ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು
ಬುದ್ಧಿಯ ಕಲಿಸಿದರೆ -ಆಗಲಿ ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು
ಬುದ್ಧಿಯ ಕಲಿಸಿದರೆ -ಆಗಲಿ ಮಹಾಪ್ರಸಾದವೆಂದೆನಯ್ಯಾ
ದ್ವಾಪರಯುಗದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ
ಬುದ್ಧಿಯ ಕಲಿಸಿದರೆ -ಆಗಲಿ ಮಹಾಪ್ರಸಾದವೆಂದೆನಯ್ಯಾ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ
ಬುದ್ಧಿಯ ಕಲಿಸಿದರೆ -ಆಗಲಿ ಮಹಾಪ್ರಸಾದವೆಂದೆನಯ್ಯಾ
ಅಲ್ಲಮನ ಈ ವಚನವನ್ನೋದಿ ನನಗೆ ಕೊಂಚ ಅನುಮಾನ ಬಂದಿತ್ತು - ನಾವು ಶಾಲೆ ಕಲಿತದ್ದು ಯಾವಾಗ ? ಕೃತಯುಗದಲ್ಲಿಯೋ, ಇಲ್ಲವೇ ತ್ರೇತಾಯುಗದಲ್ಲಿಯೋ ಅಥವಾ ದ್ವಾಪರದಲ್ಲಿಯೋ ? ಕಲಿಯುಗವಂತೂ ಇರಲಿಕ್ಕಿಲ್ಲ - ನಮ್ಮ ಗುರುಗಳು ನಮಗೆ ಬಡಿಯುತ್ತಿದ್ದರು, ಬಯ್ಯುತ್ತಿದ್ದರು ಮತ್ತು ಝಂಕಿಸುತ್ತಿದ್ದರೂ ಕೂಡ. ’ಇತಿಹಾಸ ಮರುಕಳಿಸುತ್ತದೆ’ ಎಂಬ ಮಾತಿನಂತೆ ಬಹುಶಃ ನಮ್ಮ ಶಾಲಾದಿನಗಳಲ್ಲಿ ಕೃತಯುಗ, ತ್ರೇತಾಯುಗ ಮತ್ತು ದ್ವಾಪರಗಳ ಕಾಕ್‌ಟೇಲ್ ಯುಗವೊಂದು ಜಾರಿಯಲ್ಲಿತ್ತು ಅನಿಸುತ್ತೆ.
ಹೌದು, ನಮ್ಮ ಶಾಲಾದಿನಗಳೇ ಹಾಗಿದ್ದವು. ಶಿಕ್ಷಕರು ’ಊದುವ ಶಂಖ ಊದಿದರೆ ಆಯ್ತು’ ಎಂದುಕೊಳ್ಳದೇ ಹೊಡದು-ಬಡದಾದರೂ ತಾವು ಹೇಳುತ್ತಿದ್ದ ಪಾಠ ಮಕ್ಕಳ ಮೆದುಳಿಗೆ ಹೋಗಲೇಬೇಕೆಂದು ಹೆಣಗಾಡುತ್ತಿದ್ದರು. ಆ ದಿನಗಳಲ್ಲಿ ಪಾಲಕರೂ ಕೂಡ ಶಿಕ್ಷಕರಿಗೆ ಬಡದು ವಿದ್ಯಾ ಕಲಸರಿಎಂದೇ ಬಜಾಯಿಸುತ್ತಿದ್ದರು. ಮಾಸ್ತರ ಬಾಳ ಬಡಿತಾನ ಅನ್ನುವುದು ಆ ಕಾಲದಲ್ಲಿ ಕಂಪ್ಲೇಂಟ್ ಆಗಿರದೇ ಆ ಶಿಕ್ಷಕರಿಗೆ ಕೊಡುವ ಕಾಂಪ್ಲೀಮೆಂಟ್ ಆಗಿತ್ತು. ಹುಡುಗರನ್ನು ಹೊಡೆಯುವ ಶಿಕ್ಷಕರಿಗೆ ಹುಡುಗರೂ ಹೆದರುತ್ತಿದ್ದರಿಂದ ಶಿಕ್ಷಕವಲಯದಲ್ಲಿ ಅವರಿಗೊಂದು ಹೆಚ್ಚುಗಾರಿಕೆಯೂ ಇರುತ್ತಿತ್ತು. ಬಡದು ಕಲಿಸಿದ ವಿದ್ಯೆ, ದುಡಿದು ಕೂಡಿಸಿದ ದುಡ್ಡು ಕಡಿತನಕ ಉಪಯೋಗ ಬರ್ತಾವು ಎಂದೇ ಎಲ್ಲರೂ ನಂಬಿದ್ದರು. ಛಡಿ ಛಮ್-ಛಮ್ ವಿದ್ಯಾ ಘಂ ಘಂ! ಎನ್ನುವುದು ಆ ಕಾಲದ ಪ್ರಶ್ನಾತೀತ ತತ್ವವಾಗಿತ್ತು.
ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಪ್ರತಿ ಕ್ಲಾಸಿನಲ್ಲಿ ಒಂದು ರೂಲ್‌ಕಟ್ಟಿಗೆ ಇರುತ್ತಿತ್ತು. ಮೊದಲೆಲ್ಲಾ ಅದನ್ನು ರೂಲು ಹೊಡೆಯಲು ಉಪಯೋಗಿಸಲಾಗುತ್ತಿಂತೆ. ನಾವು ಶಾಲೆಗೆ ಬರುವ ಹೊತ್ತಿಗೆ ಪ್ಲಾಸ್ಟಿಕ್ ಇಂಚು ಪಟ್ಟಿ, ಫೂಟ್‌ಪಟ್ಟಿಗಳು ಬಂದಿದ್ದವು. ಹೀಗಾಗಿ ರೂಲ್‌ಕಟ್ಟಿಗೆ ನಿರುದ್ಯೋಗಿಯಾಗಿತ್ತು. ದಶಕಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ ಅದನ್ನು ನಿರುದ್ಯೋಗಿಯಾಗಿ ಇರಲು ಬಿಡುವುದುಂಟೇ ? ಹೀಗಾಗಿ ನಾವು ಹುಡುಗರು ಪಕ್ಕದವನೊಂದಿಗೆ ಮಾತನಾಡಿದರೆ, ಮೂಗಿನಲ್ಲಿ ಬೆರಳು ಹಾಕಿದರೆ, ಅಂಡು ತುರಿಸಿಕೊಂಡರೆ, ಹದಿನೇಳ ಏಳಲೇ ಎಷ್ಟು ಎಂದು ಪಟ್ಟನೇ ಹೇಳದಿದ್ದರೆ ಹೀಗೆ ಯಾವುದೇ ತಪ್ಪು ಮಾಡಿದರೂ ರೂಲ್‌ಕಟ್ಟಿಗೆ ಕೈಗೆ ಕಜ್ಜಾಯಕೊಡುತ್ತಿತ್ತು. ನಪೂಂಸಕಲಿಂಗವೆಂದು ನಾವು ಬಗೆದಿದ್ದ ರೂಲ್‌ಕಟ್ಟಿಗೆ ಹುಡುಗಿಯರ ಕೈಯಿಗೆ ನಿಧಾನಕ್ಕೆ ಮುತ್ತಿಟ್ಟು, ಹುಡುಗರ ಕೈಯಿಗೆ ’ರಪ್ಪ್’ ಎಂದು ಅಪ್ಪಳಿಸುತ್ತಿದ್ದ ಮರ್ಮ ಏನಿತ್ತೋ ಏನೋ..
ಈ ರೂಲುಕಟ್ಟಿಗೆಗಳ ಇನ್ನೊಂದು ಉಪಯೋಗ ರಿಲೇ ಓಡುವಾಗ ಬ್ಯಾಟನ್ನಾಗಿಯೂ ಇತ್ತು. ಪಂದ್ಯಾಟಗಳು ಬಂದಾಗ ರಿಲೇ ಓಟದ ತಯಾರಿಮಾಡಲು ನಾಲ್ಕು ಕ್ಲಾಸ್‌ರೂಮಿಗಳಲ್ಲಿನ ರೂಲುಕಟ್ಟಿಗೆಗಳನ್ನು ನಮ್ಮ ಪೀಟಿ ಮಾಸ್ತರರು ತರಿಸಿ ಪ್ರ್ಯಾಕ್ಟೀಸು ಮಾಡಿಸುತ್ತಿದ್ದರು. ಹೀಗಾಗಿ ಹುಡುಗರು ರೂಲುಕಟ್ಟಿಗೆ ಎಂಬ ಬ್ಯಾಟನ್ ಹಿಡಿದು ಓಡುತ್ತಿರುವುದು ನಮಗೆ ಸಾಮಾನ್ಯ ದೃಶ್ಯವಾಗಿತ್ತು. ಆದರೆ ನಮ್ಮ ಗಣೀತ ಮಾಸ್ತರರು ಹೀಗೆ ಓಡುವುದನ್ನು ನೋಡುವ ಭಾಗ್ಯವೂ ಒಮ್ಮೆ ನಮಗೆ ಸಿಕ್ಕಿತ್ತು.
ಅದಾಗಿದ್ದು ಹೀಗೆ : ಎಂದಿನಂತೆ ನಮ್ಮ ಗಣಿತ ಮಾಸ್ತರರು ಮನೆಯಲ್ಲಿ ಮಾಡಿಕೊಂಡು ಬರಲು ಕೊಟ್ಟಿದ್ದ ಲೆಕ್ಕಗಳ ಲೆಕ್ಕ ಕೇಳ್ತಾ ಇದ್ದರು. ’ಯಾರ‍್ಯಾರು ಹೋಂವರ್ಕ್ ಮಾಡಿಲ್ಲ ಎದ್ ನಿಲ್ರಿ’ ಎಂಬ ಗುರುನುಡಿಗೆ ಯಾರೂ ಎದ್ದು ನಿಂತಿರಲಿಲ್ಲ. ಮಾಸ್ತರರ ಪ್ರಸಾದಕ್ಕೆ ಕಾಯಂ ಗಿರಾಕಿಗಳಾದ ಈರ-ಸಿದ್ದ-ಮಲ್ಲರೆಲ್ಲ ಯಾರೋ ಮಾಡಿದ ಲೆಕ್ಕದ ಕಾಪಿ ಮಾಡಿಕೊಂಡು ಬಂದಿದ್ದರು ಅನಿಸುತ್ತೆ. ಹೀಗಾಗಿ ನಮ್ಮ ಗುರುಗಳಿಗೆ ಎಂದಿನಂತೆ ಭೂತೋಚ್ಚಾಟನೆಗೆ ಅವಕಾಶ ಸಿಗದಿದ್ದರಿಂದ, ಕೈಯಲ್ಲಿ ತಮ್ಮ ಬ್ರಹ್ಮದಂಡವಾದ ರೂಲುಕಟ್ಟಿಗೆಯನ್ನು ಹಿಡಿದೇ ನಮ್ಮ ಜಾಗಗಳಿಗೆ ಬಂದು ಹೋಂವರ್ಕ್ ಮಾಡಿದ ಲೆಕ್ಕಗಳನ್ನು ನೋಡಲು ಶುರುಮಾಡಿದರು. ಒಬ್ಬಳು ಹುಡುಗಿ ಅವತ್ತು ಹೋಂವರ್ಕು ಮಾಡಿಕೊಂಡು ಬಂದಿರಲಿಲ್ಲ, ಆದರೆ ಗಣೀತ ಶಿಕ್ಷಕರೇನು ಬಂದು ಪ್ರತಿಯೊಬ್ಬರ ನೋಟ್‌ಬುಕ್ಕು ನೋಡುವುದಿಲ್ಲ ಎಂಬ ಭಂಡ ಧೈರ್ಯದಿಂದ ಹಾಗೆ ಕುಳಿತೇ ಇದ್ದಳು. ಆದರೆ ದುರ್ದೈವವಶಾತ್ ಅವಳ ಎಣಿಕೆ ತಪ್ಪಾಗಿಬಿಟ್ಟಿತ್ತು. ಇನ್ನೇನು ಗುರುಗಳು ಅವಳ ಹತ್ತಿರ ಬರಬೇಕು ಎನ್ನುವಷ್ಟರಲ್ಲಿ ಅವಳು ತನ್ನ ಪಾಟೀಚೀಲವನ್ನು ಬಿಟ್ಟು ಕ್ಲಾಸಿನಿಂದ ಕಾಲ್ಕಿತ್ತಳು. ಒಂದು ಕ್ಷಣ ಏನಾಗುತ್ತಿದೆ ಎಂದು ನಮ್ಮ ಗುರುಗಳು ದಿಗ್ಭ್ರಾಂತರಾದರೂ, ಮುಂದಿನ ಕ್ಷಣವೇ ಸುಧಾರಿಸಿಕೊಂಡು ತಾವೂ ಆ ಹುಡುಗಿಯ ಬೆನ್ನು ಹತ್ತಿ ಓಡತೊಡಗಿದರು. ಅವರು ಬೆನ್ನತ್ತಿ ಬರುತ್ತಾರೆಂದು ನಿರೀಕ್ಷಿಸದ ಹುಡುಗಿ, ಅವರನ್ನು ನೋಡಿ ಇನ್ನೂ ಜೋರಾಗಿ ಓಡುತ್ತ ಶಾಲೆಯ ಎದುರುಗಡೆ ಇದ್ದ ಈಶ್ವರ ದೇವರ ಗುಡಿಯ ಪ್ರಾಂಗಣ ಸೇರಿಕೊಂಡಿತು. ಅಲ್ಲಿಯೂ ಗುರುಗಳು ಬೆನ್ನತ್ತಿ ಬಂದಿದ್ದರಿಂದ ದೇವರಿಗೆ ಒಂದು ಪ್ರದಕ್ಷಿಣೆ ಹಾಕಿ, ಹಿಂತಿರುಗಿ ನೋಡಿದರೆ ಹಲ್ಲು ಕಡಿಯುತ್ತಾ, ಬ್ರಹ್ಮದಂಡ ಹಿಡಿದ ಗುರುಗಳು ಹಿಂದೆಯೇ ಬರುತ್ತಿದ್ದಾರೆ.. ಅಕಟಕಟಾ.. ಹರ ಮುನಿದರೆ ಗುರು ಕಾಯ್ವನ್, ಗುರು ಮುನಿದರೆ ಕಾಯುವರಾರ್? ಎಂದು ಕೊಳ್ಳುತ್ತಾ ಹುಡುಗಿ ಇನ್ನೊಂದು ರೌಂಡ್ ಓಡಿತು. ಗುರುಗಳು ಹಸಿದ ಹುಲಿ ಹರಿಣವನ್ನು ಹಿಂಬಾಲಿಸುವಂತೆ ಹಿಂಬಾಲಿಸುತ್ತಲೇ ಇದ್ದರು.. ಹೀಗಾಗಿ ಹುಡುಗಿ ಮೂರನೇ ಸುತ್ತೂ ಓಡಿತು..ಮುಂದೆ ಮುಂದೆ ಚಿಗರಿಯಂತೆ ಜಿಗಿಜಿಗಿದು ಓಡುತ್ತಿದ್ದ ಭಯವಿಹ್ವಲೆ ಬಾಲೆ, ಹಿಂದೆ ಹಿಂದೆ ಓಡುತ್ತಿದ್ದ ದಂಡಧಾರಿ ಗುರುವರೇಣ್ಯರು ! ಈ ಅದ್ಭುತ ನೋಟವನ್ನು ಸವಿಯುವ ಭಾಗ್ಯ ಯಾರಿಗುಂಟು ಯಾರಿಗಿಲ್ಲಾ ! ಈ ಅದ್ಭುತ ದೃಶ್ಯವನ್ನು ನೋಡಿದ ನಮ್ಮ ಬಾಯಲ್ಲಿ ನಗೆಕಾರಂಜಿ ಚಿಮ್ಮಲು ಕಾತರಿಸಿ ಕುಳಿತಿತ್ತಾದರೂ, ಗುರುಗಳಿಗಂಜಿ ನಾವು ತುಟಿ ಹೊಲಿದುಕೊಂಡು ಕುಳಿತಿದ್ದೆವು. ಮೂರು ಸುತ್ತುಗಳ ಕೊನೆಗೆ ತಮ್ಮ ಹೊಟ್ಟೆಯನ್ನು ಹೊತ್ತುಕೊಂಡು ಓಡಿದ್ದರಿಂದ ಗುರುಗಳಿಗೆ ತೇಕು ಹತ್ತಿತು. ಏದುಸಿರು ಬಿಡುತ್ತ ನಿಂತ ಅವರು ಬೋಳಿ ನಾಳೆ ನಿನ್ನ ವಿಚಾರಿಸಿಕೊಳ್ತೇನಿ ಎಂದು ಅಂದಿನ ಮ್ಯಾರಾಥಾನ್ ಓಟಕ್ಕೆ ಪೂರ್ಣವಿರಾಮವಿಟ್ಟಿದ್ದರು !
ನಮ್ಮ ಇನ್ನುಳಿದ ಕೆಲ ಗುರುಗಳಿಗೆ ರೂಲ್‌ಕಟ್ಟಿಗೆಯನ್ನು ಶಿಕ್ಷೆಗಾಗಿ ಉಪಯೋಗಿಸುವುದರ ಬಗ್ಗೆ ಸದಭಿಪ್ರಾಯವಿರಲಿಲ್ಲ. ಕೊಡುವ ಪ್ರಸಾದವನ್ನು ಕೈಯಿಂದ ಕೊಟ್ಟರೆನೇ ಶ್ರೇಯಸ್ಕರ ಎಂಬುದು ಅವರ ಅಂಬೋಣವಾಗಿತ್ತು. ಬರೀಗೈಯಿಂದಲೇ
ಬೆನ್ನ ಮೇಲೆ ’ಗುರುಪ್ರಸಾದ’ ಕೊಡುವುದು ಅವರ ಮೆಚ್ಚಿನ ಶಿಕ್ಷಾ ವಿಧಾನ. ಅದರಲ್ಲಿ ನಮ್ಮ ಈ ಗುರುವೃಂದ ಎಂತಹ ಪ್ರಾವಿಣ್ಯ ಸಾಧಿಸಿತ್ತೆಂದರೆ, ಅವರು ಮನಸ್ಸು ಮಾಡಿದ್ದರೆ ಅದಕ್ಕೆ ಐಎಸ್‌ಓ ಸರ್ಟಿಫಿಕೇಟ್ ಕೂಡ ಪಡೆಯಬಹುದಾಗಿತ್ತು! ಈ ವಿಧಾನದಲ್ಲಿ ಮೊದಲು ಗುರುವರ್ಯರು ಮೊದಲು ತಮ್ಮ ಗುರಿಯನ್ನು - ಅಂದರೆ ಮೇಲೆ ಹೇಳಿದ ಛಪ್ಪನ್ನೈವತ್ತಾರು ಅಪರಾಧಗಳಲ್ಲಿ ಒಂದನ್ನು ಮಾಡುತ್ತಿರುವ ವಿದ್ಯಾರ್ಥಿಯನ್ನು - ಗುರುತಿಸಿಕೊಳ್ಳುತ್ತಿದ್ದರು. ನಂತರ ವಿದ್ಯಾರ್ಥಿ ಸಮುದ್ರದ ನಡುವೆ ಈಸುತ್ತಾ ತಮ್ಮ ಗುರಿಯ ಹತ್ತಿರ ಸಾಗುತ್ತಿದ್ದರು. ಆ ಕ್ಷಣಗಳು ವಿದ್ಯಾರ್ಥಿಗಣದಲ್ಲಿ ಸಾಕಷ್ಟು ಆತಂಕ/ಕುತೂಹಲ ಉಂಟುಮಾಡುತ್ತಿದ್ದವು. ಗುರುವರ್ಯರ ಲೈನ್ ಆಫ್ ಸೈಟ್‌ನಲ್ಲಿದ್ದವರು ಪಾಪದ ಕೊಡ ತುಂಬಿದ್ದು ತಮ್ಮದೇ ಇರಬಹುದಾ ಎಂದು ಆತಂಕಗೊಂಡಿದ್ದರೆ, ಉಳಿದವರು ಈ ಕ್ಷಣದ ಪಾಪಿ ಯಾರು ಎಂದು ಕುತೂಹಲಗೊಂಡಿರುತ್ತಿದ್ದರು. ಗುರುವರ್ಯರು ತಮ್ಮ ಗುರಿಯನ್ನು ತಲುಪಿ, ಅಪರಾಧಿಯ ಕತ್ತಿನ ಹಿಂಭಾಗದ ಮೇಲೆ ಎಡಗೈಯ ಅರ್ಧಚಂದ್ರವನ್ನು ಒತ್ತಿ ಬೆನ್ನನ್ನು ಸರಿಯಾಗಿ ನಲವತ್ತೈದು ಡಿಗ್ರಿಗೆ ಬಗ್ಗಿಸಿ, ಬಲಗೈಯನ್ನು ಮೇಲೆತ್ತಿ ’ಧಂ’ ಎಂದು ಲಗಾಯಿಸುತ್ತಿದ್ದರು. ಆ ’ಧಂ’ ಅಷ್ಟ ದಿಕ್ಕುಗಳಿಗೆ ಪಸರಿಸಿ - ಪ್ರತಿಧ್ವನಿಸಿ ಶಾಂತವಾಗಲೂ ಕ್ಷಣಗಳೇ ಬೇಕಾಗುತ್ತಿದ್ದವು !
ನಮ್ಮ ಈ ಗುರುವೃಂದದ ನ್ಯಾಯದಾನ ಪದ್ಧತಿಯೂ ಉಲ್ಲೇಖಾರ್ಹವಾಗಿತ್ತು. ಅವರ ಹತ್ತಿರ ಯಾವುದೇ ಫಿರ್ಯಾದಿ ಹೋದರೂ ಅದಕ್ಕೆ ಒಂದೇ ನ್ಯಾಯ ಕೊಡುವುದು ಅವರ ವೈಶಿಷ್ಟ್ಯ. ಯಾವುನಾದರೂ ಸರ ಇವಾ ನನ್ನ ಪೇಣೇ ತೊಗೊಂಡಾನ ರೀ ಅಥವಾ ಮತ್ತಿನ್ಯಾವಳಾದರೂ ಸರ ಆಕಿ ನನ್ ಕೂದ್ಲಾ ಜಗ್ಗತಾಳ ರೀ ಎಂದು ತಕರಾರು ತೆಗೆದುಕೊಂಡು ಹೋದರೆ ನಮ್ಮ ಗುರುಗಳು ಫಿರ್ಯಾದುದಾರ-ಆಪಾದಿತ ಇಬ್ಬರನ್ನೂ ತಮ್ಮ ಹತ್ತಿರ ಕರೆಸಿಕೊಂಡು ಇಬ್ಬರಿಗೂ ತಮ್ಮ ಪೇಟೇಂಟ್ ಯೋಗ್ಯ ವಿಧಾನದಲ್ಲಿ ಚಂಡು ಬಗ್ಗಿಸಿ, ಬೆನ್ನ ಮೇಲೆ ’ಧಂಧಂ’ ಪ್ರಸಾದಕೊಟ್ಟು 'ಹೋಗಿ ಮು.. ಮುಚ್ಚಿಕೊಂಡು ಕುಂದರ್ರಿ' ಎಂಬ ಉಪದೇಶವನ್ನು ದಯಪಾಲಿಸುತ್ತಿದ್ದರು.
’ಬೋರ್ಡ್ ಮೇಲೆ ತಪ್ಪು ಲೆಕ್ಕ ಮಾಡಿದರೆ, ಅದನ್ನು ಮೂಗಿನಿಂದ ಒರೆಸುವ’, ತಪ್ಪು ಮಾಡಿದವರನ್ನು ಗೋಡೆಗೆ ಕುರ್ಚಿ ಕೂಡಿಸುವ, ಇಲ್ಲವೇ ಬಗ್ಗಿ ಕಿವಿ ಹಿಡಿದುಕೊಳ್ಳುವ ಶಿಕ್ಷೆಗಳು ನಮ್ಮ ಪ್ರಾಥಮಿಕ ಶಾಲೆಯಲ್ಲಿ ಇದ್ದವಾದರೂ ಅವು ಅಪರೂಪ, ’ಬೆನ್ನ ಮೇಲೆ ಧಂ’ ಮತ್ತು ’ರೂಲುಕಟ್ಟಿಗೆಯ ಪ್ರಸಾದ’ಗಳೇ ಜನಪ್ರಿಯ. ಪ್ರಾಥಮಿಕ ಶಿಕ್ಷಣ ಮುಗಿದ ಮೇಲೆ ನಾನು ಓದಿದ್ದು ಒಂದು ವಸತಿ ಶಾಲೆಯಲ್ಲಿ. ಇಲ್ಲಿನ ಶಿಕ್ಷೆಗಳಲ್ಲಿ ಹೊಡಿ-ಬಡಿ ಎಂಬ ಪ್ರಾಗೈತಿಹಾಸಿಕ ವಿಧಾನಗಳು ಕಡಿಮೆ ಇದ್ದರೂ , ಅವುಗಳನ್ನು ಅನುಭಸಿದವರ ಮನಸಿಗೆ ಮುಟ್ಟಿ-ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತಿದ್ದವು.
ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲರ ಹೆಗ್ಗುರುತು ’ಕಂಡಲ್ಲಿ ಸ್ಟ್ಯಾಂಡಿಂಗ್’ ಶಿಕ್ಷೆ. ಯಾರಾದರೂ ಏನಾದರೂ ತಪ್ಪು ಮಾಡಿ ಕೈಗೆ ಸಿಕ್ಕಿ ಹಾಕಿಕೊಂಡರೆ, ಪ್ರಿನ್ಸಿಪಾಲರು ಅವರನ್ನು ಕ್ಷಮಿಸುವವರೆಗೆ ಅಲ್ಲಿಯೇ ನಿಂತುಕೊಳ್ಳ ಬೇಕಿತ್ತು. ಊಟ ಮಾಡಿ ತಟ್ಟೆ ತೊಳೆಯಲು ಹೋಗುತ್ತಿರುವಾಗ ಯಾರಾದರೂ ಲೋಟ ಬೀಳಿಸಿದರೆ, ಅವರು ತಟ್ಟೆತೊಳೆಯುವ ಸಿಂಕಿನ ಮುಂದೆ ಗಂಟೆಗಟ್ಟಲೇ ತ್ರಿಶಂಕು ಸ್ವರ್ಗ ಅನುಭವಿಸಬೇಕಾಗಿತ್ತು. ಆಟಕ್ಕೆ ಹೋಗಬೇಕಾದರೆ ಕಾಲನ್ನು ಎಳೆದುಕೊಂಡು ಹೊರಟಿದ್ದನ್ನು ಪ್ರಿನ್ಸಿಪಾಲರು ನೋಡಿದರೆ ಅವರು ಡಾರ್ಮಿಟರೀಯೂ ಅಲ್ಲದ, ಆಟದ ಬಯಲೂ ಅಲ್ಲದ, ಅವುಗಳ ನಡುವಿನ ಜಾಗದಲ್ಲಿ, ಹಗಲೂ ಅಲ್ಲದ, ರಾತ್ರಿಯೂ ಅಲ್ಲದ ಅವುಗಳ ನಡುವಿನ ಸಮಯವಾದ ಸಾಯಂಕಾಲವನ್ನು ನಿಂತು ಕೊಂಡು ಕಳೆಯಬೇಕಾಗಿತ್ತು. ಜಗವೆಲ್ಲಾ ತಿರುಗುತ್ತಿರಲು ಒಬ್ಬರೆ ಸ್ಥಾವರವಾಗಿ ನಿಂತು ಮೂಕ ಪ್ರೇಕ್ಷಕನಾಗುವುದು ಬೇಜಾರಾಗುತ್ತಿತ್ತಾದರೂ, ನಿಂತವರ ಹತ್ತಿರ ಹಾದುಹೋಗುತ್ತಿದ್ದ ಬೇರೆ ಶಿಕ್ಷರು ’ಪ್ರಿನ್ಸಿಪಾಲರು ನಿಲ್ಲಿಸಿದ್ದು ಯಾಕೆ?’ ಎಂದು ಕೇಳಿ, ತಲೆಗೆ ಮೊಟಕುವುದರಿಂದ ನೋವಾಗುತ್ತಿತ್ತಾದರೂ, ಎಲ್ಲಕ್ಕಿಂತ ಹೆಚ್ಚು ತ್ರಾಸಾಗುತ್ತಿದ್ದುದು ನಮ್ಮದೇ ಕ್ಲಾಸಿನ ಹುಡುಗಿಯರು ನಮ್ಮನ್ನು ನೋಡಿ ತಮ್ಮತಮ್ಮಲ್ಲಿಯೇ ಕಿಸಿಕಿಸಿ ನಗುತ್ತ ಹೋದಾಗ !!
ಒಮ್ಮೆ ಒಂದಿಷ್ಟು ಹುಡುಗರು ಕಾಮನ್ ಬಾತ್‌ರೂಮಿನಲ್ಲಿ ಬಟ್ಟೆತೋಳೆಯುತ್ತ, ಸ್ನಾನ ಮಾಡುತ್ತ ಸಂಗೀತ ಕಚೇರಿ ನಡೆಸಿದ್ದರು. ತಣ್ಣೀರಿನಲ್ಲಿ ಸ್ನಾನ ಮಾಡುತ್ತಿರುವವರು ಚಳಿ ತಾಳಲಾರದೇ ಹಾಡುತ್ತಿದ್ದರು. ಹಾಡು ಕೇಳಿಯೂ ಸುಮ್ಮನೆ ಕೂಡಲು ಬಟ್ಟೆತೊಳೆಯುತ್ತಿರುವವರು ಅರಸಿಕರೇ ? ಅವರೂ ಕೂಡ ಬಕೀಟು ಬಾರಿಸುತ್ತ ರಾಗ ರತಿಗೆ ರಂಗು ಏರಿಸಿದ್ದರು. ಹತ್ತಿರದಿಂದ ಹಾದು ಹೋಗುತ್ತಿದ್ದ ಪ್ರಿನ್ಸಿಪಾಲರಿಗೆ ಈ ಸಂಗೀತ ಗದ್ದಲದಂತೆ ಕೇಳಿ, ಅವರು ಬಾತ್‌ರೂಮಿನಲ್ಲಿದ್ದ ಎಲ್ಲರನ್ನೂ ’ಹ್ಯಾಗಿದ್ದರೋ ಹಾಗೆಯೇ’ ಹೊರಕರೆಸಿ ಬಾತ್‌ರೂಮಿನ ಮುಂದೆ ಸಾಲಾಗಿ ನಿಲ್ಲಿಸಿದ್ದರು. ನಿಮ್ಮಿಂದ ಮುಚ್ಚಿಡುವುದು ಏನಿದೆ? ಮಹಾಮಜ್ಜನದ ಮಧ್ಯದಿಂದ ಎದ್ದುಬಂದು ನಿಂತ ಗೊಮ್ಮಟರಲ್ಲಿ ನಾನು ಕೂಡ ಒಬ್ಬನಿದ್ದೆ !
ನಮ್ಮ ಇನ್ನೊಬ್ಬ ಗುರುಗಳಿದ್ದವರು - ಅವರು ಮಹಾಭಾರತದ ಕರ್ಣನಂತೆ. ಕರ್ಣ ಬಿಟ್ಟ ಬಾಣವನ್ನು ಮರಳಿ ತೊಡದಂತೆ ಪ್ರತಿಜ್ಞೆ ಮಾಡಿದಂತೆ ಇವರು ಒಮ್ಮೆ ಕೊಟ್ಟ ಶಿಕ್ಷೆ ಮತ್ತು ಹೋಂವರ್ಕನ್ನು ಇನ್ನೊಮ್ಮೆ ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರೋ ಏನೋ.. ಅವರು ಕೊಡುತ್ತಿದ್ದ ಹೋಂವರ್ಕುಗಳು ಬಹು ವೈವಿಧ್ಯಮಯ, ಹಾಗೆಯೇ ಅವರ ಶಿಕ್ಷೆಗಳೂ ಕೂಡ. ಪ್ರತೀ ಹೋಂವರ್ಕು, ಪ್ರತೀ ಶಿಕ್ಷೆಯಲ್ಲಿಯೂ ಒಂದು ಹೊಸತನದ ಝಲಕು, ಒಂದು ನಾವಿನ್ಯದ ಸೊಗಸು, ಒಂದು ಸೃಜನಶೀಲತೆಯ ಹೊಳಹು ಇದ್ದೇ ಇರುತ್ತಿದ್ದವು.
ಒಮ್ಮೆ ನಮ್ಮ ಒಬ್ಬ ಸ್ನೇಹಿತ ಶಾಲೆಯ ಪಕ್ಕದ ಹೊಲದಲ್ಲಿನ ಹುಣಸೆಗಿಡದಿಂದ ಹುಣಸೆ ಕಾಯಿ ಹೊಡದಿದ್ದ. ಅಷ್ಟೇ ಆಗಿದ್ದರೆ ಪರವಾ ಇರಲಿಲ್ಲ, ಸಿಕ್ಕಿಯೂ ಬಿದ್ದಿದ್ದ. ಆ ಹೊಲದ ರೈತ ಬಂದು ನಮ್ಮ ಕರ್ಣ ಗುರುಗಳಿಗೆ ತಕರಾರು ಸಲ್ಲಿಸಿದ್ದ. ಗುರುಗಳು ಅವನನ್ನು ಹೇಗೋ ಸಮಾಧಾನಿಸಿ ಸಾಗಹಾಕಿದ್ದರಷ್ಟೇ ಅಲ್ಲ, ನಮ್ಮ ಸ್ನೇಹಿತನಿಗೂ ಏನೂ ಶಿಕ್ಷೆ ಕೊಡದೇ ಬಿಟ್ಟುಬಿಟ್ಟಿದ್ದರು. ಅದಾಗಲೇ ಕರ್ಣ ಗುರುಗಳ ವರಸೆಗಳನ್ನು ತಿಳಿದುಕೊಂಡಿದ್ದ ನಾವು ’ಮುಂದೈತೆ ಮಾರಿ ಹಬ್ಬ’ ಎಂದು ಆತಂಕದಿಂದಲೇ ಇದ್ದೆವು. ನಮ್ಮ ನಿರೀಕ್ಷೆ ಸುಳ್ಳಾಗಲಿಲ್ಲ. ಸಂಜೆ ಊಟದಲ್ಲಿ ಎಲ್ಲರ ತಟ್ಟೆಯಲ್ಲಿ ಅನ್ನ ಬಡಿಸಿಸಿ, ನಮ್ಮ ಸ್ನೇಹಿತನ ತಟ್ಟೆಯತುಂಬ ಮಾತ್ರ ಹುಣಸೆಕಾಯಿ ಬಡಿಸಿಸಿ ನಮ್ಮ ಕರ್ಣ ಗುರುಗಳು ಕಾಯ್ತಾ ಇದ್ದರು. ನಮ್ಮ ಸ್ನೇಹಿತನಿಗೆ ನಿಂಗ ಹುಂಚಿಕಾಯಿ ಬೇಕಲ್ಲಾ ? ಈಗ ಎಷ್ಟರ ತಿನ್ನು ಎಂದು ಹುಣಸೆ ಕಾಯಿ ತಿಂದವನಿಗೆ ಚಳ್ಳೆಹಣ್ಣು ತಿನ್ನಿಸಿದ್ದರು ! ಇದೇ ಕರ್ಣ ಗುರುಗಳಿಗೆ ಒಮ್ಮೆ ನಮ್ಮ ಇಡೀ ಕ್ಲಾಸಿನ ಮೇಲೆಯೇ ಯಾಕೋ ಸಿಟ್ಟು ಬಂದಿತ್ತು. ಅವು ರಾಮಾಯಣದ ದಿನಗಳು - ಅಂದ್ರೆ ರಮಾನಂದ ಸಾಗರರ ರಾಮಾಯಣ ಟೀವಿಯಲ್ಲಿ ಬರತಾ ಇದ್ದ ದಿನಗಳು. ಆಗಿನ ಕಾಲದ ಫ್ಯಾಶನ್ನೇ ಆಗಿದ್ದಂತೆ ನಮಗೂ ಭಾನುವಾರ ಬೆಳಿಗ್ಗೆ ಭಕುತಿಯಿಂದ ರಾಮಾಯಣ ನೋಡುವ ಚಟ. ಅದರ ಭಾಷೆ ಅರ್ಥವಾಗದಿದ್ದರೂ ಮೊದಲೆ ಗೊತ್ತಿದ್ದ ರಾಮಾಯಣದ ಕತೆಯನ್ನು ಟೀವಿಯ ತೆರೆಯ ಮೇಲೆ ನೋಡಿ ಆನಂದಿಸುತ್ತಿದ್ದೆವು. ನಮ್ಮ ಕ್ಲಾಸಿನ ಮೇಲೆ ಸಿಟ್ಟು ಬಂದ ಮುಂದಿನ ಭಾನುವಾರ ನಮ್ಮ ಕರ್ಣ ಗುರುಗಳು ನಮ್ಮ ಕ್ಲಾಸಿನ ಎಲ್ಲರನ್ನು ರಾಮಾಯಣ ಶುರುವಾಗುವ ಹದಿನೈದು ನಿಮಿಷ ಮೊದಲೆ ಟೀವಿ ಕೋಣೆಯಲ್ಲಿ ಬರ ಹೇಳಿದರು. ಟೀವಿಯನ್ನು ಕೋಣೆಯ ಮಧ್ಯದಲ್ಲಿಡಿಸಿ ನಮ್ಮನ್ನು ಅದರ ಹಿಂದೆ ಕೂಡಿಸಿದ್ದರು! ಈ ಶಿಕ್ಷೆಯಿಂದ ನಮಗೇನು ಬೇಜಾರಾಗಿರಲಿಲ್ಲ, ನಮ್ಮ ಕ್ಲಾಸಿನ ಹುಡುಗಿಯರೂ ನಮ್ಮ ಜೊತೆನೇ ಟೀವಿಯ ಹಿಂದೆ ಕೂತಿದ್ದರಲ್ಲಾ !!
ನಮ್ಮ ವಸತಿಶಾಲೆಯಲ್ಲಿ ಎಲ್ಲ ಶಿಕ್ಷಕರೂ ಸಾತ್ವಿಕ ಶಿಕ್ಷೆಗಳನ್ನೇ ಕೊಡುತ್ತಿದ್ದರು ಎಂದು ಹೇಳಿದ್ದೆ ಅಲ್ವಾ ? ಕ್ಷಮಿಸಿ, ಒಂದು ಅಪವಾದ ನಮ್ಮ ಆಟದ ಮೇಷ್ಟ್ರು. ಯಾವಾಗಲೂ ಸೀಟಿಇರುವ ವಯರಿನ ಹಗ್ಗವನ್ನು ಕುತ್ತಿಗೆ ಹಾಕಿ ಕೊಂಡೇ ಇರುತ್ತಿದ್ದ ಅವರು ತಪ್ಪು ಮಾಡಿದಾಗಲೆಲ್ಲ ನಮ್ಮ ಬುಡಗಳಿಗೆಲ್ಲಾ ವಯರಿನ ಹಗ್ಗದಿಂದ ಪ್ರಸಾದ ಕೊಡುತ್ತಿದ್ದರು. ಅವರ ಪ್ರಸಾದಗಳಿಗಿಂತ ಅವರ ಬೈಯ್ಗುಳಗಳು ಭಯಂಕರವಾಗಿರುತ್ತಿದ್ದವು. ’ಹ’ಪದ, ’ಬೋ’ಪದ ಉಪಯೋಗಿಸುವುದರಲ್ಲಿ ಅವರು ಮಾಜಿ ಪ್ರಧಾನಿಗಳಿಗೇ ಟ್ಯೂಶನ್ ಕೊಡುವ ಲೇವಲ್ಲಿನಲ್ಲಿದ್ದರು. ಶೀಲ-ಅಶ್ಲೀಲ ಎಂದೆಣಿಸದೇ, ಯಾವುದೇ ಸೆನ್ಸಾರಿನ ಭಯವಿಲ್ಲದೇ, ಬಯ್ಗುಳಗಳು ಅವರ ನಾಲಿಗೆಯ ಮೇಲೆ ನಲಿದಾಡುತ್ತಿದ್ದವು. ಬೈಯುವುದನ್ನು ಒಂದು ಜಾನಪದ ಕಲೆಯೆಂದು ಪರಿಗಣಿಸಿದ್ದರೆ ನಮ್ಮ ಆಟದ ಗುರುಗಳಿಗೆ ಜಾನಪದ ಕಲಾನಿಧಿ ಪ್ರಶಸ್ತಿ ಸಿಗುವುದರಲ್ಲಿ ಅನುಮಾನವಿರಲಿಲ್ಲ. ನಮ್ಮ ಗುರುಗಳಷ್ಟೇ ಅಲ್ಲ, ನಾನು ಗಮನಿಸಿದಂತೆ, ಬಹುತೇಕ ಆಟದ ಗುರುಗಳು ಹೀಗೆ ಹೊಲಸು ಬಾಯಿಯವರು. ನನಗೊಂದು ಅನುಮಾನ, ಇವರಿಗೆ ಸಿಪಿಎಡ್-ಬಿಪಿಎಡ್ ಕೋರ್ಸುಗಳಲ್ಲಿ ಹೀಗೆ ಬಯ್ಯುವುದನ್ನು ಒಂದು ವಿಷಯವಾಗಿ ಕಲಿಸಿರುತ್ತಾರಾ ?
ಮಹಾತ್ಮ ಗಾಂಧೀಜಿಯವರು ತಮ್ಮ ಆಶ್ರಮದಲ್ಲಿ ಯಾರಾದರೂ ತಪ್ಪು ಮಾಡಿದರೆ ತಮಗೆ ತಾವೇ ಶಿಕ್ಷೆ ಕೊಟ್ಟು ಕೊಳ್ಳುತ್ತಿದ್ದರಂತೆ. ನಮ್ಮ ವಸತಿ ಶಾಲೆಯೂ ಗಾಂಧೀ ತತ್ವದ ಮೇಲೆಯೇ ಸ್ಥಾಪಿತವಾಗಿತ್ತಾದರೂ ನಮ್ಮ ಗುರುವೃಂದ ತಮಗೆ ತಾವೇ ಶಿಕ್ಷೆ ಕೊಟ್ಟುಕೊಳ್ಳುವಷ್ಟು ಮಹಾತ್ಮರಾಗಿರಲಿಲ್ಲ. ಆದರೂ ನಮ್ಮ ಬಹುತೇಕ ಗುರುಗಳು ನಮಗೆ ಶಿಕ್ಷೆಕೊಟ್ಟು ಆನಂದಿಸುವ ವಿಘ್ನಸಂತೋಷಿಗಳಾಗಿರಲಿಲ್ಲ. ಬದಲು ನಮ್ಮ ಬಗ್ಗೆ ನೈಜ ಕಾಳಜಿ ಇದ್ದದ್ದರಿಂದಲೇ ತಪ್ಪು ಮಾಡಿದಾಗ ಶಿಕ್ಷಿಸುತ್ತಿದ್ದರು. ಐದನೇ ವರುಷಕ್ಕೆ ಮೊದಲೇ ಕಂಪ್ಯೂಟರಿನ ಆಳ-ಅಗಲಗಳನ್ನು ಅರಿತಿರುವ, ಎರಡು-ಮೂರು ಭಾಷೆಗಳನ್ನು ನಿರರ್ಗಳ ಮಾತನಾಡುವ ಇಂದಿನ ಬಾಲ ಪ್ರತಿಭೆಗಳನ್ನು ನೋಡಿದರೆ ನಮಗೆ ಸಿಕ್ಕ ಶಿಕ್ಷೆಗಳಿಗೆಲ್ಲ ನಾವು ಅರ್ಹರೇ ಆಗಿದ್ದೆವು ಎನಿಸುತ್ತದೆ..
( ಈ ಬರಹ ಅಕ್ಕದ ಸ್ಮರಣಸಂಚಿಕೆಯಲ್ಲಿ ಪ್ರಕಟವಾಗಿದೆಯಂತೆ, ನಾನಿನ್ನೂ ನೋಡಿಲ್ಲ)
Monday, October 4, 2010
Subscribe to:
Post Comments (Atom)
No comments:
Post a Comment