(ಕರ್ಮವೀರದ ಸಂಪಾದಕರಿಗೊಂದು ಪತ್ರ ಬರೆದಿದ್ದೆ. ಅದು ಅವರ ಕ.ಬು.ಗೆ ಸೇರಿರಬೇಕೆಂಬ ಅಧಮ್ಯ ವಿಶ್ವಾಸದಿಂದ ಅದರ ಸಾಫ್ಟ್ ಕಾಪಿಯನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ)
ಮಾನ್ಯರೆ,
ನನ್ನ ಪ್ರೀತಿಯ ಕರ್ಮವೀರದ ಮೊನ್ನೆಯ ಸಂಚಿಕೆ ( ಸಂಪುಟ ೬೮, ಸಂಚಿಕೆ ೨೯) ಮುಖಪುಟ ನೋಡಿ ಈ ಪತ್ರ ಬರೆಯುತ್ತಿದ್ದೇನೆ. ಕರ್ಮವೀರದ ಬಹುದಿನಗಳ ಓದುಗನಾದ ನನಗೆ ಕರ್ಮವೀರದ ಬಗೆಗಿನ ನನ್ನ ತಕರಾರನ್ನು ನಿವೇದಿಸಿಕೊಳ್ಳುವ ಹಕ್ಕಿದೆ ಎಂಬ ಭಾವನೆಯಿಂದ ಈ ಪತ್ರ ಬರೆಯುತ್ತಿದ್ದೇನೆ.
"ಮುಖ ಮನಸ್ಸಿನ ಪರಿವಿಡಿ" ಎಂದು ದೊಡ್ಡವರು ಹೇಳುತ್ತಾರೆ. ಅದೇ ಮಾತನ್ನು ಪತ್ರಿಕೆಗಳಿಗೂ ಅನ್ವಯಿಸಿ, "ಮುಖಪುಟ ಪತ್ರಿಕೆಯ ಹೂರಣಕ್ಕೆ ಪರಿವಿಡಿ" ಎಂದು ಹೇಳಬಹುದಾದರೂ ಅದು ತಮ್ಮ ಪತ್ರಿಕೆಗೆ ಅನ್ವಯಿಸುವುದಿಲ್ಲ. ಯಾಕೆಂದಿರಾ ? ನೀವೆ ಮೊನ್ನೆಯ ಸಂಚಿಕೆಯನ್ನು ನೋಡಿ ಅದರಲ್ಲಿರುವುದು "ಕೃತಿ ಚೋರರಿದ್ದಾರೆಂಬ ಎಚ್ಚರಿಕೆ" ಮತ್ತು ಬೆಕ್ಕುಗಳ (ಕ್ಯಾಟ್ಸ್) ಜಾಗಕ್ಕೆ ಹೋದವಳಾದ ಸೋನಾಕ್ಷಿ ಎಂಬಾಕೆಯ ಚಿತ್ರ. ಈ ಸೋನಾಕ್ಷಿ ಯಾರು ? ಈಕೆ ಬೆಕ್ಕುಗಳ ಜಾಗಕ್ಕೆ ಯಾಕೆ ಹೋದಳು ? ಆಕೆ ಯಾವುದಾದರೂ ಸುಡುಗಾಡಿಗೆ ಹೋಗಲಿ, ಅದಕ್ಕೆ ನಮ್ಮ ಕರ್ಮವೀರದ ಮುಖಪುಟದ ಪ್ರಾಶಸ್ತ್ಯ ಯಾಕೆ ಸಿಕ್ಕಿತು ? ಎಂದು ತಲೆಕೆಡಿಸಿಕೊಂಡು ಕರ್ಮವೀರ ತಿರುವಿ ಹಾಕಿದರೆ ಕೊನೆಯ ಪುಟದ ಕೊನೆಯ ಪರಿಚ್ಛೇದದ ತನಕ ಓದಬೇಕಾಯಿತು. ಆದರೂ ಈಕೆಯ ಸುದ್ದಿಗೆ ಮುಖಪುಟದ ಪ್ರಾಶಸ್ತ್ಯ ಯಾಕೆ ಸಿಕ್ಕಿತು ? ಎಂದು ಅರ್ಥವಾಗಲಿಲ್ಲ.
ಸೂರ್ಯಕಾಂತ ಕಾಮತರಿಗೆ ಎಪ್ಪತ್ತೈದಾಗಿದ್ದು ತಮಗೆ ಮುಖಪುಟ ಯೋಗ್ಯ ಸಂಗತಿ ಎನಿಸಲಿಲ್ಲ, ಹಂಪೆಯ ಬಂಡೆಗಳು ಮುಖಪುಟ ಸಿಂಗರಿಸಬಹುದೆನ್ನಿಸಲಿಲ್ಲ, ಅಥವಾ ಯುರೋಪ್ ಪ್ರವಾಸಕ್ಕೂ ಮುಖಪುಟದ ಪ್ರಾಧಾನ್ಯತೆ ಕೊಡಬೇಕು ಎನ್ನಿಸಲಿಲ್ಲ, ಬದಲಿಗೆ ಈ ಸೋನಾಕ್ಷಿ ಎಂಬ ಬಾಲಿಕೆಯನ್ನೇ ಮುಖಪುಟದಲ್ಲಿ ಕೂಡಿಸಬೇಕೆಂಬ ತಮ್ಮ ಬಾಲಿವುಡ್ ಕುರುಡುಪ್ರೀತಿಗೆ ನನ್ನ ಧಿಕ್ಕಾರವಿದೆ. ಈ ಸಂಚಿಕೆಯೊಂದೆ ಅಲ್ಲ, ಇತ್ತೀಚಿಗೆ ತಮ್ಮ ಪತ್ರಿಕೆಯಲ್ಲಿ ಅನಗತ್ಯವಾಗಿ ಬಾಲಿವುಡ್ಡು ಪುಟ ಮಾಲಿನ್ಯಮಾಡುತ್ತಿದೆ ಎಂಬುದು ನನ್ನ ಅನಿಸಿಕೆ. ಕನ್ನಡಿಗರ ಅಭ್ಯುದಯದ ಕನಸನ್ನು ಹೊತ್ತ ಮಹನೀಯರು ಆರಂಭಿಸಿದ ನಮ್ಮ ಪ್ರೀತಿಯ ಕರ್ಮವೀರದಲ್ಲಿ ಕನ್ನಡಿಗರಿಗೆ ಯಾವುದೇ ರೀತಿಯಲ್ಲೂ ಅನಿವಾರ್ಯವಲ್ಲದ ಬಾಲಿವುಡ್ಡು ಮೆರೆಯುವುದು ನೋಡಿ ನೋಡಿ ಬೇಜಾರಾಗಿ ತಮ್ಮಲ್ಲಿ ಕೆಲ ಪ್ರಶ್ನೆ ಕೇಳಬಯಸುತ್ತೇನೆ:
ಏನಕೇನ ಪ್ರಕಾರೇಣ ಪ್ರಸಿದ್ಧರಾಗುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಲಾಭಕರ. ನಿಮ್ಮ ಪತ್ರಿಕೆಯಲ್ಲಿ ಒಂದು ಬಾಲಿವುಡ್ ಸಿನೇಮಾದ ಬಗ್ಗೆ ಬರೆದರೆ ಕಾಸಿಲ್ಲದೇ ಅದಕ್ಕೆ ಪ್ರಚಾರ ಸಿಕ್ಕು ಕನ್ನಡ ಚಿತ್ರದ ಗಲ್ಲಾಪೆಟ್ಟಿಗೆಗೆ ಹೊಡೆತ ಕೊಡುತ್ತದೆ. ಬಾಲಿವುಡ್ಡಿನ ನಟಿಯ ಬಗ್ಗೆ ಬರೆದರೆ, ಆಕೆ ನೀವು ಕನ್ನಡ ಜನಸಮುದಾಯದಲ್ಲಿ ಕೊಟ್ಟ ಖ್ಯಾತಿಯನ್ನು ಎನ್ಕ್ಯಾಷ್ ಮಾಡಿಕೊಳ್ಳಲು, ಯಾವುದೋ ಪ್ರಾಡಕ್ಟಿಗೆ ರಾಯಭಾರಿಯಾಗಿ, ಕನ್ನಡ ನಟಿಯ ಅವಕಾಶವನ್ನು ಕಿತ್ತುಕೊಳ್ತಾಳೆ. ಕನ್ನಡ ಸಿನೇಮಾದ ಗಲ್ಲಾಪೆಟ್ಟಿಗೆಗೆ, ಕನ್ನಡ ನಟಿಯ ಅವಕಾಶಕ್ಕೆ ಪೆಟ್ಟು ಬಿದ್ದರೆ ನಿಮಗೇನು ಲಾಭ ? ನಿಮ್ಮ ಓದುಗ ದೊರೆಯಾದ ನನಗೇನು ಲಾಭ ?
ಇಲ್ಲಿ ಒಂದು ಗುಟ್ಟಿನ ಪ್ರಶ್ನೆ : ಇತ್ತೀಚೆಗೆ ಪತ್ರಿಕೆಗಳು ಕಾಸಿಗಾಗಿ ತಮ್ಮ ನಿಯತ್ತನ್ನು ಮಾರಿಕೊಳ್ತವೆಯಂತೆ. ಎಡಿಟರ್ಸ್ ಗಿಲ್ಡ್ಗೆ ಹೇಳೋಲ್ಲ, ನಿಜ ಹೇಳಿ - ನೀವು ಬಾಲಿವುಡ್ ಜನರಿಂದ ಕಾಸು ಪಡೆದು ಅವರ ಸುದ್ದಿ ಪ್ರಕಟಿಸಿ ಅವರ ಜನಪ್ರಿಯತೆಯನ್ನು ಕನ್ನಡ ಜನಮಾನಸದಲ್ಲಿ ಹೆಚ್ಚಿಸಲು ಸಹಾಯ ಮಾಡ್ತೀರಾ ? ಹೌದುಎಂದಿರಾದರೆ, ಕನ್ನಡ ಚಿತ್ರೋದ್ಯಮ ಹಾಳಾಗಿ ಹೋಗಲಿ, ನೀವಾದರೂ ಕಾಸು ಮಾಡ್ತಾ ಇದ್ದೀರಲ್ಲಾ, ಸಂತೋಷ. ಶಾಂತಂ ಪಾಪಂ.. ನಾವು ನಿಯತ್ತಿನ ಜನ ಎಂದಿರಾ ? ಹಾಗಾದರೆ ಬಾಲಿವುಡ್ಡಿನ ಬಾಡಿಗೆ ಬಂಟರಂತೆ ಬರೆಯೋದು ಯಾಕೋ...
ಜನಕ್ಕೆ ಬೇಕಾಗಿರೋದು ಬಾಲಿವುಡ್ ಮಸಾಲಾ, ಅಲ್ಲಿಯ ತೊಗಲು ಪ್ರದರ್ಶನ s ಅದಕ್ಕೆ ಅದನ್ನು ನಾವು ಪ್ರಕಟಿಸೋದು ಎನ್ನುವುದು ನಿಮ್ಮ ಸಮಜಾಯಿಷಿಯೇ ? ಕನ್ನಡದ ಸುಸಂಸ್ಕೃತ ಓದುಗರು ಬಾಲಿವುಡ್ ಮಸಾಲಾನೇ ಬೇಕು ಎಂದು ನಿಮಗೆ ಯಾವಾಗ ಹೇಳಿದರು ಸ್ವಾಮೀ ? ಅವರಿಗೆ ಏನು ಬೇಕು ಎಂದು ಸರ್ವೇ ಏನಾದರೂ ನೀವು ಮಾಡಿದ್ದಿರಾ ? ನಾವು ನಮ್ಮ ಪತ್ರಿಕೆಯಲ್ಲಿ ಇನ್ನು ಮುಂದೆ ಬಾಲಿವುಡ್ ಮಸಾಲಾ, ಅಲ್ಲಿಯ ತೊಗಲು ಪ್ರದರ್ಶನ ಪ್ರಕಟಿಸುವುದಿಲ್ಲ. ಅದರಿಂದ ನಿಮಗೇನಾದರೂ ಬೇಜಾರಿದೆಯಾ? ಎಂದು ನೀವು ಕೇಳಿದ್ದು ನೆನಪಿಗೆ ಬರತಾ ಇಲ್ಲ...
ಬಾಲಿವುಡ್ ಬಗ್ಗೆ ಓದುವುದರಿಂದ ನಮ್ಮ ಪತ್ರಿಕೆ ಓದುವ ಕನ್ನಡಿಗರ ಜ್ಞಾನ ದಿಗಂತ ವಿಸ್ತಾರಗೊಂಡು, ಕನ್ನಡಿಗರ ಮೋಕ್ಷ ಸಾಧನೆಯ ಮಾರ್ಗ ಸರಳವಾಗುತ್ತದೆ ಎಂದಿರಾ ? ಅಥವಾ ಬಾಲಿವುಡ್ ಬಗ್ಗೆ ನಾವು ಬರೆಯೋದು ಕನ್ನಡಿಗರಲ್ಲಿ ಜನರಲ್ ನಾಲೇಜ್ ಹೆಚ್ಚಿಸೋದಕ್ಕಪ್ಪಾ ಎಂದಿರಾ ? ಸ್ವಾಮಿ ನಾನು ಇಷ್ಟು ಗಂಭೀರವಾಗಿ ಹೇಳ್ತಿರಬೇಕಾದರೇ ನೀವು ಹೀಗೆ ಜೋಕ್ ಮಾಡ್ಬಹುದಾ ? ಬಾಲಿವುಡ್ಡಿನ ಸ್ಮಾಲ್ಮ್ಯಾನ್ ಖಾನ ಎಂಬ ನಟ ಅದ್ಯಾವಳೋ ಹಳೇ ಗರ್ಲ್ಫ್ರೆಂಡನ್ನು ಗೋಳುಹೊಯ್ಕೋತಿದಾನೆ ಎಂದು ನೀವು ಬರೆದದ್ದನ್ನು ಓದಿ ನಾನೇನು ಗಳಿಸುತ್ತೇನೆ ? ಮೋಕ್ಷ ? ರಂಭೆ-ಮೇನಕೆಯರ ಮ್ಯಾಟನಿ ಶೋಗೆ ಫುಕ್ಕಟೆ ಟಿಕೀಟು ?
ಹಿಂದಿ ನಮ್ಮ ರಾಷ್ಟ್ರಭಾಷೆ, ಬಾಲಿವುಡ್ಡು ಸಿನೆಮಾಗಳು ಕನ್ನಡಿಗರಿಗೆ ಹಿಂದಿಯ ದೀಕ್ಷೆ ತೊಡಿಸಿಸುವ ಮಿಷನರಿಗಳಿದ್ದಂತೆ. ಹಿಂದಿ ಪ್ರಸಾರದಿಂದ ದೇಶ ಬಲಿಷ್ಠವಾಗುತ್ತದೆಯಾದ್ದರಿಂದ, ಬಾಲಿವುಡ್ ಸಿನೇಮಾಗಳಿಗೆ ಸಹಾಯ ಮಾಡುವುದು ದೇಶಕ್ಕಾಗಿ ನನ್ನ ಅಳಿಲು ಸೇವೆ ಎಂದಿರಾ ? ಸ್ವಾಮಿ ತಮಾಷೆ ಮಾಡಬೇಡಿ ಎಂದು ಹೇಳ್ತಾನೇ ಇದಿನಿ.. ನೀವು ಮತ್ತೂ ಹಾಗೆ ಮಾಡೋದಾದರೆ ನನಗೆ ಕೋಪ ಬಂದ್ ಬಿಡುತ್ತೆ !!
ಅಂದಹಾಗೆ, ಹಿಂದಿಯೊಂದೇ ನಮ್ಮ ರಾಷ್ಟ್ರಭಾಷೆಯಾದರೆ ಕನ್ನಡವೇನು ಪಾಕಿಸ್ತಾನದ ರಾಷ್ಟ್ರಭಾಷೆಯೇ ?
ಕನ್ನಡಿಗರಾಗಿ ನೀವು ಇಷ್ಟು ಸಂಕುಚಿತ ಬುದ್ಧಿಹೊಂದಿರುವುದು ತಪ್ಪು. ದೊಡ್ಡ ಮನಸ್ಸಿನವರಾಗಿ, ವಿಶ್ವಮಾನವರಾಗಿ ಎಂದು ಬುದ್ಧಿ ಹೇಳ್ತಾ ಇದೀರಾ ? ನಮಗಿಂತಾ ನಿಮ್ಮ ಉಪದೇಶಕ್ಕೆ ಅರ್ಹರಾದ ಜನರು ಬಹಳ ಇದ್ದಾರೆ ಅನಿಸುತ್ತದೆ. ಬೇರೆ ಭಾಷೆಯ ಪತ್ರಿಕೆಗಳು ಕನ್ನಡ ಸಿನೇಮಾಗಳ ಬಗ್ಗೆ ಬರಹ ಪ್ರಕಟಿಸುತ್ತಾರಾ ? ಕನಿಷ್ಟ ಬೆಂಗಳೂರಿನಿಂದ ಪ್ರಕಟವಾಗುವ ಪತ್ರಿಕೆಗಳು ? ನಿಮ್ಮ ವಿಶ್ವಮಾನವ ಸಂದೇಶದ ಪ್ರಭಾವವಾಗಿ, ಬೆಂಗಳೂರಿನಿಂದ ಪ್ರಕಟವಾಗುವ ಅನ್ಯ ಭಾಷಾ ಪತ್ರಿಕೆಗಳು ತಮ್ಮ ಪುಟಗಳಲ್ಲಿ ಕನ್ನಡದ ಪಾಠಗಳನ್ನು ಪ್ರಕಟಿಸಿದರೆ, ನಿಮ್ಮ ಪತ್ರಿಕೆಗಳಿಗೆ/ಪುಸ್ತಕಗಳಿಗೆ ಇನ್ನಷ್ಟು ಓದುಗರಾದರೂ ಸಿಕ್ಕಾರು..
ಹಾಗೆ ಒಂದ್ಮಾತು, ನನಗೆ ತಿಳಿದ ಮಟ್ಟಿಗೆ ವಿಶ್ವಮಾನವನಾಗುವುದು ಎಂದರೆ 'ನನ್ನ' ಹಿತವನ್ನು ತ್ಯಾಗಮಾಡುವುದೇ ಹೊರತು 'ನಮ್ಮ' (ಕನ್ನಡ ಜನ ಸಮುದಾಯದ) ಹಿತತ್ಯಾಗವಲ್ಲ. ಅಲ್ವಾ ?
ಬಾಲಿವುಡ್ಡಿನ ಸುದ್ದಿಗಳನ್ನು ಪ್ರಕಟಿಸುವುದು ಕನ್ನಡ ಪತ್ರಿಕೆಗಳ ಸಿದ್ಧ-ಸೂತ್ರವೇ ಆಗಿ ಹೋಗಿದೆ ಎಂಬ ಹಳೇರಾಗವನ್ನೇ ಹಾಡ್ತಾ ಇದೀರಾ ? ಸಿದ್ಧ-ಸೂತ್ರಗಳನ್ನು ಮುರಿಯುವುದೇ ಮಾಧ್ಯಮ ಲೋಕದ ಏಕೈಕ ಸೂತ್ರ ಅಲ್ಲವೇ ? ಮೊನ್ನೆ-ಮೊನ್ನೆ ಬೆಂಗಳೂರಿನ ಎಪ್ಫೆಮ್ ರೇಡಿಯೋಗಳು ಬಾಲಿವುಡ್ಡಿನ ತುತ್ತೂರಿ ಊದುತ್ತಿದ್ದಾಗ, ಹೊಸದಾಗಿ ಬಂದ ವಾಹಿನಿಯೊಂದು ಬಾಲಿವುಡ್ಡಿನ ಹಾಡುಗಳಿಗೆ ಗೇಟ್ಪಾಸ್ ಕೊಟ್ಟು ಹೊಸ ಟ್ರೆಂಡ್ ಶುರು ಮಾಡಲಿಲ್ಲವೇ ? ಹಾಗೆಯೇ ಬಾಲಿವುಡ್ಡಿನ ಬಿಟ್ಟಿ ಸುದ್ದಿಗಳಿಗೆ ಬೈ ಬೈ ಹೇಳುವ ಸತ್ಸಂಪ್ರದಾಯವನ್ನೂ ಕರ್ಮವೀರ ಯಾಕೆ ಶುರುಮಾಡಬಾರದು ?
ಹಾಗೆ ನಿಮಗೆ ಗೊತ್ತಿರಲಿ ಅಂತ:
o ಹಲವಾರು ಜನರಿಗೆ ನನಗನಿಸಿಂದತೆಯೇ ಅನಿಸಿರಬಹುದು, ಆದರೆ "ಹಾಳಾಗಿ ಹೋಗ್ಲಿ ಬಿಡು" ಎಂದು ನಿಮಗೆ ತಿಳಿಸದೇ ಸುಮ್ಮನಾಗಿರಬಹುದು. ನಾನು ಮಾತ್ರ ಪತ್ರ ಬರೆದು ನಿಮ್ಮ ತಲೆ ತಿನ್ನುತ್ತಿದ್ದೇನೆ, ಯಾಕಂದರೆ ನನ್ನಂತಹ ಓದುಗ ದೊರೆಯ ಅಭಿಪ್ರಾಯವನ್ನು ನೀವು ಗಂಭೀರವಾಗಿ ಪರಿಗಣಿಸುತ್ತೀರಿ ಎಂಬ ನಂಬಿಕೆ ಇದೆ.
o ಬೈದು ಬರೆಯುವ ಬಹುತೇಕರು ಪತ್ರವನ್ನು ಅನಾಮಿಕರಾಗಿ ಬರೆದಿರುತ್ತಾರೆ. ನಾನು ಮಾತ್ರ ನನ್ನ ಹೆಸರು-ವಿಳಾಸಗಳನ್ನು ಸ್ಪಷ್ಟವಾಗಿಯೇ ನಮೂದಿಸಿದ್ದೇನೆ. ಯಾಕೆಂದರೆ ನಾನು ಬರೆದದ್ದು ಬೈಗುಳವಲ್ಲ, ರಚನಾತ್ಮಕ ವಿಮರ್ಶೆ ಎಂದು ಅರ್ಥಮಾಡಿಕೊಳ್ಳುವ ಮನಸ್ಸು ನಿಮಗಿದೆ ಎಂಬ ವಿಶ್ವಾಸವಿದೆ.
o ನನ್ನ ಕೆಲ ಗೆಳೆಯರು ಶುಕ್ರವಾರದ ರಾತ್ರಿಯಾದ ಈ ಸಮಯದಲ್ಲಿ ಪಬ್ಬುಗಳಲ್ಲಿ ಮಜಾ ಮಾಡುತ್ತಿದ್ದರೆ, ಇನ್ನು ಕೆಲವರು ಟೀವಿ ಮುಂದೆ ಕುಳಿತು ಐಪಿಎಲ್ ನೋಡುತ್ತಿದ್ದಾರೆ. ನಾನು ಮಾತ್ರ ಈ ಪತ್ರಕ್ಕಾಗಿ ಕೀಬೋರ್ಡ್ ಕುಟ್ಟುತ್ತಿದ್ದೇನೆ, ಯಾಕೆಂದರೆ ಕರ್ಮವೀರ/ಕನ್ನಡದ ಬಗ್ಗೆ ನನಗೆ ಕಾಳಜಿ ಇದೆ.
2 comments:
ಮೇಲೆ ನೀವು ಹೇಳಿರಿವ ಪ್ರತಿ ಮಾತು ಸತ್ಯ. ಈ ಮಾಧ್ಯಮದ ಮಂದಿ ಯಾವಾಗ ಕನ್ನಡಿಗರ ಅಭಿರುಚಿಯನ್ನು ಅರ್ಥ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಕೇವಲ ಹಿಂದಿ ಹಾಗು ಇನ್ನಿತರ ಭಾಷೆಯ ಚಿತ್ರಗಳಿಗೆ ಬಿಟ್ಟಿ ಮಾರುಕಟ್ಟೆ ಒದಗಿಸುವುದರಲ್ಲಿ ತಲ್ಲೀನರಾಗಿರುತ್ತಾರೆ.
you dont have rights to ask kannadigas to watch or know only about kannada movies and limit their entertainment senses until they stop opposing dubbed movies and dubbed TV programs.
Post a Comment