Sunday, March 29, 2026

ಮಿಸ್ಟರ್‌ ಇಡ್ಲಿಯ ಮನಸಿನ ಮಾತು..


(ನನ್ನ ಸೀಮಿತ ಅನುಭವದ ಪ್ರಕಾರ ಕನ್ನಡ ಓದುಗರಿಗೆ ಮುಕ್ತ-ಮಾರುಕಟ್ಟೆ ಪರ  ಚಿಂತಕರಾದ ಆಡಂ ಸ್ಮಿತ್, ಹಯಾಕ್, ಮಿಲ್ಟನ್ ಫ್ರೀಡ್ಮನ್‌ರ ವಿಚಾರಗಳು ಬಹುತೇಕ ಅಪರಿಚಿತ. ಕೆಲ ದಶಕಗಳಿಂದ ಮುಕ್ತಮಾರುಕಟ್ಟೆಯ ಸುಖ-ದುಃಖಗಳನ್ನು ಉಣ್ಣುತ್ತಿದ್ದರೂ, ಇನ್ನೂ ಬಹಳ ಜನರಿಗೆ ಮಾರ್ಕ್ಸ್-ಲೆನಿನ್‌ರದೇ ಹಳವಂಡವಿದೆ. 

ದಶಕಗಳ ಹಿಂದೆ ಆರ್ಥಿಕ ತಜ್ಞ ಲೆನಾರ್ಡ್ ರೀಡ್ 'I, pencil' ಹೆಸರಿನ ಪ್ರಬಂಧ ಬರೆದು, ಪೆನ್ಸಿಲ್‌ನ ತಯಾರಿಕೆಯ ಉದಾಹರಣೆಯೊಂದಿಗೆ ಮುಕ್ತ-ಮಾರುಕಟ್ಟೆಯ ಹಿರಿಮೆಯನ್ನು ವಿವರಿಸಿದ್ದರು( ಲಿಂಕ್‌ : https://fee.org/ebooks/i-pencil/ ). ಆ ಪ್ರಬಂಧದಿಂದ ಸ್ಪೂರ್ತಿಯಿಂದ ಬರದ ಈ ಬರಹವೂ ಇಡ್ಲಿಯ ತಯಾರಿಕೆಯ ಸರಳೀಕೃತ ಕತೆಯಿಂದ ಅದೇ ವಿಷಯವನ್ನು ಹೇಳುತ್ತದೆ. 

ʼಹರೆಯದಲ್ಲಿ ಮಾರ್ಕ್ಸವಾದಿಗಳಾಗದಿದ್ದರೆ ನಿಮಗೆ ಹೃದಯವಿಲ್ಲ, ಮಾಗಿದ ಮೇಲೆ  ಮಾರ್ಕ್ಸವಾದಿಗಳೇ ಆಗಿ ಉಳಿದಿದ್ದರೆ ನಿಮಗೆ ಮೆದುಳಿಲ್ಲʼ ಎಂಬ ಹೇಳಿಕೆಯಂತೆ, ನಾವು ಪ್ರಬುದ್ಧರಾಗಿ ವ್ಯಕ್ತಿಸ್ವಾತಂತ್ರ್ಯವನ್ನು, ವ್ಯಕ್ತಿಯ ಉನ್ನತಿಯ ಹಂಬಲವನ್ನು ಬೆಂಬಲಿಸುವ ಮುಕ್ತ-ಮಾರುಕಟ್ಟೆಯ ಆರ್ಥಿಕತೆಯನ್ನು ಒಪ್ಪಿಕೊಳ್ಳಬೇಕಿದೆ. ಹಲವು ಕುಂದುಗಳಿದ್ದರೂ, ಅವುಗಳನ್ನು ಸರಿಪಡಿಸಿಕೊಂಡು ಸಮೃದ್ಧ ಮತ್ತು ವಿವೇಕಯುತ ಜಗತ್ತಿಗೆ ಏಕೈಕ ದಾರಿಯಂದರೆ ಮುಕ್ತ-ಮಾರುಕಟ್ಟೆಯ ವ್ಯವಸ್ಥೆ.  ಅದನ್ನು ಮನದಟ್ಟು ಮಾಡಿಸಲು ಈ ಬರಹ ಒಂದು ಹೆಜ್ಜೆಯಾಗಲಿ ಎಂದು ಆಶಯ – ಗುರು ಕುಲಕರ್ಣಿ)


ನಾನು ಇಡ್ಲಿ, ನಿಮ್ಮ ತಟ್ಟೆಯಲ್ಲಿರುವ ಸರಳ, ಮೆತ್ತಗಿನ, ಬಿಳಿಯ, ದುಂಡಗಿನ ಇಡ್ಲಿ. ಬೆಂಗಳೂರಿನ ದರ್ಶನಿಯಲ್ಲಿ ನಿಮ್ಮ ತಟ್ಟೆಯಲ್ಲಿ ನನ್ನ ಸಂಗಡಿಗರಾದ ಚಟ್ನಿ ಮತ್ತು ಸಾಂಬಾರದೊಂದಿಗೆ ನಿಮ್ಮ ಹೊಟ್ಟೆ ‌ಸೇರಲು ಕಾಯತಾ ಇದ್ದೇನಿ. ಕೆಲವು ನಿಮಿಷ ಕೊಡಿ, ನನ್ನದೊಂದು ಪುರಾಣ ಹೇಳಿ, ಜೀವನ ದರ್ಶನ ತಿಳಿಸಿಬಿಡತೇನಿ..

'ಇಡ್ಲಿ ಎಂದರೆ ಸರಳ ತಿನಿಸು' ಎಂದು ಎಲ್ರೂ ಹೇಳುತ್ತಾರೆ.. ಆದರೆ, ನನ್ನ ಜೀವನಚರಿತ್ರೆಯನ್ನು ಕೇಳಿದರೆ, ನಿಮ್ಮ ತಟ್ಟೆಯವರೆಗಿನ ನನ್ನ ಪಯಣ ನಿಮಗೆ ಪವಾಡ ಎನಿಸದೇ ಇರದು.. ನನ್ನನ್ನು ನಿಮ್ಮ ತಟ್ಟೆಗೆ ತರಲು ಲಕ್ಷಾಂತರ ಜನರ ದುಡಿಮೆ, ಸಂಪನ್ಮೂಲಗಳು ಮತ್ತು ಸ್ವಯಿಚ್ಛೆಯ ಸಹಕಾರವಿದೆ. ಆದರೆ, ನಿಮಗ್ಗೊತ್ತಾ, ಈ ಜನರಲ್ಲಿ ಯಾರೂ ನಿಮಗೆ ಇಡ್ಲಿ  ಒದಗಿಸಲೇಬೇಕು ಎಂದು ದುಡಿದವರಲ್ಲ. ಆದರೂ, ಯಾವುದೇ ದಿಲ್ಲಿ ದೊಣ್ಣೆನಾಯಕನ ನಿರ್ದೇಶನವಿಲ್ಲದೆ, ಈ  ಜನರು ಒಟ್ಟಾಗಿ ನನ್ನ ಸೃಷ್ಟಿಗೆ ಕಾರಣರಾಗಿದ್ದಾರೆ. ಇದು ಒಂದು ಪವಾಡವಲ್ಲವೇ ? 


ನನ್ನ ಮೂಲ: ಮಡೆನೆಲ  

ನನ್ನ ಕತೆ ಆರಂಭವಾಗುವುದು ಒಂದು ಮಡೆನೆಲ ಅಂದರೆ ಭತ್ತದ ಗದ್ದೆಯಿಂದ. ರೈತನೊಬ್ಬ, ತನ್ನ ಗದ್ದೆಯನ್ನು ಒಕ್ಕಿ, ನಾಟಿ ಮಾಡಿ, ನೀರುಣಿಸಿ, ಭತ್ತದ  ಬೆಳೆ ತೆಗೆದ. ಅದನ್ನು ಅಕ್ಕಿಯ ಗಿರಣಿಯವನಿಗೆ ಮಾರಿದ. ಗಿರಣಿಯವನು ಭತ್ತವನ್ನು ಕುಟ್ಟಿ ಅಕ್ಕಿ ಬೇರ್ಪಡಿಸಿದ.  ಆದರೆ, ರೈತನಿಗಾಗಲೀ, ಗಿರಣಿಯವನಿಗಾಗಲೀ ಈ ನಿಮ್ಮ  ಇಡ್ಲಿಯನ್ನು ತಯಾರಿಸಲು ಬೇಕಾದ ಅಕ್ಕಿಯನ್ನು ಒದಗಿಸುವ ಕನಸು ಇರಲಿಲ್ಲ. ಅವರ ಗುರಿ ಅವರ ಹೊಟ್ಟೆಪಾಡು ನೀಗಿಸಿಕೊಳ್ಳುವುದಾಗಿತ್ತು -  ತಮ್ಮ ತಮ್ಮ ಕುಟುಂಬಕ್ಕೆ ಅಸನ-ವಸನ, ಒಳ್ಳೆಯ ಜೀವನ, ಒಳ್ಳೆಯ ಭವಿಷ್ಯ ಒದಗಿಸುವುದಾಗಿತ್ತು.  ಅದೇ ರೀತಿ ಭತ್ತಕ್ಕೆ ಬೀಜ ಒದಗಿಸಿದವನಿಗೆ, ಗೊಬ್ಬರ ತಯಾರಿಸಿದವನಿಗೆ, ಉಳುವ ಟ್ರ್ಯಾಕ್ಟರ್‌ ರೂಪಿಸಿದ ಎಂಜಿನಿಯರ್‌ಗೆ, ಇಂಧನ ಒದಗಿಸಿದ ಕಾರ್ಮಿಕನಿಗೆ—ಯಾರಿಗೂ ನಿಮ್ಮ ಇಡ್ಲಿಯ ಚಿಂತೆಯಿರಲಿಲ್ಲ. ಗಿರಣಿಯ ಯಂತ್ರ ವಿನ್ಯಾಸ ಮಾಡಿದವರಿಗೆ, ತಯಾರಿಸಿದವರಿಗೆ ನಿಮ್ಮ ಇಡ್ಲಿಯ ವಿಚಾರ ಕನಸಿನಲ್ಲಿಯೂ ಬಂದಿರಲಿಕ್ಕಿಲ್ಲ.  ಆದರೆ, ತಮ್ಮ ತಮ್ಮ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಮೂಲಕ, ಅವರೆಲ್ಲರೂ ನನ್ನ ತಯಾರಿಯ ಮುಖ್ಯ ಸಾಮಗ್ರಿ—ಅಕ್ಕಿಯನ್ನು— ಒದಗಿಸಿದರು. ಯಾವ ಕೇಂದ್ರೀಯ ಯೋಜಕನೂ ಈ ಎಲ್ಲರನ್ನು ಒಟ್ಟುಗೂಡಿಸಲಿಲ್ಲ; ಇದು ಸ್ವತಂತ್ರವಾಗಿ, ಸ್ವಯಿಚ್ಛೆಯಿಂದ, ಸ್ವಯಂಚಾಲಿತವಾಗಿ ನಡೆಯಿತು.


ಉದ್ದುದ್ದ ಮಾತನಾಡಿ, ಉದ್ದನ್ನು ʼನೆನಸʼದಿದ್ದರೆ ಹ್ಯಾಗೆ?

ನನ್ನ ತಯಾರಿಗೆ ಬೇಕಾದ ಮತ್ತೊಂದು ಪ್ರಮುಖ ಸಾಮಗ್ರಿಯಂದರೆ ಉದ್ದಿನ ಕಾಳು. ಇದು ಬೇರೆ ರೈತರಿಂದ, ಬೇರೆ ಭೂಮಿಯಿಂದ ಬರುತ್ತದೆ. ಈ ಕಾಳನ್ನು ಬೆಳೆದವನಿಗೆ, ಕಟಾವು ಮಾಡಿದವನಿಗೆ, ಸಂಸ್ಕರಿಸಿದವನಿಗೆ, ಸಾಗಿಸಿದವನಿಗೆ— ನಿಮ್ಮ ಇಡ್ಲಿಯ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಕೆಲವರಿಗೆ ಇಡ್ಲಿಯೆಂದರೆ ಏನೆಂದೇ ತಿಳಿದಿರಲಿಕ್ಕಿಲ್ಲ! ಆದರೆ, ತಮ್ಮ ಜೀವನದ ಗುರಿಗಳಿಗಾಗಿ—ಅಂದರೆ, ತಾವು ಬಯಸಿದ ವಸ್ತುಗಳನ್ನು ಅಥವಾ ಸೇವೆಗಳನ್ನು ಪಡೆಯಲು—ಅವರು ತಮ್ಮ ಕೆಲಸವನ್ನು ಮಾಡಿದರು. ಈ ಕೆಲಸಗಳು, ಯಾವ ಕೇಂದ್ರೀಯ ಆದೇಶವಿಲ್ಲದೆ, ನನ್ನ ತಯಾರಿಗೆ ಮತ್ತೊಂದು ಸಾಮಗ್ರಿಯನ್ನು ಒದಗಿಸಿದವು.


ಪಾಕಶಾಸ್ತ್ರವೆಂಬ ಕಲೆ

ಇಡ್ಲಿ ತಯಾರಿಕೆಯ ಬಹುಮುಖ್ಯ ಭಾಗ, ಅಕ್ಕಿ ಮತ್ತು ಉದ್ದನ್ನು  ನೆನಿಸಿ, ರುಬ್ಬಿ, ರಾತ್ರಿಯಿಡೀ ಹುದುಗಿ ಹುಳಿಯಾಗಲು ಬಿಡುವುದು. ಈ ಪ್ರಕ್ರಿಯೆಯಲ್ಲಿ ಈಸ್ಟ್ ಸೂಕ್ಷ್ಮಾಣುಗಳು ಹಿಟ್ಟನ್ನು  ಮೃದುವಾಗಿ, ನಯವಾಗಿ ಮಾಡುತ್ತವೆ. ಹೀಗೆ ಸಿದ್ಧವಾದ ಹಿಟ್ಟನ್ನು ಇಡ್ಲಿಯ ತಟ್ಟೆಯ ದುಂಡಾದ ಕುಳಿಗಳಲ್ಲಿ ಹಾಕಿ ಅದನ್ನು ಹಬೆಯಲ್ಲಿ ಬೇಯಿಸಿದಾಗ ನಿಮ್ಮ ಈ ಮಿಸ್ಟರ್‌ ಇಡ್ಲಿ ಹುಟ್ಟು ಪಡೆಯುತ್ತಾನೆ. ಹಿಟ್ಟನ್ನು ಹುದುಗಿಸುವ, ಹಬೆಯಲ್ಲಿ ಬೇಯಿಸುವ ಈ ಕಲೆಯ ಹಿಂದೆ ಶತಮಾನಗಳಿಂದ ಬಂದಿರುವ ಪಾಕಶಾಸ್ತ್ರದ ಜ್ಞಾನವಿದೆ. ಆದರೆ, ಈ ಜ್ಞಾನವನ್ನು ರೂಪಿಸಿದವರಿಗೆ ಇಂದು ನಿಮಗೆ ಇಡ್ಲಿ  ಒದಗಿಸಬೇಕೆಂಬ ಉದ್ದೇಶವಿರಲಿಲ್ಲ; ಅವರು ತಮ್ಮ ತಮ್ಮ ಆವಶ್ಯಕತೆಗಳಿಗಾಗಿ ಅದನ್ನು ಮಾಡಿದರು. ಯಾವ ರಾಜಾದೇಶವೂ ಈ ಪರಂಪರೆಯನ್ನು ರೂಪಿಸಲಿಲ್ಲ; ಇದು ತನ್ನಷ್ಟಕ್ಕೆ ತಾನೇ ವಿಕಸನಗೊಂಡ ಸ್ವಯಂಭೂ.


ಇಡ್ಲಿ ತಟ್ಟೆಯ ಕತೆ 

ನನ್ನನ್ನು ತಯಾರಿಸಲು ಇಡ್ಲಿ ತಟ್ಟೆ ಬೇಕು. ಈ ತಟ್ಟೆಯ ಲೋಹವನ್ನು ಗಣಿಗಾರಿಕೆಯಿಂದ ತೆಗೆದವರಿಗೆ, ಕಾರ್ಖಾನೆಯಲ್ಲಿ ರೂಪಿಸಿದವರಿಗೆ, ವಿನ್ಯಾಸಗೊಳಿಸಿದವರಿಗೆ—ಇಡ್ಲಿಯ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಅವರು ತಮ್ಮ ಕೆಲಸವನ್ನು ತಾವು ಬಯಸಿದ ವಸ್ತು ಮತ್ತು ಸೇವೆಗಳಿಗಾಗಿ ಮಾಡಿದರು. ಒಲೆಗೆ ಇಂಧನ ಒದಗಿಸಿದವರಿಗೆ—ಗ್ಯಾಸ್, ವಿದ್ಯುತ್, ಅಥವಾ ಮರವನ್ನು ಒದಗಿಸಿದವರಿಗೆ— ನಿಮ್ಮ ಇಡ್ಲಿಯ ಚಿಂತೆಯಿರಲಿಲ್ಲ. ಯಾವ ಕೇಂದ್ರೀಯ ಯೋಜಕನೂ ಈ ಕಾರ್ಮಿಕರನ್ನು ಒಟ್ಟುಗೂಡಿಸಲಿಲ್ಲ; ಆದರೆ, ತಮ್ಮ ತಮ್ಮ ಆಸಕ್ತಿಗಳಿಗಾಗಿ ಕೆಲಸ ಮಾಡುವ ಮೂಲಕ, ಅವರೆಲ್ಲರೂ ನನ್ನ ತಯಾರಿಕೆಗೆ ಕೊಡುಗೆ ನೀಡಿದರು.


ಸಾಂಬಾರು ಮತ್ತು ಚಟ್ನಿಯ ಸಂಗಾತ

ಜೊತೆ ಇರದಿದ್ದರೆ ಬಾಳು ಸಪ್ಪಗಾಗುತ್ತದೆ. ನಾನಂತೂ ಸಾಂಬಾರ್ ಮತ್ತು ಚಟ್ನಿಯ ಸಂಗವಿರದಿದ್ದರೆ ಅಕ್ಷರಶಃ ಸಪ್ಪಗಾಗುತ್ತೇನೆ. ಸಾಂಬಾರಿಗೆ ತೊಗರಿಬೇಳೆ, ತರಕಾರಿಗಳು, ಮಸಾಲೆಗಳು ಬೇಕು. ಚಟ್ನಿಗೆ ತೆಂಗಿನಕಾಯಿ, ಹಸಿಮೆಣಸಿನಕಾಯಿ, ಉಪ್ಪು ಬೇಕು. ಈ ಪದಾರ್ಥಗಳನ್ನು ಬೆಳೆದ ರೈತರಿಗೆ, ಸಾಗಿಸಿದ ವ್ಯಾಪಾರಿಗಳಿಗೆ, ಮಾರುಕಟ್ಟೆಗೆ ತಂದವರಿಗೆ—ನಿಮ್ಮ ಇಡ್ಲಿಯ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಅವರು ತಮ್ಮ ಶ್ರಮವನ್ನು ತಾವು ಬಯಸಿದ್ದನ್ನು ಪಡೆಯಲು ವಿನಿಮಯ ಮಾಡಿದರು. ಯಾವ ಕೇಂದ್ರೀಯ ಸಂಸ್ಥೆಯೂ ಈ ಪದಾರ್ಥಗಳನ್ನು ಒಟ್ಟುಗೂಡಿಸಲಿಲ್ಲ; ಆದರೆ, ಎಲ್ಲರ ಸ್ವತಂತ್ರ ಕೆಲಸಗಳ ಒಟ್ಟು ಪರಿಣಾಮ ರುಚಿಯಾದ ಸಾಂಬಾರು ಮತ್ತು ಚಟ್ನಿ .


ಎಲ್ಲ ಬಲ್ಲವರಿಲ್ಲ  

ಒಂದು ಕಾಲ್ಪನಿಕ ಸಂದರ್ಭದಲ್ಲಿ  ಜಗತ್ತಿನ ಎಲ್ಲರೂ ಅಳಿದು, ಒಬ್ಬನೇ ಮನುಷ್ಯನು ಉಳಿದನೆಂದು ಕಲ್ಪಿಸಿಕೊಳ್ಳಿ. ಅವನಿಗೆ 'ಸರಳ ತಿನಿಸಾದ' ಇಡ್ಲಿಯನ್ನು ತಯಾರಿಸಲು ಸಾಧ್ಯವಾಗುತ್ತದೆಯಾ ? ಊಹೂಂ.. ಇಲ್ಲ. ಯಾಕೆಂದರೆ ನನ್ನ ತಯಾರಿಕೆಯ ಪೂರ್ಣ ಚಿತ್ರಣ ಒಬ್ಬನಿಗೂ ಪೂರ್ತಿಯಾಗಿ ತಿಳಿದಿಲ್ಲ. ಎಲ್ಲರಿಗೂ ತಮ್ಮ ಭಾಗ ಮಾತ್ರ ಗೊತ್ತು.. ರೈತನಿಗೆ ಇಡ್ಲಿ ತಟ್ಟೆಯ ತಯಾರಿಕೆ ತಿಳಿದಿಲ್ಲ, ಗಣಿಗಾರನಿಗೆ ಸಾಂಬಾರಿನ ಮಸಾಲೆಯ ಕತೆ ಗೊತ್ತಿಲ್ಲ, ಇಂಧನ ಒದಗಿಸಿದವನಿಗೆ ಹುಳಿಯಾಗುವಿಕೆಯ ವಿಜ್ಞಾನ ತಿಳಿದಿಲ್ಲ. ಕೆಲವರಿಗೆ ಇಡ್ಲಿಯೆಂದರೆ ಏನೆಂದೇ ಗೊತ್ತಿಲ್ಲ! ಈ ಜನರು ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಾರೆ, ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ, ವಿಭಿನ್ನ ಧರ್ಮಗಳನ್ನು ಪಾಲಿಸುತ್ತಾರೆ, ಕೆಲವೊಮ್ಮೆ ಒಬ್ಬರನ್ನೊಬ್ಬರು ದ್ವೇಷಿಸುವವರೂ ಇರಬಹುದು. ಆದರೂ, ಈ ವೈರುಧ್ಯಗಳು ಅವರನ್ನು ಸಹಕರಿಸದಂತೆ ತಡೆಯಲಿಲ್ಲ. ಯಾವುದೇ ಸರಕಾರದ  ಆದೇಶವಿಲ್ಲದೇ, ಸೈನಿಕರ ಬಲತ್ಕಾರವಿಲ್ಲದೇ  ಈ ಲಕ್ಷಾಂತರ ಜನರು ತಮ್ಮ ತಮ್ಮ ಆಸಕ್ತಿಗಳಿಗಾಗಿ ಕೆಲಸ ಮಾಡುವ ಮೂಲಕ,  ನನ್ನನ್ನು ಸೃಷ್ಟಿಸಿದರು.


ಕಾಣದ ಕೈಯ ಚಮತ್ಕಾರ   

ನನ್ನ ಜೀವನಯಾತ್ರೆಯ ಸ್ಥೂಲ ವಿವರಗಳನ್ನು ಕೇಳಿದ ನಂತರ ನಿಮಗೆ ಒಂದು ವಿಷಯ ಸ್ಪಷ್ಟವಾಗಿರುತ್ತದೆ - ತಮ್ಮ ಸ್ವಂತ ಆಸಕ್ತಿಗಳಿಗಾಗಿ ಕೆಲಸ ಮಾಡುವ ಜನರು, ತಾವು ಉದ್ದೇಶಿಸದೆಯೇ, ಸಮಾಜದ ಒಟ್ಟಾರೆ ಒಳಿತಿಗೆ ಕೊಡುಗೆ ನೀಡುತ್ತಾರೆ. ಇದನ್ನು ಆಧುನಿಕ ಅರ್ಥಶಾಸ್ತ್ರದ ಪಿತಾಮಹ  ಆಡಮ್ ಸ್ಮಿತ್ "ಕಾಣದ ಕೈಯ ಚಮತ್ಕಾರ" ಎಂದು ಕರೆದಿದ್ದರು. ನಾನು ಇಡ್ಲಿಯಾಗಿ ನಿಮ್ಮ ತಟ್ಟೆಗೆ ಬಂದಾಗ, ನೀವು ನಿಮ್ಮ ಶ್ರಮದ ಒಂದು ಸಣ್ಣ ಭಾಗವನ್ನು ವಿನಿಮಯ ಮಾಡಿಕೊಂಡು, ಈ ಲಕ್ಷಾಂತರ ಜನರ ಶ್ರಮದ ಒಂದು ಚಿಕ್ಕ ಭಾಗವನ್ನು ಪಡೆಯುತ್ತೀರಿ. ಈ ವಿನಿಮಯವೇ ನನ್ನ ಸೃಷ್ಟಿಯನ್ನು ಸಾಧ್ಯವಾಗಿಸಿದೆ.


ಯಾವುದೇ ಕೇಂದ್ರೀಯ ಯೋಜನೆಯಿಲ್ಲದೆ, ಯಾವ ಒಬ್ಬರೂ ಸಂಪೂರ್ಣವಾಗಿ ತಿಳಿಯದೆ, ಹಲವರು ತಮ್ಮ ತಮ್ಮ ಆಸಕ್ತಿಗಳಿಗಾಗಿ ಕೆಲಸ ಮಾಡುವ ಮೂಲಕ, ಸಾಧ್ಯವಾಗಿರುವ ನನ್ನ ತಯಾರಿಕೆ ಮಾನವ ಸಹಕಾರದ, ಶ್ರಮದ, ಮತ್ತು ಸ್ವಾತಂತ್ರ್ಯದ ಒಂದು ಯಶೋಗಾಥೆ.

ನನ್ನ ರುಚಿಯನ್ನು ಸವಿಯುವಾಗ, ನನಗಿಂತ ಹೆಚ್ಚು ಸಂಕೀರ್ಣವಾಗಿರುವ ವಿಷಯಗಳೂ ಆಡಮ್ ಸ್ಮಿತ್‌ ಹೇಳಿದಂತೆ "ಕಾಣದ ಕೈಯ ಚಮತ್ಕಾರ"ದ ಫಲವಾಗಿ ದೊರಕುತ್ತಿರುವುದನ್ನು ನೆನೆಸಿಕೊಳ್ಳಿ .  ಕಾಣದ ಕೈಯ ಚಮತ್ಕಾರವನ್ನು ಸಾಧ್ಯವಾಗಿಸುವಂತ ಮನುಷ್ಯನ ದುಡಿತ-ಗಳಿಕೆಯ ತುಡಿತವನ್ನು, ಸೃಜನಶೀಲತೆಯನ್ನು, ಸ್ವಯಿಚ್ಛೆಯ ಸಹಕಾರವನ್ನು ತಡೆಯುವ ಯಾವುದೇ ಗೋಡೆಗಳು ಇರದಿರಲಿ ಎಂದು ನನ್ನ ಪ್ರಾರ್ಥನೆ.

ಸರ್ವೇಜನ ಸುಖಿನೋ ಭವಂತು!


ಇಂತಿ ನಿಮ್ಮ,

ಮಿಸ್ಟರ್‌ ಇಡ್ಲಿ.

No comments: