Saturday, October 2, 2010

ಜೋಳದ ಜೋಳವಾಳಿಯ ಪತ್ರ

ಮಾನ್ಯರೇ,     ಮೊನ್ನೆಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ವೈಶಾಲಿ ಕಾಸರವಳ್ಳಿಯವರ ನಿಧನರಾದಾಗ ಪ್ರಕಟವಾದ ಸುದ್ದಿಯಲ್ಲಿ ಒಂದು ಅಂಶ ಜೋಳದ ಬಗೆಗೆ ತಪ್ಪು ಮಾಹಿತಿ/ತಪ್ಪು ತಿಳುವಳಿಕೆ ಕೊಡುವಂತಹದಾಗಿತ್ತು:



’ಜೋಳ ಸಕ್ಕರೆ ಕಾಯಿಲೆಯವರಿಗೆ ಒಳ್ಳೆಯದಲ್ಲ’ ಎಂದು ವೈಶಾಲಿಯವರಿಗೆ ತಪ್ಪು ಕಲ್ಪನೆ ಇದ್ದಿತೋ, ಅಥವಾ ಈ ಲೇಖನ ಬರೆದ ವರದಿಗಾರರಿಗೆ ತಪ್ಪು ಮಾಹಿತಿ ಸಿಕ್ಕಿತೋ, ಗೊತ್ತಿಲ್ಲ*. ಆದರೆ ಸಾಮಾನ್ಯವಾಗಿ ಸಕ್ಕರೆ ಕಾಯಿಲೆಯವರಿಗೆ ಜೋಳದ ರೊಟ್ಟಿ ಬಹಳ ಒಳ್ಳೆಯದು. ಕಾಯಿಲೆ ಇಲ್ಲದವರಿಗೆ ಇನ್ನೂ ಒಳ್ಳೆಯದು.

ನಮ್ಮ ಸರಕಾರಗಳ ತಪ್ಪು ಕೃಷಿ-ಆಹಾರ ನೀತಿಗಳಿಂದ ಜೋಳದಂತಹ ಕಿರುಧಾನ್ಯಗಳು ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿವೆ, ನಮ್ಮ ಆಹಾರ ಪದ್ಧತಿಗಳಲ್ಲಿನ ವೈವಿಧ್ಯತೆ ಮಾಯವಾಗುತ್ತಿದೆ, ನಮ್ಮ ಬೆಳೆಗಳಲ್ಲಿ ಕಿರುಧಾನ್ಯಗಳು ಮಾಯವಾಗಿ ಜೈವಿಕ ವೈವಿಧ್ಯ ಕಾಣೆಯಾಗುತ್ತಿದೆ. ವಿಜಯಕರ್ನಾಟಕದಂತಹ ಪತ್ರಿಕೆಗಳಲ್ಲಿ ಅಚಾತುರ್ಯದಿಂದ ಇಂತಹ ಸಂಗತಿಗಳು ಪ್ರಕಟವಾದರೆ, ಕಿರುಧಾನ್ಯಗಳ ಜನಪ್ರಿಯತೆಗೆ, ಸಣ್ಣದಾದರೂ, ಮತ್ತೂ ಹೊಡೆತಬೀಳುತ್ತದೆ. ಆದ್ದರಿಂದ ಇಂತಹ ವಿಷಯಗಳಲ್ಲಿ ಒಂಚೂರು ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕೆಂದು ಪ್ರಾರ್ಥನೆ.

ಅಂದಹಾಗೆ, ಈ ಬರಹದಲ್ಲಿ ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವುದು ಕಷ್ಟ ಎಂಬಂತೆ ಚಿತ್ರಿತವಾಗಿದೆ. ದಶಕಗಳ ಹಿಂದೆ ಅಂತಹ ಪರಿಸ್ಥಿತಿ ಇದ್ದದ್ದು ನಿಜ, ಆದರೆ ಈಗಿಲ್ಲ. ಕೆಲ ದಿನಗಳ ಹಿಂದೆ ನಾನು ಬೆಂಗಳೂರಿನ ರೊಟ್ಟಿ ಅಂಗಡಿ ಕಿಟ್ಟಪ್ಪಗಳ ಪಟ್ಟಿ ಮಾಡಿದ ಇಲ್ಲಿದೆ. ನನ್ನ ನಂಬಿಕೆಯ ಪ್ರಕಾರ ಈಗ ಈ ಪಟ್ಟಿ ಇನ್ನೂ ದೊಡ್ಡದಾಗಿದೆ.

ತಮ್ಮ ವಿಶ್ವಾಸಿ,
ಗುರು

 * ಕೆಲ ಬಗೆಯ ಮಧುಮೇಹ ಕಾಯಿಲೆ ಇದ್ದವರಿಗೆ  ಜೋಳ ವರ್ಜವೇ ? ನನಗೆ ಗೊತ್ತಿಲ್ಲ.
+ ಜೋಳವಾಳಿ = ಸೇವಕ.

No comments: