ್ಮರೆಯಾದರೆ, ಅದು ಮೊದಲು ಅಡಿಗೆ ಮನೆಯಿಂದಲೇ ಕಣ್ಮರೆಯಾಗುತ್ತದೆ. ಅಡಿಗೆ ಮಾಡುವುದು - ಟೀವಿ ನೋಡುವುದು, ಬಿಟ್ಟು ಬೇರೇನೂ ಗೊತ್ತಿರದ ಭಾಗ್ಯಮ್ಮನಂತವರೂ, ಇತರ ಗೃಹಿಣಿಯರೂ ಟೀವಿಯ ಕನ್ನಡವನ್ನೇ ಉಪಯೋಗಿಸುತ್ತಾ ನೈಜಕನ್ನಡವನ್ನು ಮರೆಯುವುದು ನಿಶ್ಚಿತ. ಅದಾಗದಂತೆ ತಡೆಯಲು ಏನು ಮಾಡಬೇಕು ? ಕುಂಬಳಕಾಯಿ ಮತ್ತು ಕುಡುಗೋಲು ಎರಡೂ ಮುಖ್ಯವಾಗಿ ಟೀವಿಯಲ್ಲಿ ಬರುವ ಅಡಿಗೆ ಕಾರ್ಯಕ್ರಮದ ನಿರೂಪಕರ ಮತ್ತು ಭಾಗವಹಿಸುವವರ ಕೈಯಲ್ಲಿಯೇ ಇವೆ!!
Subscribe to:
Post Comments (Atom)
6 comments:
ಬಹಳ ಚೆನ್ನಾಗಿದೆ ಲೇಖನ. "ಮಾತೆ ಮಹಾದೇವಿ (!)" ಇಷ್ಟವಾಯಿತು ನನಗೆ :)
ನಕ್ಕು ನಕ್ಕು ಸುಸ್ತಾಯಿತು. ಭಾಷಾ(ಆವಾ)೦ತರದ ಇಕ್ಕಟ್ಟಿನ ಕ್ಷಣಗಳನ್ನು ಸೊಗಸಾಗಿ ಬರೆದಿದ್ದೀರಾ!!
ನಿಮ್ಮ ಲೇಖನ ಬಹಳ ತುಂಬಾ ಚೆನ್ನಾಗಿದೆ... ಈ ತರಹದ ಲೇಖನಗಳು ಇನ್ನಷ್ಟು ಬರಲಿ...
ತುಂಬಾ ಚೆನ್ನಾಗಿ ಬರೆದಿದ್ದೀರಿ. ಇಂತಹ ಅನಾಹುತಗಳು ನಮ್ಮಲ್ಲೂ ಕೆಲವು ಆಗಿವೆ! ಸಂಜೆ ಕ್ಯಾಬ್ ನಲ್ಲಿ ಮನೆಗೆ ಹಿಂದಿರುಗುವಾಗ, ನನ್ನ ಸಹುದ್ಯೋಗಿಯೊಬ್ಬರು "ಪಲ್ಲೇವು" ತಗೊಂಡು ಹೋಗ್ಬೇಕು ರಾತ್ರಿ ಅಡುಗೆಗೆ ಅಂದ್ರು. ಮಿಕ್ಕಿದವರು ಮಿಕ ಮಿಕ ನೋಡ್ತಾ ಇದ್ರು, ಪಲ್ಲೆ ಮಾತ್ರ ಎಲ್ಲಿ ಸಿಕ್ಕತ್ತೆ ಅನ್ನೋದು ಒಂದು, ಮತ್ತೊಂದು ಪಲ್ಲೆ (ಪಲ್ಯ- curry) ತಗೊಂಡು ಹೋದ್ಮೇಲೂ ಏನು ಅಡುಗೆ ಮಾಡ್ತಾರೆ ಅನ್ನೋದು!
ಸಿಕ್ಕಾಪಟ್ಟೆ ತಮಾಷೆಯಾಗಿದೆ!
ಎಲ್ಲೆಲ್ಲಿಂದಲೋ, ಯಾವ್ಯಾವುದೋ ಜಾಡು ಹಿಡಿದು ನಿಮ್ಮ- 'ಅಂತರಂಗ'ಕ್ಕೆ ಬಂದೆ. ತಡವಾಗಿ ಬಂದಿದ್ದರೂ ನಗು ಉಕ್ಕಲು ತಡವೇನೂ ಆಗಿಲ್ಲ. ಪರಿಶುದ್ಧ ಹಾಸ್ಯ ಖುಷಿಯಾಗಿ ಕುಲುಕುಲು ನಕ್ಕೆ. ಪಕ್ಕದಲ್ಲಿರುವ ಪತಿರಾಯ ಇವ್ಳನ್ನು ಯಾವ ಆಸ್ಪತ್ರೆಗೆ ಒಯ್ಯಲೀ ಎಂಬ ಮುಖಭಾವದಿಂದ ನೋಡ್ತಾ ಇದ್ದಾರೆ!
Post a Comment