(ಶ್ರೀ ಕುರಡಿ ನಾರಾಯಣರಾಯರು ರಚಿಸಿದ ಈ ನಾಡಗೀತೆಯನ್ನು ಆವಾಗ ಶಾಲೆಯಲ್ಲಿ ಪ್ರಾರ್ಥನೆಯಾಗಿ ಹಾಡಲಾಗುತ್ತಿತ್ತಂತೆ. )
ಭೋಮಾತೆ ಕರ್ನಾಟ ಭೂಮಾತೆವಿನುತೆ
ಆ ಮಹಾ ಋಷಿನಮಿತೆ ನಮಿಸುವೆನು ಪೊರೆಯೌ |ಪ|
ಕಾವೇರಿ ದಕ್ಷಿಣದೊಳುತ್ತರದ ದಿಶೆಗೆ ಗೋ-
ದಾವರಿಯೆ ನಿನ್ನ ಗಡಿಯೆನಿಸಿತೊಮ್ಮೆ
ಭೋ ವಸುಂಧರೆ ಪೂರ್ವದಾ ನಿನ್ನ ವೈಭವವ
ನಾವ ಕವಿ ಬಣ್ಣಿಸಲು ಸಾಧ್ಯವಮ್ಮಾ! |೧| ಭೋಮಾತೆ ---
ಹಳೆಬೀಡು ಬಾದಾಮಿ ಬನವಾಸಿ ವಿಜಯಪುರ
ಮಳಖೇಡ ಕಲ್ಯಾಣ-ನಗರಗಳಲಿ
ಕಲಿಸಾರ್ವಭೌಮ ನೃಪರಿಂದೆಸೆದು ಹೆಸರಾದ
ಹಳೆಯ ರಾಜ್ಯಗಳಿಂದೆ ಮೆರೆದೆಯಮ್ಮಾ! |೨| ಭೋಮಾತೆ ---
ಚಾಲುಕ್ಯ ಪುಲಿಕೇಶಿ೧ ಗೋವಿಂದ೨ ನೃಪತುಂಗ೩
ತೈಲನೃಪ೪ ವಿಕ್ರಮಾದಿತ್ಯ ೫ಬುಕ್ಕ೬
ಮೇಲಾದ ಕಲಿ ಕೃಷ್ೞರಾಯ೭ರೆಂಬಾ ಸತ್ವ
ಶಾಲಿ ನೃಪವರರಿಂಗೆ ಜನ್ಮದಾತೆ |೩| ಭೋಮಾತೆ ---
೮ಅಕ್ಕದೇವಿಗೆ೮ ವೀರ ಮೈರಾಳದೇವಿ೯ಗೆ
ಬುಕ್ಕರಾಯನ ಸೊಸೆ೧೦ಗೆ ವಿದುಷಿ೧೧ಯರಿಗೆ
ಲೆಕ್ಕವಿಲ್ಲದ ಭವ್ಯಗುಡಿಗಳನು ವಿರಚಿಸಿದ
ಜಕ್ಕಣಾಚಾರ್ಯನಿಗೆ ಜನ್ಮದಾತೆ |೪| ಭೋಮಾತೆ ---
ಅದ್ವೈತ ಮತವಾದಿ ಕೇರಳದ ಶಂಕರನ
ಸುದ್ವೈತ ಮತವಾದಿ ಮಧ್ವಮುನಿಯ_
ಸುದ್ವಿಜನ ರಾಮಾನುಜನ ಕಾರ್ಯದಭಿಮಾನಿ
ಸದ್ವಿಬುಧ ಭಾಸ್ಕರ೧೨ನ ಜನ್ಮದಾತೆ |೫| ಭೋಮಾತೆ ---
ಬಿಜ್ಜೆಯಲಿ ಹೆಸರಾದ ಮಾಧವನ ಸಾಯನನ
ಬಿಜ್ಜಳನ ಕಾಲದಾ ಬಸವೇಶನ
ಸಜ್ಜನ ಪ್ಯರಂದರನ ಕನಕದಾಸನ ಜನನಿ
ಮಜ್ಜನಕ ಜನನಿಯರ ಜನ್ಮದಾತೆ |೬| ಭೋಮಾತೆ ---
೧. ಬಾದಾಮಿ ಚಾಲುಕ್ಯ ಮನೆತನದ ಶ್ರೀ ಸತ್ಯಾಶ್ರಯ ಪುಲಿಕೇಶಿ ಮಹಾರಾಜನು (೭ನೆಯ ಶತಕ)
೨. ಮಳಖೇಡದ ರಾಷ್ಟ್ರಕೂಟ ಚಕ್ರವರ್ತಿಯಾದ ಮೂರನೆಯ ಗೋವಿಂದನು (೯ನೆಯ ಶತಕ)
೩. ಕವಿಶ್ರೇಷ್ಠನೂ ಕರ್ನಾಟಕಕ್ಕೆ ಅಲಂಕಾರ ಸ್ವರೂಪನೂ ಆದ ರಾಷ್ಟ್ರಕೂಟ ಮಹಾರಾಜನು (೯ನೆಯ ಶತಕ)
೪. ಕಲ್ಯಾಣದ ಚಾಲುಕ್ಯ ಮನೆತನದ ಮೂಲಪುರುಷನು (೧೦ನೆಯ ಶತಕ)
೫. ಕಲ್ಯಾಣನಗರವನ್ನು ಸ್ಥಾಪಿಸಿದ ಸೋಮೇಶ್ವರ ಮಹಾರಾಜನ ಎರಡನೆಯ ಮಗನಾದ ನೃಪೋತ್ತಮನು (೧೧ನೆಯ ಶತಕ)
೬. ವಿಜಯನಗರದ ರಾಜಮನೆತನದಲ್ಲಿ ಪ್ರಬಲನಾಗಿ ಕೋಟೆಕೊತ್ತಳಗಳನ್ನು ಕಟ್ಟಿಸಿದ ಮೊದಲನೆಯ ರಾಜನು (೧೪ನೆಯ ಶತಕ)
೭. ವಿಜಯನಗರದ ’ನರಸ’ ಮನೆತನದ ಪ್ರತಾಪಶಾಲಿಯಾದ ಕೃಷ್ಣದೇವರಾಯ ಮಹಾರಾಜನು (೧೬ನೆಯ ಶತಕ)
೮. ಮೂರನೆಯ ಜಯಸಿಂಹನ ತಂಗಿಯಾದ ರಣಭೈರವಿ ಯೆಂದು ಹೆಸರು ಪಡೆದ ಮಹಾಮಹಿಮ
೯. ಬನವಾಸಿಯಲ್ಲಿ ಪಿರಿಯರಸಿ ಯೆಂದು ಹೆಸರು ಪಡೆದು ಆಳಿದ ಚಾಲುಕ್ಯ ಮನೆತನದ ರಾಣಿ.
೧೦. ವೀರಕಂಪಣರಾಯಚರಿತವೆಂಬ ಸಂಸ್ಕೃತ ಕಾವ್ಯಕರ್ತ್ರಿ ಗಂಗಾದೇವಿ.
೧೧. ಕಂತಿ, ಹೊನ್ನಮ್ಮ, ನೀಲಮ್ಮ, ಗಿರಿಯಮ್ಮ ಮೊದಲಾದವರು ಕರ್ನಾಟಕದ ವಿದುಷಿಯರು.
೧೨. ಜ್ಯೋತಿಷ್ಯ-ಗಣಿತಶಾಸ್ತ್ರಗಳಲ್ಲಿ ಅದ್ವಿತೀಯ ಪಂಡಿತನಾದ ಶ್ರೀ ಭಾಸ್ಕರಾಚಾರ್ಯನು.
Thursday, March 4, 2010
Subscribe to:
Post Comments (Atom)
No comments:
Post a Comment