Monday, December 22, 2025

ಕತೆ: ಕೇಶವಾಯ ಸ್ವಾಹಾ

ಕಥಾಸಂಭ್ರಮ 2025 - ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ *ಕೇಶವಾಯ ಸ್ವಾಹಾ

 https://wp.vividlipi.com/%e0%b2%95%e0%b3%87%e0%b2%b6%e0%b2%b5%e0%b2%be%e0%b2%af-%e0%b2%b8%e0%b3%8d%e0%b2%b5%e0%b2%be%e0%b2%b9%e0%b2%be/

-------

ನಾನು ಒಬ್ಬ ಪುಸ್ತಕ ಪ್ರೇಮಿ.  ಲೋಭಿ ಎಂದರೂ ಆದೀತು. ಆದರೆ ನನ್ನ ಪುಸ್ತಕ ಲೋಭ, ಪುಸ್ತಕ ಕೈಗೆ ಸಿಗುವರೆಗೆ ಮಾತ್ರ. ಓದಿ ಮುಗಿಸಿದ ಪುಸ್ತಕದ ಬಗ್ಗೆ ನಾನು ನಿರ್ಮೋಹಿ. ಮೊದಲೆಲ್ಲ ಅಸಕ್ತರು ಯಾರಾದರೂ ನಾನು ಓದಿದ ಪುಸ್ತಕವನ್ನು ಕೇಳಿದರೆ ಅವರಿಗೆ ಅದನ್ನು ಕೊಟ್ಟು ಮರೆತುಬಿಡುತ್ತಿದ್ದೆ. ಓದಿದ್ದೆಲ್ಲಾ ನನ್ನ ಮೆದುಳಿನಲ್ಲಿದೆ ಎಂಬ ಹಮ್ಮು ನನಗೆ ಆವಾಗಿತ್ತು. ವಯಸ್ಸು ಆದಂತೆಲ್ಲ ನನ್ನ ನೆನಪಿನ ಶಕ್ತಿಯ ಬಗ್ಗೆ ನನ್ನ  ಹೆಮ್ಮೆ ಕಮ್ಮಿ ಆಗ್ತಾ ಇದೆ. ಯಾವ ವಿಷಯವನ್ನು ಯಾವ ಪುಸ್ತಕದಲ್ಲಿ ಓದಿದ್ದೆ ಎಂದು ನೆನಪಾಗದೆ ಇನ್ನೊಮ್ಮೆ ನೋಡಬೇಕೆಂದರೆ, ಪುಸ್ತಕ ದಾನ ಕೊಟ್ಟದ್ದರಿಂದ ಅದೇ ಪುಸ್ತಕವನ್ನು ಇನ್ನೊಮ್ಮೆ ಕೊಂಡು ತಂದದ್ದು ಇದೆ. ಹೀಗಾಗಿ ಸನಿಹ ಸನಿಹ ನಲವತ್ತು ವರ್ಷ ಸರಕಾರಿ ಹೈಸ್ಕೂಲುಗಳಲ್ಲಿ ಮಾಸ್ತರಿಕೆ ಮಾಡಿ ದುಡಿದದ್ದನ್ನು  ಹೊಟ್ಟೆ ಬಟ್ಟೆಗೆ ಖರ್ಚುಮಾಡಿ, ಉಳಿದದ್ದರಲ್ಲಿ ಹಲವಾರು ಸಾವಿರ ಪುಸ್ತಕಗಳನ್ನು ಕೊಂಡು, ಅದರಲ್ಲಿ ಕೆಲ ಸಾವಿರ ಪುಸ್ತಕಗಳನ್ನು ದಾನ ಮಾಡಿದ್ದರೂ, ಇನ್ನು ಕೆಲ ಸಾವಿರ ಪುಸ್ತಕಗಳು ನನ್ನ ಜೊತೆ ವರ್ಗವಾದಲ್ಲೆಲ್ಲ ಊರೂರು ಸುತ್ತುತ್ತ, ಈಗ ನಿವೃತ್ತನಾದ ಮೇಲೆಯೂ ನನ್ನ ಬಳಿ ಉಳಿದಿವೆ.

ನನ್ನದು ಪುಸ್ತಕದ ಹುಚ್ಚು ಎನ್ನುವುದನ್ನು ಅವರಿವರು ಆಡಿಕೊಳ್ಳುತ್ತಾರೆ. ಬೇರೆಯವರ್ಯಾಕೆ- “ಅಷ್ಟೆಲ್ಲ ದುಡ್ಡು ಪುಸ್ತಕಗಳಿಗೆ ಹಾಕುವ ಬದಲು ಆಸ್ತಿ ಮಾಡಿದ್ರೆ ಇರೋ ಒಬ್ಬ ಮಗ ಆರಾಮಾಗಿ ಇರುತ್ತಿದ್ದ” ಎಂದು ನನ್ನ ಹೆಂಡತಿಯು ಆಗಾಗ ಕಿರಿಕಿರಿ ಮಾಡುತ್ತಿದ್ದಳು. ಅವಳಿಗೆ ನಾನು ಅವಾಗ ಹೇಳುತ್ತಿದ್ದ ಮಾತು “ಮಕ್ಕಳನ್ನೇ ಆಸ್ತಿ ಮಾಡಬೇಕು. ಮಕ್ಕಳಿಗೆ ಆಸ್ತಿ ಮಾಡಬಾರದು”. ಅವಳು ಈಗ ನನ್ನ ಮಾತನ್ನು ಒಪ್ಪ ತೊಡಗಿದ್ದಾಳೆ. ತಕ್ಕ ಮಟ್ಟಿಗೆ ತಾನೂ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾಳೆ. ಮಾಸ್ತರಿಕೆಯಿಂದ ನಿವೃತ್ತನಾಗಿ ಹೆಂಡತಿಯೊಂದಿಗೆ ಸ್ವಂತ ಊರಲ್ಲಿ ನೆಲೆನಿಂತ ಮೇಲೆ, ಉದ್ಯೋಗಕ್ಕಾಗಿ ಇದ್ದೊಬ್ಬ ಮಗ ಬೆಂಗಳೂರು ಸೇರಿ, ನಮ್ಮಿಬ್ಬರಿಗೂ ಏಕತಾನತೆ ಕಾಡಿದಾಗ, ನಮ್ಮ ಜೀವಮಾನದ ಗಳಿಕೆಯಾದ ಪುಸ್ತಕಗಳು ನಮಗೆ ಜೊತೆ ಒದಗಿಸಿವೆ. ನನ್ನ ಹೆಂಡತಿ ನಮ್ಮ ಹಳ್ಳಿಮನೆಯಲ್ಲಿ ಜಬರ್ದಸ್ತ್ ಕಪಾಟು ಮಾಡಿಸಿ ನನ್ನ ಪುಸ್ತಕಗಳಿಗೆ ಶಾಶ್ವತ ನೆಲೆ ಒದಗಿಸಿದ್ದಾಳೆ.

ನಿವೃತ್ತನಾದ ಮೇಲೆ ನಾನು ನನ್ನ ನೆಚ್ಚಿನ ಹವ್ಯಾಸವಾದ ಬರಹವನ್ನು ಗಂಭೀರವಾಗಿ ಪರಿಗಣಿಸಿ ಬರೆಯುವುದರಲ್ಲಿ ನನ್ನ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ. ನನ್ನ ಬರಹಗಳು ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗಿರುವುದನ್ನು ನೀವು ಗಮನಿಸಿರಬಹುದು.  ಹತ್ತಿರದ ಊರುಗಳಲ್ಲಿ ಸಾಂಸ್ಕೃತಿಕ – ಸಾಹಿತ್ಯಕ ಕಾರ್ಯಕ್ರಮಗಳು ಇದ್ದರೆ ನಾನು ಅಲ್ಲಿ ಹಾಜರು.  ಜೊತೆಗೆ ಅವಾಗವಾಗ ಶಿಕ್ಷಣ ಇಲಾಖೆಯವರು ಸಂಪನ್ಮೂಲ ವ್ಯಕ್ತಿಯನ್ನಾಗಿ ಯಾವುದಾದರು ಕಾರ್ಯಾಗಾರಕ್ಕೆ ಆಹ್ವಾನಿಸಿದ್ದರೆ, ಅಲ್ಲಿಗೆ ಹೋಗಿ ನನಗೆ ಗೊತ್ತಿರುವುದನ್ನು ಹಂಚಿಕೊಳ್ಳುತ್ತಿರುತ್ತೇನೆ. ಮೊನ್ನೆ ನಮ್ಮ ಹತ್ತಿರದ ಊರಿನಲ್ಲಿದ್ದ ಒಂದು ಕಾರ್ಯಕ್ರಮಕ್ಕೆ ಬಸ್ಸಿನಲ್ಲಿ ಹೋಗಿ ಬರಬೇಕಾದರೆ ನನ್ನ ಹೆಂಡತಿಯಿಂದ ಫೋನು – “ರೀ.. ನಿಮಗ ಒಂದು ವಿಶೇಷವಾದ ಪುಸ್ತಕದ ಪಾರ್ಸಲ್ ಬಂದದ..”  ನಾನು ಹಲವಾರು ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸುತ್ತಿದ್ದರಿಂದ ಪುಸ್ತಕಗಳ ಪಾರ್ಸಲ್ ಬರುವುದು ವಿಶೇಷವಲ್ಲ. ಪಾರ್ಸಲ್‌ನಲ್ಲಿ ಬಂದ ಪುಸ್ತಕಗಳನ್ನು ಮೊದಲು ತಾನೇ ತೆಗೆದು ನೋಡಿ, ಬಹಳ ಆಸಕ್ತಿಕರ ಎನ್ನಿಸಿದರೆ, ತಾನು ಪೂರ್ತಿ ಓದಿದ ನಂತರವೇ ನನಗೆ ಹೇಳುವುದು ಅವಳ ರೂಢಿ, ನಾನೇನಾದರೂ  ಅವಳು ಅರ್ಧ ಓದಿದ ಪುಸ್ತಕಕ್ಕೆ ಕೈ ಹಚ್ಚುತ್ತೇನೆ ಎಂಬ ಮುಂಜಾಗ್ರತೆ !! ಮತ್ತೆ ಇವತ್ಯಾಕೆ ಫೋನ್ ಮಾಡಿ ಹೇಳುತ್ತಿದ್ದಾಳೆ ಎಂದು ನಾನು ಅಚ್ಚರಿ ಪಡುತ್ತಿರುವಾಗ ಅವಳು ಮುಂದುವರಿದು- “ಈ ಪುಸ್ತಕ ನಿಮ್ಮ ಶಿಷ್ಯ ಬರೆದಿದ್ದು, ಅದೂ ನಿಮ್ಮ ಪ್ರೀತಿಯ ಕವಿಯ ಬಗ್ಗೆ, ಅದಕ್ಕಾಗಿ ಹೇಳಿದೆ” ಎಂದು ಉತ್ಸಾಹದ ದನಿಯಲ್ಲಿ ಹೇಳಿದಳು. ನಾನು “ಯಾರು ಯಾರು ನನ್ನ ಶಿಷ್ಯ? ಪ್ರೀತಿಯ ಕವಿ ಅಂದರೆ ಯಾರು?” ಅಂದರೆ,  ಅವಳು “ನಿಮ್ಮ ಪ್ರಿಯ ಶಿಷ್ಯ ಕೇಶವ. ಲಕ್ಷ್ಮೀಪುರದಲ್ಲಿದ್ದಾಗ ನಿಮ್ಮ ಶಿಷ್ಯನಾಗಿದ್ದನಲ್ಲ, ಅದೇ ಕೇಶವ. ಅವನು ಪೋಲಾಳ್ವ ದಂಡೇಶನ ಬಗ್ಗೆ ಪಿಎಚ್‌ಡಿ ಮಾಡಿ ಬರೆದ ಪುಸ್ತಕ” ಎಂದು ಹೇಳಿ ಫೋನ್ ಇಟ್ಟಳು. ಅವಳು ಹೇಳಿದ ವಿಷಯ ಕೇಳಿ ನನಗೂ ಸಂತಸ, ಅಚ್ಚರಿ ಆಯಿತು. ದಶಕಗಳ ಹಿಂದೆ ಲಕ್ಷ್ಮೀಪುರದ ಹೈಸ್ಕೂಲಿನಲ್ಲಿ ಕಲಿಸುವಾಗ ನನ್ನ ವಿದ್ಯಾರ್ಥಿಯಾಗಿದ್ದ  ಕೇಶವ, ಅದೇ ಊರಿನಲ್ಲಿ ಸಿಕ್ಕ, ಅದುವರೆಗೆ ಅಲಭ್ಯವಾಗಿದ್ದ ಹರಚಾರಿತ್ರ್ಯದ ಕರ್ತ ಪೋಲಾಳ್ವನ ಬಗ್ಗೆ ಸಂಶೋಧನೆ ಮಾಡಿ ಪುಸ್ತಕ ಬರೆದಿದ್ದಾನೆ ಎಂದರೆ ಅಚ್ಚರಿಯಾಗದಿದ್ದೀತೇ ? ಇಪ್ಪತ್ತೈದು-ಮೂವತ್ತು ವರ್ಷಗಳಿಂದ ಸಂಪರ್ಕದಲ್ಲಿರದ, ಹಿಂದೆ ಶಾಲೆಯಲ್ಲಿ ಕಲಿತ ಶಿಷ್ಯ, ವಿಳಾಸ ಹುಡುಕಿ ತನ್ನ ಪುಸ್ತಕ ಕಳುಹಿಸುತ್ತಾನೆ ಎಂದರೆ ಯಾವ ಗುರುವಿಗೆ ಸಂತಸವಾಗದಿದ್ದೀತು ?

———————————————-

ಕೇಶವನದು ಲಕ್ಷ್ಮಿಪುರದ ಹತ್ತಿರದ ಸಣ್ಣ ಊರು. ಅವರಪ್ಪ ಅಲ್ಲಿಯ ಗೌಡರು, ಇದ್ದುಳ್ಳ ಮನೆತನ.  ಆ ಕಾಲದಲ್ಲಿ ಮಕ್ಕಳನ್ನು ಊರು ಬಿಟ್ಟು ಊರಿಗೆ ಕಳುಹಿಸಿ ಓದಿಸುತ್ತಿದ್ದುದೇ ಅಪರೂಪ. ಅಂತಹದರಲ್ಲಿ ಕೇಶವನನ್ನು ಅವರಪ್ಪ ಲಕ್ಷ್ಮಿಪುರದಲ್ಲಿ ಶಾಲೆಗೆ ಸೇರಿಸಿ, ಅವನಿಗೆ ಇರಲಿಕ್ಕೆಂದು ಒಂದು ಬಾಡಿಗೆಕೋಣೆಯ ವ್ಯವಸ್ಥೆ ಮಾಡಿಕೊಟ್ಟಿದ್ದರು. ಮೊದಲು ಒಂದು ಖಾನಾವಳಿಯಲ್ಲಿ ತಿಂಗಳ ರೊಕ್ಕ ಕೊಟ್ಟು ಊಟಕ್ಕೆ ವ್ಯವಸ್ಥೆ ಮಾಡಿದ್ದರು.  ಖಮ್ಮಾಗಿ ಮನೆಯಲ್ಲಿ ತಿಂದುಂಡು ಬೆಳೆದ ಹುಡುಗನಿಗೆ ಖಾನಾವಳಿಯ ಖಾರದ ಊಟ ಒಗ್ಗಲಿಲ್ಲ ಎಂದು ಮುಂದೆ ಪ್ರತಿದಿನ ಮೂವತ್ತು ಕಿಲೋಮೀಟರ್‌ ದೂರದ ಅವರೂರಿಂದ ಮನೆಯೂಟದ ಬುತ್ತಿಯು ಬಸ್ಸಿನಿಂದ ಬರುವಂತೆ ವ್ಯವಸ್ಥೆ ಮಾಡಿದ್ದರು. ಜೊತೆಗೆ ಅವಶ್ಯಕತೆಗೆ ಇರಲಿ ಎಂದು ಕೇಶವನ ಕೈಲಿ ಕಾಸು ಕೊಟ್ಟಿರುತ್ತಿದ್ದ ಅವರಪ್ಪ, ಅವನ ಮಾಸ್ತರುಗಳಾಗಿದ್ದ ನಮ್ಮಲ್ಲಿಯೂ “ಹುಡುಗ ರೊಕ್ಕ ಕೇಳಿದರೆ, ರೊಕ್ಕ ಕೊಡರಿ, ನಾನು ಹಿಂದಾಗಡೆ ಮುಟ್ಟಸತೇನಿ” ಎಂದು ಕೇಳಿಕೊಂಡಿದ್ದರು. ಒಟ್ಟಿನಲ್ಲಿ ಕೇಶವನ ಓದಿಗೆ ಯಾವುದೇ ತೊಂದರೆಯಾಗದಂತೆ ಅವರಪ್ಪ ಕಾಳಜಿವಹಿಸಿದ್ದರು.

ಅದಕ್ಕನುಗುಣವಾಗಿ ಕೇಶವನೂ ಓದಿನಲ್ಲಿ ಮುಂದು. ಪ್ರತಿ ವಿಷಯದಲ್ಲಿಯೂ ಅವನಿಗೆ ಅತೀ ಹೆಚ್ಚು ಅಂಕಗಳು. ನಾನು ಕಲಿಸುತ್ತಿದ್ದ ವಿಷಯ ಕನ್ನಡ. ಹಳೆಗನ್ನಡ ಪದ್ಯಗಳಲ್ಲಿ ಅವನಿಗೆ ವಿಶೇಷ ಆಸಕ್ತಿ. ಗಣೀತ-ವಿಜ್ಞಾನ ಶಿಕ್ಷಕರೂ ಅವನ ಬಗ್ಗೆ ಬಹಳ ಭರವಸೆ ಇಟ್ಟುಕೊಂಡಿದ್ದರು. ನಾವೆಲ್ಲ ಎಸ್ಸೆಎಲ್‌ಸಿಯಲ್ಲಿ ಅವನಿಂದ ನಮ್ಮ ಶಾಲೆಗೆ ಒಂದು ರ್ಯಾಂಕ್‌ ಬರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದೆವು.

ಲಕ್ಷ್ಮೀಪುರ ಶಾಲೆ-ಹೈಸ್ಕೂಲು-ಖಾನಾವಳಿ ಇತ್ಯಾದಿಗಳಿದ್ದರೂ ಆಗಿನ ಕಾಲಕ್ಕೆ ಹಿಂದುಳಿದ ಊರೇ ಆಗಿತ್ತು. ಊರಿನಲ್ಲಿ ಅಷ್ಟೊಂದು ಶೈಕ್ಷಣಿಕ ವಾತಾವರಣವಿರಲಿಲ್ಲ. ಹೀಗಾಗಿ ನಾನೇ ಪ್ರತಿ ಬ್ಯಾಚಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮ ಮನೆಯಲ್ಲಿ ಬೆಳಿಗ್ಗೆ-ಸಾಯಂಕಾಲ ಗಣೀತ-ವಿಜ್ಞಾನ ವಿಷಯಗಳಲ್ಲಿ ತರಬೇತಿ ಕೊಡುತ್ತಿದ್ದೆ. ಈ ವಿದ್ಯಾರ್ಥಿಗಳು ಬೆಳಿಗ್ಗೆ ಎಂಟಕ್ಕೆಲ್ಲ ನಮ್ಮ ಮನೆಗೆ ಬಂದು ಗಣೀತದ ಕ್ಲಾಸ್‌ ಮುಗಿಸಿ ನನ್ನ ಜೊತೆಗೆ ಶಾಲೆಗೆ ಬರುತ್ತಿದ್ದರು. ಸಂಜೆ ಶಾಲೆ ಮುಗಿಸಿ, ಆಟ ಮುಗಿಸಿ, ದೀಪ ಹಚ್ಚುವ ಹೊತ್ತಿಗೆ ನಮ್ಮ ಮನೆಗೆ ಬಂದು ವಿಜ್ಞಾನ, ಇಂಗ್ಲೀಷು ಪಾಠಮಾಡಿಸಿಕೊಂಡು, ಆ ನಂತರ ತಮ್ಮ ಅನುಮಾನಗಳೇನಾದರೂ ಇದ್ದರೆ ಪರಿಹರಿಸಿಕೊಂಡು ಹೋಗುತ್ತಿದ್ದರು. ಭಾನುವಾರ, ರಜಾದಿನಗಳಂದು ಹೆಚ್ಚೂ-ಕಡಿಮೆ ನಮ್ಮ ಮನೆಯಲ್ಲಿಯೇ ಇರುತ್ತಿದ್ದರು. 

ಈ ವಿದ್ಯಾರ್ಥಿಗಳು ನಮ್ಮ ಮನೆಯ ಮಕ್ಕಳಂತೆಯೇ ಇರುತ್ತಿದ್ದರು.  ಪ್ರತಿ ಕ್ಲಾಸ್ ಶುರುವಾಗುವ ಮೊದಲು ಬೋರ್ಡ್ ಒರೆಸಿ. ಆ ಬೋರ್ಡ್ ಕೆಳಗೆ ಒಂದು ಹಳೆ ದಿನಪತ್ರಿಕೆ ಹಾಸಿ ಕ್ಲಾಸ್‌ಗೆ ತಯಾರು ಮಾಡುತ್ತಿದ್ದು ಅವರ ಕೆಲಸವಾಗಿತ್ತು. ಕ್ಲಾಸ್ ಮುಗಿದ ನಂತರ ದಿನಪತ್ರಿಕೆಯಲ್ಲಿ ಬಿದ್ದಿದ್ದ ಖಡುವಿನ ಪುಡಿಯನ್ನು ಬಿಸಾಕಿ, ಡಸ್ಟ್ ರ್ ಸ್ವಚ್ಛ ಮಾಡಿ ಬೋರ್ಡ್ ಎತ್ತಿ ಇಡುವುದು ಕೂಡ ಅವರ ಕರ್ತವ್ಯವಾಗಿತ್ತು. ತಾವೇ ಸ್ವಸಹಾಯ ಪದ್ಧತಿಯಿಂದ ಒಂದು ಮಸಿ ಬಾಟಲಿಯನ್ನು ಕೊಂಡು ತಂದಿಟ್ಟುಕೊಂಡು. ತಮಗೆ ಬೇಕಾದಾಗ ಮಸಿ ತುಂಬಿಕೊಂಡು ಅದಕ್ಕಾಗಿ ಇಟ್ಟ ಡಬ್ಬಿಯಲ್ಲಿ ೧೦ ಪೈಸೆ ಹಾಕಿ. ಅದರ ಲೆಕ್ಕವನ್ನು ತಾವೇ ನೋಡಿಕೊಳ್ಳುತ್ತಿದ್ದರು. ಅದಲ್ಲದೇ ನಮ್ಮ ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ಅವರು ಮಾಡುತ್ತಿದ್ದರು- ಗಿರಣಿಗೆ, ಸಂತೆಗೆ ಹೋಗುವುದು. ಹಾಲು ತರುವುದು. ಅಂಗಡಿಗೆ ಹೋಗಿ ಕಿರಾಣಿ ತರುವುದು. ಹೋಗುವುದು. ಹೀಗೆ. 

ಕಿರಾಣಿ ಅಂದಾಗ ನೆನಪಾಯಿತು. ಆಗಿನ ಹಳ್ಳಿಯ ಆರ್ಥಿಕ ವ್ಯವಸ್ಥೆಯಲ್ಲಿ ದುಡ್ಡು  ಅಷ್ಟೊಂದು ಪ್ರಚಲಿತವಿರಲಿಲ್ಲ. ನಾನು ಕೂಡ ಮನೆಯಲ್ಲಿ ಬಹಳ ಹಣ ಇಡುತ್ತಿರಲಿಲ್ಲ, ಆಗಿನ ಕಾಲದಲ್ಲಿ ಮಾಸ್ತರ ಜನರಿಗೂ ಪಗಾರ ಆಗುತ್ತಿದುದು ಕೂಡ ಅನಿಯಮಿತವಾಗಿಯೇ. ಹೀಗಾಗಿ ನಾವು ಉದ್ರಿಯ ಮೊರೆಹೋಗಬೇಕಾಗುತ್ತಿದ್ದುದು ಅನಿವಾರ್ಯವಾಗಿತ್ತು. ಲಕ್ಷ್ಮಿಪುರದ ಕಲಹಾಳ ಶೆಟ್ಟರ ಕಿರಾಣಿ ಅಂಗಡಿಯಲ್ಲಿ ನಮ್ಮ ಮನೆಯ ಉದ್ರಿಖಾತೆ ಇತ್ತು. ಶೆಟ್ಟರು ಒಂದು ಪುಟ್ಟ ಉದ್ರಿ ಪುಸ್ತಕ ಕೊಟ್ಟಿರುತ್ತಿದ್ದರು. ಏನಾದರೂ ಕಿರಾಣಿ ಬೇಕಾದಾಗ ಆ ಉದ್ರಿ ಪುಸ್ತಕ ತೆಗೆದುಕೊಂಡು ಹೋಗಿ, ಅದರಲ್ಲಿ ಲೆಕ್ಕ ಬರಿಸಿಕೊಂಡು ಸಾಮಾನು ತರುವುದು ಪದ್ಧತಿ. ಆ ಉದ್ರಿ ಪುಸ್ತಕ ನಮ್ಮ ಈಗಿನ ಕ್ರೆಡಿಟ್‌ ಕಾರ್ಡ್‌ಗಳ ಪೂರ್ವಜ ಅಂದರೆ ನಿಮಗೆ ಅರ್ಥವಾದೀತು. ತಿಂಗಳ ಕೊನೆಗೋ ಇಲ್ಲವೇ ಪಗಾರ ಎಂದಾಗುತ್ತೋ ಅಂದು, ನಾನು ಶೆಟ್ಟರ ಅಂಗಡಿಗೆ ಹೋಗಿ ಲೆಕ್ಕ ಚುಕ್ತಾ ಮಾಡಿ ಬರುತ್ತಿದ್ದೆ. ಶೆಟ್ಟರಿಗೆ ನನ್ನ ಬಗ್ಗೆ ಅಗಾಧ ಪ್ರೇಮ-ಗೌರವ. ನಾನು ಅಂಗಡಿಗೆ ಹೋದಾಗಲೆಲ್ಲ ಗಲ್ಲೆಯ ಕುರ್ಚಿಯನ್ನು ನನಗೆ ಬಿಟ್ಟುಕೊಟ್ಟು ತಾವು ನಿಂತುಕೊಳ್ಳುತ್ತಿದ್ದರು. ತಮ್ಮ ವ್ಯವಹಾರದ ಏನಾದರೂ ಪತ್ರವ್ಯವಹಾರಕ್ಕಾಗಿ ಅವರು ನನ್ನ ಹತ್ತಿರ ಬರುತ್ತಿದ್ದರು. ಆ ವಿಶ್ವಾಸದ ಮೇಲೆ “ಅಕ್ಕ ಆದರ ಉಂಡು ಹೋಗು, ಲೆಕ್ಕ ಆದರ ಕೊಟ್ಟು ಹೋಗು” ಎಂಬ ವೃತ್ತಿಧರ್ಮದ ಅವರು ನಮ್ಮ ಮನೆಯ ಉದ್ರಿ ಪುಸ್ತಕ ಹಿಡಿದು ಯಾರೇ ಬಂದರೂ ಸಾಮಾನು ಕೊಟ್ಟು ಕಳುಹಿಸುತ್ತಿದ್ದಷ್ಟೇ ಅಲ್ಲ, ಉದ್ರಿ ಮುಟ್ಟಿಸೋದು ತಡಾ ಆದರೂ ಅನುಸರಿಸಿಕೊಳ್ಳುತ್ತಿದ್ದರು.

ವಾಪಸು ಕೇಶವನ ವಿಷಯಕ್ಕೆ ಬರೋಣ. ಹೈಸ್ಕೂಲ್‌ಗೆ ಸೇರಿದ ಕೇಶವ ನನ್ನ ಮನೆಯ ಖಾಸ ವಿದ್ಯಾರ್ಥಿಗಣಕ್ಕೂ ಸೇರಿದ. ನನ್ನ ಉಳಿದ ಶಿಷ್ಯರಂತೆಯೇ ಬೆಳಗ್ಗೆ-ಸಂಜೆ ನಮ್ಮ ಮನೆಗೆ ಪಾಠಕ್ಕೆ ಬರತೊಡಗಿದ. ಮೊದಲೇ ಜಾಣನಾಗಿದ್ದ ಕೇಶವ. ನನ್ನ ತರಬೇತಿಯಿಂದ ಇನ್ನೂ ಹೆಚ್ಚು ಅಂಕ ತೆಗೆಯುತ್ತ ನನ್ನ ಪಟ್ಟ ಶಿಷ್ಯನಾದ. ಉತ್ತರಪತ್ರಿಕೆಗಳನ್ನು ತಿದ್ದಲು ನಾನು ಕುಳಿತಾಗ ನನ್ನ ಜೊತೆ ಕುಳಿತು ಉತ್ತರ ಪತ್ರಿಕೆಯ ಒಟ್ಟು ಅಂಕಗಳನ್ನು ಕೂಡಿಸುವುದು, ನನ್ನ ಗಮನಕ್ಕೆ ಬರದ ಉತ್ತರಪತ್ರಿಕೆಯಲ್ಲಿನ ತಪ್ಪುಗಳನ್ನು ತೋರಿಸುವುದು, ಕೊನೆಗೆ ಎಲ್ಲಾ ವಿದ್ಯಾರ್ಥಿಗಳ ಅಂಕಪಟ್ಟಿ ಮಾಡುವ ಕೆಲಸಕ್ಕೂ ನನಗೆ ಸಹಾಯ ಮಾಡುತ್ತಿದ್ದ. ಕೇಶವ ಓದಿನಲ್ಲಿ ಜಾಣ ಅಷ್ಟೇ ಅಲ್ಲ, ಉಳಿದ ವ್ಯವಹಾರದಲ್ಲೂ ಚತುರನಾಗಿದ್ದ. ಮನೆಯಲ್ಲಿ ಯಾರಾದರೂ ಭಿಕ್ಷುಕರು ಬಂದರೆ, ನಮಗೆ ಕಾಯದೇ, ನ್ಯಾಗೊಂದಿಯಲ್ಲಿ ಇಟ್ಟಿದ್ದ ಐದು-ಹತ್ತು ಪೈಸೆಯನ್ನೋ, ಒಂದು ಬೊಗಸೆ ಜೋಳವನ್ನೋ ಹಾಕಿ ದಾಟಹಾಕುತ್ತಿದ್ದ. ಅದಲ್ಲದೆ ಕರೆಂಟ್‌ನ ಬಿಲ್ ತುಂಬುವ ದಿನವನ್ನು ಸರಿಯಾಗಿ ನೆನಪು ಮಾಡಿ, ದುಡ್ಡು ಇಸಿದುಕೊಂಡು ಬಿಲ್ಲು ತುಂಬಿ ಬರುತ್ತಿದ್ದ. ಚೆಕ್ಕು ಕೊಟ್ಟರೆ, ಬ್ಯಾಂಕಿಗೆ ಹೋಗಿ ಸರಿಯಾಗಿ ಎಣಿಸಿಕೊಂಡು ದುಡ್ಡು ತರುತ್ತಿದ್ದ. ನಾನು ಕೂಡ ಅವನಿಗೆ ಅಷ್ಟೇ ಶಿಷ್ಯ ಪ್ರೀತಿ ತೋರಿಸುತ್ತಿದ್ದೆ. ನನ್ನ ಪುಸ್ತಕ ಸಂಗ್ರಹದ ಯಾವುದಾದರೂ ಪುಸ್ತಕ ತೆಗೆದು ಓದುವ ಸಲುಗೆ ಅವನಿಗೆ ಕೊಟ್ಟಿದ್ದೆ. ಏನಾದರೂ ಹೊಸ ವಿಷಯ ಪತ್ರಿಕೆಯಲ್ಲಿ ಓದಿದ್ದರೆ ತೆಗೆದಿಟ್ಟು ಅವನಿಗೆ ಓದಲು ಕೊಡುತ್ತಿದ್ದೆ. ಅಷ್ಟೇ ಅಲ್ಲ, ಮಳೆಯಾಗಿ ಬಸ್ಸು ಬಂದ್ ಆಗಿ ಅವನಿಗೆ ಊರಿನಿಂದ ಬುತ್ತಿ ಬರದೇ ಇದ್ದರೆ, ನಮ್ಮ ಮನೆಯಲ್ಲಿಯೇ ನನ್ನೊಂದಿಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಒಟ್ಟಿನಲ್ಲಿ ಆ ದಿನಗಳಲ್ಲಿ ಕೇಶವ ನನ್ನ ನೆರಳಿನಂತೆಯೇ ಆಗಿ ಬಿಟ್ಟಿದ್ದ. 

ಅದೇ ದಿನಗಳಲ್ಲಿ ನಾನು ಪೋಲಾಳ್ವ ದಂಡೇಶನ ಕೃತಿಯನ್ನು ಶೋಧ ಮಾಡಿ ಪ್ರಕಟಿಸಿದ್ದು. ಅದಾದ್ದು ಹೀಗೆ: ಲಕ್ಷ್ಮೀಪುರದ ಮಠದ ಸ್ವಾಮಿಗಳಾದ ಶಿವದೇವರು ನನ್ನನ್ನು ಕರೆಸಿ, ಮಠದ ಇತಿಹಾಸವನ್ನು ಬರೆದು ಕೊಟ್ಟರೆ ಮಠದಿಂದ ಪ್ರಕಟಿಸುವುದಾಗಿ ಹೇಳಿದರು. ಒಪ್ಪಿದ ನಾನು, ಮಠದ ದಾಖಲೆಗಳನ್ನು ಕೊಟ್ಟರೆ ಅಭ್ಯಾಸ ಮಾಡಿ, ಇತಿಹಾಸ ರಚಿಸಿಕೊಡುವುದಾಗಿ ಹೇಳಿದೆ. “ಬಾನ ಬೇಡಿದರೆ ಹೋಳಿಗೆ ನೀಡುವ” ಎಂದು ಪ್ರಸಿದ್ಧಿ ಪಡೆದಿರುವ ಮಠದ ಶ್ರೀಗಳು ನಾನು ದಾಖಲಾತಿಗಳನ್ನು ಕೇಳಿದ್ದಕ್ಕೆ, ತಮ್ಮ ಉಗ್ರಾಣದ ಕೀಲಿಕೈಯನ್ನು ಕೊಟ್ಟು ಅಲ್ಲಿರುವ ಎಲ್ಲ ಸಾಮಗ್ರಿಗಳನ್ನು ಅಭ್ಯಸಿಸಿ. ಪುಸ್ತಕ ಬರೆಯಲು ಆದೇಶಿಸಿದರು. ನಾನು ಸಂತೋಷದಿಂದ ಕೆಲಸ ಶುರುಮಾಡಿಕೊಂಡೆ. ಮಠದ ಸಂಗ್ರಹದಲ್ಲಿ ಐದು ತಾಮ್ರಪಟಗಳು, ಹತ್ತಿಪ್ಪತ್ತು ತಾಳೆಗರಿ ಗ್ರಂಥಗಳು,  ಬಹಳಷ್ಟು ಕೋರಿ ಕಾಗದದ ಹಳೆಯ ದಾಖಲೆಗಳು ಇದ್ದವು. ಬಹುತೇಕ ಎಲ್ಲಾ ಬರಹವು ೧೬ನೇ ಶತಮಾನದಕ್ಕಿಂತ ಈಚಿನದು. ಅಲ್ಪಸ್ವಲ್ಪ ಲಿಪಿ ಶಾಸ್ತ್ರ ಬಲ್ಲ ನಾನು ಅವುಗಳನ್ನು ಓದಲು ಅಷ್ಟೇನು ಕಷ್ಟಪಡಬೇಕಾಗಿರಲಿಲ್ಲ. ತಾಮ್ರಶಾಸನಗಳೆಲ್ಲ ದಾನಶಾಸನಗಳಾಗಿದ್ದವು. ತಾಳೆಗರಿ ಗ್ರಂಥಗಳು ಬಹುತೇಕ ಧಾರ್ಮಿಕ ಸಾಹಿತ್ಯವಾಗಿದ್ದವು- ಪ್ರಭುದೇವರಪುರಾಣ, ಗಿರಿಜಾ ಕಲ್ಯಾಣ, ಶಬರಶಂಕರ ವಿಳಾಸ ಹೀಗೆ.. ಜೊತೆಗೆ ಶಬ್ದಾನುಶಾಸನ, ಶಬ್ದಮಣಿದರ್ಪಣದಂತಹ  ಶಾಸ್ತ್ರಗಂಥಗಳ ಪ್ರತಿಗಳೂ ಇದ್ದವು. ಆದರೆ ಅವೆಲ್ಲಾ ಅದಾಗಲೇ ಪ್ರಕಟವಾಗಿದ್ದ ಗ್ರಂಥಗಳು. ಇನ್ನು ಕೋರಿ ಕಾಗದದ ದಾಖಲೆಗಳು ಬಹುತೇಕವಾಗಿ ಸನದುಗಳು, ದಾನಶಾಸನಗಳು, ಮಠದ ಮುಖ್ಯಸ್ಥರು ಮರಾಠರೊಂದಿಗೆ, ಮೈಸೂರು- ಕೆಳದಿಯ ಅರಸರೊಂದಿಗೆ, ಸವಣೂರಿನ ನವಾಬನೊಂದಿಗೆ, ಕೊನೆಗೆ ಬ್ರಿಟಿಷರ ಸರಕಾರದೊಂದಿಗೂ ನಡೆಸಿದ ಪತ್ರವ್ಯವಹಾರ ಹೊಂದಿದ್ದವು. ಇತಿಹಾಸ ರಚಿಸಬೇಕಾದರೆ ಎಷ್ಟೇ ಚಿಕ್ಕ ವಿಷಯವಾದರೂ ನಿರ್ಲಕ್ಷಿಸಬಾರದೆಂದು, ಎಲ್ಲವನ್ನೂ ಗಮನವಿಟ್ಟು ಓದುತ್ತಿದ್ದೆ. 

ಹೀಗೆ ಅಭ್ಯಾಸ ನಡೆಸಿರುವಾಗ ಒಂದು ಕಾಗದದ ಕಟ್ಟಿನಲ್ಲಿ ಕಂಡ “ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರುಷ ಹದಿನೈದು ನೂರಾ ಮೂವತ್ತೆಂಟನೆ  ನಳ ಸಂವತ್ಸರದ ಮಾಘ ಬಹುಳ ೧೪ಯು ಸೋಮವಾರದಲ್ಲು ಲಕ್ಕವಳ್ಳಿಯ ಪ್ರಭುದೇವರಿಗೆ ಕಲ್ಲಹಳ್ಳಿಯ ಮಲ್ಲಯ್ಯದೇವರ ಶಿಷ್ಯರು ಸಂಗಣ್ಣ ಲೇಖನ ಮಾಡಿದ ಪೋಲಾಳ್ವ ದಂಡೇಶ ಕವಿ ವಿರಚಿತ ಹರಚಾರಿತ್ರ್ಯ ಗ್ರಂಥವು” ಎಂಬ ಸಾಲುಗಳನ್ನು ಓದಿ ನಾನು ಜಿಗಿದು ಕುಳಿತೆ. ಅದಾಗಲೇ ಶ್ರೀ ಮಠದ ಪೀಠಾಧಿಪತಿಗಳ ಪಟ್ಟಿ ಮಾಡಿಟ್ಟುಕೊಂಡಿದ್ದ ನಾನು ಇಲ್ಲಿ ಉಲ್ಲೇಖಿಸಿದ ಪ್ರಭುದೇವರು ಮೂರನೆ ಪೀಠಾಧಿಪತಿಯಂದೂ, ʼಲಕ್ಕವಳ್ಳಿʼ ಎನ್ನುವುದು ಈಗಿನ ಲಕ್ಷ್ಮೀಪುರದ ಹಿಂದಿನ ಹೆಸರೆಂದೂ ಅನಾಯಾಸವಾಗಿ ಗುರುತಿಸಿದೆ. ಹದಿನೇಳನೇ ಶತಮಾನದಲ್ಲಿ ಕಲ್ಲಹಳ್ಳಿಯ ಸಂಗಣ್ಣನೆಂಬ ಲಿಪಿಕಾರ ತನಗೆ ಆಗ ಲಭ್ಯವಿದ್ದ ಈ ಕೃತಿಯನ್ನು ಪ್ರತಿ ಮಾಡಿದ್ದ ಎಂಬುದೂ ತಿಳಿಯಿತು. ಆದರೆ “ಪೋಲಾಳ್ವ ದಂಡೇಶ ಕವಿ ವಿರಚಿತ ಹರಚಾರಿತ್ರ್ಯ” ಎನ್ನುವುದನ್ನು ನನ್ನ ಕಣ್ಣುಗಳು ನಂಬಲು ಬಹಳ ಕಾಲ ಹಿಡಿಯಿತು. ಹದಿಮೂರನೇ ಶತಮಾನದ ಹೊಯ್ಸಳರ ದಂಡನಾಯಕ ಆಗಿದ್ದ ಪೋಲಾಳ್ವನು ಹರಿಹರದ ಹರಿಹರೇಶ್ವರ ದೇವಸ್ಥಾನವನ್ನು ಕಟ್ಟಿದವನು. ಅವನು ಕನ್ನಡದಲ್ಲಿ ಷಟ್ಪದಿಯನ್ನು ಉಪಯೋಗಿಸಿದ ಮೊದಲಿಗರಲ್ಲಿ ಒಬ್ಬನು. ಅಲ್ಲಿಯವರೆಗೆ ಪೋಲಾಳ್ವನ ಈ ಕೃತಿಯು ನಾಶವಾಗಿ ಹೋಗಿದೆ ಎಂದೇ ಎಲ್ಲ ವಿದ್ವಜ್ಜನರು ನಂಬಿದ್ದರು. ಸಂಗಣ್ಣನ ಕೃಪೆಯಿಂದಾಗಿ ಎಂಟುನೂರು ವರ್ಷಗಳ ಹಿಂದಿನ ಕೃತಿಯನ್ನು ಇಪ್ಪತ್ತನೇ ಶತಮಾನದಲ್ಲಿ ಓದಿದ ಮೊದಲಿಗ ನಾನಾಗುತ್ತೇನೆ ಎಂಬುದು ನನಗಾಗ ನಂಬಲು ಕಷ್ಟವಾಗಿತ್ತು. ಮಠದ ಇತಿಹಾಸ ರಚಿಸಲು ಹೋಗಿ ನಾನು ಅಕಸ್ಮಾತ್ ಆಗಿ ಈ ಕೃತಿರತ್ನವನ್ನು ಶೋಧ ಮಾಡಿದ್ದೆ. ಮುಂದೆ ಅದರ ಬಗ್ಗೆ ಪತ್ರಿಕೆಗಳಿಗೆ ಲೇಖನ ಬರೆದೆ, ಸಂಶೋಧನಾ ಪ್ರಬಂಧ ಮಂಡಿಸಿದೆ, ಅದರ ಬಗ್ಗೆ ಸಂಶೋಧಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದೆ. ನಾನು ಬರೆದ ಶ್ರೀ ಮಠದ ಇತಿಹಾಸ ಮಠದಿಂದ ಪ್ರಕಟವಾಗಿ, ಜಾತ್ರೆಯ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸನ್ಮಾನಿತನಾದರೂ, ಪೋಲಾಳ್ವನ ಕೃತಿ ಶೋಧಕ್ಕಾಗಿ ನನಗೆ ದೊರೆತ ಮನ್ನಣೆ ಒಂದು ತೂಕ ಹೆಚ್ಚಿನದೇ. ಶ್ರೀಮಠವು – ಬಾನ ಬೇಡಿದ ನನಗೆ ಹೋಳಿಗೆ ಅಷ್ಟೇ ಅಲ್ಲ ತುಪ್ಪ ಕೂಡ ನೀಡಿತ್ತು!

ಈ ಘಟನೆಗಳು ನಡೆಯುವಾಗ ಕೇಶವ ಹತ್ತನೇ ತರಗತಿ ಓದುತ್ತಿದ್ದ. ನನ್ನ ಬರಹಗಳನ್ನು, ಲೇಖನಗಳನ್ನು ಟೈಪ್ ಮಾಡಿಸಿಕೊಂಡು ಬರುವುದು ಅವನದೇ ಕೆಲಸವಾಗಿರುತ್ತಿತ್ತು. ಅದಷ್ಟೇ ಅಲ್ಲದೆ ಮಠದ ಪುಸ್ತಕದ ಮೊದಲ ಕರಡು ಬಂದಾಗ ಅದರ ಪ್ರೂಫ್ ಓದುವುದು ಕೂಡ ಅವನೇ ಮಾಡಿದ. ನಾನು ಅವನಿಗೆ ತನ್ನ ಹತ್ತನೇ ತರಗತಿಯ ಓದಿನ ಬಗ್ಗೆ ಗಮನ ಕೊಡಲು ಹೇಳುತ್ತಿದ್ದೆನಾದರೂ ಅವನಿಗೆ ಈ ಪಠ್ಯೇತರ ಚಟುವಟಿಕೆಯ ಬಗ್ಗೆ ಹೆಚ್ಚು ಆಸಕ್ತಿ. ಆದರೆ ಓದಿನಲ್ಲೂ ಕೂಡ ಆತ ಚೆನ್ನಾಗಿ ಮಾಡುತ್ತದೆ. ಆದ್ದರಿಂದ ನಾನು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ.

ಚೆನ್ನಾಗಿ ನಡೆಯುತ್ತಿದ್ದ ನನ್ನ ಕೇಶವನ ಸಹಚರ್ಯ ಒಮ್ಮೆಲೆ ಕೊನೆಗಾಣುತ್ತದೆ ಎಂದು ನಾನು ಊಹಿಸಿರಲಿಲ್ಲ. ಹತ್ತನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಇನ್ನು ಒಂದು ತಿಂಗಳಿದೆ ಎನ್ನುವಾಗ ನನಗೆ ಹದಿನೈದು ದಿನದ ಒಂದು ತರಬೇತಿಗೆ ಹೋಗಬೇಕಾಗಿ ಬಂದಿತ್ತು. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅದಾಗಲೇ ಸಿಲೆಬಸ್ ಮುಗಿಸಿದ್ದರಿಂದ ಅವರು ತಮ್ಮಷ್ಟು ತಾವೇ ಉಜರಣೆ ಮಾಡಿಕೊಳ್ಳುತ್ತಾರೆ ಎಂದು ನಾನು ಯಾವುದೇ ಚಿಂತೆಯಿಲ್ಲದೆ ಧಾರವಾಡಕ್ಕೆ ತರಬೇತಿಗೆ ಹೊರಡಲು ಅನುವಾದೆ. ಹೋಗುವ ದಿನ ರಸ್ತೆಯಲ್ಲಿ ಕಿರಾಣಿ ಅಂಗಡಿಯ ಶೆಟ್ಟರು ಎದುರಾದರು. ನನ್ನನ್ನು ತಡೆದು “ಏನ್ ಗುರುಗಳೇ, ಮನೆಯಲ್ಲಿ ಏನಾದರೂ ಕಾರ್ಯಕ್ರಮ ಐತಾ ? ಏನು ಹತ್ತು ಕಿಲೋ ಚಾಪುಡಿ ತರಿಸಿದ್ದೀರಿ?” ಎಂದರು. ನನಗೆ ಅವರ ಮಾತಿನ ತಳಬುಡ ಅರ್ಥವಾಗಲಿಲ್ಲ. ಆದರೆ ಬಸ್ಸಿಗೆ ತಡವಾಗಿದ್ದರಿಂದ ಶೆಟ್ಟರಿಗೆ ಊರಿಂದ ವಾಪಸ್ಸು ಬಂದು ಮಾತನಾಡುತ್ತೇನೆ ಎಂದು ಹೇಳಿ. ಗಡಿಬಿಡಿಯಿಂದ ಹೊರಟೆ.

ಹದಿನೈದು ದಿನ ಧಾರವಾಡದಲ್ಲಿ ತರಬೇತಿ ಮುಗಿಸಿ ವಾಪಸ್ಸು ಬಂದ ನನಗೆ, ಕೇಶವ ಮಾಡಿದ ಹಗರಣ ಗೊತ್ತಾಗಿ ಆಘಾತವಾಯಿತು. ಇನ್ನೆನು ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿದೆ ಎಂದು ನಮ್ಮ ಶಾಲೆಯ ಆಟದ ಮಾಸ್ತರರಾದ ತಿಮ್ಮನಗೌಡ ಪೋಲೀಸ್‌ಪಾಟೀಲರು ಆಟದ ಸಾಮಾನುಗಳ ಆಡಿಟ್ ಮಾಡುತ್ತಿದ್ದರಂತೆ. ಆಗ ಅವರಿಗೆ ಸ್ಟಾಪ್ ವಾಚ್ ಕಾಣೆಯಾಗಿದ್ದು ಗಮನಕ್ಕೆ ಬಂದಿದೆ. ತುಟ್ಟಿಯ ಸಾಮಾನು ಕಳೆದುಹೋದದ್ದಕ್ಕೆ ಅವರು ತನಿಖೆ ಶುರುಮಾಡಿದರಂತೆ. ಆಟದ ಸಾಮಾನು ಇಡುವ ರೂಮಿನ ಕೀಲಿಕೈ ಒಂದು ಅವರಲ್ಲಿತ್ತು. ಇನ್ನೊಂದು ಹತ್ತನೇ ತರಗತಿಯ ಮಾನಿಟರ್ ಅದ ಕೇಶವನ ಹತ್ತಿರ ಇರುತ್ತಿತ್ತು. ಹೀಗಾಗಿ ಪಾಟೀಲರಿಗೆ ಕೇಶವನ ಮೇಲೆ ಅನುಮಾನ ಬಂದು ಅವನನ್ನು ವಿಚಾರಿಸಿದರೆ. ಅವನು ತಾನು ಅಮಾಯಕ ಎಂದು ವಾದಿಸಿದನಂತೆ. ಅನುಮಾನ ಬಗೆಹರಿಯದೇ. ಪಾಟೀಲರು ಅವನನ್ನು ಶಾಲೆಯಲ್ಲಿ ಕೂಡಿಹಾಕಿ, ಅವನ ರೂಮಿನ ಕೀಲಿಯನ್ನು ತೆಗೆದುಕೊಂಡು ಇಬ್ಬರು ಹುಡುಗರೊಂದಿಗೆ ಅವನ ಕೋಣೆಗೆ ಹೋದರಂತೆ. ಅಲ್ಲಿ ಹೋಗಿ ನೋಡಿದರೆ, ಕಳೆದುಹೋದ ಸ್ಟಾಪ್ ವಾಚ್ ಅಷ್ಟೇ ಅಲ್ಲ, ನಾಲ್ಕು ಕ್ರಿಕೆಟ್ ಬಾಲುಗಳು, ಒಂದು ವಾಲಿಬಾಲು. ಅದಲ್ಲದೆ ೫೦-೬೦ ಪೆನ್ನುಗಳು, ೨೦ ಕಂಪಾಸ್‌ ಪೆಟ್ಟಿಗೆಗಳು,೧೦ ಕಿಲೋ ಕಣ್ಣನ್ ದೇವನ್ ಚಹಾಪುಡಿಯ ಪೊಟ್ಟಣಗಳು, ೨೫ ಮೈಸೂರ್‌ ಸ್ಯಾಂಡಲ್‌ ಸೋಪುಗಳು, ೨೫ ಬಟ್ಟೆ ಸೊಪುಗಳು, ೧೦ ಪ್ಯಾರಾಚೂಟ್ ಕೊಬ್ಬರಿ ಎಣ್ಣೆಯ ಬಾಟಲಿಗಳು ಕಂಡು,  ಪಾಟೀಲರು ಅವುಗಳನ್ನೆಲ್ಲ ಜಪ್ತಿ ಮಾಡಿಕೊಂಡು ಬಂದು ಶಾಲೆಯಲ್ಲಿ ಇಟ್ಟರಂತೆ. ಕೇಶವನ ಅಪ್ಪನಿಗೆ ಚೀಟಿ ಕಳುಹಿಸಿ ಕರೆಸಿದರಂತೆ. ಅವರಪ್ಪ ಬಂದು ನಾಲ್ಕು ಲಗಾಯಿಸಿದ ಮೇಲೆ ಕೇಶವ ಅದನ್ನೆಲ್ಲ ತಾನು ತುಡುಗು ಮಾಡಿದ್ದು ಎಂದು ಒಪ್ಪಿಕೊಂಡನಂತೆ. ಅವರಪ್ಪ “ಸಾಲಿ ಕಲಿಯಲಿ ಎಂದು ನಿನ್ನನ್ನು ಇಲ್ಲಿಟ್ಟರೆ, ನೀನು ಕಳವು ಮಾಡುವುದನ್ನು ಕಲಿಯುತ್ತಿದ್ದೀಯಾ, ನೀನು ಸಾಲಿ ಕಲಿಯೋದು ಬ್ಯಾಡ” ಎಂದು ಎಳೆದು ಕೊಂಡು ಹೋದರಂತೆ. ಕೀಟಲೆ ಸ್ವಭಾವದ ಪಾಟೀಲರು, ಕೇಶವನಿಂದ ಜಪ್ತಿಯಾದ ಎಲ್ಲ ಸಾಮಾನುಗಳನ್ನು ನಮ್ಮ ಸೈನ್ಸ್ ರೂಮಿನಲ್ಲಿ ಒಂದು ಉದ್ದ ಬೆಂಚಿನ ಮೇಲೆ ಹೊಂದಿಸಿಟ್ಟು ಅದರ ಮೇಲೆ “ಕೇಶವಾಯ ಸ್ವಾಹಾ” ಎಂದು ಬೋರ್ಡ್ ಬರೆದು ಪ್ರದರ್ಶನಕ್ಕೆ ಇಟ್ಟಿದ್ದರು. ಕಳೆದುಕೊಂಡವರು ಬಂದು ತೆಗೆದುಕೊಂಡು ಹೋಗಲಿ ಎಂದು ಎಲ್ಲ ಕ್ಲಾಸ್ ಗಳಿಗೆ ನೋಟಿಸ್ ಕಳುಹಿಸಿದ್ದರು.  

ನನಗೆ ಕೇಶವನ ಕಾಂಡದ ವರದಿ ಒಪ್ಪಿಸಿದ ಪಾಟೀಲರು “ಗುರುಗಳೆ, ಈ ನಿಮ್ಮ ಪಟ್ಟ ಶಿಷ್ಯ ಕೇಶವ, ಎಲ್ಲಾದಕ್ಕಿಂತ ಹೆಚ್ಚು ಹೊತ್ತು ನಿಮ್ಮ ಮನಿಯಾಗ ಕಳಿತಿದ್ದ. ನಿಮ್ಮ ಮನಿಯಿಂದ ಏನೇನು ಕದ್ದಾನೋ ಗೊತ್ತಿಲ್ಲ. ಆದರ ಹೋದ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನಿಮಗ ಸೆಂಡಾಫ್‌ ಕಾರ್ಯಕ್ರಮದೊಳಗ ಕಾಣಿಕೆ ಕೊಟ್ಟ ಪೆನ್ನು ಸಿಕ್ಕತಿ ನೋಡರಿ” ಎಂದು ಪೆನ್ನನ್ನು ನನ್ನ ಕೈಗಿಟ್ಟರು. ನಾನು ಕಳೆದುಹೋಗಿದೆ ಎಂದುಕೊಂಡಿದ್ದ ಪೆನ್ನು ವಾಪಸ್ಸು ಕೈಗೆ ಬಂದುದಕ್ಕೆ ನಿಟ್ಟಿಸಿರು ಬಿಟ್ಟೆ. ಪಾಟೀಲ್ರು ಮುಂದುವರಿಸುತ್ತ “ಈ ಕೇಶವ ಸೂಳೆಮಗ ಯಾವ ಅಂಗಡಿಗೆ ಕನ್ನ ಹಾಕಿ ಈ ಚಾ ಪುಡಿ, ಸಾಬಾಣ ಕದ್ದಾನ ಅಂತ ಕಂಡುಹಿಡೀಬೇಕು” ಎಂದು ಹೇಳಿಕೊಂಡರು. ಅವರ ಮಾತು ಕೇಳಿದ ತಕ್ಷಣ ನನಗೆ, ೧೫ ದಿನಗಳ ಹಿಂದೆ ಶೆಟ್ಟರು ರಸ್ತೆಯಲ್ಲಿ ಆಡಿದ ಮಾತು ಝಗ್ಗನೆ ನೆನಪಾಯಿತು. ಒಬ್ಬ ಹುಡುಗನನ್ನು ಮನೆಗೆ ಓಡಿಸಿ ಉದ್ರಿ ಪುಸ್ತಕವನ್ನು ತರಿಸಿದೆ. ಅದರಲ್ಲಿ ನೋಡಿದರೆ ಶೆಟ್ಟರು ಭೇಟಿಯಾಗುವ ಎರಡು ದಿನಗಳ ಮುಂಚೆ ನಮ್ಮ ಮನೆಯ ಲೆಕ್ಕದಲ್ಲಿ ಕಣ್ಣನ್ ದೇವನ್ ಚಾಪುಡಿ, ಸಾಬೂನುಗಳು ಕಂಡವು. ಪಾಟೀಲರು “ಕೇಶವ ಶ್ಯಾಣೆ ಸೂಳೆಮಗ… ನಿಮ್ಮ ಮನೆಯ ಉದ್ರಿ ಅಂಗಡಿಯಿಂದ ಈ ಸಾಮಾನು ಕೊಂಡು, ಬೇರೆ ಅಂಗಡಿಗೆ ಮಾರಿಕೊಳ್ಳುತ್ತಿದ್ದ ಅನ್ಸತ್ತ..” ಎಂದರು. ಒಪ್ಪಿಕೊಂಡು ನಾನು, ಸಾಮಾನುಗಳನ್ನು ವಾಪಸ್ಸು ಶೆಟ್ಟರ ಅಂಗಡಿಗೆ ಕಳುಹಿಸಿ ನಮ್ಮ ಲೆಕ್ಕದಲ್ಲಿ ಜಮಾ ಹಿಡಿಯುವಂತೆ ಹೇಳಿ ಕಳುಹಿಸಿದೆ. ತನ್ನ ಮರ್ಯಾದೆಯನ್ನಷ್ಟೇ ಅಲ್ಲದೆ ನನ್ನ ಮರ್ಯಾದೆಯನ್ನು ಕಳೆದ ಕೇಶವನ ಬಗ್ಗೆ ನನಗೆ ನಿಜವಾಗಿಯೂ ಸಿಟ್ಟು ಬಂದಿತ್ತು. ಇಷ್ಟು ದಿನ ನನ್ನ ಜೊತೆ ಇದ್ದರೂ ಅವನು ಇಂತಹ ಕ್ಷುದ್ರ ಕೆಲಸ ಮಾಡುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ. ಅವನನ್ನು ಅಷ್ಟು ಪೂರ್ತಿಯಾಗಿ ನಂಬಿದ್ದಕ್ಕೆ ನನ್ನ ಮೇಲೆ ನನಗೆ ಸಿಟ್ಟು ಬಂದಿತ್ತು.

ʼಕ್ಲೆಪ್ಟೋಮೇನಿಯಾʼ ಎಂಬ ಮಾನಸಿಕ ರೋಗವಿದ್ದವರು ತುಡುಗಿನ ಚಟ ಹೊಂದಿರುತ್ತಾರೆ ಎಂಬುದು ನನಗೆ ಆಗ ಗೊತ್ತಿರಲಿಲ್ಲವಾದ್ದರಿಂದ. ಕೇಶವನ ಬಗ್ಗೆ ನನಗೆ ಯಾವುದೇ ಅನುಕಂಪ ಇರಲಿಲ್ಲ. ಇದೆಲ್ಲ ಆಗಿ ಈಗ ಇಪ್ಪತೈದು ಮೂವತ್ತು ವರ್ಷಗಳೇ ಆಗಿ ಹೋಗಿದೆ, ಕೇಶವ ನನ್ನ ನೆನಪಿನಿಂದ ಮರೆಯಾಗಿ ಹೋಗಿದ್ದ. ಅವನು ಓದು ಹ್ಯಾಗೆ ಮುಂದುವರಿಸಿದ, ಏನು ಉದ್ಯೋಗ ಶುರುಮಾಡಿದ ಏನೂ ನನಗೆ ಗೊತ್ತಿರಲಿಲ್ಲ.

———————————————-

ಮನೆಗೆ ಬಂದವನೇ ಆತುರದಿಂದ ನಾನು ಕೇಶವನ ಪುಸ್ತಕ ತೆಗೆದು ನೋಡಿದೆ. ಮೊದಲ ಪುಟದಲ್ಲಿ ಕೇಶವನ ಕೈ ಬರಹದಲ್ಲಿ “ಪೋಲಾಳ್ವ ದಂಡೇಶನ ಬಗ್ಗೆ ಆಸಕ್ತಿ ಮೂಡಿಸಿದ ವಿದ್ಯಾ ಗುರುಗಳ ಪಾದಾರವಿಂದದಲ್ಲಿ ಬಾಲಕ ಕೇಶವನ ಸಂಶೋಧನಾ ಪ್ರಬಂಧ” ಎಂದು ಬರೆದು ಸಹಿ ಇತ್ತು. ಪುಸ್ತಕ ಮುಂದೆ ತೆರೆದು ನೋಡಿದರೆ,  ʼಮೊದಲ ಮಾತುʼನಲ್ಲಿ ಕೇಶವ ತನ್ನ ಯೂನಿವರ್ಸಿಟಿ ಪ್ರೊಫೆಸರ್ಗಳಿಗೆ, ಪಿಎಚ್‌ಡಿ ಮಾರ್ಗದರ್ಶಕರಿಗೆ ಅನಂತ ಧನ್ಯವಾದಗಳನ್ನು ಅರ್ಪಿಸಿದ್ದ. ಪುಸ್ತಕವನ್ನು ಪ್ರಕಟಿಸುತ್ತಿರುವ ಸಂಸ್ಥೆಯ ನೂರಾ ಎಂಟು ಪದಾಧಿಕಾರಿಗಳಿಗೆ ಆಭಾರ ಮನ್ನಣೆ ಸಲ್ಲಿಸಿದ್ದ. ಕೊನೆಗೆ ಹೆಂಡತಿ-ಮಕ್ಕಳ ಉಪಕಾರ ಸ್ಮರಿಸಿದ್ದ. ಆದರೆ ಮುದ್ರಿತ ಪುಸ್ತಕದಲ್ಲಿ ನನ್ನ ಹೆಸರು ಎಲ್ಲಿಯೂ ಇರಲಿಲ್ಲ ! ಪಿಎಚ್‌ಡಿ ಮಾರ್ಗದರ್ಶಕರ, ಯೂನಿವರ್ಸಿಟಿ ಪ್ರೊಫೆಸರ್‌ಗಳ ಉಪಕಾರ ನೆನೆಸಿದರೆ ಇವನಿಗೆ ಪಿಎಚ್ ಡಿ ಕೊಟ್ಟಾರು, ಮತ್ತೊಂದು ಉಪಕಾರ ಮಾಡಿಯಾರು, ಹೈಸ್ಕೂಲ್‌ನಲ್ಲಿ ಕಲಿಸಿದ ಮಾಸ್ತರರನ್ನು ನೆನೆಸಿದರೆ ಅದರಿಂದ ಏನು ಬಂದೀತು ಎಂದು ಸರಿಯಾಗಿಯೇ ಲೆಕ್ಕಾಚಾರ ಹಾಕಿದ್ದಾನೆ ಚತುರ ಕೇಶವ ಎಂದು ವಿಷಾದದಿಂದ ಮುಗುಳ್ನಕ್ಕೆ. ಪರಿವಿಡಿಯನ್ನು ನೋಡಿದಾಗ ಒಂದು ಅಧ್ಯಾಯದ ಶೀರ್ಷಿಕೆ ನನ್ನ ಕಣ್ಣು ಸೆಳೆಯಿತು. “ಪೋಲಾಳ್ವ ಮತ್ತು ರಾಘವಾಂಕ: ಹೋಲಿಕೆಗಳು ಮತ್ತು ವೈರುದ್ಧ್ಯಗಳು”. ಅದನ್ನು ನೋಡಿದ ತಕ್ಷಣ ಇದೇ ತಲೆಬರಹದ ಸಂಶೋಧನಾ ಲೇಖನವನ್ನು ನಾನು ಹಿಂದೆ ಒಂದು ವಿಚಾರ ಸಂಕಿರಣದಲ್ಲಿ ಮಂಡಿಸಿದ್ದು ನೆನಪಾಯಿತು. ಹಳೆಯ ಲೇಖನವನ್ನು ನನ್ನ ಫೈಲ್‌ನಿಂದ ತೆಗೆದು ಪುಸ್ತಕದ ಅಧ್ಯಾಯಕ್ಕೆ ಹೋಲಿಸಿ ನೋಡಿದರೆ ನನ್ನ ಅನುಮಾನ ನಿಜವಾಗಿತ್ತು- ಅದು ನನ್ನ ಬರಹದ ಮಕ್ಕಿಕಾಮಕ್ಕಿ ನಕಲಾಗಿತ್ತು!! ಅದು ಹೇಗೆ ವಿಶ್ವವಿದ್ಯಾಲಯದ ಪರೀಕ್ಷಕರು, ಪ್ರೊಫೆಸ್ಸರುಗಳು ಕೃತಿಚೌರ್ಯದ ಬಗ್ಗೆ ಜಾಗೃತೆ ವಹಿಸುವುದಿಲ್ಲ ಎಂದು ಮನಸ್ಸು ಬೇಜಾರಾಯಿತು.

ಲಕ್ಷ್ಮೀಪುರದ ಸಹೋದ್ಯೋಗಿ ಪೊಲೀಸ್ ಪಾಟೀಲ್ ಮಾಸ್ತರರನ್ನು ನೆನಸಿಕೊಳ್ಳುತ್ತಾ, ʼಕೇಶವಾಯ ಸ್ವಾಹಾ” ಮಾಡಿದ ನನ್ನ ಸಂಶೋಧನಾ ಲೇಖನಕ್ಕೆ “ಕೇಶವಾರ್ಪಣಮಸ್ತು” ಬಿಟ್ಟು, ಕೇಶವನ ʼಕ್ಲೆಪ್ಟೋಮೇನಿಯಾʼಇನ್ನಾದರೂ ವಾಸಿಯಾಗಲಿ ಎಂದು ಹಾರೈಸಿದೆ.

——————————————–

ಟಿಪ್ಪಣಿ: ಹೊಯ್ಸಳರ ದಂಡನಾಯಕ ಪೋಲಾಳ್ವ ದಂಡೇಶ ʼಹರಚಾರಿತ್ರ್ಯʼ ರಚಿಸಿದ್ದು ಐತಿಹಾಸಿಕ ಸತ್ಯವಾದರೂ ಆ ಕೃತಿ ಸಿಕ್ಕಿಲ್ಲ. ಆತನ ಬಗ್ಗೆ ʼಎಪಿಗ್ರಾಫಿಯಾ ಕರ್ನಾಟಿಕಾʼದ ೧೧ನೇ ಸಂಪುಟದ ಡಿಜಿ-೨೫ ಹೆಸರಿನ ಹರಿಹರದ ದೀರ್ಘ ಶಾಸನ ವರ್ಣಿಸುತ್ತದೆ. ಈ ಕತೆಯಲ್ಲಿ  ʼಹರಚಾರಿತ್ರ್ಯʼ ಕೃತಿಯ ಪ್ರತಿ ಸಿಕ್ಕಂತೆ ಕಲ್ಪಿಸಲಾಗಿದೆ.   

***

No comments: