ಕನ್ನಡ ದಿನಪತ್ರಿಕೆಯೊಂದರ ಜನೇವರಿ ಒಂದನೇ ತಾರೀಕಿನ ಪುರವಣಿಯಲ್ಲಿ ಪ್ರಕಟವಾದ ’ನೋಡಲೇಬೇಕಾದ ಹತ್ತು ಸಿನೇಮಾ’ಗಳಲ್ಲಿ ಕನ್ನಡೇತರ ಚಿತ್ರಗಳ ಹೆಸರುಗಳನ್ನು ನೋಡಿ ಈ ಪತ್ರ ಬರೆಯುತ್ತಿದ್ದೇನೆ. ಕನ್ನಡದ್ದೇ ಆದ ಈ ದಿನ ಪತ್ರಿಕೆ, ಕನ್ನಡೇತರ ಸಿನೇಮಾಗಳನ್ನು ಕನ್ನಡಿಗರು ನೋಡಲೇಬೇಕೆಂದು ಫರ್ಮಾನು ಹೊರಡಿಸುವುದು ಯಾಕೆ?
’ಗುಣಕೆ ಮತ್ಸರವಿಲ್ಲ, ಕನ್ನಡಿಗರು ಕನ್ನಡದ ಕೃತಿಗಳಷ್ಟನ್ನೇ ಗಮನಿಸಬೇಕೆಂಬ ಸಂಕುಚಿತ ಮನೋಭಾವ ನಮ್ಮದಲ್ಲ’ ಎನ್ನುವುದೇ ಇವರ ಸಿದ್ಧಾಂತವೆಂದುಕೊಳ್ಳೋಣವೆಂದರೆ ಹಾಗೇನು ಇಲ್ಲ. ’ನೋಡಲೇಬೇಕಾದ ಹತ್ತು ಸಿನೇಮಾಗಳ’ ಪಟ್ಟಿಯ ಪಕ್ಕವೇ ಪ್ರಕಟಿಸಿದ ’ಓದಲೇಬೇಕಾದ ಹತ್ತು ಪುಸ್ತಕಗಳ’ ಪಟ್ಟಿಯಲ್ಲಿ ಒಂದೂ ಕನ್ನಡೇತರ ಪುಸ್ತಕವಿಲ್ಲ, ಯಾಕೆ ? ಹಿಂದಿಯಲ್ಲಿ, ಇಂಗ್ಲೀಷಿನಲ್ಲಿ ಓದಲೇಬೇಕಾದ ಒಂದೂ ಪುಸ್ತಕವೂ ಕಳೆದ ವರುಷ ಬಂದೇ ಇಲ್ಲವೇ ? ಪತ್ರಿಕೆಯ ಸಂಪಾದಕರೂ, ಸಿಬ್ಬಂದಿಯೂ ಕನ್ನಡ ಪುಸ್ತಕ ರಚನಾಕಾರರಾಗಿದ್ದು, ಉಳಿದ ಭಾಷೆಯ ಪುಸ್ತಕಗಳನ್ನು ಕನ್ನಡಿಗರು ಓದಲೇ ಬೇಕೆಂದು ಫತ್ವಾ ಹೊರಡಿಸಿದ್ದರೆ, ತಮ್ಮ ಹಿತಾಸಕ್ತಿಗೆ ಹಾನಿಯಾಗುತ್ತದೆ ಎಂದು ಭಾವಿಸಿ ’ಓದಲೇಬೇಕಾದ.. ’ ಪಟ್ಟಿ ಕನ್ನಡ ಪುಸ್ತಕಗಳಿಗಷ್ಟೇ ಸೀಮಿತವಾಯಿತು ಅನಿಸುತ್ತೆ!!
ಪಟ್ಟಿಗಳ ’ಅಳತೆ ಪಟ್ಟಿಗಳು’ ಬೇರೆಯಾದದ್ದು ಈ ಪತ್ರಕ್ಕೆ ತಕ್ಷಣದ ಕಾರಣವಾದರೂ, ನನ್ನ ತಕರಾರಿಗೆ ಕೊಂಚ ಹಿನ್ನೆಲೆ ಇದೆ. ಯಾಕೋ ಏನೋ ಬಾಲಿವುಡ್ಡಿನ ಬಗ್ಗೆ ನಮ್ಮ ಕನ್ನಡ ಪತ್ರಿಕೆಗಳಿಗೆ ಒಂದು ಕುರುಡು ಪ್ರೀತಿ. ಭವ್ಯ ಇತಿಹಾಸ ಹೊಂದಿರುವ ಪ್ರತಿಷ್ಠಿತ ವಾರಪತ್ರಿಕೆಯೊಂದರಲ್ಲಿ ಎರಡೇ ಎರಡು ಬಣ್ಣದ ಪುಟಗಳು. ಅವೆರಡರಲ್ಲೂ ಬಾಲಿವುಡ್ಡಿನ ಲದ್ದಿಯೇ ಸುದ್ದಿ. ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಬಾಲಿವುಡ್ಡಿಗೆ ಮೀಸಲಾದ ಒಂದೆರಡು ಪುಟಗಳಿರಲೇ ಬೇಕು. ಮೀಡಿಯಾ ಮೆದುಳಿಗಳೇ, ಬಾಲಿವುಡ್ಡಿಗ್ಯಾಕೆ ಈ ಬಿಟ್ಟಿ ಪ್ರಚಾರ ?
ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಹೇಳುತ್ತಾರೆ. ಕನ್ನಡ ಪತ್ರಿಕೆಗಳೂ ತಮ್ಮ ಹೊಣೆಯನ್ನರಿತು, ತಮ್ಮ ಓದುಗನ, ಸಮಾಜದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಎಂದೂ ಹಿಂದೆಬಿದ್ದಿಲ್ಲ. ಸಮಾಜಕ್ಕೆ ಏನು ಒಳ್ಳೆಯದು, ಏನು ಕೆಟ್ಟದು ಎಂದು ಕಂಡುಕೊಳ್ಳುವಲ್ಲಿ ಕನ್ನಡ ಪತ್ರಕರ್ತರಾದ ನಿಮ್ಮ ಬುದ್ಧಿ ಯಾರೀಗೂ ಕಮ್ಮಿಯಿಲ್ಲ, ಹಾಗೆಯೇ ನಾಡು-ನುಡಿಗಳ ಬಗ್ಗೆ ನಿಮ್ಮ ನಿಯತ್ತೂ ಪ್ರಶ್ನಾತೀತ. ಅವೇ ನಂಬಿಕೆಗಳ ಮೇಲೆ ’ಕನ್ನಡ ಪತ್ರಿಕೆಗಳಲ್ಲಿ ಬಾಲಿವುಡ್ಡು’ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಬಯಸುತ್ತೇನೆ:
೧. ಏನಕೇನ ಪ್ರಕಾರೇಣ ಪ್ರಸಿದ್ಧರಾಗುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಲಾಭಕರ. ನಿಮ್ಮ ಪತ್ರಿಕೆಯಲ್ಲಿ ಒಂದು ಬಾಲಿವುಡ್ ಸಿನೇಮಾದ ಬಗ್ಗೆ ಬರೆದರೆ ಕಾಸಿಲ್ಲದೇ ಅದಕ್ಕೆ ಪ್ರಚಾರ ಸಿಕ್ಕು ಕನ್ನಡ ಚಿತ್ರದ ಗಲ್ಲಾಪೆಟ್ಟಿಗೆಗೆ ಹೊಡೆತ ಕೊಡುತ್ತದೆ. ಬಾಲಿವುಡ್ಡಿನ ನಟನ ಬಗ್ಗೆ ಬರೆದರೆ, ಆತ ನೀವು ಅವನಿಗೆ ಕನ್ನಡ ಜನಸಮುದಾಯದಲ್ಲಿ ಕೊಟ್ಟ ಖ್ಯಾತಿಯನ್ನು ಎನ್‌ಕ್ಯಾಷ್ ಮಾಡಿಕೊಳ್ಳಲು, ಯಾವುದೋ ಪ್ರಾಡಕ್ಟಿಗೆ ರಾಯಭಾರಿಯಾಗಿ, ಕನ್ನಡ ನಟನ ಅವಕಾಶವನ್ನು ಕಿತ್ತುಕೊಳ್ತಾನೆ. ಕನ್ನಡ ಸಿನೇಮಾದ ಗಲ್ಲಾಪೆಟ್ಟಿಗೆಗೆ, ಕನ್ನಡ ನಟನ ಅವಕಾಶಕ್ಕೆ ಪೆಟ್ಟು ಬಿದ್ದರೆ ನಿಮಗೇನು ಲಾಭ ? ನಿಮ್ಮ ಓದುಗ ದೊರೆಯಾದ ನನಗೇನು ಲಾಭ ?
ಇಲ್ಲಿ ಒಂದು ಗುಟ್ಟಿನ ಪ್ರಶ್ನೆ : ಇತ್ತೀಚೆಗೆ ಪತ್ರಿಕೆಗಳು ಕಾಸಿಗಾಗಿ ತಮ್ಮ ನಿಯತ್ತನ್ನು ಮಾರಿಕೊಳ್ತವೆಯಂತೆ. ಎಡಿಟರ್ಸ್ ಗಿಲ್ಡ್‌ಗೆ ಹೇಳೋಲ್ಲ, ನಿಜ ಹೇಳಿ – ನೀವು ಬಾಲಿವುಡ್ ಜನರಿಂದ ಕಾಸು ಪಡೆದು ಅವರ ಸುದ್ದಿ ಪ್ರಕಟಿಸಿ ಅವರ ಜನಪ್ರಿಯತೆಯನ್ನು ಕನ್ನಡ ಜನಮಾನಸದಲ್ಲಿ ಹೆಚ್ಚಿಸಲು ಸಹಾಯ ಮಾಡ್ತೀರಾ ? ಹೌದುಎಂದಿರಾದರೆ, ಕನ್ನಡ ಚಿತ್ರೋದ್ಯಮ ಹಾಳಾಗಿ ಹೋಗಲಿ, ನೀವಾದರೂ ಕಾಸು ಮಾಡ್ತಾ ಇದ್ದೀರಲ್ಲಾ, ಸಂತೋಷ. ಶಾಂತಂ ಪಾಪಂ.. ನಾವು ನಿಯತ್ತಿನ ಜನ ಎಂದಿರಾ ? ಹಾಗಾದರೆ ಬಾಲಿವುಡ್ಡಿನ ಬಾಡಿಗೆ ಬಂಟರಂತೆ ಬರೆಯೋದು ಯಾಕೋ… ಇತರ ಭಾಷೆಯ ಸಿನೇಮಾಗಳಿಂದ ಕತೆ-ವಿಚಾರಗಳನ್ನು ಕದ್ದು/ಕೊಂಡು ಕನ್ನಡ ಸಿನೇಮಾ ಮಾಡಿದರೆ, ಉರಿಗಣ್ಣಾಗುವ ನೀವು, ಬಾಲಿವುಡ್ಡಿನ ಜನ ಇಂಗ್ಲೀಷಿನಿಂದ ಕದ್ದು/ಕೊಂಡು ಮಾಡಿದ ಸಿನೆಮಾಗಳಿಗೆ ’ನೋಡಲೇ ಬೇಕಾದ’ ಲೇಬಲ್ಲು ಅದ್ಯಾಕೆ ಅಂಟಿಸಿಬಿಡುತ್ತಿರೋ..
೨. ಜನಕ್ಕೆ ಬೇಕಾಗಿರೋದು ಬಾಲಿವುಡ್ ಮಸಾಲಾ, ಅದಕ್ಕೆ ಅದನ್ನು ನಾವು ಬರೆಯೋದು ಎನ್ನುವುದು ನಿಮ್ಮ ಸಮಜಾಯಿಷಿಯೇ ? ಕನ್ನಡದ ಸುಸಂಸ್ಕೃತ ಓದುಗರು ಬಾಲಿವುಡ್ ಮಸಾಲಾನೇ ಬೇಕು ಎಂದು ನಿಮಗೆ ಯಾವಾಗ ಹೇಳಿದರು ಸ್ವಾಮೀ ? ಅವರಿಗೆ ಏನು ಬೇಕು ಎಂದು ಸರ್ವೇ ಏನಾದರೂ ನೀವು ಮಾಡಿದ್ದಿರಾ ? ಸಮಾಜಕ್ಕೆ ದೂರಗಾಮಿ ಪರಿಣಾಮ ಬೀರುವ ಹತ್ತು ಹಲವು ವಿಷಯಗಳ ಬಗ್ಗೆ ನೀವು ನಿಮ್ಮ ಓದುಗರ ಪ್ರತಿಕ್ರಿಯೆ ಕೇಳಿದ್ದು, ನನಗೆ ನೆನಪಿದೆ, ಆದರೆ ನಿಮ್ಮದೇ ಪತ್ರಿಕೆಯಲ್ಲಿನ ಕಸದ ಬಗ್ಗೆ ನೀವು ಎಂದಾದರೂ ನಿಮ್ಮ ಓದುಗರ ಅಭಿಪ್ರಾಯ ಕೇಳಿದ್ದೀರಾ ? ನಾವು ನಮ್ಮ ಪತ್ರಿಕೆಯಲ್ಲಿ ಇನ್ನು ಮುಂದೆ ಬಾಲಿವುಡ್ ಸುದ್ದಿಗಳನ್ನು ಪ್ರಕಟಿಸುವುದಿಲ್ಲ. ಅದರಿಂದ ನಿಮಗೇನಾದರೂ ಬೇಜಾರಿದೆಯಾ? ಎಂದು ಯಾವ ಪತ್ರಿಕೆಯೂ ಕೇಳಿದ್ದು ನೆನಪಿಗೆ ಬರತಾ ಇಲ್ಲ…
೩. ಬಾಲಿವುಡ್ ಬಗ್ಗೆ ಓದುವುದರಿಂದ ನಮ್ಮ ಪತ್ರಿಕೆ ಓದುವ ಕನ್ನಡಿಗರ ಜ್ಞಾನ ದಿಗಂತ ವಿಸ್ತಾರಗೊಂಡು, ಕನ್ನಡಿಗರ ಮೋಕ್ಷ ಸಾಧನೆಯ ಮಾರ್ಗ ಸರಳವಾಗುತ್ತದೆ ಎಂದಿರಾ ? ಅಥವಾ ಬಾಲಿವುಡ್ ಬಗ್ಗೆ ನಾವು ಬರೆಯೋದು ಕನ್ನಡಿಗರಲ್ಲಿ ಜನರಲ್ ನಾಲೇಜ್ ಹೆಚ್ಚಿಸೋದಕ್ಕಪ್ಪಾ ಎಂದಿರಾ ? ಸ್ವಾಮಿ ನಾನು ಇಷ್ಟು ಗಂಭೀರವಾಗಿ ಹೇಳ್ತಿರಬೇಕಾದರೇ ನೀವು ಹೀಗೆ ಜೋಕ್ ಮಾಡ್‌ಬಹುದಾ ? ಬಾಲಿವುಡ್ಡಿನ ಸ್ಮಾಲ್‌ಮ್ಯಾನ್ ಖಾನ ಎಂಬ ನಟ ಅದ್ಯಾವಳೋ ಹಳೇ ಗರ್ಲ್‌ಫ್ರೆಂಡನ್ನು ಬಿಟ್ಟು ಮತ್ತ್ಯಾರದೋ ಹಿಂದೆ ಸುತ್ತುತ್ತಿದ್ದಾನೆ ಎಂದು ನೀವು ಬರೆದದ್ದನ್ನು ಓದಿ ನಾನೇನು ಗಳಿಸುತ್ತೇನೆ ? ಮೋಕ್ಷ ? ರಂಭೆ-ಮೇನಕೆಯರ ಮ್ಯಾಟನಿ ಶೋಗೆ ಫುಕ್ಕಟೆ ಟಿಕೀಟು ?
೪. ಹಿಂದಿ ನಮ್ಮ ರಾಷ್ಟ್ರಭಾಷೆ, ಬಾಲಿವುಡ್ಡು ಸಿನೆಮಾಗಳು ಕನ್ನಡಿಗರಿಗೆ ಹಿಂದಿಯ ದೀಕ್ಷೆ ತೊಡಿಸಿಸುವ ಮಿಷನರಿಗಳಿದ್ದಂತೆ. ಹಿಂದಿ ಪ್ರಸಾರದಿಂದ ದೇಶ ಬಲಿಷ್ಠವಾಗುತ್ತದೆಯಾದ್ದರಿಂದ, ಬಾಲಿವುಡ್ ಸಿನೇಮಾಗಳಿಗೆ ಸಹಾಯ ಮಾಡುವುದು ದೇಶಕ್ಕಾಗಿ ನನ್ನ ಅಳಿಲು ಸೇವೆ ಎಂದಿರಾ ? ಸ್ವಾಮಿ ತಮಾಷೆ ಮಾಡಬೇಡಿ ಎಂದು ಹೇಳ್ತಾನೇ ಇದಿನಿ.. ನೀವು ಮತ್ತೂ ಹಾಗೆ ಮಾಡೋದಾದರೆ ನನಗೆ ಕೋಪ ಬಂದ್ ಬಿಡುತ್ತೆ !!
ಅಂದಹಾಗೆ, ಹಿಂದಿಯೊಂದೇ ನಮ್ಮ ರಾಷ್ಟ್ರಭಾಷೆಯಾದರೆ ಕನ್ನಡವೇನು ಪಾಕಿಸ್ತಾನದ ರಾಷ್ಟ್ರಭಾಷೆಯೇ ?
೫. ಕನ್ನಡಿಗರಾಗಿ ನೀವು ಇಷ್ಟು ಸಂಕುಚಿತ ಬುದ್ಧಿಹೊಂದಿರುವುದು ತಪ್ಪು. ದೊಡ್ಡ ಮನಸ್ಸಿನವರಾಗಿ, ವಿಶ್ವಮಾನವರಾಗಿ ಎಂದು ಬುದ್ಧಿ ಹೇಳ್ತಾ ಇದೀರಾ ? ನಮಗಿಂತಾ ನಿಮ್ಮ ಉಪದೇಶಕ್ಕೆ ಅರ್ಹರಾದ ಜನರು ಬಹಳ ಇದ್ದಾರೆ ಅನಿಸುತ್ತದೆ. ಬೇರೆ ಭಾಷೆಯ ಪತ್ರಿಕೆಗಳು ಕನ್ನಡ ಸಿನೇಮಾಗಳನ್ನು ’ನೋಡಲೇ ಬೇಕಾದ’ ಪಟ್ಟಿಯಲ್ಲಿ ಪ್ರಕಟಿಸುತ್ತಾರಾ ? ಕನಿಷ್ಟ ಬೆಂಗಳೂರಿನಿಂದ ಪ್ರಕಟವಾಗುವ ಪತ್ರಿಕೆಗಳು ? ನಿಮ್ಮ ವಿಶ್ವಮಾನವ ಸಂದೇಶದ ಪ್ರಭಾವವಾಗಿ, ಬೆಂಗಳೂರಿನಿಂದ ಪ್ರಕಟವಾಗುವ ಅನ್ಯ ಭಾಷಾ ಪತ್ರಿಕೆಗಳು ತಮ್ಮ ಪುಟಗಳಲ್ಲಿ ಕನ್ನಡದ ಪಾಠಗಳನ್ನು ಪ್ರಕಟಿಸಿದರೆ, ನಿಮ್ಮ ಪತ್ರಿಕೆಗಳಿಗೆ/ಪುಸ್ತಕಗಳಿಗೆ ಇನ್ನಷ್ಟು ಓದುಗರಾದರೂ ಸಿಕ್ಕಾರು..
ಹಾಗೆ ಒಂದ್ಮಾತು, ನನಗೆ ತಿಳಿದ ಮಟ್ಟಿಗೆ ವಿಶ್ವಮಾನವನಾಗುವುದು ಎಂದರೆ ’ನನ್ನ’ ಹಿತವನ್ನು ತ್ಯಾಗಮಾಡುವುದೇ ಹೊರತು ’ನಮ್ಮ’ (ಕನ್ನಡ ಜನ ಸಮುದಾಯದ) ಹಿತತ್ಯಾಗವಲ್ಲ. ಅಲ್ವಾ ?
೬. ಬಾಲಿವುಡ್ಡಿನ ಸುದ್ದಿಗಳನ್ನು ಪ್ರಕಟಿಸುವುದು ಕನ್ನಡ ಪತ್ರಿಕೆಗಳ ಸಿದ್ಧ-ಸೂತ್ರವೇ ಆಗಿ ಹೋಗಿದೆ ಎಂಬ ಹಳೇರಾಗವನ್ನೇ ಹಾಡ್ತಾ ಇದೀರಾ ? ಸಿದ್ಧ-ಸೂತ್ರಗಳನ್ನು ಮುರಿಯುವುದೇ ಪತ್ರಿಕೋದ್ಯಮದ ಏಕೈಕ ಸೂತ್ರ ಎಂದು ನಿಮ್ಮವರೇ ಹೇಳಿರಲಿಲ್ಲವೇ ? ಮೊನ್ನೆ-ಮೊನ್ನೆ ಬೆಂಗಳೂರಿನ ಎಪ್ಫೆಮ್ ರೇಡಿಯೋಗಳು ಬಾಲಿವುಡ್ಡಿನ ತುತ್ತೂರಿ ಊದುತ್ತಿದ್ದಾಗ, ಹೊಸದಾಗಿ ಬಂದ ವಾಹಿನಿಯೊಂದು ಬಾಲಿವುಡ್ಡಿನ ಹಾಡುಗಳಿಗೆ ಗೇಟ್‌ಪಾಸ್ ಕೊಟ್ಟು ಹೊಸ ಟ್ರೆಂಡ್ ಶುರು ಮಾಡಲಿಲ್ಲವೇ ? ಹಾಗೆಯೇ ಬಾಲಿವುಡ್ಡಿನ ಬಿಟ್ಟಿ ಸುದ್ದಿಗಳಿಗೆ ಬೈ ಬೈ ಹೇಳುವ ಸತ್‌ಸಂಪ್ರದಾಯವನ್ನೂ ಕನ್ನಡ ಪತ್ರಿಕೆಗಳು ಯಾಕೆ ಶುರುಮಾಡಬಾರದು ?
Saturday, February 20, 2010
ಮೀಡಿಯಾ ಮೈಂಡ್‌ಗಳಿಗೊಂದು ಪ್ರಶ್ನೆ : ಬಾಲಿವುಡ್ಡಿಗ್ಯಾಕೆ ಬಿಟ್ಟಿ ಪ್ರಚಾರ ?
Subscribe to:
Post Comments (Atom)
No comments:
Post a Comment